*ರೆವಿನ್ಯೂ ನಿವಾಸಿಗಳ ಸಂಘ ಶಿವಮೊಗ್ಗ ರವರ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ* *ಒಂದು ಬೇಡಿಕೆ ಸಫಲ- ಇನ್ನೊಂದು ಬೇಡಿಕೆಯನ್ನೂ ಈಡೇರಿಸಿ* *ಎನ್.ಕೆ.ಶ್ಯಾಮಸುಂದರ್ ಆಗ್ರಹ*
*ರೆವಿನ್ಯೂ ನಿವಾಸಿಗಳ ಸಂಘ ಶಿವಮೊಗ್ಗ ರವರ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ*
*ಒಂದು ಬೇಡಿಕೆ ಸಫಲ- ಇನ್ನೊಂದು ಬೇಡಿಕೆಯನ್ನೂ ಈಡೇರಿಸಿ*
*ಎನ್.ಕೆ.ಶ್ಯಾಮಸುಂದರ್ ಆಗ್ರಹ*
ರಾಜ್ಯಾದ್ಯಂತ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಿ ಖಾತಾ ಆಸ್ತಿಗಳಿಗೆ ದಂಡ ಕಟ್ಟಿಸಿಕೊಂಡು ಏ ಖಾತಾ ನೀಡಲು ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿರುವುದು ಸ್ವಾಗತಾರ್ಹ ಎಂದು ನಗರಸಭೆ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮ ಸುಂದರ್ ಹೇಳಿಕೆ ನೀಡಿದ್ದಾರೆ.
ಇದು ನಮ್ಮ ಹೋರಾಟದ ಸಫಲತೆ. ಸ್ಪಂದಿಸಿದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಎಲ್ಲಾ ಸಚಿವರುಗಳಿಗೂ ಹಾಗೂ ರಾಜ್ಯ ಸರ್ಕಾರಕ್ಕೂ ಅಭಿನಂದನೆಗಳು ಎಂದಿದ್ದಾರೆ.
ಹಾಗೆಯೇ ಶಿವಮೊಗ್ಗ ನಗರದಲ್ಲಿ ಹತ್ತು ಹದಿನೈದು ವರ್ಷಗಳ ಹಿಂದಿನಿಂದ ಸುಮಾರು 75 ವರ್ಷಗಳವರೆಗೆ ಕಂದಾಯ ಭೂಮಿಯಲ್ಲಿ ನೋಂದಣಿ ಆಗದೆ ಕ್ರಯ ಕರಾರು (ರೆವಿನ್ಯೂ ) ಅಗ್ರಿಮೆಂಟ್, ಜಿಪಿಎ ಪತ್ರ, ಸ್ವಾಧೀನ ಪತ್ರಗಳ ಮುಖಾಂತರ ನ್ಯಾಯಾಲಯದಲ್ಲಿ ತಕರಾರು ಇಲ್ಲದ ಹಾಗೂ ಮಾಲೀಕರ ತಕರಾರು ಇಲ್ಲದೆ ಇರುವಂತಹ ಜಾಗಗಳಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಹಾಗೂ ನಗರಸಭೆಯಿಂದ ನೀಡಿರುವಂತಹ ಹಕ್ಕು ಪತ್ರಗಳ ಮುಖಾಂತರ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ಸಾವಿರಾರು ಬಡ ವರ್ಗದ ಜನರಿಗೂ ಹಕ್ಕು ಒಡೆತನ ನೀಡುವ ಬಗ್ಗೆ ರೆವಿನ್ಯೂ ಮನೆ ನಿವಾಸಿಗಳ ಸಂಘ ಈ ಹಿಂದೆ ಸರ್ಕಾರದ ಗಮನಕ್ಕೆ ತಂದಿರುತ್ತದೆ.
ಇದು ರಾಜ್ಯದ ಎಲ್ಲಾ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಇರುವಂತಹ ಸಮಸ್ಯೆ ಆಗಿರುತ್ತದೆ. ಇದನ್ನು ರಾಜ್ಯ ಸರ್ಕಾರ ಸರ್ವೆ ನಡೆಸಿ ಇಂತಹ ಪ್ರಕರಣಗಳನ್ನ ಗುರುತಿಸಲು ಆದೇಶ ನೀಡಬೇಕು. ಇದರಿಂದ ಸ್ಥಳೀಯ ಸಂಸ್ಥೆಗಳಿಗೂ ಹೆಚ್ಚಿನ ಆದಾಯ ಕ್ರೋಢೀಕರಣವಾಗುತ್ತದೆ.ಈ ಬಗ್ಗೆಯೂ ಸಹ ಸರ್ಕಾರ ಗಮನಹರಿಸಿ ದಿಟ್ಟ ನಿರ್ಧಾರ ಕೈಗೊಳ್ಳಲು ಶ್ಯಾಮಸುಂದರ್ ವಿನಂತಿಸಿದ್ದಾರೆ.


