*ವಿಶೇಷ ವರದಿ; ಭಾಗ-1* *ಕುಂಯ್ ಕುಂಯ್ ನಾಗನ ಅಕ್ರಮ ಮಣ್ಣು ಮಾಫಿಯಾ ಮತ್ತು ಅಧಿಕಾರಿಗಳ ಮಹಾಮೌನ!!* ಮತ್ತೆ ಲೋಕಾಯುಕ್ತ ಪೊಲೀಸರೇ ಬರಬೇಕಾ?

*ವಿಶೇಷ ವರದಿ; ಭಾಗ-1*

*ಕುಂಯ್ ಕುಂಯ್ ನಾಗನ ಅಕ್ರಮ ಮಣ್ಣು ಮಾಫಿಯಾ ಮತ್ತು ಅಧಿಕಾರಿಗಳ ಮಹಾಮೌನ!!*

ಮತ್ತೆ ಲೋಕಾಯುಕ್ತ ಪೊಲೀಸರೇ ಬರಬೇಕಾ?

ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಂತ ದೊಡ್ಡಮಟ್ಟದಲ್ಲಿಯೇ ಸದ್ದು ಮಾಡುತ್ತಿವೆ ಕುಂಯ್ ಕುಂಯ್ ನಾಗನ ಅಕ್ರಮ ಮಣ್ಣು ಹೊತ್ತ ಬೃಹತ್ ಲಾರಿಗಳು, ಟಿಪ್ಪರ್ ಗಳು! ಹೆಲ್ಮೆಟ್ ಹಾಕದೇ ಹೋದರೇನೇ ಪೊಲೀಸರ ಕೈಗೆ ಸಿಕ್ಕಿಬಿದ್ದು ಫೈನ್ ಗುದ್ದಿಸಿಕೊಳ್ಳುವ ಸ್ಟ್ರಿಕ್ಟ್ ಪೊಲೀಸ್ ವ್ಯವಸ್ಥೆಯ ಮಧ್ಯದಲ್ಲೇ, ಅದೇ ಪೊಲೀಸರನ್ನು ದಾಟಿಕೊಂಡು ಸಾವಿರಾರು ರೂ., ಮೌಲ್ಯದ ಮಣ್ಣನ್ನು ಅಕ್ರಮವಾಗಿ ಸಾಗಿಸುವ ಬೃಹತ್ ಲಾರಿಗಳು ಭಯವಿಲ್ಲದೇ ಓಡಾಡುತ್ತಿವೆ!

ಪ್ರತಿನಿತ್ಯ ಕುಂಯ್ ಕುಂಯ್ ನಾಗನ ಲಾರಿಗಳು ಅಕ್ರಮವಾಗಿ ಬೆಲೆಬಾಳುವ ಮಣ್ಣನ್ನು ತುಂಬಿಕೊಂಡು ಕುಂಚೇನಹಳ್ಳಿಯಿಂದ ಹಗಲು ರಾತ್ರಿ ವಿವಿಧ ಕಡೆ ಪೊಲೀಸರ ಚೆಕ್ ಪೋಸ್ಟ್ ಗೇಟುಗಳನ್ನೇ ದಾಟಿಕೊಂಡು ಹೊಗುತ್ತಿವೆಯಾದರೂ ಒಬ್ಬರೇ ಒಬ್ಬ ಅಧಿಕಾರಿಯಾಗಲೀ, ಪೊಲೀಸರಾಗಲೀ ಈ ವಾಹನಗಳನ್ನು ನಿಲ್ಲಿಸಿ ಪ್ರಶ್ನಿಸುವುದಿಲ್ಲ! ಈ ಲಾರಿಗಳ ಮೇಲೆ H N S ಎಂಬ ಇನಿಷಿಯಲ್ಲುಗಳಿದ್ದುಬಿಟ್ಟರಂತೂ ಜೇಬು ಗರಂ ಮಾಡಿಕೊಳ್ಳುವ ಅಧಿಕಾರಿಗಳು ಈ ಲಾರಿಗಳ ಕಡೆ ತಿರುಗಿಯೂ ನೋಡುವುದಿಲ್ಲ!

ದಿನಕ್ಕೆ ನೂರೆಂಟು ಲೋಡುಗಳಷ್ಟು ಬೆಲೆಬಾಳುವ ಮಣ್ಣನ್ನು ಅಕ್ರಮವಾಗಿ ಕುಂಚೇನಹಳ್ಳಿ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಗಿಬರಿಕೊಳ್ಳುವ ಕುಂಯ್ ಕುಂಯ್ ನಾಗ ತನ್ನದೇ ವಾಹನಗಳ ಮೂಲಕ ಅಕ್ರಮ ಮರಳು ಸಾಗಿಸಿ ಮಾಫಿಯಾ ಸೃಷ್ಟಿಸಿಟ್ಟಿದ್ದಾನೆ. ಈ ಮಾಫಿಯಾ ವಿರುದ್ಧ ಯಾರೇ ತುಟಿ ಪಿಟಿಕ್ ಅಂದರೂ ಅಧಿಕಾರಿಗಳೇ ಕುಂಯ್ ಕುಂಯ್ ಪರವಾಗಿ ಬೊಗಳುತ್ತವಂತೆ!

ಕುಂಯ್ ಕುಂಯ್ ನಾಗನ ವಿರುದ್ಧ, ಆತ ಅಕ್ರಮವಾಗಿ ಮಣ್ಣನ್ನು ಸಾಗಿಸುತ್ತಿರುವ ಲಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮತ್ತೆ ಲೋಕಾಯುಕ್ತ ಪೊಲೀಸರೇ ಶಿವಮೊಗ್ಗದಲ್ಲಿ ದಾಳಿಗಳನ್ನು ಏರ್ಪಡಿಸಬೇಕಾ? ಅಥವಾ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ/ ಕಿರಿಯ ಅಧಿಕಾರಿಗಳೇ ದಾಳಿ ಮಾಡಿ ನಾಗನ ಮಣ್ಣು ಮಾಫಿಯಾ ಕೊನೆಗೊಳಿಸುತ್ತಾರಾ?