ಅ.14ರಂದು ಶಿವಮೊಗ್ಗ ಸಿನಿ ದಸರಾ ಫಾಲ್ಕೆ ಪುರಸ್ಕೃತರ ಸ್ಮರಣೆ, ಕಿರುಚಿತ್ರಗಳ ಹಬ್ಬ…ಅ.16ರಂದು ಗಮಕ ದಸರಾ: ವೈ.ಎಸ್.ವಿ. ದತ್ತ ಉದ್ಘಾಟನೆ; ಮೂವರು ಕಲಾವಿದರಿಗೆ ಸನ್ಮಾನ

ಅ.14ರಂದು ಶಿವಮೊಗ್ಗ ಸಿನಿ ದಸರಾ

ಫಾಲ್ಕೆ ಪುರಸ್ಕೃತರ ಸ್ಮರಣೆ, ಕಿರುಚಿತ್ರಗಳ ಹಬ್ಬ

ಶಿವಮೊಗ್ಗ: ಮಲೆನಾಡಿನ ಕಿರುಚಿತ್ರ ಪ್ರತಿಭೆಗಳಿಗೆ ವೇದಿಕೆ, ಕನ್ನಡ ಚಿತ್ರರಂಗದ ಸಾಧಕರಿಗೆ ಗೌರವ ಹಾಗೂ ರಾಜ್‌–ಅನಂತ್‌ ಗೀತೆಗಳ ಸಂಗೀತ ಸಂಭ್ರಮ. ಇವೆಲ್ಲವನ್ನೂ ಒಳಗೊಂಡ ಶಿವಮೊಗ್ಗ ಸಿನಿ ದಸರಾ ಅ.14ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸಿನಿಮೊಗೆ ಶಿವಮೊಗ್ಗ ಚಿತ್ರ ಸಮಾಜದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಉದ್ಘಾಟಿಸಲಿದ್ದಾರೆ ಎಂದರು.

ಪೋಷಕ ಕಲಾವಿದೆ ಸಂಗೀತಾ ಅನಿಲ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ ದೇಶಾದ್ರಿ ಹೊಸ್ಮನಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ. ತುಕಾರಾಂ ರಾವ್‌ ಪಾಲ್ಗೊಳ್ಳಲಿದ್ದಾರೆ. ಸಿನಿಮೊಗೆ ಚಿತ್ರ ಸಮಾಜ ಹಾಗೂ ರಾಜೇಂದ್ರ ಸಿಂಗ್‌ ಬಾಬು ಅವರನ್ನು ಗೌರವಿಸಲಾಗುವುದು. ಚಿತ್ರರಂಗದಲ್ಲಿ ಸಾಧನೆ ಮಾಡುತ್ತಿರುವ ನಗರದ ಪ್ರತಿಭೆಗಳಾದ ಗಾರ್ಗಿ ಕಾರೆಹಕ್ಲು, ಚಂದ್ರಶೇಖರ ಶಾಸ್ತ್ರಿ, ಚಂದ್ರಶೇಖರ ಹಿರೇಗೋಣಿಗೆರೆ, ದಾನಮ್, ಶಿವಮೊಗ್ಗ ರಾಮಣ್ಣ ಹಾಗೂ ರಘು ಗುಂಡ್ಲು ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಡಿ.ಎಸ್. ಅರುಣ್‌ ಮಾತನಾಡಿ, ಉದ್ಘಾಟನೆಯ ಬಳಿಕ ‘ಪ್ರತಿಬಿಂಬ’ ಶೀರ್ಷಿಕೆಯಡಿ ಮಲೆನಾಡಿನ ಪ್ರತಿಭೆಗಳು ನಿರ್ಮಿಸಿರುವ ಹತ್ತು ಕಿರುಚಿತ್ರಗಳನ್ನು ಪ್ರದರ್ಶಿಸಿ, ಸಂವಾದ ನಡೆಸಲಾಗುವುದು. ‘ಮಾಲ್ಗುಡಿ ಡೇಸ್‌’ ಖ್ಯಾತಿಯ ನಟ ಮಾಸ್ಟರ್‌ ಮಂಜುನಾಥ್‌ ಹಾಗೂ ಮಾಸ್ಟರ್‌ ರೋಹಿತ್‌ ಶ್ರೀನಾಥ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂವಾದ ನಡೆಸಿಕೊಡಲಿದ್ದಾರೆ ಎಂದರು.

ಪೃಥ್ವಿ ಗೌಡ ನಿರ್ದೇಶನದ ‘ಕಬಂಧ’, ಪ್ರಶಾಂತ್‌ ಸಾಗರ್‌ ಅವರ ‘ಶರಾವತಿ’, ನಾಗರಾಜ್‌ ನೀಲ್‌ ಅವರ ‘ದಿ ಗಿಫ್ಟ್’, ಮೇದಿನಿ ಕೆಳಮನೆ ಅವರ ‘ದಾಳಿ’, ಈಶಾನ್ಯ ಶರ್ಮ ಅವರ ‘ಡಬಲ್‌ ಟಿಕ್‌’, ನಾಗರಾಜ ಕಿತ್ತೂರು ಅವರ ‘ಖಾಸಗಿ ಕನಸಿನ ಕಾಗದ’, ನವನ್‌ ಶ್ರೀನಿವಾಸ್‌ ಅವರ ‘ಗೋಣಿ ಚೀಲ’, ಅನಿಶ್‌ ಶರ್ಮ ಅವರ ‘ವಡ್ಡಾರಾಧಕ’, ನವೀನ್‌ ತೇಜಸ್ವಿ ಅವರ ‘ಹಬ್ಬ ಹರಿದಿನ ಸುಗ್ಗಿ ಶಿವರಾತ್ರಿ’ ಹಾಗೂ ವಿದ್ಯಾಲಕ್ಷ್ಮಿ ಪ್ರಹ್ಲಾದ್‌ ಅವರ ‘ಘಮ’ ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದರು.

ಸಂಜೆ ರಾಜ್‌–ಅನಂತ್‌ ಗಾನಯಾನ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ವಿನಯ್‌ ಶಿವಮೊಗ್ಗ, ಪೃಥ್ವಿ ಗೌಡ, ಕಾರ್ತಿಕ್‌ ನಾಗಲಾಪುರ ಹಾಗೂ ಸಂಗೀತಾ ಕನ್ನಡ ಚಿತ್ರಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಮೇಲ್ವಿನ್‌ ಲೀಮಾ, ವಿನಯ್‌, ರಮೇಶ್‌, ರಾಘವೇಂದ್ರ ರಂಗಧೋಳ್‌ ಹಾಗೂ ವಿಠಲ್‌ ರಂಗಧೋಳ್‌ ವಾದ್ಯಸಂಗೀತದಲ್ಲಿ ಸಾಥ್‌ ನೀಡಲಿದ್ದಾರೆ. ಇಮ್ಯಾಜಿನ್‌ ಡಾನ್ಸ್‌ ಸ್ಟುಡಿಯೊ ತಂಡದಿಂದ ಚಿತ್ರಗೀತೆಗಳಿಗೆ ನೃತ್ಯ ಪ್ರದರ್ಶನ ಇರಲಿದೆ ಎಂದರು.

ಸಿನಿ ದಸರಾ ಉತ್ಸವ ಸಮಿತಿಯ ಕಾರ್ಯದರ್ಶಿ ಯಶವಂತ್‌, ವೈದ್ಯನಾಥ, ವಿನಯ್‌ ಶಿವಮೊಗ್ಗ, ಜಿ. ವಿಜಯ್‌ ಕುಮಾರ್‌ ಹಾಗೂ ಅನಂತ್‌, ಮಹೇಶ್ ಇದ್ದರು.

ಬಾಕ್ಸ್

ಚಲನ ಚಿತ್ರಗಳ ಪ್ರದರ್ಶನ 14 ರಿಂದ

ರಾಜ್‌–ಅನಂತ್‌ ಸಿನಿ ಸಂಭ್ರಮದ ಅಂಗವಾಗಿ ನಗರದ ಚಿತ್ರಮಂದಿರಗಳಲ್ಲಿ ಕನ್ನಡದ ಜನಪ್ರಿಯ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಅ.14ರಂದು ಬೆಳಿಗ್ಗೆ 8.30ಕ್ಕೆ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಡಾ. ರಾಜ್‌ಕುಮಾರ್‌ ಅಭಿನಯದ ‘ಎರಡು ಕನಸು’, ಅ.16ರಂದು ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ‘ಸಂಪತ್ತಿಗೆ ಸವಾಲ್‌’ ಹಾಗೂ ಅ.17ರಂದು ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ‘ಗಾಳಿಪಟ–2’, ಅ.18ರಂದು ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕಾಸರಗೋಡು’, ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಮಾಹಿತಿ ನೀಡಿದರು.

————————

ಅ.16ರಂದು ಗಮಕ ದಸರಾ: ವೈ.ಎಸ್.ವಿ. ದತ್ತ ಉದ್ಘಾಟನೆ; ಮೂವರು ಕಲಾವಿದರಿಗೆ ಸನ್ಮಾನ

ಶಿವಮೊಗ್ಗ: ಗಮಕ ವಾಚನ–ವ್ಯಾಖ್ಯಾನ, ವಿಚಾರಗೋಷ್ಠಿ, ನೃತ್ಯರೂಪಕ ಹಾಗೂ ವಿವಿಧ ಸ್ಪರ್ಧೆಗಳನ್ನೊಳಗೊಂಡ ಗಮಕ ದಸರಾ ಅ.16ರಂದು ನಗರದಲ್ಲಿ ನಡೆಯಲಿದೆ ಎಂದು ರಾಜ್ಯ ಗಮಕಕಲಾ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷರಾದ ಹೆಚ್. ಆರ್.ಸುಬ್ರಹ್ಮಣ್ಯ ಶಾಸ್ತ್ರಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಉತ್ಸವ ಸಮಿತಿ, ಮಹಾನಗರ ಪಾಲಿಕೆ ಹಾಗೂ ರಾಜ್ಯ ಗಮಕಕಲಾ ಪರಿಷತ್ ಸಹಯೋಗದಲ್ಲಿ ಅಂದು ಬೆಳಿಗ್ಗೆ 9.30ರಿಂದ ಸಂಜೆ 7ರವರೆಗೆ ಬಾಲರಾಜ ಅರಸ್ ರಸ್ತೆಯ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾಲೇಜ್ ಆಫ್ ಅಪ್ಲೈಡ್ ಸೈನ್ಸಸ್ ಸಭಾಂಗಣದ ‘ಮಹಾಕವಿ ಕುವೆಂಪು ವೇದಿಕೆ’ಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಡೂರಿನ ಮಾಜಿ ಶಾಸಕ ಹಾಗೂ ಗಮಕ ವ್ಯಾಖ್ಯಾನಕಾರ ವೈ.ಎಸ್.ವಿ. ದತ್ತ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಗಮಕಕಲಾ ಪರಿಷತ್ತಿನ ಗೌರವಾಧ್ಯಕ್ಷ ಎಸ್.ಆರ್. ಅಶ್ವತ್ಥನಾರಾಯಣ ಶೆಟ್ಟಿ ಹಾಗೂ ಅಧ್ಯಕ್ಷ ಎಚ್.ಆರ್. ಸುಬ್ರಹ್ಮಣ್ಯ ಶಾಸ್ತ್ರಿ ಉಪಸ್ಥಿತರಿರುವರು ಎಂದರು.

ಬೆಳಿಗ್ಗೆ 10.30ಕ್ಕೆ ನಡೆಯುವ ಗಮಕ ವಾಚನ–ವ್ಯಾಖ್ಯಾನದಲ್ಲಿ ಡಾ. ಸನತ್ ಕುಮಾರ್ ವಾಚನ ಮಾಡಲಿದ್ದು, ವೈ.ಎಸ್.ವಿ. ದತ್ತ ವ್ಯಾಖ್ಯಾನ ನೀಡುವರು. ಬೆಳಿಗ್ಗೆ 11.30ಕ್ಕೆ ವಿಚಾರಗೋಷ್ಠಿ ನಡೆಯಲಿದ್ದು, ರಾಮಸುಬ್ರಾಯ ಶೇಟ್ ಅವರು ‘ಗಮಕದ ಪ್ರಚಾರ ಹೇಗೆ?’ ವಿಷಯವಾಗಿ ಹಾಗೂ ತುರುವನೂರು ಮಲ್ಲಿಕಾರ್ಜುನ ಅವರು ವಚನ ಸಾಹಿತ್ಯ ಕುರಿತು ಮಾತನಾಡುವರು. ಇದೇ ವೇಳೆ ಟಿ.ಜೆ. ನಾಗರತ್ನಾ ಮತ್ತು ತನ್ಮಯೀ ಅವರಿಂದ ವಚನಗಾಯನ ನಡೆಯಲಿದೆ ಎಂದರು.

ಮಧ್ಯಾಹ್ನ 3ಕ್ಕೆ ಶ್ರೀಲಕ್ಷ್ಮೀ ಶಾಸ್ತ್ರೀ ಮತ್ತು ತಂಡದವರಿಂದ ಗಮಕ–ನೃತ್ಯರೂಪಕ ಪ್ರದರ್ಶನವಿದೆ. ಸಂಜೆ 4ಕ್ಕೆ ನಡೆಯುವ ಕವಿ–ಕಾವ್ಯ ಪರಿಚಯ ಗೋಷ್ಠಿಯಲ್ಲಿ ಡಾ. ಎ.ಎಸ್. ವತ್ಸಲಾ ಅವರು ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಕುರಿತು ಮಾತನಾಡುವರು. ಸಂಜೆ 5ಕ್ಕೆ ಪ್ರಸಾದ ಭಾರದ್ವಾಜ್ ಅವರ ಗಮಕ ವಾಚನಕ್ಕೆ ಸಾಗರದ ಡಾ. ವಸುಮತಿ ಗೌಡ ವ್ಯಾಖ್ಯಾನ ನೀಡುವರು ಎಂದರು.

ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಗಮಕ ವಾಚನ ಸ್ಪರ್ಧೆ, ಉದಯೋನ್ಮುಖ ಗಮಕಿಗಳ ವಾಚನ–ವ್ಯಾಖ್ಯಾನ ಹಾಗೂ ಗಮಕ ರಸಪ್ರಶ್ನೆ ನಡೆಯಲಿವೆ. ಯುವ ಗಮಕಿಗಳ ವಾಚನಕ್ಕೆ ಮತ್ತೂರಿನ ವೇ. ಶ್ರೀ ಕೇಶವ ಅವಧಾನಿ ವ್ಯಾಖ್ಯಾನ ನೀಡುವರು ಎಂದರು.

ಸಂಜೆ 6ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಸಿಂಡಿಕೇಟ್ ಸದಸ್ಯ ಡಾ. ಕೆ.ಎನ್. ಚಿದಾನಂದ ಸಮಾರೋಪ ಭಾಷಣ ಮಾಡುವರು. ಹಿರಿಯ ವ್ಯಾಖ್ಯಾನಕಾರ ಕಲಾಶ್ರೀ ಹೊಸಹಳ್ಳಿ ಗೋಪಾಲ ಅಧ್ಯಕ್ಷತೆ ವಹಿಸುವರು. ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಉಪಸ್ಥಿತರಿರುವರು ಎಂದರು.

ಗಮಕ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿರುವ ಜಿಲ್ಲೆಯ ಕಲಾವಿದರಾದ ತಾರಾ ಪ್ರಸಾದ್, ನರಹರಿ ಶರ್ಮಾ ಹಾಗೂ ಕಾಮಾಕ್ಷಮ್ಮ ಜಗನ್ನಾಥ ಶಾಸ್ತ್ರಿ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಗೌರವ ಅಧ್ಯಕ್ಷ ಅಶ್ವತ್ ನಾರಾಯಣ ಶೆಟ್ಟಿ, ನಾಗರಾಜ್, ವತ್ಸಲ, ತಾರಾಪ್ರಸಾದ್, ಹರಿ ಪ್ರಸಾದ್, ಕುಮಾರ ಶಾಸ್ತ್ರಿ ಇದ್ದರು.