ಅಕ್ರಮ ಮಣ್ಣು ಮಾಫಿಯಾ; ಯಾರಿದ್ದಾರೆ ಇದರ ಹಿಂದೆ?; *ಯಡವಾಲ, ಮುದುವಾಲ ಕಡೆಯಿಂದ ಬರುವ ನೂರಾರು ಟ್ರಿಪ್ ಅಕ್ರಮ ಮಣ್ಣಿನ ಕಥೆ ಏನು?* *ಅಧಿಕಾರಿಗಳೇಕೆ ಈ ಅಕ್ರಮ ಮಣ್ಣು ಗಣಿ ಮತ್ತು ಸಾಗಾಣಿಕೆ ನಿಲ್ಲಿಸಲು ಹೋಗುತ್ತಿಲ್ಲ?*

ಅಕ್ರಮ ಮಣ್ಣು ಮಾಫಿಯಾ; ಯಾರಿದ್ದಾರೆ ಇದರ ಹಿಂದೆ?;

*ಯಡವಾಲ, ಮುದುವಾಲ ಕಡೆಯಿಂದ ಬರುವ ನೂರಾರು ಟ್ರಿಪ್ ಅಕ್ರಮ ಮಣ್ಣಿನ ಕಥೆ ಏನು?*

*ಅಧಿಕಾರಿಗಳೇಕೆ ಈ ಅಕ್ರಮ ಮಣ್ಣು ಗಣಿ ಮತ್ತು ಸಾಗಾಣಿಕೆ ನಿಲ್ಲಿಸಲು ಹೋಗುತ್ತಿಲ್ಲ?*

ಶಿವಮೊಗ್ಗವೂ ಸೇರಿದಂತೆ ಶಿವಮೊಗ್ಗದ ಸುತ್ತಮುತ್ತಲು ಅಕ್ರಮವಾಗಿ ಗ್ರಾವೆಲ್ ಮತ್ತು ಮಣ್ಣು ಮಾಫಿಯಾ ಬಹಳ ಭೀಕರ ರೀತಿಯಲ್ಲಿದೆ!

ಮೊದಲೇ ಹೇಳಿದಂತೆ, 200ಕ್ಕೂ ಹೆಚ್ಚಿನ ವಾಹನಗಳು ಅಕ್ರಮ ಗ್ರಾವೆಲ್, ಮಣ್ಣಿನ ಸಾಗಾಣಿಕೆಯಲ್ಲಿ ತೊಡಗಿದ್ದರೂ ಆಗಾಗ ಒಂದೆರಡು ವಾಹನಗಳಿಗೆ ಕೇಸು ಜಡಿದು ರಫಾದಫಾ ಮಾಡುವ ಅಧಿಕಾರಿಗಳು ಇಡೀ ಮಣ್ಣು ಮಾಫಿಯಾ ಕಂಟ್ರೋಲ್ ಮಾಡುವತ್ತ ಧೈರ್ಯ ಮಾಡುತ್ತಿಲ್ಲ! ಇಲ್ಲಿ ಮಾಫಿಯಾದ ವಿರುದ್ಧ ಹೋಗಲು ಅಧಿಕಾರಿಗಳಿಗೆ ಧೈರ್ಯ ಸಾಕಾಗದೇ ಇರಬಹುದು ಅಥವಾ ಮೈಮೇಲೆ ಈ ಅಕ್ರಮದ ಧೂಳು ಬೀಳುತ್ತಿರಬಹುದೆಂದು ಭಾವಿಸಬಹುದೇ?

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಾಹಿತಿಯುಕ್ತ ವರದಿಗಳನ್ನು ಅಕ್ರಮ ಮಣ್ಣು, ಗ್ರಾವೆಲ್ ಸಾಗಾಣಿಕೆಯ ವಿರುದ್ಧ ವರದಿಗಳನ್ನು ಮಾಡುತ್ತಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ.

ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಿರಿಯ ವಿಜ್ಞಾನಿಯಾಗಿ ವರ್ಗವಾಗಿ ಬಂದಿರುವ ಚಿದಂಬರಂ ರವರಂತೂ ಬಂದಾಗಿನಿಂದ ಮೌನವೃತದಲ್ಲಿದ್ದಾರೆ.
ಅಪಾರ ಪ್ರಮಾಣದಲ್ಲಿ ಮಣ್ಣು ಲೂಟಿಯಾದರೂ ಚಿದಂಬರಂ ರವರ ಕಣ್ಣಿಗೇಕೋ ಬೀಳುತ್ತಿಲ್ಲ.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳೀಕಟ್ಟಿ, ಎಸ್ ಪಿ ನಿಖಿಲ್, ಎಸಿ ಡಾ.ಮೈತ್ರಿಯಂಥ ಅಧಿಕಾರಿಗಳಿದ್ದರೂ ಅಕ್ರಮ ಮಣ್ಣು ಮಾಫಿಯಾ ಹಗಲು ರಾತ್ರಿ ನಡೆಯುತ್ತಲೇ ಇದೆ.

ಶಿವಮೊಗ್ಗದ ಹಲವು ಕೆರೆಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಲೇ ಇದೆ. ಶಿವಮೊಗ್ಗದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಯಡವಾಲದ ಕೆರೆ, ಮುದುವಾಲಗಳಿಂದ ಬರುತ್ತಿರುವ ಅಕ್ರಮ ಮಣ್ಣು ಯಾರದ್ದೆಂದು ಸಂಬಂಧಿಸಿದ ಅಧಿಕಾರಿಗಳಿಗೆಲ್ಲ ಗೊತ್ತಿದೆ. ದೇವಕಾತಿಕೊಪ್ಪ ಸಮೀಪ ಪೆಟ್ರೋಲ್ ಬಂಕಿನ ಬಳಿ ಈ ಅಧಿಕಾರಿಗಳು ನಿಂತರೆ ಸಾಕು ಎಷ್ಟರ ಮಟ್ಟಿಗೆ ಅಕ್ರಮ ಮಣ್ಣಿನ ವ್ಯವಹಾರಕ್ಕೆ ಲಾರಿಗಳ ಮೆರವಣಿಗೆ ಹೊರಡುತ್ತದೆಂದು ಗೊತ್ತಾಗುತ್ತದೆ.