ಸ್ತನ ಕ್ಯಾನ್ಸರ್ ತಡೆಗೆ ಜಾಗೃತಿಯೇ ಮದ್ದು: ಶಾಲಾ ಪಠ್ಯದಲ್ಲಿ ‘ಸ್ವಯಂ ತಪಾಸಣೆ’ ಅಳವಡಿಕೆಗೆ ಸಲಹೆ

ಸ್ತನ ಕ್ಯಾನ್ಸರ್ ತಡೆಗೆ ಜಾಗೃತಿಯೇ ಮದ್ದು: ಶಾಲಾ ಪಠ್ಯದಲ್ಲಿ ‘ಸ್ವಯಂ ತಪಾಸಣೆ’ ಅಳವಡಿಕೆಗೆ ಸಲಹೆ

ಶಿವಮೊಗ್ಗ:
ಕ್ಯಾನ್ಸರ್ ಕಾಯಿಲೆಯು ಮುಂದಿನ 10 ವರ್ಷಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳನ್ನು ಹಿಂದಿಕ್ಕಿ ಅತಿ ಹೆಚ್ಚು ಪ್ರಾಣಹಾನಿ ಉಂಟುಮಾಡುವ ನಂಬರ್ ಒನ್ ಕಾಯಿಲೆಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಹೀಗಾಗಿ ಪ್ರತಿಯೊಬ್ಬರೂ ಕ್ಯಾನ್ಸರ್ ಕುರಿತು ಮುಂಜಾಗ್ರತೆ ಹಾಗೂ ಸ್ಕ್ರೀನಿಂಗ್ ಪರೀಕ್ಷೆಗಳ ಬಗ್ಗೆ ನಿಗಾ ವಹಿಸುವುದು ಅತ್ಯಗತ್ಯ ಎಂದು ಮೆಡಿಕಲ್ ಅಂಕಾಲಾಜಿಸ್ಟ್ ಡಾ.ಅಪರ್ಣ ಶ್ರೀವತ್ಸ ಅವರು ಎಚ್ಚರಿಸಿದರು.

ನಗರದ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಯಾಲಿಟಿ ಆಸ್ಪತ್ರೆ ಯಲ್ಲಿ ಆಯೋಜಿಸಲಾಗಿದ್ದ ಅಕ್ಟೋಬರ್ ತಿಂಗಳ ‘ಸ್ತನ ಕ್ಯಾನ್ಸರ್ ಜಾಗೃತಿ ಮಾಸಾಚರಣೆ’ ಹಾಗೂ ಸರ್ವೈವರ್ಸ್ ಡೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೆ 40 ವರ್ಷ ದಾಟಿದವರಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಸ್ತನ ಕ್ಯಾನ್ಸರ್, ಪ್ರಸ್ತುತ 30 ವರ್ಷದೊಳಗಿನ ಯುವತಿಯರಲ್ಲೂ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹೆಣ್ಣುಮಕ್ಕಳು ಪ್ರೌಢಾವಸ್ಥೆಗೆ ಕಾಲಿಡುತ್ತಿದ್ದಂತೆಯೇ ಅವರಿಗೆ ಸ್ತನದ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಶಾಲಾ ಪಠ್ಯಕ್ರಮದಲ್ಲೇ ‘ಸ್ತನ ಸ್ವಯಂ ತಪಾಸಣೆ’ ವಿಷಯವನ್ನು ಅಳವಡಿಸುವುದು ಸೂಕ್ತ ಎಂದು ಡಾ. ಅಪರ್ಣ ಅಭಿಪ್ರಾಯಪಟ್ಟರು.

ಒಂದು ಕಾಲದಲ್ಲಿ ಅಂಟುರೋಗಗಳು ಪ್ರಮುಖ ಸವಾಲಾಗಿದ್ದವು, ಆದರೆ ಇಂದು ಅಸಾಂಕ್ರಾಮಿಕ ಕಾಯಿಲೆಗಳಾದ ಕ್ಯಾನ್ಸರ್ ಮತ್ತು ಹೃದಯರೋಗಗಳು ಪ್ರಮುಖ ಸಮಸ್ಯೆಯಾಗಿವೆ. ಮಹಿಳೆಯರು ಹಬ್ಬ-ಹರಿದಿನಗಳಲ್ಲಿ ತೋರುವ ಆಸಕ್ತಿಯನ್ನು ತಮ್ಮ ಆರೋಗ್ಯದ ಕಡೆಗೂ ತೋರಬೇಕು. ಹೆಚ್ಚಾಗುತ್ತಿರುವ ದೇಹದ ತೂಕ ಕ್ಯಾನ್ಸರ್ ಕಾರಕ ಕೆಮಿಕಲ್ಸ್ ಬಿಡುಗಡೆಗೆ ಕಾರಣವಾಗುವುದರಿಂದ, ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಅಥವಾ ವಾಕಿಂಗ್ ಮಾಡಲು ತಮಗಾಗಿ ಮೀಸಲಿಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ದಲ್ಲಿ ಮಾತನಾಡಿದ ಸರ್ಜಿಕಲ್ ಆಂಕೊಲಾಜಿಸ್ಟ್ ಡಾ. ವಿವೇಕ್ ಎಂ.ಎ. ಕ್ಯಾನ್ಸರ್ ಕೇವಲ ಒಂದು ಕಾಯಿಲೆಯಲ್ಲ, ಅದೊಂದು ಸುದೀರ್ಘವಾದ ವೈದ್ಯಕೀಯ ಹೋರಾಟ. ರೋಗಿಯ ‘ಸರ್ವೈವರ್‌ಶಿಪ್’ ಕೇವಲ ಚಿಕಿತ್ಸೆ ಮುಗಿದ ಮೇಲೆ ಶುರುವಾಗುವುದಿಲ್ಲ, ಬದಲಾಗಿ ರೋಗ ಪತ್ತೆಯಾದ ದಿನದಿಂದಲೇ ಆರಂಭವಾಗುತ್ತದೆ ಎಂದರು.

ಕ್ಯಾನ್ಸರ್ ಸರ್ವೈವರ್‌ಶಿಪ್ ಒಂದು ನಿರಂತರ ಪ್ರಕ್ರಿಯೆ
ಕ್ಯಾನ್ಸರ್ ಪತ್ತೆಯಾದ ಮೇಲೆ ಬಯಾಪ್ಸಿ, ಶಸ್ತ್ರಚಿಕಿತ್ಸೆ, ಕೀಮೋಥೆರಪಿ ಮತ್ತು ರೇಡಿಯೇಷನ್ ನಂತಹ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಆದರೆ, ಈ ಚಿಕಿತ್ಸೆಗಳ ನಂತರದ ನಿರಂತರ ತಪಾಸಣೆಗಳು (ಫಾಲೋ-ಅಪ್) ಸರ್ವೈವರ್‌ಶಿಪ್‌ನ ಅತಿ ಮುಖ್ಯ ಭಾಗವಾಗಿದೆ. ಪ್ರತಿಯೊಂದು ಒಪಿಡಿ (OPD) ಭೇಟಿಯೂ ಈ ಪ್ರೋಗ್ರಾಮ್‌ನ ಭಾಗವೇ ಆಗಿರುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ವೈದ್ಯೆ ಡಾ. ಭಾರತಿ ದೇವಿ ಅವರು, 1980ರ ದಶಕದಿಂದಲೂ ಮಹಿಳಾ ಆರೋಗ್ಯ, ಲಸಿಕೆ ಮತ್ತು ಕುಟುಂಬ ಕಲ್ಯಾಣ ಯೋಜನೆಗಳಲ್ಲಿ ಆಗಿರುವ ಬದಲಾವಣೆಗಳ ಕುರಿತು ಮಾತನಾಡಿದರು.

ತಪಾಸಣಾ ಪ್ಯಾಕೇಜ್ ಬಿಡುಗಡೆ

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಉತ್ತಮ ಶರ್ಮಾ ಅವರು ಕ್ಯಾನ್ಸರ್ ರೋಗ ಮುಂಚಿತವಾಗಿ ಪತ್ತೆ ಹಚ್ಚಲು ತಪಾಸಣಾ ಪ್ಯಾಕೇಜ್ ಅನ್ನು ವತಿಯಿಂದ ಬಿಡುಗಡೆ ಮಾಡಿದರು. 1999 ರೂ ಈ ಪ್ಯಾಕೇಜಿನಲ್ಲಿ ಕ್ಯಾನ್ಸರ್ ತಪಾಸಣೆಗೆ ಬೇಕಾಗಿರುವ ಎಲ್ಲಾ ತಪಾಸಣೆಗಳು ಇದರಲ್ಲಿ ಲಭ್ಯವಿದೆ ಇದಲ್ಲದೆ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಎಲ್ಲಾ ಮಹಿಳಾ ಸಿಬ್ಬಂದಿಗಳಿಗೂ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಆಸ್ಪತ್ರೆಯ ಸಿಬ್ಬಂದಿಗಳು ತಮ್ಮ ಮನೆಯ ಸದಸ್ಯರು ಮತ್ತು ನೆರೆಹೊರೆಯವರನ್ನು ಈ ತಪಾಸಣಾ ಶಿಬಿರಕ್ಕೆ ಕರೆದುಕೊಂಡು ಬರುವಂತೆ ವಿನಂತಿಸಿದರು.

ರೇಡಿಯೇಷನ್ ಅಂಕಾಲಜಿಸ್ಟ್ ಡಾ. ರವಿ ನಡಹಳ್ಳಿ, ಡಾ. ಸುದರ್ಶನ್ ಗುಪ್ತ, ಆಸ್ಪತ್ರೆ ಯ ಹಿರಿಯ ಮಾರುಕಟ್ಟೆ ವ್ಯವಸ್ಥಾಪಕ ಶ್ರೀ ಶೈಲೇಶ್ ಎಸ್ ಎನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.