*ಶಿವಮೊಗ್ಗ ದಸರಾ; ಅಂಬಾರಿ ಉತ್ಸವದಲ್ಲಿ ಆನೆ ಅವಘಡ!* *ಹೊಣೆಗೆ ಯಾರು? ಬೆಣೆಗೆ ಯಾರು?!* ಶಾಸಕರು- ಆಯುಕ್ತರು- ಅರಣ್ಯಾಧಿಕಾರಿಗಳ ನಡೆದಿತ್ತಾ ಕಿರಿಕ್ಕು!?

*ಶಿವಮೊಗ್ಗ ದಸರಾ; ಅಂಬಾರಿ ಉತ್ಸವದಲ್ಲಿ ಆನೆ ಅವಘಡ!*

*ಹೊಣೆಗೆ ಯಾರು? ಬೆಣೆಗೆ ಯಾರು?!*

ಶಾಸಕರು- ಆಯುಕ್ತರು- ಅರಣ್ಯಾಧಿಕಾರಿಗಳ ನಡೆದಿತ್ತಾ ಕಿರಿಕ್ಕು!?

ಶಿವಮೊಗ್ಗ ದಸರಾದಲ್ಲಿ ಒಣ ಪ್ರತಿಷ್ಠೆಗೆ ಆರಂಭವಾದ ಆನೆ ತಂದು ಅಂಬಾರಿ ಮೆರವಣಿಗೆ ಮಾಡಿಸುವ ದಸರಾ ಇದೀಗ ಅನಾಹುತಕಾರಿ ಮಟ್ಟಕ್ಕೆ, ಜನಜೀವನದ ಆಪತ್ತಿಗೆ ಬಂದು ತಲುಪಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಇವತ್ತಿನ ಅಂಬಾರಿ ಮೆರವಣಿಗೆ!

ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಅಕ್ಷರಶಃ ಹಾನಿಗೊಳಪಡಿಸಿದ ದೃಶ್ಯದಲ್ಲಿ ಕೊನೇ ಘಳಿಗೆಯಲ್ಲಿ ಅಂಬಾರಿ ಹೊತ್ತ ಆನೆ ಸೋಮ ಕಾಣಿಸಬಹುದು ನಿಮಗೆಲ್ಲ. ಆದರೆ, ಆನೆ ಸೋಮನ ವರ್ತನೆ ಹಿಂದೆ ಇಡೀ ವ್ಯವಸ್ಥೆಯ, ಶಾಸಕ ಚೆನ್ನಿಯವರ, ಅರಣ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದ ಪರಮಾವಧಿ ಕಾಣುತ್ತಿದೆ.

ಕೆಲವರ ಪ್ರಕಾರ ಅಂಬಾರಿ ಹೊತ್ತ ಸೋಮನಿಗೆ ಮದ ಬಂದಿದೆ. ಹಾಗಾಗಿ ಹೀಗೆ ವರ್ತಿಸಿದೆ. ಮೆರವಣಿಗೆಗಳ ವೇಳೆ ಅಕ್ಕಪಕ್ಕ ಹೆಣ್ಣಾನೆ ಇರಬೇಕು ಸಂಭಾಳಿಸಲು ಎಂಬ ವಾದ ಒಪ್ಪುವಂಥದ್ದಾದರೂ ಇವತ್ತಿನ ಘಟನೆಗೆ ಸೋಮನಿಗೆ ಮದವೇನೂ ಇರಲಿಲ್ಲ. ಅಂಬಾರಿ ಮೆರವಣಿಗೆ ಆರಂಭವಾಗುವ ಹೊತ್ತಲ್ಲೇ ಕಿರಿಕ್ಕುಗಳು ನಡೆದಿವೆ ಎಂಬುದನ್ನು ಗಮನಿಸಬೇಕು. ಇದು ಸಾರ್ವಜನಿಕವಾಗಿ ಕಿರಿಕ್ಕು ಅಂತ ಕಾಣಬಹುದಾದರೂ ಆನೆಗಳ ಜೊತೆಗಿದ್ದು ಅವುಗಳ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡ ಮಾವುತರ ಮತ್ತು ಆನೆಗಳಿಂದ ಬಹುದೂರವೇ ಇರುವ ಕೆಲವರ ಜೊತೆ ನಡೆದ ಸೂಕ್ಷ್ಮ ಜಗಳವಿದು! ಈ ಜಗಳದ ರಹಸ್ಯ ಭೇದಿಸಿದರೆ ಈ ಆನೆ ಅವಘಡದ ಸತ್ಯಾಸತ್ಯತೆ ಕ್ಷಣಾರ್ಧದಲ್ಲಿ ಜಗತ್ತಿಗೆ ಗೊತ್ತಾಗುವುದು!

ಪ್ರತಿ ವರ್ಷ ಶಿವಮೊಗ್ಗ ದಸರಾ ಕೂಡ ಬಹು ವಿಜೃಂಭಣೆಯಿಂದ ನಡೆಸುವ ಭ್ರಮೆ ಹುಟ್ಟಿಸಿ ಹಣ ಪೋಲು ಮಾಡಲಾಗುತ್ತದೆ. ಆನೆ ತಂದು ಅಂಬಾರಿ ಮೆರವಣಿಗೆ ಮಾಡಿಸುತ್ತೇವೆ ಎಂಬುದರ ಹಿಂದೆಯೂ ಇದೇ ಭ್ರಮೆಯ ಭೂತ ಅಡಗಿರುವುದು. ಒಂದು ತಾಲೀಮಿಲ್ಲ, ಮೆರವಣಿಗೆ ಸಾಗುವ ಆನೆಯ ಅವಶ್ಯಕತೆ ಏನಿರುತ್ತೆ, ಅದಕ್ಕೆ ಭಯವಾದರೆ ಏನಾಗುತ್ತೆ, ರಸ್ತೆಯಲ್ಲಿ ಸಾಗುವಾಗ ಅದರ ಕಾಲಿಗೆ ಕನಿಷ್ಠ ಮೊಳೆ ಚುಚ್ಚಿದರೂ ಏನೆಲ್ಲ ಅನಾಹುತವಾಗುತ್ತೆ, ಜೊತೆ ಜೊತೆಗೆ, ಆನೆಗಳ, ಅದರ ಮಾವುತ, ಕವಾಡಿಗರ ಆರೋಗ್ಯವಾದರೂ ಹೇಗಿದೆ ಎಂಬಿತ್ಯಾದಿ ಸತ್ಯಗಳ ದಾಖಲೆಗಳಾದರೂ ಇರಬೇಕಲ್ಲ…ಯಾರ ಬಳಿಯೂ ಕಾಣಲೊಲ್ಲದು!!

ಶಿವಮೊಗ್ಗದ ಪಾಲಿಕೆ ಆಯುಕ್ತರನ್ನೇ ಬಲಿ ಮಾಡಿ ಆನೆ ಅವಘಡದ ಕಥೆ ಅವರ ಮೇಲೆ ಕಟ್ಟಲಾಗುತ್ತಿದೆ. ಆನೆಗಳನ್ನು ಅಂಬಾರಿಗೆ ಆಹ್ವಾನಿಸುವ ಮುಂಚಿಂದಲೂ ಆನೆಗಳ ಅವಶ್ಯಕತೆ ಇದೆಯೇ? ಎಂಬುದರ ಬಗ್ಗೆ ಬಹಳ ಜನರ ಮನಸಲ್ಲೂ ಅನುಮಾನಗಳಿವೆ. ರಾಜಕಾರಣ ಪ್ರತಿಷ್ಠೆಯ ಹಂತ ತಲುಪಿಸುವ ಹಪಾಹಪಿಯಲ್ಲಿ ಮತಹಾಕಿ ಗೆಲ್ಲಿಸಿದವರ ಪ್ರಾಣಕ್ಕೇ ಕುತ್ತು ತಂದುಬಿಟ್ಟರೆ ಕ್ಷಮಿಸುವುದು ಹೇಗೆ? ಈ ಅವಘಡದಿಂದ ಚೂರು ಚೂರಾದ ಚಾಮುಂಡೇಶ್ವರಿ ದೇವಿ ಕ್ಷಮಿಸುವಳೇ?

ಅರಣ್ಯ ಪ್ರಾಣಿಗಳಿಂದ ರಂಜನೆ ಬೇಡವೆಂದು ಸರ್ಕಸ್ಸುಗಳಿಂದಲೇ ಹೊರಕ್ಕಿಟ್ಟ ಆನೆಗಳಂಥ ಪ್ರಾಣಿಗಳನ್ನು ದಸರಾದಂಥ ಲಕ್ಷ ಲಕ್ಷ ಜನ ಸೇರುವ ಸಂದರ್ಭಗಳಲ್ಲೂ ಯಾವುದೇ ತರಬೇತಿ ಇಲ್ಲದೇ ತಂದು ಅಂಬಾರಿ ಹೊರಿಸಿದರೆ ಇವತ್ತೇನಾಗಿದೆಯೋ ಅದೇ ತಾನೇ ಆಗುವುದು!

ಮುಂದಿನ ದಸರಾಗಳಲ್ಲಿ ಲಾರಿಯಲ್ಲಿಯೇ ಮೆರವಣಿಗೆ ನಡೆಯಲಿ. ಆನೆಗಳು ಮುಂದೆ ಸುಮ್ಮನೆ ಸಾಗಿ ಪ್ರತಿಷ್ಠೆ ಹೆಚ್ಚಿಸಲಿ. ಹಿಂದಿನ ದಸರಾಗಳಲ್ಲಿ ಅದೇ ತಾನೇ ನಡೀತಿದ್ದುದು…

ಶಿವಮೊಗ್ಗದ ಇವತ್ತಿನ ಆನೆ ಅವಘಡ ಸಣ್ಣ ಘಟನೆಯಲ್ಲ. ತನಿಖೆಯಂತೂ ಆಗಲೇಬೇಕು. ತಾಲೀಮೇ ಸೂಕ್ತ ರೀತಿಯಲ್ಲಿ ಆಗದ ಆನೆ ಮೇಲೆ ಅಂಬಾರಿ ಹೊರಿಸಿ ಶಿವಮೊಗ್ಗದ ಜನರ ಜೀವಗಳ ಜೊತೆ ಆಟವಾಡಲಾಗಿದೆ. ಆರಂಭದಲ್ಲೇ ಆನೆ ಸ್ಪಂದಿಸದಿದ್ದಾಗ ಬೇರೆ ನಿರ್ಧಾರ ಅಲ್ಲಿದ್ದ ದಸರಾ ಸಮಿತಿ ಅಧ್ಯಕ್ಷ, ಶಾಸಕ ಚನ್ನಬಸಪ್ಪ ತಾಳಬಹುದಿತ್ತು.ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಶಾಸಕರು ದಟ್ಟವಾಗಿ ಆವರಿಸಿಕೊಂಡ ಪರಿಣಾಮ ಇದೆಲ್ಲ ಎಂಬ ಆರೋಪಗಳೂ ಇವೆ.

ಇಡೀ ಘಟನೆಯ ಹೊಣೆ ಯಾರು ಹೊತ್ತುಕೊಳ್ಳುವರೋ? ಯಾರು ಜಾರಿಕೊಳ್ಳಲು ಪ್ರಯತ್ನಿಸುವರೋ?

ಶಿವಮೊಗ್ಗದ ಜನ ಬಹಳ ಗಂಭೀರವಾಗಿಯೇ ಗಮನಿಸುತ್ತಿದ್ದಾರೆ ಮತ್ತು ಆ ಮುಖವಾಡಗಳನ್ನು ಕಳಚಲು ಸಿದ್ಧರಾಗಿದ್ದಾರೆ!!