ಸೊರಬದಲ್ಲಿ ಅ. 26ರಂದು ‘ಬಂಗಾರ’ ಪ್ರಶಸ್ತಿ ಪ್ರದಾನ ಸಮಾರಂಭ

ಸೊರಬದಲ್ಲಿ ಅ. 26ರಂದು ‘ಬಂಗಾರ’ ಪ್ರಶಸ್ತಿ ಪ್ರದಾನ ಸಮಾರಂಭ

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ 94ನೇ ಜನ್ಮದಿನೋತ್ಸವದ ಅಂಗವಾಗಿ ಶ್ರೀ ಎಸ್. ಬಂಗಾರಪ್ಪ ವಿಚಾರ ವೇದಿಕೆ ಹಾಗೂ ಶ್ರೀ ಎಸ್. ಬಂಗಾರಪ್ಪ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಅ. 26ರಂದು ಸಂಜೆ 5ಕ್ಕೆ ಸೊರಬದ ಬಂಗಾರಧಾಮದಲ್ಲಿ ‘ಬಂಗಾರ’ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ವೇದಿಕೆಯ ಸಂಚಾಲಕ ಡಾ. ಕೆ.ವಿ. ನಾಗರಾಜ ಮೂರ್ತಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2026ನೇ ಸಾಲಿನ ಪ್ರಶಸ್ತಿಗೆ ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಚಾಮರಾಜನಗರದ ಪ್ರೊ. ಜಿ.ಎಸ್. ಜಯದೇವ ಅವರಿಗೆ ‘ಸೇವಾ ಬಂಗಾರ’, ತುಮಕೂರಿನ ಪ್ರೊ. ನಟರಾಜ್ ಹುಳಿಯಾರ್ ಅವರಿಗೆ ‘ಸಾಹಿತ್ಯ ಬಂಗಾರ’, ಗುಲ್ಬರ್ಗಾದ ಶೇಖ ಮಾಸ್ತರ್ ಅವರಿಗೆ ‘ರಂಗ ಬಂಗಾರ’ ಹಾಗೂ ಬೆಂಗಳೂರಿನ ಬಿ.ಸಿ. ರಮೇಶ್ ಅವರಿಗೆ ‘ಕ್ರೀಡಾ ಬಂಗಾರ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯ ಮೊತ್ತ ತಲಾ ₹1 ಲಕ್ಷ ಆಗಿದೆ ಎಂದರು.

ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ಸಮಾರಂಭ ಉದ್ಘಾಟಿಸುವರು. ಸಹಕಾರ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶ್ರೀ ಎಸ್. ಬಂಗಾರಪ್ಪ ವಿಚಾರ ವೇದಿಕೆಯ ಅಧ್ಯಕ್ಷ ವೇಣುಗೋಪಾಲ್ ನಾಯಕ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜ ಮೂರ್ತಿ ಉಪಸ್ಥಿತರಿರುವರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಹಾಗೂ ಶ್ರೀ ಎಸ್. ಬಂಗಾರಪ್ಪ ಫೌಂಡೇಶನ್ ಅಧ್ಯಕ್ಷ ಎಸ್. ಮಧು ಬಂಗಾರಪ್ಪ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಶ್ರೀ ಎಸ್. ಬಂಗಾರಪ್ಪ ವಿಚಾರ ವೇದಿಕೆಯ ಅಧ್ಯಕ್ಷ ವೇಣುಗೋಪಾಲ್ ನಾಯಕ ಮಾತನಾಡಿ, ಸಮಾಜವಾದಿ ಚಿಂತಕ, ಅಭಿವೃದ್ಧಿಯ ಹರಿಕಾರ ಹಾಗೂ ಬಡವರ ಬಂಧು ಎಂದೇ ಗುರುತಿಸಿಕೊಂಡಿದ್ದ ಎಸ್. ಬಂಗಾರಪ್ಪ ಅವರ ಜನ್ಮದಿನದ ಅಂಗವಾಗಿ ಹಲವು ವರ್ಷಗಳಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಬಂಗಾರ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ಹಿಂದೆ ಡಾ. ಚಂದ್ರಶೇಖರ ಕಂಬಾರ, ಡಾ. ಗೊ.ರು. ಚನ್ನಬಸಪ್ಪ, ಅನಿಲ್ ಕುಂಬ್ಳೆ, ಮಮತಾ ಪೂಜಾರಿ, ತಂಬೂರಿ ಜವರಯ್ಯ, ಡಾ. ಎಚ್.ಎಸ್. ಶಿವಪ್ರಕಾಶ್, ಸುಕ್ರಿ ಬೊಮ್ಮಗೌಡ ಸೇರಿದಂತೆ ಹಲವು ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದರು.

ಸಮಾರಂಭದ ಅಂಗವಾಗಿ ರಾಜ್ಯಮಟ್ಟದ ಜಾನಪದ ಕಲಾವಿದರಿಂದ ‘ಜಾನಪದ ಝೇಂಕಾರ’ ಹಾಗೂ ಚಲನಚಿತ್ರ ಗಾಯಕರಾದ ರಮೇಶ್ ಚಂದ್ರ ಮತ್ತು ಸುಮಾ ಶಾಸ್ತ್ರಿ ಅವರಿಂದ ‘ಎದೆ ತುಂಬಿ ಹಾಡುವೆನು’ ಸಂಗೀತ ರಸಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಜಾತಿ, ಧರ್ಮದ ಭೇದವಿಲ್ಲದೆ ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಎಂಬ ಆಶಯದಡಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಹೆಚ್.ಸಿ. ಯೋಗೀಶ್, ಪ್ರಮುಖರಾದ ಎಸ್.ಕೆ. ಮರಿಯಪ್ಪ, ನಾಗರಾಜ ಗೌಡ, ಎನ್. ರಮೇಶ್, ಜಿ.ಡಿ. ಮಂಜುನಾಥ್, ಶಿವಕುಮಾರ್, ಕಲೀಂ ಪಾಷ, ಗೀತೇಂದ್ರ ಗೌಡ ಇದ್ದರು.