ಸರ್ವೋದಯ ಕರ್ನಾಟಕ ಪಕ್ಷದ ಕಚೇರಿ ಉದ್ಘಾಟನೆ, ಕಾರ್ಯಕರ್ತರ ಸಮಾವೇಶ ನ. 21 ಕ್ಕೆ ಪಕ್ಷದ ಮುಖಂಡ, ನಿವೃತ್ತ ಎಸ್ ಪಿ ಎಂ.ಎ.ನಟರಾಜ್ ಮಂಗಳ ವಿವರಣೆ
ಸರ್ವೋದಯ ಕರ್ನಾಟಕ ಪಕ್ಷದ ಕಚೇರಿ ಉದ್ಘಾಟನೆ, ಕಾರ್ಯಕರ್ತರ ಸಮಾವೇಶ ನ. 21 ಕ್ಕೆ
ಪಕ್ಷದ ಮುಖಂಡ, ನಿವೃತ್ತ ಎಸ್ ಪಿ ಎಂ.ಎ.ನಟರಾಜ್ ಮಂಗಳ ವಿವರಣೆ
ಶಿವಮೊಗ್ಗ: ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾ ಘಟಕದ ನೂತನ ಕಚೇರಿ ಉದ್ಘಾಟನೆ ಹಾಗೂ ಜಿಲ್ಲಾ ಕಾರ್ಯಕರ್ತರ ಸಮಾವೇಶ ನ. 21ರಂದು ನಗರದಲ್ಲಿ ನಡೆಯಲಿದೆ ಎಂದು ಪಕ್ಷದ ಮುಖಂಡ ಎಂ.ಎ. ನಟರಾಜ್ ಮಂಗಳ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂದು ಬೆಳಿಗ್ಗೆ 11.30ಕ್ಕೆ ಶಂಕರ ಮಠ ರಸ್ತೆಯ ಮಾರುತಿ ಕಾರು ಶೋರೂಂ ಎದುರಿನ ಓಂ ಕಾಂಪ್ಲೆಕ್ಸ್ನ ಮೊದಲ ಮಹಡಿಯಲ್ಲಿ ನೂತನ ಕಚೇರಿ ಉದ್ಘಾಟನೆ ನಡೆಯಲಿದೆ. ಬಳಿಕ ಮಧ್ಯಾಹ್ನ 12ಕ್ಕೆ ಹೊನ್ನಾಳಿ ರಸ್ತೆಯ ರೈಲ್ವೆ ನಿಲ್ದಾಣ ಸಮೀಪದ ಲೋಹಿತ್ ಇಂಟರ್ನ್ಯಾಷನಲ್ ಹಾಲ್ನಲ್ಲಿ ‘ಜನಪರ ರಾಜಕಾರಣ ಮತ್ತು ಸರ್ವೋದಯ ಕರ್ನಾಟಕ ಪಕ್ಷ’ ವಿಷಯವಾಗಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪಕ್ಷದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್, ರಾಜ್ಯ ಕಾರ್ಯಾಧ್ಯಕ್ಷ ಹಾಗೂ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ರಾಜ್ಯ ಕಾರ್ಯಾಧ್ಯಕ್ಷ ಅಮ್ಮದ್ ಪಾಷಾ, ರಾಜ್ಯ ವಕ್ತಾರ ವೀರ ಸಂಗಯ್ಯ, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯ ಉಪಾಧ್ಯಕ್ಷ ಎನ್. ಶಿವಾನಂದ ಕುಗೈ, ಪ್ರಧಾನ ಕಾರ್ಯದರ್ಶಿ ಎನ್.ಡಿ. ವಸಂತ್ ಕುಮಾರ್ ಸೇರಿದಂತೆ ರೈತ, ದಲಿತ ಹಾಗೂ ಕಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನೂತನ ಜಿಲ್ಲಾ ಸಮಿತಿ ರಚಿಸಲಾಗುವುದು. ಪರ್ಯಾಯ ರಾಜಕಾರಣದಲ್ಲಿ ಆಸಕ್ತಿ ಹೊಂದಿರುವ ಯುವಜನರು, ಮಹಿಳೆಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎನ್. ಶಿವಾನಂದ ಕುಗ್ವೆ ಮಾತನಾಡಿ, ರಾಜಕೀಯ ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ಚುನಾವಣೆಗಳು ಭ್ರಷ್ಟಾಚಾರಕ್ಕೆ ಒಳಗಾಗಿದ್ದು, ಪಂಚಾಯಿತಿಯಿಂದ ಪಾರ್ಲಿಮೆಂಟ್ವರೆಗೂ ಜನಪ್ರತಿನಿಧಿಗಳು ಆದರ್ಶಗಳನ್ನು ಬದಿಗಿಟ್ಟು ಆಡಳಿತ ನಡೆಸುತ್ತಿದ್ದಾರೆ. ಬಂಡವಾಳ ಹೂಡಿ, ಅಧಿಕಾರದ ಮೂಲಕ ಅದನ್ನು ಮರಳಿ ಪಡೆಯುವ ಮನೋಭಾವ ರಾಜಕೀಯ ವ್ಯವಸ್ಥೆಯಲ್ಲಿ ಬೆಳೆದಿದೆ. ಇದರಿಂದ ಹೋರಾಟಗಳ ಮೂಲ ಆಶಯಗಳೇ ನೆಲಸಮವಾಗಿವೆ. ಹೋರಾಟದ ಹಿನ್ನೆಲೆಯಿಲ್ಲದೆ ರಾಜಕೀಯಕ್ಕೆ ಪ್ರವೇಶಿಸಿದವರೇ ಇಂದಿನ ಪರಿಸ್ಥಿತಿಗೆ ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟರು.
ಪ್ರಮುಖರಾದ ವಸಂತ ಕುಮಾರ್, ಉಮೇಶ್ ಈಶ್ವರ ನಾಯ್ಕ, ರಮೇಶ್ ದೇಸಾಯಿ, ಹೆಚ್. ಎ. ಸತೀಶ್ ಚಂದ್ರ ಇದ್ದರು.


