ಆರ್.ಟಿ.ವಿಠ್ಠಲಮೂರ್ತಿ;* *ಕೃಷ್ಣ ಭೈರೇಗೌಡ ಅಂದ್ರೆ ರಾಹುಲ್ ಗೇಕೆ ಇಷ್ಟ?* *ಜೆಡಿಎಸ್ ಬಗ್ಗೆ ಬಿಜೆಪಿಗೆ ಆತಂಕವೇ?* *ವಿಜಯೇಂದ್ರ ಇರಲಿ ಅಂದ್ರು ಭಿನ್ನರು* *ರೇಣುಕಾರ್ಯ ಉಚ್ಛಾಟನೆ ಆಗ್ಲೇಬೇಕು*

*ಆರ್.ಟಿ.ವಿಠ್ಠಲಮೂರ್ತಿ;*

*ಕೃಷ್ಣ ಭೈರೇಗೌಡ ಅಂದ್ರೆ ರಾಹುಲ್ ಗೇಕೆ ಇಷ್ಟ?*

*ಜೆಡಿಎಸ್ ಬಗ್ಗೆ ಬಿಜೆಪಿಗೆ ಆತಂಕವೇ?*

*ವಿಜಯೇಂದ್ರ ಇರಲಿ ಅಂದ್ರು ಭಿನ್ನರು*

*ರೇಣುಕಾರ್ಯ ಉಚ್ಛಾಟನೆ ಆಗ್ಲೇಬೇಕು*

ಕೃಷ್ಣ ಭೈರೇಗೌಡ ಅಂದ್ರೆ
ರಾಹುಲ್ ಗೇಕೆ ಇಷ್ಟ?

ಕಳೆದ ವಾರ ದಿಲ್ಲಿಗೆ ಹೋದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮಾಧಾನದಿಂದಲೇ ವಾಪಸ್ಸಾದರು.ಕಾರಣ?ರಾಹುಲ್ ಗಾಂಧಿ ಅವರು ಸಿದ್ಧರಾಮಯ್ಯ ನಾಯಕತ್ವದ ಪರವಾಗಿ ಮಾತನಾಡಿದರೆ,ಸೋನಿಯಾಗಾಂಧಿಯವರು ಸ್ವಲ್ಪ ಕಾಲ ತಾಳ್ಮೆಯಿಂದಿರಿ ಅಂತ ಡಿ.ಕೆ.ಶಿವಕುಮಾರ್ ಅವರಿಗೆ ಸಂದೇಶ ತಲುಪಿಸಿದ್ದಾರಂತೆ.
ಉಳಿದಂತೆ ಸಂಪುಟ ಪುನರ್ರಚನೆಯಿಂದ ಹಿಡಿದು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಯ ತನಕ ಯಾವುದಕ್ಕೂ ರಾಹುಲ್ ಗಾಂಧಿಯವರೇ ಆಗಲಿ,ಖರ್ಗೆ,ವೇಣುಗೋಪಾಲ್ ಅವರೇ ಆಗಲಿ ಉತ್ಸುಕತೆ ತೋರಿಲ್ಲ.ಕಾರಣ?ಕರ್ನಾಟಕದಲ್ಲಿರುವ ಪಕ್ಷದ ಸರ್ಕಾರವನ್ನು ಸ್ಥಿರವಾಗಿಸುವುದು ಹೇಗೆ?ಎಂಬುದೇ ಈ ಎಲ್ಲರ ಚಿಂತೆ.
ಹೀಗಾಗಿ ಸಧ್ಯದ ಪರಿಸ್ಥಿತಿ ಹಾಗೇ ಮುಂದುವರಿಯಲಿ.ಅಗತ್ಯ ಬಿದ್ದಾಗ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡರಾಯಿತು ಎಂಬುದು ಅವರ ಚಿಂತೆ.ಇದ್ದುದರಲ್ಲೇ ಹನಿಟ್ರ್ಯಾಪ್ ವಿವಾದದ ಬಗ್ಗೆ ಮಾತನಾಡುವಾಗ,ಅದನ್ನು ಕೂಲಾಗಿ ಬಗೆಹರಿಸಿ ಅಂತ ಸಿದ್ಧರಾಮಯ್ಯ ಅವರಿಗೆ ವರಿಷ್ಟರು ಹೇಳಿದ್ದಾರೆ.ಇದರರ್ಥ,ಮೇಲೆದ್ದಾಗ ಸುನಾಮಿಯಂತೆ ಕಂಡ ಹನಿಟ್ರ್ಯಾಪ್ ವಿವಾದ ಆದಷ್ಟು ಬೇಗ ರಗ್ಗು ಹೊದ್ದು ಮಲಗುವುದು ಗ್ಯಾರಂಟಿ.
ಇಷ್ಟಾದರೂ ಈ ಬಾರಿ ದಿಲ್ಲಿಗೆ ಹೋಗುವಾಗ ಸಿದ್ಧರಾಮಯ್ಯ ಅವರ ಕ್ಯಾಂಪಿನಲ್ಲಿ ಬೇರೆಯೇ ಲೆಕ್ಕಾಚಾರ ಇತ್ತು.ಅದರ ಪ್ರಕಾರ,ಸೋನಿಯಾಗಾಂಧಿ ಅವರು ಸಿದ್ಧರಾಮಯ್ಯ ಅವರಿಗೆ ಅಧಿಕಾರ ಬಿಟ್ಟುಕೊಡುವ ಬಗ್ಗೆ ಪ್ರಸ್ತಾಪ ಮಾಡಬಹುದು.ಮತ್ತು ಸೋನಿಯಾಗಾಂಧಿಯವರು ಮನವಿ ಮಾಡಿಕೊಂಡರೆ ಸಿದ್ಧರಾಮಯ್ಯ ಇಲ್ಲ ಎನ್ನಲಾರರು.ಕಾರಣ?ಸೋನಿಯಾಗಾಂಧಿ ಅವರ ವಿಷಯದಲ್ಲಿ ಸಿದ್ಧರಾಮಯ್ಯ ಅವರಿಗೆ ಅಪಾರ ಗೌರವವಿದೆ.
ಯಾಕೆಂದರೆ 2006 ರಲ್ಲಿ ಜೆಡಿಎಸ್ ನಿಂದ ಹೊರಬಿದ್ದು,ಅಖಿಲ ಭಾರತ ಪ್ರಗತಿಪರ ಜನತಾದಳದಲ್ಲಿ ಹೊಯ್ದಾಡುತ್ತಿದ್ದ ಸಿದ್ದರಾಮಯ್ಯ ಅವರನ್ನು ಕೈ ನೀಡಿ ಕಾಂಗ್ರೆಸ್ ಹಡಗಿಗೆ ಹತ್ತಿಸಿಕೊಂಡವರು ಸೋನಿಯಾಗಾಂಧಿ.
ವಸ್ತುಸ್ಥಿತಿ ಎಂದರೆ ಸಿದ್ಧರಾಮಯ್ಯ ಅವರ ಪಕ್ಷ ಸೇರ್ಪಡೆಗೆ ಅವತ್ತು ರಾಜ್ಯ ಕಾಂಗ್ರೆಸ್ ನ ಬಹುತೇಕ ನಾಯಕರ ವಿರೋಧವಿತ್ತು.ಕಾರಣ?ಜನಸಮುದಾಯದ ನಾಯಕರಾಗಿ ಬೆಳೆದಿದ್ದ ಸಿದ್ದರಾಮಯ್ಯ ಪಕ್ಷಕ್ಕೆ ಬಂದರೆ ತಮ್ಮ ಶಕ್ತಿ ಕುಸಿಯುತ್ತದೆ ಎಂಬ ಆತಂಕ.
ಆದರೆ ಇದನ್ನು ಲೆಕ್ಕಿಸದ ಸೋನಿಯಾಗಾಂಧಿ ಅವರು ಸಿದ್ಧರಾಮಯ್ಯ ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡರು.ಮುಂದೆ ಅನಿವಾರ್ಯ ಸನ್ನಿವೇಶಗಳಲ್ಲಿ ಸಿದ್ಧರಾಮಯ್ಯ ಅವರಿಗೆ ಅಕಾಮಡೇಟ್ ಮಾಡಿಕೊಡಲು ಕೆಲವು ರಾಜಿಗಳನ್ನು ಮಾಡಿಕೊಂಡರು.ಇದೆಲ್ಲ ಸಿದ್ಧರಾಮಯ್ಯ ಅವರಿಗೆ ಗೊತ್ತಲ್ಲ?ಹೀಗಾಗಿ ಸೋನಿಯಾಗಾಂಧಿ ಬಗ್ಗೆ ಅವರಿಗೆ ತುಂಬ ಗೌರವವಿದೆ.
ಹೀಗಾಗಿ ಸೋನಿಯಾಗಾಂಧಿ ಅವರು ಸಿದ್ದರಾಮಯ್ಯ ಅವರ ಬಳಿ,’ನಾನು ಡಿ.ಕೆ.ಶಿವಕುಮಾರ್ ಅವರಿಗೆ ಮಾತು ಕೊಟ್ಟಿದ್ದೇನೆ.ಆದ್ದರಿಂದ ಅಧಿಕಾರ ಬಿಟ್ಟುಕೊಟ್ಟು ನನ್ನ ಮಾತು ನಡೆಸಿಕೊಡಿ’ ಅಂತ ಹೇಳಿದರೆ ಸಿದ್ಧರಾಮಯ್ಯ ಇಲ್ಲ ಅನ್ನಲಾರರು.ಆದರೆ ಅಧಿಕಾರ ಬಿಟ್ಟು ಕೊಡಲು ನಾನು ಸಿದ್ದ ಎನ್ನುತ್ತಲೇ ಸೋನಿಯಾಗಾಂಧಿ ಅವರಿಗೆ ಸ್ಪಷ್ಟ ಸಂದೇಶ ನೀಡಲು ಸಿದ್ಧರಾಮಯ್ತ ತಯಾರಾಗಿದ್ದಾರೆ.
ಅದೆಂದರೆ,’ಭವಿಷ್ಯದ ನಾಯಕನ ಆಯ್ಕೆ ಶಾಸಕಾಂಗ ಪಕ್ಷದಲ್ಲಿಯೇ ನಡೆಯಲಿ.ಇಲ್ಲದಿದ್ದರೆ ಪಕ್ಷ ಹೋಳಾಗಿ,ಸರ್ಕಾರ ಉರುಳುವ ಅಪಾಯವಿದೆ’ ಎನ್ನುವುದು.
ಒಂದು ಸಲ ಸಿದ್ದರಾಮಯ್ಯ ಈ ಸಂದೇಶ ನೀಡಿ ಬಂದರೆ ಸೋನಿಯಾಗಾಂಧಿ ಯೋಚಿಸುತ್ತಾರೆ.ಎಲ್ಲಕ್ಕಿಂತ ಮುಖ್ಯವಾಗಿ ರಾಹುಲ್ ಗಾಂಧಿ ಜತೆ ಚರ್ಚಿಸುತ್ತಾರೆ.ಆ ಸಂದರ್ಭದಲ್ಲಿ ರಾಹುಲ್ ಗಾಂಧಿ ನಾಯಕತ್ವ ಬದಲಾವಣೆಗೆ ಒಪ್ಪುವುದಿಲ್ಲ ಎಂಬುದು ಸಿದ್ದರಾಮಯ್ಯ ಕ್ಯಾಂಪಿನ ಲೆಕ್ಕಾಚಾರ.
ಹಾಗಂತ ಇಂತಹ ಬೆಳವಣಿಗೆ ಯಾವಾಗ ನಡೆಯುತ್ತದೆ?ಎಂಬುದರ ನಿಖರ ಅಂದಾಜೂ ಅವರಿಗಿಲ್ಲ.ಹೀಗಾಗಿ ಸಿದ್ಧರಾಮಯ್ಯ ಅವರ ದಿಲ್ಲಿ ಭೇಟಿಯ ಸಂದರ್ಭದಲ್ಲೆಲ್ಲ ಇಂತಹ ಬೆಳವಣಿಗೆ ಆಗಬಹುದು ಅಂತ ಅವರು ಯೋಚಿಸುತ್ತಾರೆ.ಈ ಬಾರಿಯೂ ಇಂತಹ ಯೋಚನೆ ಆ ಕ್ಯಾಂಪಿನ ಪ್ರಮುಖರಲ್ಲಿ ಸುಳಿದಿತ್ತು.ಆದರೆ ಎಂದಿನಂತೆ ಈ ಬಾರಿಯೂ ಅದು ನಿಜವಾಗಲಿಲ್ಲ.
ಕುತೂಹಲದ ಸಂಗತಿ ಎಂದರೆ ಇಂತಹ ಕಾಲಘಟ್ಟದಲ್ಲೇ ರಾಜ್ಯ ಕಾಂಗ್ರೆಸ್ ನ ಬಹುತೇಕ ನಾಯಕರಿಗೆ ರಾಹುಲ್ ಗಾಂಧಿಯವರ ನಿಜ ಕನಸುಗಳ ಮಾಹಿತಿ ಸಿಗುತ್ತಿದೆ.ಮತ್ತದು ಸಖತ್ತು ಇಂಟರೆಸ್ಟಿಂಗ್ ಆಗಿದೆ.

ಕೃಷ್ಣ ಭೈರೇಗೌಡ ಅಂದ್ರೆ
ರಾಹುಲ್ ಗಿಷ್ಡ
————————
ಈ ಮಾಹಿತಿಗಳ ಪ್ರಕಾರ,ಕರ್ನಾಟಕದಲ್ಲಿ ಸಿದ್ಧರಾಮಯ್ಯ ಅವರನ್ನು ಬದಲಿಸುವ ಇರಾದೆ ರಾಹುಲ್ ಗಾಂಧಿ ಅವರಿಗಿಲ್ಲ.ಕಾರಣ?ಸ್ಥಿರವಾಗಿರುವ ಸರ್ಕಾರ ಅಲುಗಾಡುವುದು ಅವರಿಗೆ ಬೇಕಿಲ್ಲ.
ಇವತ್ತು ಅಹಿಂದ ವರ್ಗಗಳ ನಾಯಕರಾಗಿ ಸಿದ್ಧರಾಮಯ್ಯ ಎಮರ್ಜ್ ಆಗಿರುವ ರೀತಿ ಹೇಗಿದೆ ಎಂದರೆ,ಅವರನ್ನು ಬದಲಿಸುವ ಯೋಚನೆ ಸರ್ಕಾರಕ್ಕೆ ಮಾರಕವಾಗಬಹುದು ಎಂಬುದು ರಾಹುಲ್ ಆತಂಕ.
ಹೀಗಾಗಿ ಸಿದ್ಧರಾಮಯ್ಯ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸುವ ವಿಷಯದಲ್ಲಿ ಅವರಿಗೆ ಸುತಾರಾಂ ಒಪ್ಪಿಗೆಯಿಲ್ಲ.ಆದರೆ ಮುಂದಿನ ದಿನಗಳಲ್ಲಿ ಅವರಾಗಿಯೇ ಕೆಳಗಿಳಿಯುವ ಬಯಕೆ ವ್ಯಕ್ತಪಡಿಸಿದರೆ ಆ ಜಾಗಕ್ಕೆ ಯಾರು ಬರಬೇಕು?ಅಂತ ಅವರು ಯೋಚಿಸಿದ್ದಾರೆ.
ಮೂಲಗಳ ಪ್ರಕಾರ,ಹಾಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡರೇ ರಾಹುಲ್ ಗಾಂಧಿ ಕಣ್ಣ ಮುಂದಿರುವ ಪರ್ಯಾಯ ನಾಯಕ.ಕಾರಣ?ಕೃಷ್ಣ ಭೈರೇಗೌಡ ಯುವಕರು.ಮಿಸ್ಟರ್ ಕ್ಲೀನ್ ಇಮೇಜ್ ಇರುವವರು.ಅದೇ ಕಾಲಕ್ಕೆ ಸುಶಿಕ್ಷಿತರಾಗಿರುವ ಕೃಷ್ಣ ಭೈರೇಗೌಡ ಕರ್ನಾಟಕದ ಜನಸಂಖ್ಯೆಯ ಶೇಕಡಾ 40 ರಷ್ಟಿರುವ ನಗರ ಪ್ರದೇಶದ ಮತದಾರರಿಗೆ ಒಪ್ಪಿಗೆಯಾಗುವ ನಾಯಕ.
ಈ ಮಧ್ಯೆ ಬೆಂಗಳೂರು,ಚಿಕ್ಕಬಳ್ಳಾಪುರ,ಕೋಲಾರ ಪಾಕೆಟ್ಟಿನ ಸುಮಾರು ಐವತ್ತು ಕ್ಷೇತ್ರಗಳಲ್ಲಿ ಮರಸು ಒಕ್ಕಲಿಗರು ಪ್ರಬಲರು.ಅವರು ಸಹಜವಾಗಿಯೇ ಕೃಷ್ಣ ಭೈರೇಗೌಡರ ನಾಯಕತ್ವವನ್ನು ಒಪ್ಪುತ್ತಾರೆ.
ಈ ಮಧ್ಯೆ ಕೃಷ್ಣ ಭೈರೇಗೌಡರು ಪರ್ಯಾಯ ನಾಯಕರಾಗಿ ಹೊರಹೊಮ್ಮಿದರೆ ಸಿದ್ದರಾಮಯ್ಯ ಕೂಡಾ ಬೆಂಬಲಿಸುತ್ತಾರೆ.ಹಾಗಾದಾಗ ಪ್ರಬಲ ಕುರುಬ ಸಮುದಾಯ ಸಾಲಿಡ್ಡಾಗಿ ಕಾಂಗ್ರೆಸ್ ಜತೆ ಉಳಿಯುತ್ತದೆ.ಅದೇ ಕಾಲಕ್ಕೆ ಹಾಲಿ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಉಪಮುಖ್ಯಮಂತ್ರಿ ಹುದ್ದೆಗೆ ತಂದರೆ ಒಕ್ಕಲಿಗ ಪ್ಲಸ್ ಅಹಿಂದ ಮತದಾರರು ಕನ್ ಸಾಲಿಡೇಟ್ ಆಗುತ್ತಾರೆ.
ಇವತ್ತು ಬಿಜೆಪಿ ಮತ್ತು ಸಂಘಪರಿವಾರವನ್ನು ಪ್ರಿಯಾಂಕ್ ಖರ್ಗೆ ಎಷ್ಟು ಸಮರ್ಥವಾಗಿ ಎದುರಿಸುತ್ತಿದ್ದಾರೆ ಎಂದರೆ ಈ ಅಂಶ ಕೈ ಪಾಳಯಕ್ಕೆ ಅನುಕೂಲ ಮಾಡಿಕೊಡುತ್ತಿದೆ.
ಹೀಗೆ ಕೃಷ್ಣ ಭೈರೇಗೌಡ-ಪ್ರಿಯಾಂಕ್ ಖರ್ಗೆ ಜೋಡಿಯನ್ನು ಮುಂದಿಟ್ಟುಕೊಂಡು ಅವರ ಜತೆಗೆ ದಿನೇಶ್ ಗುಂಡೂರಾವ್,ಈಶ್ವರ್ ಖಂಡ್ರೆ,ಶರಣಪ್ರಕಾಶ್ ಪಾಟೀಲ್,ಜಮೀರ್ ಅಹ್ಮದ್,ಸಂತೋಷ್ ಲಾಡ್ ಸೇರಿದಂತೆ ರಣಕಲಿಗಳ ದಂಡು ನಿಂತರೆ ತಮ್ಮ ಕನಸಿನ 2029 ಮತ್ತು 2034 ಕ್ಜೆ ತಾವು ದಿಲ್ಲಿ ಗದ್ದುಗೆಯನ್ನು ವಶಪಡಿಸಿಕೊಳ್ಳುವ ಪ್ರಯತ್ನಕ್ಕೆ ಪ್ಲಸ್ ಆಗಬಹುದು ಎಂಬುದು ರಾಹುಲ್ ಗಾಂಧಿ ಲೆಕ್ಜಾಚಾರ.
ಆದರೆ ಅವರ ಈ ಲೆಕ್ಕಾಚಾರ ವರ್ಕ್ ಔಟ್ ಆಗಬೇಕೆಂದರೆ ಸಧ್ಯಕ್ಕೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಸ್ಥಿರವಾಗಿರಬೇಕು.ಹಾಗಂತಲೇ ಮೊನ್ನೆ ದಿಲ್ಲಿ ದಂಡಯಾತ್ರೆ ಮಾಡಿದ ನಾಯಕರಿಗೆ ರಾಹುಲ್ ಗಾಂಧಿ ಕೊಡಬೇಕಾದ ಮೆಸೇಜನ್ನೇ ಕೊಟ್ಟು ಕಳಿಸಿದ್ದಾರೆ.

ಜೆಡಿಎಸ್ ಬಗ್ಗೆ ಬಿಜೆಪಿಗೆ
ಆತಂಕವೇ?
——————
ಈ ಮಧ್ಯೆ ಬೆಂಗಳೂರಿನ ಜೆಪಿ ನಗರದಲ್ಲಿರುವ ಕೇಂದ್ರ ಸಚಿವ ಕುಮಾರಸ್ವಾಮಿಯವರ ಮನೆಯಲ್ಲಿ ಶನಿವಾರ ಮಹತ್ವದ ಸಭೆ ನಡೆದಿದೆ.
ಈ ಸಭೆಯಲ್ಲಿ ಭಾಗವಹಿಸಿದ ಜೆಡಿಎಸ್ ಶಾಸಕರು ಮತ್ತಿತರ ನಾಯಕರು ಬಿಜೆಪಿಯ ರಾಜ್ಯ ನಾಯಕರ ಬಗ್ಗೆ ಕೋಪದಿಂದ ಮಾತನಾಡಿದ್ದಾರೆ.ಮೈತ್ರಿ ಅಂತ ಮಾತನಾಡುವ ಬಿಜೆಪಿಗರು ನಮ್ಮನ್ನು ದೂರ ಇಟ್ಟು ಬೆಲೆ ಏರಿಕೆಯ ಬಗ್ಗೆ ಹೋರಾಟ ಮಾಡಿದ್ದಾರೆ.ನಮ್ಮನ್ನು ದೂರವಿಡುವ ಅವರ ಲೆಕ್ಕಾಚಾರಕ್ಕೆ ಅವರಲ್ಲಿರುವ ಆತಂಕವೇ ಕಾರಣ ಎಂದಿದ್ದಾರೆ.
ಕಾರಣ?ರಾಜ್ಯ ಸರ್ಕಾರದ ವೈಫಲ್ಯದ ಲಾಭ ನಮಗಿಂತ ಹೆಚ್ಚಾಗಿ ಜೆಡಿಎಸ್ ಗೆ ಸಿಕ್ಕರೆ ಅವರು ನಮ್ಮ ಮೇಲೆ ಸವಾರಿ ಮಾಡಬಹುದು.ಹೀಗಾಗಿ ಅವರನ್ನು ದೂರವಿಟ್ಟು ನಾವು ಪ್ರತ್ಯೇಕವಾಗಿ ಹೋರಾಟ ಮಾಡೋಣ ಅಂತ ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.ಆದ್ದರಿಂದ ನಾವು ಕೂಡಾ ಬಿಜೆಪಿಗರನ್ನು ದೂರವಿಟ್ಟು ಬೆಲೆ ಏರಿಕೆಯ ಬಗ್ಗೆ ಹೋರಾಟ ಮಾಡೋಣ ಎಂದು ಆರ್ಭಟಿಸಿದ್ದಾರೆ.
ಅವರ ಆಕ್ರೋಶಕ್ಕೆ ಸ್ಪಂದಿಸಿದ ಕುಮಾರಸ್ವಾಮಿ ಅವರು:’ಆಯಿತು ಬಿಡಿ ಬ್ರದರ್.ನಾವೂ ಪ್ರತ್ಯೇಕವಾಗಿ ಹೋರಾಡೋಣ’ ಎಂದಿದ್ದಾರೆ.ಅಲ್ಲಿಗೆ ಬಿಜೆಪಿ-ಜೆಡಿಎಸ್ ಪಾಳಯದಲ್ಲೂ ಭವಿಷ್ಯದ ಸಿಎಂಗಿರಿಗಾಗಿ ಪೈಪೋಟಿ ಶುರುವಾಗಿದೆ ಅಂತಲೇ ಅರ್ಥ.

ವಿಜಯೇಂದ್ರ ಇರಲಿ
ಅಂದ್ರು ಭಿನ್ನರು
———————–
ಇನ್ನು ವಿಜಯೇಂದ್ರ ಅವರ ವಿರುದ್ಧ ನಡೆಸುತ್ತಿರುವ ಹೋರಾಟದಲ್ಲಿ ಯತ್ನಾಳ್ ಅವರನ್ನು ಕಳೆದುಕೊಂಡ ಭಿನ್ನರ ಪಡೆ,ಈಗ ವರಸೆ ಬದಲಿಸಿದೆ.
ಬಿಜೆಪಿ ಮೂಲಗಳ ಪ್ರಕಾರ,ಕರ್ನಾಟಕ ಬಿಜೆಪಿಯ ಚುನಾವಣಾಧಿಕಾರಿ ಶಿವರಾಜ್ ಸಿಂಗ್ ಚೌಹಾಣ್ ಏಪ್ರಿಲ್ ಹತ್ತರಂದು ಬೆಂಗಳೂರಿಗೆ ಬರಲಿದ್ದು,ಈ ಸಂದರ್ಭದಲ್ಲಿ ಭಿನ್ನರ ಪಡೆ ಅವರನ್ನು ಭೇಟಿ ಮಾಡಲಿದೆ.
ಈ ಭೇಟಿಯ ಸಂದರ್ಭದಲ್ಲಿ ಎರಡು ಬೇಡಿಕೆಗಳನ್ನು ಮುಂದಿಡಲಿರುವ ಅದು,ಒಂದೋ ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಿಸಿ.ಇಲ್ಲವೇ ಅವರನ್ನೇ ಪಕ್ಷದ ರಾಜ್ಯಾಧ್ಯಕ್ಷರ ಸ್ಥಾನದಲ್ಲಿ ಮುಂದುವರಿಸಿ ಅಂತ ಹೇಳಲಿದೆ.
ಅದರ ಈ ಬೇಡಿಕೆಯಲ್ಲಿ ಒಂದು ಸೂಕ್ಷ್ಮವಿದೆ.ಅದೆಂದರೆ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿ ಆಗಸ್ಟ್ ಅಂತ್ಯಕ್ಕೆ ಎರಡು ವರ್ಷ ಪೂರ್ಣಗೊಳ್ಳಲಿದೆ.ಹೀಗಾಗಿ ಸಹಜವಾಗಿಯೇ ಈ ಅವಧಿ ಪೂರ್ಣಗೊಳ್ಳಲು ಬಿಡಿ.ಇದಾದ ನಂತರ ಪಕ್ಷಕ್ಕೆ ಹೊಸ ಅಧ್ಯಕ್ಷರನ್ನು ನೇಮಿಸಿ.
ಆದರೆ ಈಗ ಮಾತ್ರ ಯಾವ ಕಾರಣಕ್ಕೂ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿದೆ ಎಂದು ಘೋಷಿಸಬೇಡಿ.
ಹಾಗೆ ಘೋಷಿಸಿದರೆ ವಿಜಯೇಂದ್ರ ಪುನ: ಇನ್ನೆರಡು ವರ್ಷದ ಅವಧಿಗೆ ಅಧ್ಯಕ್ಷರಾಗುತ್ತಾರೆ.ಇದು ಸರಿಯಲ್ಲ ಎಂಬುದು ಭಿನ್ನರ ವಾದ.ಇದನ್ನೇ ಅವರು ಬೆಂಗಳೂರಿಗೆ ಬರಲಿರುವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಹೇಳಲಿದ್ದಾರೆ.

ರೇಣುಕಾಚಾರ್ಯ ಉಚ್ಚಾಟನೆ
ಆಗ್ಲೇಬೇಕ್
———————–
ಈ ಮಧ್ಯೆ ಶುಕ್ರವಾರ ಬೆಳಿಗ್ಗೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ಸಭೆ ಸೇರಿದ್ದ ಬಿಜೆಪಿ ಭಿನ್ನರ ಪಡೆ ಪಕ್ಷದ ವರಿಷ್ಟರಿಗೆ ಹೊಸ ಸಂದೇಶ ರವಾನಿಸಿದೆ.
ಯಾವ ಕಾರಣಕ್ಕಾಗಿ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಯಿತೋ?ಅದೇ ಕಾರಣಕ್ಕಾಗಿ ವಿಜಯೇಂದ್ರ ಪಡೆಯ ನಾಯಕ ಎಂ.ಪಿ.ರೇಣುಕಾಚಾರ್ಯ ಅವರನ್ನೂ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂಬುದು ಈ ಸಂದೇಶ.
ಅಂದ ಹಾಗೆ ಯತ್ನಾಳ್ ಅವರು ಮಾಡುತ್ತಿದ್ದ ಆರೋಪಗಳ ಬಗ್ಗೆ ನಮಗೆ ಸಹಮತವಿದ್ದರೂ ಅವರು ಹೇಳಿದ್ದನ್ನೆಲ್ಲ ನಾವು ಒಪ್ಪುವುದಿಲ್ಲ.ಆದರೆ ಕಳೆದ ಹಲವು ತಿಂಗಳುಗಳಿಂದ ರೇಣುಕಾಚಾರ್ಯ ಆಡಿದ ಮಾತುಗಳನ್ನು ಕೇಳಿದರೆ ಅವು ಯತ್ನಾಳ್ ಅವರ ಮಾತುಗಳಿಗಿಂತ ಕಠೋರವಾಗಿವೆ.ಹೀಗಾಗಿ ಯತ್ನಾಳ್ ಅವರಿಗಾದ ಶಿಕ್ಷೆ ರೇಣುಕಾಚಾರ್ಯ ಅವರಿಗೂ ಆಗಬೇಕು.
ಇಲ್ಲದಿದ್ದರೆ ಇದು ಒನ್ ಸೈಡೆಡ್ ತೀರ್ಮಾನವಾಗುತ್ತದೆ.ಹೀಗಾಗಿ ಪರಿಸ್ಥಿತಿಯನ್ನು ಬ್ಯಾಲೆನ್ಸ್ ಮಾಡಲು ರೇಣುಕಾಚಾರ್ಯ ಅವರನ್ನೂ ಪಕ್ಷದಿಂದ ಉಚ್ಚಾಟಿಸಬೇಕು.
ಯಾವಾಗ ಈ ಕೆಲಸ ಆಗುತ್ತದೋ?ಆಗ ಶಿಸ್ತು ಉಲ್ಲಂಘನೆಯ ವಿಷಯ ಬಂದಾಗ ಎಲ್ಲರಿಗೂ ಒಂದೇ ನ್ಯಾಯ ಎಂಬ ಸಂದೇಶ ರವಾನೆಯಾಗುತ್ತದೆ.ಇಲ್ಲವಾದರೆ ವರಿಷ್ಟರು ವಿಜಯೇಂದ್ರ ಪರವಾಗಿದ್ದಾರೆ ಎಂಬ ಭಾವನೆ ಉಳಿದು ಗೊಂದಲ ಮುಂದುವರಿಯುತ್ತದೆ ಎಂಬುದು ಈ ಪಡೆಯ ಸಂದೇಶ.
ಈ ಮಧ್ಯೆ ರಾಜ್ಯ ಬಿಜೆಪಿಯ ಚುನಾವಣಾಧಿಕಾರಿ ಶಿವರಾಜ್ ಸಿಂಗ್ ಚೌಹಾಣ್ ಈ ವಾರ ಕರ್ನಾಟಕಕ್ಕೆ ಬರುತ್ತಿದ್ದು,ಈ ವಿಷಯವನ್ನು ಅವರಿಗೆ ನೇರವಾಗಿ ಹೇಳಲು ಭಿನ್ನರು ತೀರ್ಮಾನಿಸಿದ್ದಾರೆ.
ಮೂಲಗಳ ಪ್ರಕಾರ,ಯತ್ನಾಳ್ ಉಚ್ಚಾಟನೆಯ ನಂತರ‌ ಭಿನ್ನರ ಪಡೆ ತಬ್ಬಿಬ್ಬಾಗಿರುವುದು ನಿಜವಾದರೂ ಪರಿಸ್ಥಿತಿಯನ್ನು ಕಾದು ನೋಡಲು ಅದು ತೀರ್ಮಾನಿಸಿದೆ.ಹಾಗೆಯೇ ಯತ್ನಾಳ್ ಅವರನ್ನು ಮರಳಿ ಪಕ್ಷಕ್ಕೆ ಎಳೆತರುವ ಕಾರ್ಯದಿಂದ ಹಿಂದಕ್ಕೆ ಸರಿಯಲು ಯೋಚಿಸಿದೆ.
ಇದಕ್ಕಿರುವ ಮೊದಲ ಕಾರಣವೆಂದರೆ,ಯತ್ನಾಳ್ ಅವರು ಯಡಿಯೂರಪ್ಪ-ವಿಜಯೇಂದ್ರ ಅವರ ವಿರುದ್ಧ ತಮ್ಮ ಧಾಳಿ ಮುಂದುವರಿಸಲಿ ಎಂಬುದು.ಮತ್ತೊಂದು ಕಾರಣವೆಂದರೆ,ಯತ್ನಾಳ್ ತಮ್ಮ ನಿಜವಾದ ಶಕ್ತಿಯನ್ನು ಕಂಡುಕೊಳ್ಳಲು ಆಸ್ಪದವಾಗಲಿ ಎಂಬುದು.
ಹೀಗೆ ಅವರು ತಮ್ಮ ಶಕ್ತಿಯನ್ನು ಕಂಡುಕೊಂಡು ಮತ್ಯಷ್ಟು ಬಲಿಷ್ಟರಾಗಿ ಹೊರಹೊಮ್ಮಿದರೆ ಪಕ್ಷಕ್ಕೆ ಅವರ ಅನಿವಾರ್ಯತೆ ಏನು?ಅಂತ ವರಿಷ್ಟರಿಗೆ ತೋರಿಸಬಹುದು.ವೈಭವದಿಂದ ಪಕ್ಷಕ್ಕೆ ವಾಪಸ್ಸು ಕರೆತರಬಹುದು ಎಂಬುದು ಅದರ ಯೋಚನೆ.

– *ಆರ್.ಟಿ.ವಿಠ್ಠಲಮೂರ್ತಿ*