ಮಲ್ಟಿಪ್ಲೆಕ್ಸ್ /ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200 ರೂ. ಮೀರದಂತೆ ಸರ್ಕಾರ ಆದೇಶ*
*ಮಲ್ಟಿಪ್ಲೆಕ್ಸ್ /ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200 ರೂ. ಮೀರದಂತೆ ಸರ್ಕಾರ ಆದೇಶ*
ರಾಜ್ಯದ ಎಲ್ಲ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ (Multiplex) ಇನ್ಮುಂದೆ ಏಕರೂಪದ ದರ ಇರಬೇಕು ಎಂದು ಸರ್ಕಾರ ಆದೇಶಿಸಿದೆ. ಆ ಮೂಲಕ ರಾಜ್ಯಾದ್ಯಂತ ಒಂದೇ ದರ ನಿಗದಿ ಮಾಡಲಾಗಿದೆ. ಸಿನಿಮಾ ಪ್ರದರ್ಶನದ ಟಿಕೆಟ್ (Cinema Ticket Price) ಬೆಲೆ 200 ರೂ. ಮೀರಬಾರದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು ಎಲ್ಲ ಭಾಷೆಯ ಸಿನಿಮಾಗಳಿಗೂ ಅನ್ಚಯ ಆಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರ (Karnataka Government) ಅಧಿಕೃತ ಆದೇಶ ನೀಡಿದೆ.
ಕನ್ನಡ ಚಿತ್ರರಂಗ ಕಷ್ಟದಲ್ಲಿದೆ. ನಿರೀಕ್ಷಿತ ಪ್ರಮಾಣದ ಪ್ರೇಕ್ಷಕರು ಬಾರದೇ ಇರುವುದರಿಂದ ಅನೇಕ ಚಿತ್ರಮಂದಿರಗಳನ್ನು ಮುಚ್ಚಲಾಗಿದೆ. ಕರ್ನಾಟಕದಲ್ಲಿಯೇ ಪರಭಾಷೆ ಸಿನಿಮಾಗಳು ಬಹುಕೋಟಿ ರೂಪಾಯಿ ಮಾಡಿಕೊಳ್ಳುತ್ತವೆ. ಪರಭಾಷೆ ಸಿನಿಮಾಗಳ ಟಿಕೆಟ್ಗಳು ಸಾವಿರ ರೂಪಾಯಿ ಮೀರಿದ ಉದಾಹರಣೆ ಕೂಡ ಇದೆ. ಆದ್ದರಿಂದ ಟಿಕೆಟ್ ಬೆಲೆ ಕಡಿಮೆ ಆಗಬೇಕು ಎಂಬುದು ಬಹುದಿನಗಳ ಬೇಡಿಕೆ ಆಗಿತ್ತು.
ಏಕಪರದೆ ಚಿತ್ರಮಂದಿರಗಳಿಗೆ ಹೋಲಿಸಿದರೆ ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾಗಳ ಟಿಕೆಟ್ ಬೆಲೆ ದುಬಾರಿ ಆಗಿರುತ್ತದೆ. ಆ ಕಾರಣದಿಂದಲೇ ಜನರು ಚಿತ್ರಮಂದಿರಗಳಿಂದ ದೂರ ಉಳಿದುಕೊಂಡಿದ್ದಾರೆ ಎಂಬುದು ಅನೇಕರ ಅಭಿಪ್ರಾಯ ಆಗಿತ್ತು. ಹಾಗಾಗಿ ಸಿನಿಮಾಗಳ ಟಿಕೆಟ್ ಬೆಲೆ ತಗ್ಗಿಸಬೇಕು ಎಂದು ಹೇಳಲಾಗುತ್ತಿತ್ತು. ಅದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದೆ.
2025-26ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಸರ್ಕಾರ ಈ ಬಗ್ಗೆ ಪ್ರಕಟಿಸಿತ್ತು. ಮಲ್ಟಿಪ್ಲೆಕ್ಸ್ಗಳಲ್ಲಿ ಎಗ್ಗಿಲ್ಲದೇ ಏರಿಕೆ ಆಗುತ್ತಿದ್ದ ಟಿಕೆಟ್ ಬೆಲೆಗೆ ಕಡಿವಾಳ ಹಾಕಲು ಸರ್ಕಾರ ಮುಂದಾಗಿತ್ತು. ಆ ಸುದ್ದಿ ಕೇಳಿ ಸಿನಿಮಾ ಪ್ರಿಯರಿಗೆ ಖುಷಿ ಆಗಿತ್ತು. ಈಗ ಅಧಿಕೃತವಾಗಿ ಆದೇಶ ಹೊರಡಿಸಿದ್ದು, ಇನ್ಮುಂದೆ ಪ್ರೇಕ್ಷಕರಿಗೆ ಟಿಕೆಟ್ ಬೆಲೆಯ ಹೊರೆ ಕಡಿಮೆ ಆಗಲಿದೆ. ಇದರಿಂದ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ.
ಕೊವಿಡ್ ಬಳಿಕ ಒಟಿಟಿ ಪ್ರಭಾವ ಹೆಚ್ಚಾಯಿತು. ಮನೆಯಲ್ಲೇ ಹೊಸ ಸಿನಿಮಾಗಳನ್ನು ವೀಕ್ಷಿಸಲು ಜನರು ಆರಂಭಿಸಿದರು. ಒಟಿಟಿ ಬಿಸ್ನೆಸ್ ಕೂಡ ಹೆಚ್ಚಿತು. ಚಿತ್ರಮಂದಿರದಲ್ಲಿ ಬಿಡುಗಡೆ ಆದ ಕೆಲವೇ ವಾರಗಳಲ್ಲಿ ಹೊಸ ಸಿನಿಮಾಗಳು ಒಟಿಟಿಗೆ ಬರಲು ಆರಂಭಿಸಿದವು. ಇದು ಕೂಡ ಚಿತ್ರಮಂದಿರಗಳ ವ್ಯವಹಾರಕ್ಕೆ ಪೆಟ್ಟು ನೀಡಿತ್ತು.