ಬಸವ ತತ್ವ ಮತ್ತು ಲಿಂಗಾಯತ ಸಮಾಜದಲ್ಲಿ ಭಿನ್ನತೆ ತರುವ ಯತ್ನಕ್ಕೆ ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್ ತೀವ್ರ ವಿರೋಧ

ಬಸವ ತತ್ವ ಮತ್ತು ಲಿಂಗಾಯತ ಸಮಾಜದಲ್ಲಿ ಭಿನ್ನತೆ ತರುವ ಯತ್ನಕ್ಕೆ ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್ ತೀವ್ರ ವಿರೋಧ

ಇತ್ತೀಚೆಗೆ  ಕೆ. ಎಸ್. ಈಶ್ವರಪ್ಪ ಅವರು ಕನೇರಿ ಶ್ರೀ ವಿವಾದದ ಬಗ್ಗೆ ನೀಡಿರುವ ಹೇಳಿಕೆಗಳು ಸಂಪೂರ್ಣ ಪಿತೂರಿಯಾಗಿದೆ ಎಂದು ಕಾಂಗ್ರೆಸ್ ಶಿವಮೊಗ್ಗ ವಿಧಾನಸಭಾ ಅಭ್ಯರ್ಥಿಯಾಗಿದ್ದ ಮಾಜಿ ಕಾರ್ಪೊರೇಟರ್ ಹೆಚ್.ಸಿ.ಯೋಗೇಶ್ ಟೀಕಿಸಿದ್ದಾರೆ.

ಇದೇ ವೇಳೆ ಲಕ್ಷಾಂತರ ಬಸವ ತತ್ವ ಅನುಯಾಯಿಗಳು ಹಾಗೂ ಲಿಂಗಾಯತ ಶರಣರ ನೋವಿನಲ್ಲಿ ಹುಟ್ಟಿದ ನ್ಯಾಯಸಮ್ಮತವಾದ ಹೋರಾಟವನ್ನು ದುರುಪಯೋಗಪಡಿಸಿಕೊಳ್ಳಲು ರಾಜಕೀಯವಾಗಿ ಈಶ್ವರಪ್ಪ  ಪ್ರಯತ್ನಿಸಿದ್ದಾರೆ ಎಂದಿರುವ ಅವರು, ಕನೇರಿ ಶ್ರೀಗಳು ಲಿಂಗಾಯತ ಮಠಾಧೀಶರ ಒಕ್ಕೂಟವನ್ನು ಮತ್ತು ಶರಣರನ್ನು ಅನುಚಿತವಾಗಿ ಟೀಕೆ ಮಾಡಿದ್ದು, ಅಸಂವಿಧಾನಿಕ ಪದಗಳನ್ನು ಬಳಸಿದ್ದಾರೆ ಮತ್ತು ಪ್ರಸ್ತುತ ಹೋರಾಟಗಳು ನಾಟಕ ಎಂದು ಹೇಳಿದ್ದಾರೆ. ಒಬ್ಬ ಜವಾಬ್ದಾರಿಯುತ ಸ್ವಾಮೀಜಿಯಿಂದ ಇದನ್ನು ನಿರೀಕ್ಷಿಸಲಾಗದು. ಇದನ್ನು ರಾಜ್ಯದ ನೂರಾರು ಬಸವ ಸಂಘ ಸಂಸ್ಥೆಗಳು, ಮಠಾಧೀಶರು ಹಾಗು ಅನೇಕ ಭಕ್ತರು ಪ್ರಬಲವಾಗಿ ವಿರೋಧಿಸಿ ಸರ್ಕಾರದ ಗಮನ ಸೆಳೆದಿದ್ದಾರೆ. ಎಂದು ವಿವರಿಸಿದ್ದಾರೆ.

ಈ ಸಂಬಂಧ ಬೆಳಗಾವಿ, ವಿಜಯಪುರ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಯಲ್ಲಿ ಹೋರಾಟಗಳು, ಪ್ರತಿಭಟನೆಗಳು ನಡೆಯುತ್ತಿವೆ. ಪರಿಸ್ಥಿತಿಯ ನಿರ್ವಹಣೆಗಾಗಿ ಜಿಲ್ಲಾಡಳಿತ ತಾತ್ಕಾಲಿಕ ಪ್ರವೇಶ ನಿರ್ಬಂಧ ಕೈಗೊಂಡಿದೆ. ಕನೇರಿ ಶ್ರೀಗಳು, ಲಿಂಗಾಯತ ಮಠಾಧೀಶರು ಹಾಗೂ ಬಸವ ತತ್ವದವರನ್ನು ಅವಹೇಳನ ಮಾಡಿದ ಪರಿಣಾಮ, ರಾಜ್ಯದಾದ್ಯಾಂತ ಭಕ್ತರು, ಪ್ರತಿಭಟನಾಕಾರರು ಅವರ ಉಪಸ್ಥಿತಿಯನ್ನು ತಿರಸ್ಕರಿಸುತ್ತಿದ್ದಾರೆ. ಕನೇರಿ ಶ್ರೀ ಆಡಿರುವ ಮಾತುಗಳನ್ನು ಸಮರ್ಥಿಸುವ ಮೂಲಕ ಈಶ್ವರಪ್ಪ ಅವರು ಬಸವಣ್ಣನ ತತ್ವಕ್ಕೂ ಹಾಗೂ ಸಮಾನತೆ-ಧರ್ಮಾಧಾರಿತ ಭಾವನೆಗೂ ಅಪಮಾನ ಮಾಡಿದ್ದಾರೆ ಎಂದು ಯೋಗೇಶ್ ಹೇಳಿಕೆ ನೀಡಿದ್ದಾರೆ.

ಈಶ್ವರಪ್ಪ ಅವರು ಈ ವಿವಾದಾತ್ಮಕ ಹೇಳಿಕೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಲಿಂಗಾಯತ-ಬಸವ ಸಮಾಜದಲ್ಲಿ ವಿಭಜನೆ ಮಾಡಲು ಯತ್ನಿಸುತ್ತಿದ್ದಾರೆ. ಇಂತಹ ವಿವಾದಿತ ಹೇಳಿಕೆಗಳು ಹಿಂದಿನಿಂದಲೂ ರಾಜ್ಯದ ಸಮಾಜ ಪರಿವರ್ತಕರ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳನ್ನು ಅವಮಾನಿಸುತ್ತ ಬಂದಿವೆ.

ಲಿಂಗಾಯತ ಹಾಗೂ ಬಸವ ಅನುಯಾಯಿಗಳ ಏಕತೆ ಅಪಾರ ಶಕ್ತಿಯಾಗಿದೆ — ಇದನ್ನು ಯಾರೂ ಐದು ದಿನದ ರಾಜಕೀಯ ಪ್ರಯೋಜನಕ್ಕಾಗಿ ಮುರಿಯಲು ಸಾಧ್ಯವಿಲ್ಲ. ಯಾವುದೇ ನಾಯಕ ಅಥವಾ ರಾಜಕಾರಣಿ ಸಮಾಜದಲ್ಲೊಂದು ಬಿರುಕು ಉಂಟು ಮಾಡಲು ಅಥವಾ ಬಸವ ತತ್ವವನ್ನು ರಾಜಕೀಯವಾಗಿ ಬಳಸಲು ಮುಂದಾದರೆ ಅದಕ್ಕೆ ಬಲವಾದ ಪ್ರತಿರೋಧ ಎದುರಾಗುತ್ತದೆ. ಕನೇರಿ ಶ್ರೀ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಯಾವುದೇ ಧರ್ಮ ಅಥವಾ ವ್ಯಕ್ತಿಯ ವಿರುದ್ಧವಲ್ಲ; ಅದು ಸದಾ ಬಸವಣ್ಣನ ತತ್ವ, ಶರಣ ಸಂಸ್ಕೃತಿಯ ಗೌರವಕ್ಕಾಗಿ, ಮನೋಭಾವನೆಗಾಗಿ, ನ್ಯಾಯಕ್ಕಾಗಿ ನಡೆಯುತ್ತಿವೆ. ಸರ್ಕಾರ ಇದನ್ನು ಕದಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇಂತಹ ಪ್ರಯತ್ನಗಳನ್ನು  ಈಶ್ವರಪ್ಪನವರು ಬಿಡಬೇಕು ಮತ್ತು ಬಸವ ತತ್ವ ಹಾಗೂ ಶರಣ ಸಂಸ್ಕೃತಿಗೆ ಗೌರವ ಕೊಡಬೇಕು ಎಂದು ಯೋಗೇಶ್ ಆಗ್ರಹಿಸಿದ್ದಾರೆ.