*ಬಂಗಾರಪ್ಪ ರಸ್ತೆ ನಾಮಫಲಕ ಅನಾವರಣ* *ಮಾ.14 ಕ್ಕೆ ಕಾರ್ಯಕ್ರಮ, ಸಚಿವರು- ಗಣ್ಯರ ಆಗಮನ*

*ಬಂಗಾರಪ್ಪ ರಸ್ತೆ ನಾಮಫಲಕ ಅನಾವರಣ*

*ಮಾ.14 ಕ್ಕೆ ಕಾರ್ಯಕ್ರಮ, ಸಚಿವರು- ಗಣ್ಯರ ಆಗಮನ*

ಜನಸಾಮಾನ್ಯರ ನಾಯಕ ಎಸ್. ಬಂಗಾರಪ್ಪ ಅವರ ಹೆಸರನ್ನು ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯ ಮುಖ್ಯ ರಸ್ತೆಗೆ ನಾಮಕರಣ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ. ಈ ಹಿಂದೆಯೇ ಸರಕಾರ ಅಧಿಸೂಚನೆ ಹೊರಡಿಸಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆಯು ಇದೇ ಮಾ.14 ರಂದು ರಸ್ತೆಗೆ ಬಂಗಾರಪರಪ್ಪ ಅವರ ಹೆಸರಿನ ನಾಮಫಲಕ ಅನಾವರಣಗೊಳಿಸುತ್ತಿದೆ.

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ಶರಣರ ಮಾತಿನಂತೆ ಸಾರೇಕೊಪ್ಪ ಬಂಗಾರಪ್ಪ ಅವರ ಹೆಸರು ಜನಮಾನಸದಲ್ಲಿ ಶಾಶ್ವತವಾದುದು . ತಮಗೆ ಸಿಕ್ಕ ಕಡಿಮೆ ಅಧಿಕಾರದಲ್ಲಿಯೇ ಅವರು ಜಾರಿಗೆ ತಂದಿದ್ದ ಆಶ್ರಯ, ಆರಾಧನಾ, ವಿಶ್ವ, ಗ್ರಾಮೀಣ ಕೃಪಾಂಕ ಹಾಗೂ ರೈತರಿಗೆ ಉಚಿತ ವಿದ್ಯುತ್‌ ಯೋಜನೆಗಳು ಇಂದಿಗೂ ಮುಂದುವರಿದಿವೆ. ಎಸ್.‌ ಬಂಗಾರಪ್ಪ ಅವರು, ಬಗರ್‌ ಹುಕುಂ ಹೋರಾಟಗಾರರ ಪರವಾಗಿ ಮಾಡಿರುವ ಕೆಲಸದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಸಹಸ್ರಾರು ಕುಟುಂಬಗಳು ಉಳುವ ಭೂಮಿಗೆ ಹಕ್ಕು ಪತ್ರ ಪಡೆದುಕೊಂಡಿವೆ.

ಮಲೆನಾಡು ಮತ್ತು ಮಧ್ಯಕರ್ನಾಟಕದ ಸಂಜೀವಿನಿಯಾಗಿರುವ ಮೆಗ್ಗಾನ್‌ ಆಸ್ಪತ್ರೆ ಅವರು ನೀಡಿದ ದೊಡ್ಡ ಕೊಡುಗೆಯಾಗಿದೆ. ತುಂಗಾ ಏತ ನೀರಾವರಿ, ಬಯಲು ನಾಡಿಗೆ ನೀರುಣಿಸುವ ತುಂಗಾ ಮೇಲ್ದಂಡೆ ಯೋಜನೆಗಳಿಗೆ ಅವರ ಕಾಲದಲ್ಲಿಯೇ ಅಡಿಗಲ್ಲು ಹಾಕಿದ್ದು, ಇಂದು ಅವು ರೈತರ ಭೂಮಿಯನ್ನು ಹಸಿರಾಗಿಸಿ ಫಲ ಕೊಡುತ್ತಿವೆ.

ತುಂಗೆಯ ದಡದಲ್ಲಿರುವ ಶಿವಮೊಗ್ಗ ನಗರಕ್ಕೆ ಗಾಜನೂರು ಜಲಾಶಯದಿಂದ ಕುಡಿಯುವ ನೀರು ತಂದ ಕೀರ್ತಿ ಬಂಗಾರಪ್ಪ ಅವರಿಗೆ ಸಲ್ಲುತ್ತದೆ. ಸೂರಿಲ್ಲದವರಿಗೆ ಆಶ್ರಯ ಮನೆ ನಿರ್ಮಾಣ ಮಾಡಿ ಬಡವರ ಆಶ್ರಯ ದಾತರಾಗಿರುವ ಬಂಗಾರಪ್ಪ ಅವರ ಹೆಸರನ್ನು ಈತನಕ ಶಿವಮೊಗ್ಗ ನಗರದಲ್ಲಿ ಯಾವುದೇ ಪ್ರಮುಖ ಸ್ಥಳಕ್ಕೆ ನಾಮಕಾರಣ ಮಾಡಿರಲಿಲ್ಲ.

ಈಗ ಅವರ ಅಭಿಮಾನಿಗಳ ಒತ್ತಾಸೆಯಂತೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರ ಶಿವಮೊಗ್ಗ ನಗರದ ಆಲ್ಕೊಳ ಸರ್ಕಲ್‌ನಿಂದ ಗೋಪಾಲಗೌಡ ಬಡಾವಣೆ ಡಿವಿಜಿ ವೃತ್ತದವರೆಗಿನ ನೂರು ಅಡಿ ದ್ವಿಪಥ ರಸ್ತೆಗೆ ಎಸ್. ಬಂಗಾರಪ್ಪ ಅವರ ಹೆಸರನ್ನು ಘೋಷಣೆ ಮಾಡಿ ಅಧಿಸೂಚನೆ ಹೊರಡಿಸಿದೆ.

ಶಿವಮೊಗ್ಗ ಮಹಾನಗರ ಪಾಲಿಕೆಯು ಮಾ.14 ರಂದು ಬೆಳಗ್ಗೆ 11.00 ಗಂಟೆಗೆ ಗೋಪಾಲಗೌಡ ಬಡಾವಣೆಯಲ್ಲಿ ನಾಮಕರಣ ಫಲಕ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಅಂದಿನ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಶಾಸಕರು, ಸಂಸದರು ಸೇರಿದಂತೆ ಹಲವರು ಆಗಮಿಸಲಿದ್ದಾರೆ. ವರ್ಣರಂಜಿತ ರಾಜಕಾರಣಿ ಹಾಗೂ ಜನಪರ ಕೆಲಸ ಮಾಡುವ ಮೂಲಕ ಜನರ ಹೃದಯವಾಸಿಯಾದ ಒಬ್ಬ ಮಾಸ್‌ ಲೀಡರ್‌ ಹೆಸರನ್ನು ಪ್ರಮುಖ ರಸ್ತೆಯೊಂದಕ್ಕೆ ನಾಮಕರಣ ಮಾಡುತ್ತಿರುವ ಮಹಾನಗರ ಪಾಲಿಕೆ ಹಾಗೂ ರಾಜ್ಯ ಸರ್ಕಾರಕ್ಕೆ ಬಂಗಾರಪ್ಪ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಅಭಿನಂದನೆ ಸಲ್ಲಿಸಿದ್ದಾರೆ.