ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿಯ 26ನೇ ವರ್ಷದ ದಿನಚರಿ ಬಿಡುಗಡೆ *ಮಂಡಳಿಯಿಂದ ಮಲೆನಾಡು ಅಭಿವೃದ್ದಿಗೆ ವಿಶೇಷ ಕಾಮಗಾರಿಗಳು; ಆರ್.ಎಂ.ಮಂಜುನಾಥಗೌಡ*
ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿಯ 26ನೇ ವರ್ಷದ ದಿನಚರಿ ಬಿಡುಗಡೆ
*ಮಂಡಳಿಯಿಂದ ಮಲೆನಾಡು ಅಭಿವೃದ್ದಿಗೆ ವಿಶೇಷ ಕಾಮಗಾರಿಗಳು; ಆರ್.ಎಂ.ಮಂಜುನಾಥಗೌಡ*

ಶಿವಮೊಗ್ಗ.
ಐತಿಹಾಸಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಉನ್ನತಿಗೆ ವಿಶಿಷ್ಟ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿಯ 26ನೇ ವರ್ಷದ ದಿನಚರಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾದ ಆರ್.ಎಂ.ಮಂಜುನಾಥಗೌಡ ತಿಳಿಸಿದರು.
ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಮಂಡಳಿಯ 2026-27 ನೇ ಸಾಲಿನ ಹೊಸ ದಿನಚರಿ ಬಿಡುಗಡೆ ಕಾರ್ಯಕ್ರಮದಲ್ಲಿ ದಿನಚರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿಯು ಪ್ರಸ್ತುತ 10 ಜಿಲ್ಲೆಗಳನ್ನು, 54 ತಾಲ್ಲೂಕುಗಳ 64 ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿದೆ. 09 ಲೋಕಸಭಾ ಸದಸ್ಯರು, 46 ವಿಧಾನಸಭಾ ಸದಸ್ಯರು, 18 ವಿಧಾನ ಪರಿಷತ್ ಸದಸ್ಯರು, ತಲಾ 10 ಜಿ.ಪಂ ಅಧ್ಯಕ್ಷರು ಮತ್ತು ಸರ್ಕಾರದಿಂದ ನಾಮನಿರ್ದೇಶನಗೊಂಡ ಸದಸ್ಯರು, 01 ಕಾರ್ಯದರ್ಶಿ ಮತ್ತು 10 ಜಿಲ್ಲಾಧಿಕಾರಿಗಳು ಸೇರಿದಂತೆ 104 ಸದಸ್ಯರನ್ನು ಒಳಗೊಂಡಿದೆ.
2025-26 ನೇ ಸಾಲಿಗೆ ಮಂಡಳಿಗೆ ರೂ.33 ಕೋಟಿ ಅನುದಾನ ಬಂದಿದ್ದು, ಕಳೆದ ಬಾರಿಗಿಂತ 7 ರಿಂದ 8 ಕೋಟಿ ಹೆಚ್ಚು ಅನುದಾನ ಬಂದಿದೆ. ಈ ಅನುದಾನವನ್ನು ಪಿಡಬ್ಲುö್ಯಡಿ, ಜಿಲ್ಲಾ ಪಂಚಾಯತ್ ಕಾಮಗಾರಿಗಳನ್ನು ಹೊರತುಪಡಿಸಿ ವಿಶೇಷವಾಗಿ ಮಲೆನಾಡು ಭಾಗಕ್ಕೆ ಅಗತ್ಯವಿರುವ ರಸ್ತೆ, ಕಾಲುಸಂಕ, ಚೆಕ್‌ಡ್ಯಾಂ ಗಳಿಗೆ ಬಳಕೆ ಮಾಡಲಾಗುತ್ತಿದೆ. ಈಗಾಗಲೇ 100 ಕಾಲುಸಂಕ ಕಾಮಗಾರಿ ಮುಗಿದಿದ್ದು ನಬಾರ್ಡ್ ವಿಶೇಷ ಅನುದಾನದಲ್ಲಿ 350 ರಿಂದ 400 ಕಾಲುಸಂಕ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸಲಾಗಿದೆ.
ರೂ.33 ಕೋಟಿ ಅನುದಾನದಲ್ಲಿ ಶಾಸಕರುಗಳಿಗೆ ಹಾಗೂ ರಚನಾತ್ಮಕ ಕಾರ್ಯಕ್ರಮಗಳಿಗೆ ವಿನಿಯೋಗಿಸಲು ಹಂಚಿಕೆಯಾಗಿದ್ದು ತೀರ್ಥಹಳ್ಳಿಯ ಕುಡುಮಲ್ಲಿಗೆಯ ಶತಮಾನೋತ್ಸವ ಶಾಲೆಯ ಅಭಿವೃದ್ದಿಗೆ ರೂ.2.5 ಕೋಟಿ, ಸಾಗರ ಕ್ಷೇತ್ರಕ್ಕೆ 75 ಲಕ್ಷ, ತರೀಕೆರೆಗೆ ರೂ.1 ಕೋಟಿ, ತೀರ್ಥಹಳ್ಳಿಗೆ ಹೆಚ್ಚುವರಿ ರೂ.1 ಕೋಟಿ ಸೇರಿದಂತೆ ವಿವಿಧ ರಚನಾತ್ಮಕ ಕಾಮಗಾರಿ, ಕೆಲಸಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ.
ಹೆಚ್ಚುವರಿ ಅನುದಾನಕ್ಕೆ ಬೇಡಿಕೆ : 2026-27 ನೇ ಸಾಲಿಗೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಟ್ಟಿದ್ದು, ಮಂಜೂರು ಮಾಡುವುದಾಗಿ ಮಾನ್ಯ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಮಂಡಳಿಗೆ ರೂ.78.43 ಕೋಟಿ ಅನುದಾನವನ್ನು ಮುಂದಿನ ಆಯವ್ಯಯದಲ್ಲಿ ಹಂಚಿಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ನಬಾರ್ಡ್ ನೆರವು : ನಬಾರ್ಡ್ ಸಂಸ್ಥೆಯಿಂದ ಆರ್ಥಿಕ ನೆರವು ಪಡೆದು ರಚನಾತ್ಮಕ ಕಾರ್ಯಕ್ರಮಗಳಡಿ ತೂತು ಸೇತುವೆ, ಕಾಲುಸಂಕ ಮತ್ತು ಬೃಹತ್ ಸೇತುವೆ ಕಾಮಗಾರಿಗಳನ್ನು ಮಂಡಳಿಯಿಂದ ಅನುಷ್ಟಾನಗೊಳಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ರೂ.10 ಕೋಟಿಯಂತೆ ಕಾಮಗಾರಿ ಪ್ರಸ್ತಾವನೆ ಪಡೆದು ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ತಿಳಿಸಿದರು.
ಮಂಡಳಿ ಸಾಧನೆ :1993-94 ನೇ ಸಾಲಿನಿಂದ 2024-25 ರವರೆಗೆ ತೂಗು ಸೇತುವೆ, ಕಾಲು ಸೇತುವೆ, ಕಾಂಕ್ರಿಟ್ ಮತ್ತು ಡಾಂಬರು ರಸ್ತೆ, ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡ, ಕುಡಿಯುವ ನೀರು ಸರಬರಾಜು ಯೋಜನೆ, ಸಣ್ಣ ನೀರಾವರಿ ಯೋಜನೆ, ಸಾರ್ವಜನಿಕ ಸಮುದಾಯ ಭವನ, ಬಸ್ ನಿಲ್ದಾಣ, ಇತರೆ ಕಟ್ಟಡಗಳನು ಸೇರಿದಂತೆ ಒಟ್ಟು 64,638.71 ಲಕ್ಷದ 20568 ಅಭಿವೃದ್ದಿ ಕಾಮಗಾರಿಗಳನ್ನು ಮಲೆನಾಡಿನ ಎಲ್ಲಾ ಭಾಗಗಳಲ್ಲೂ ವ್ಯವಸ್ಥಿತವಾಗಿ ಅನುಷ್ಟಾನಗೊಳಿಸಲಾಗಿದೆ ಎಂದರು.
ಸಭೆಯಲ್ಲಿ ಎಂಎಡಿಬಿ ಅಧೀನ ಕಾರ್ಯದರ್ಶಿ ಹನುಮನಾಯ್ಕ್, ಉಪನಿರ್ದೇಶಕ ಶಿವಾನಂದ್, ಅಕ್ಷತಾ ಹಾಜರಿದ್ದರು.


