*ಶಿವಮೊಗ್ಗ ಟ್ರಾಫಿಕ್ ಹೆಡ್ ಕಾನ್ಸ್ ಟೆಬಲ್ ಝಕ್ರಿಯಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!* *ಬಚಾವಾದ ಮತ್ತೋರ್ವ ಮುಖ್ಯ ಪೇದೆ ನಾಸಿರ್!!* *ಏನಿದೆ ದೂರಿನಲ್ಲಿ?*

*ಶಿವಮೊಗ್ಗ ಟ್ರಾಫಿಕ್ ಹೆಡ್ ಕಾನ್ಸ್ ಟೆಬಲ್ ಝಕ್ರಿಯಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!*

*ಬಚಾವಾದ ಮತ್ತೋರ್ವ ಮುಖ್ಯ ಪೇದೆ ನಾಸಿರ್!!*

*ಏನಿದೆ ದೂರಿನಲ್ಲಿ?*

55 ವರ್ಷದ ಮೊಹಮ್ಮದ್ ಝಕ್ರಿಯಾ ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದವರು ಜ.7ರ ಮಧ್ಯರಾತ್ರಿ ಠಾಣೆಯಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ಇಡೀ ಪೊಲೀಸ್ ಇಲಾಖೆಯನ್ನೇ ಅಲುಗಾಡಿಸಿ ಹಾಕಿತ್ತು.

ಮೆಟಲ್ ನಂಬರ್ 55 ಆಗಿದ್ದ ಝಕ್ರಿಯಾ ಕಳೆದ ತಿಂಗಳಷ್ಟೇ ಎ ಎಸ್ ಐ ಆಗಿ ಬಡ್ತಿ ಹೊಂದಿ ಆನವಟ್ಟಿಗೆ ಹೋಗಬೇಕಿದ್ದವರು. ಓಡಾಟದ ಸಮಸ್ಯೆಯಿಂದ ಬಡ್ತಿ ಬೇಡ ಎಂದು ನಿರಾಕರಿಸಿದ್ದರು.

ಇವರ ಸಾವಿಗೆ ಸಂಬಂಧಿಸಿದಂತೆ ಅವರ ಮಗ ಮೊಹಮ್ಮದ್ ಅಮೀರ್ ದೊಡ್ಡಪೇಟೆ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಆ ದೂರಿನಲ್ಲಿ ಅವರೇನು ವಿವರಿಸಿದ್ದಾರೆ? ಅದರ ಮುಖ್ಯಾಂಶಗಳು ಇಲ್ಲಿವೆ…

ಬೆನ್ನುನೋವು ಅವರಿಗೆ ಕಾಡುತ್ತಿತ್ತು. ಕಳೆದ ನವೆಂಬರ್ 30 ರಿಂದ ವೈದ್ಯಕೀಯ ಕಾರಣಗಳಿಗಾಗಿ ರಜೆ ತೆಗೆದುಕೊಂಡಿದ್ದರು. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಇದೇ ಜ.6 ಕ್ಕೆ ಕೆಲಸಕ್ಕೆ ಹಾಜರಾಗಿದ್ದರು. ಜ.7.ರ ರಾತ್ರಿಪಾಳಿ ಇದ್ದುದರಿಂದ ಝಕ್ರಿಯಾರನ್ನು ಮಗನೇ ಠಾಣೆ ಬಳಿ ಬಿಟ್ಟು ಹೋಗಿದ್ದ.

ಮಾರನೇ ದಿನ ಬೆಳಿಗ್ಗೆ ಠಾಣೆಯಲ್ಲೇ ನೇಣುಬಿಗಿದು ಸಾವು ಕಂಡಿರುವ ಝಕ್ರಿಯಾ ವಿಷಯ ಅವರ ಮನೆಗೆ ತಲುಪಿದೆ. ಪಕ್ಕದಲ್ಲಿದ್ದ ಸೆಲ್ಫ್ ನಲ್ಲಿಯೇ ಡೆತ್ ನೋಟ್ ಕೂಡ ಬರೆದಿಟ್ಟಿದ್ದ ಝಕ್ರಿಯಾ ಬಹಳಷ್ಟು ಸತ್ಯಗಳನ್ನು ದಾಖಲಿಸಿದ್ದರು.ಸ್ನೇಹಿತ ಆದಿಲ್ ಗೆ ವ್ಯಾಟ್ಸಪ್ ಮೆಸೇಜ್ ಕೂಡ ಜ.8 ರ ಬೆಳಗಿನ ಜಾವ 4.45 ಕ್ಕೆ ಮಾಡಿದ್ದಾರೆ. ಇದರಲ್ಲಿ ತನ್ನ ಜೊತೆ ಕೆಲಸ ಮಾಡುವ ನಾಸಿರ್ ಎಂಬ ಹೆಡ್ ಕಾನ್ಸ್ ಟೆಬಲ್ ಅಪಹಾಸ್ಯ ಮಾಡುತ್ತಾ, ಕೆಲಸದ ಬಗ್ಗೆ ವಿನಾಕಾರಣ ಪ್ರಶ್ನಿಸುತ್ತಾ ಇದ್ದು, ಬೇಸರವಾಗಿದ್ದೇನೆ ಎಂದು ಬರೆದಿದ್ದಾರೆ.

ಇದೇನು ಗಂಭೀರ ವಿಚಾರವಲ್ಲ ಎಂಬಂತೆ ದೂರಿನಲ್ಲಿ ಮೃತರ ಮಗ ಮೊಹಮ್ಮದ್ ಅಮೀರ್ ವಿವರಿಸಿದ್ದು, ಒಟ್ಟಿಗೇ ಕೆಲಸ ಮಾಡುವಾಗ ಇದೆಲ್ಲ ಸರ್ವೇ ಸಾಮಾನ್ಯ ಎಂದು ವಿವರಣೆ ಕೂಡ ನೀಡಿದ್ದು, ಇದರಿಂದ ತನ್ನ ತಂದೆ ಸಾವಿಗೆ ಶರಣಾಗಿಲ್ಲ ಎಂದು ದಾಖಲಿಸಿದ್ದಾರೆ.

ಅತಿಯಾದ ಬೆನ್ನುನೋವಿನಿಂದ ದೈನಂದಿನ ಕೆಲಸ ಕೂಡ ಮಾಡಲಾರದ ಸ್ಥಿತಿಯಲ್ಲಿ ತನ್ನ ತಂದೆ ಝಕ್ರಿಯಾ ಇದ್ದರು. ಇದೇ ಕಾರಣಕ್ಕಾಗಿ ಪದೋನ್ನತಿಯನ್ನು ಬಿಟ್ಟುಕೊಟ್ಟಿದ್ದರು. ಆರೋಗ್ಯದ ಸಮಸ್ಯೆಯಿಂದಾಗಿಯೇ ಅವರು ಜ.8ರ ಬೆಳಗಿನ ಜಾವ 7 ಗಂಟೆಯೊಳಗೆ ನೇಣು ಹಾಕಿಕೊಂಡಿದ್ದಾರೆ. ಅನಾರೋಗ್ಯ ಕಾರಣ ಬಿಟ್ಟರೆ ಆತ್ಮಹತ್ಯೆಗೆ ಬೇರೇನೂ ಕಾರಣವಿರುವುದಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ಸ್ ಟೆಬಲ್ ಮೊಹಮ್ಮದ್ ಝಕ್ರಿಯಾ ಮಗ ಮೊಹಮ್ಮದ್ ಅಮೀರ್ ದೂರು ನೀಡಿದ್ದು, ಹೆಡ್ ಕಾನ್ಸ್ ಟೆಬಲ್ ನಾಸಿರ್ ನಿಟ್ಟುಸಿರು ಬಿಡುವಂತಾಗಿದೆ.