ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಯೋಣ : ಡಿವೈಎಸ್‍ಪಿ ಸುರೇಶ್*
*ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಯೋಣ : ಡಿವೈಎಸ್‍ಪಿ ಸುರೇಶ್*
ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಯುವಲ್ಲಿ ಎಲ್ಲ ಭಾಗೀದಾರ ಇಲಾಖೆಗಳು ಕಾಯ್ದೆಯನ್ನು ಸಮರ್ಪಕವಾಗಿ ಅರಿತು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕೆಂದು ಡಿವೈಎಸ್‍ಪಿ ಸುರೇಶ್ ಹೇಳಿದರು.
ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಭಾಗೀದಾರ ಇಲಾಖೆಗಳ ಸಹಯೋಗದಲ್ಲಿ ಇಂದು ಆಲ್ಕೊಳದ ಚೈತನ್ಯ ಇಲ್ಲಿ ಕ್ಷೇತ್ರ ಮಟ್ಟದ ವಿವಿಧ ಇಲಾಖೆಯ ಭಾಗೀದಾರರಿಗೆ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿದ್ದು, ಪೊಲೀಸ್ ಠಾಣೆಗಳಲ್ಲಿ ಇದಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ದಾಖಲಾಗುತ್ತಿವೆ. ಮಹಿಳೆಯರು ಮತ್ತು ಮಕ್ಕಳನ್ನು ಈ ಮೋಸದ ಬಲೆಯಿಂದ ರಕ್ಷಿಸುವುದು ಅತ್ಯಂತ ಅವಶ್ಯಕವಾಗಿದೆ.
ಜಿಲ್ಲೆಯಲ್ಲಿ ಸ್ಪಾ/ಸಲೂನ್‍ಗಳ ಬಗ್ಗೆ ದೂರುಗಳು ಬರುತ್ತಿದ್ದು, ಕಾಯ್ದೆ ಅನುಷ್ಟಾನ ವೇಳೆ ಯಾರನ್ನು ಆರೋಪಿಗಳೆಂದು, ಸಂತ್ರಸ್ತರೆಂದು ಪರಿಗಣಿಸಬೇಕು ಹೀಗೆ ಕೆಲ ಗೊಂದಲಗಳು ಎದುರಾಗುತ್ತವೆ. ಆದ್ದರಿಂದ ಎಲ್ಲರೂ ಕಾಯ್ದೆಯನ್ನು ಸಮರ್ಪಕವಾಗಿ ಅರಿತು ಎಷ್ಟೇ ಸವಾಲುಗಳಿದ್ದರೂ ಅದನ್ನು ಎದುರಿಸಿ, ಮಹಿಳೆಯರು ಮತ್ತು ಮಕ್ಕಳನ್ನು ಅನಾಹುತಗಳಿಂದ ರಕ್ಷಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶಶಿರೇಖಾ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಮೇಲೆ ಅನೇಕ ರೀತಿಯ ದೌರ್ಜನ್ಯ, ಅಪರಾಧಗಳು ನಡೆಯುತ್ತಿರುವ ಕಾರಣ ಇವರ ಕುರಿತಾಗಿ ಅತಿ ಹೆಚ್ಚು ಕಾಯ್ದೆ-ಕಾನೂನುಗಳಿವೆ. ಎಲ್ಲ ಭಾಗೀದಾರ ಇಲಾಖೆಗಳ ತಳಮಟ್ಟದಿಂದ ಉನ್ನತ ಮಟ್ಟದ ಅಧಿಕಾರಿಗಳವರೆಗೆ ಈ ಕಾಯ್ದೆಗಳ ಬಗ್ಗೆ ಸಮರ್ಪಕವಾಗಿ ತಿಳಿದುಕೊಂಡು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ.
ಇತ್ತೀಚಿನ ಬಹಳ ಆತಂಕಕಾರಿ ವಿಷಯವೆಂದರೆ ಪೋಷಕರು ಮತ್ತು ಮಕ್ಕಳ ನಡುವಿನ ಅಂತರ ಹೆಚ್ಚುತ್ತಿದೆ. ಮಾತುಕತೆ ಕಡಿಮೆಯಾಗುತ್ತಿದೆ. ಪೋಷಕರು ಒತ್ತಡದ ಕೆಲಸದಲ್ಲಿದ್ದರೆ ಮಕ್ಕಳು ಮೊಬೈಲ್, ಸೋಷಿಯಲ್ ಮೀಡಿಯಾ, ಗೆಳೆಯರೊಂದಿಗೆ ಇರುತ್ತಾರೆ. ಸರಿಯಾದ ಮಾರ್ಗದರ್ಶನದ ಕೊರತೆ ಇದೆ. ಸಣ್ಣಪುಟ್ಟ ವಿಷಯಗಳಿಗೂ ಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿದೆ. ಮಹಿಳೆಯರಲ್ಲಿ ಖಿನ್ನತೆಯೂ ಹೆಚ್ಚುತ್ತಿದೆ.
ಜೀತ, ಕೃಷಿ, ಕಾರ್ಖಾನೆ ಕೆಲಸ, ಅಂಗಾಂಗ ಮಾರಾಟ, ಒಳ ಹಾಗೂ ಹೊರದೇಶಗಳಲ್ಲಿ ದತ್ತು, ಲೈಂಗಿಕ ಚಟುವಟಿಕೆ, ಭಿಕ್ಷಾಟನೆ, ಮಾದಕ ವಸ್ತು ಸಾಗಾಣಿಕೆ, ಕಳ್ಳ ಸಾಗಾಣಿಕೆ, ಸೂಕ್ಷ್ಮ ಕೆಲಸಗಳು, ಮದುವೆ ವಿಚಾರ, ಬಾರ್‍ನಲ್ಲಿ ನೃತ್ಯ ಹೀಗೆ ಹಲವಾರು ಕಾರಣಗಳಿಗೆ ಮಹಿಳೆಯರ, ಮಕ್ಕಳ ಅನೈತಿಕ ಸಾಗಣಿಕೆ ಹೆಚ್ಚುತ್ತಿದೆ. ಹೆಣ್ಣು ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳ ಅನೈತಿಕ ಸಾಗಾಣಿಕ ಸಹ ಅಧಿಕವಾಗುತ್ತಿದ್ದು, ಇದನ್ನು ತಡೆಯುವುದು ನಮ್ಮೆಲ್ಲರ ಹೊಣೆಯಾಗಿದೆ.
ಸಾಗಾಣಿಕೆಯನ್ನು ನೆರೆಹೊರೆಯವರು, ಶಾಲಾ ಶಿಕ್ಷಕರು, ಭಾಗೀದಾರ ಇಲಾಖೆಯವರು, ಪೊಲೀಸ್, ಪಂಚಾಯ್ತಿ, ಸ್ಥಳೀಯ ಮಕ್ಕಳ ಕಲ್ಯಾಣ ಸಮಿತಿ ಸೇರಿದಂತೆ ಸಮುದಾಯದ ಪ್ರತಿಯೊಬ್ಬರು ತಡೆಯಬಹುದಾಗಿದೆ ಎಂದರು.
ಎಸ್‍ಎಂಎಸ್‍ಎಸ್ ನಿರ್ದೇಶಕ ಫಾದರ್ ಕ್ಲಿಫರ್ಡ್ ರೋಷನ್ ಪಿಂಟೊ ಮಾತನಾಡಿ, ಸಮಾಜದಲ್ಲಿ ಒಂದೆಡೆ ಅಭಿವೃದ್ದಿ ಇದ್ದರೆ ಇನ್ನೊಂದೆಡೆ ಸಮಸ್ಯೆಗಳೂ ಹೆಚ್ಚುತ್ತಿವೆ. ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದಂತೆ ಅನೇಕ ಅಪರಾಧಗಳು ಹೆಚ್ಚುತ್ತಿದ್ದು, ಅವರ ಅನೈತಿಕ ಸಾಗಾಣಿಕೆ ಮುಖ್ಯವಾಗಿದೆ. ಯಾವುದಕ್ಕಾಗಿ ಈ ಕೃತ್ಯಗಳು ನಡೆಯುತ್ತಿದೆ ಎಂಬ ಮೂಲ ಸಮಸ್ಯೆಯನ್ನು ಗುರುತಿಸಿ ಪರಿಹಾರ ಕಂಡುಕೊಂಡಲ್ಲಿ ಅಪರಾಧಗಳ ಪ್ರಮಾಣ ತಗ್ಗುವುದು. ಮೂಲ ಸಮಸ್ಯೆಗೆ ಪರಿಹಾರ ಕಷ್ಟವಾದರೂ ಪ್ರಯತ್ನ ಬೇಕು. ಆದರೆ ಇತ್ತೀಚಿಗೆ ಸಮಸ್ಯೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಪರಿಹಾರ ಲಭಿಸುತ್ತಿರುವುದು ಒಳ್ಳೆಯ ಅಂಶವಾಗಿದ್ದು, ಇನ್ನಷ್ಟು ಸಮರ್ಪಕವಾಗಿ ಪರಿಹಾರ ದೊರಕಬೇಕು. ಅದಕ್ಕಿಂತ ಹೆಚ್ಚಾಗಿ ಆ ರೀತಿಯ ಕೃತ್ಯಗಳು ಘಟಿಸದಂತೆ ಕಾರ್ಯೋನ್ಮುಖರಾಗಬೇಕೆಂದರು.
ಶಿವಮೊಗ್ಗ ಸಿಡಿಪಿಒ ಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಯುವುದು ಐಟಿಪಿಎ 1956 ಕಾಯ್ದೆಯ ಮುಖ್ಯ ಉದ್ದೇಶವಾಗಿದೆ. ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆಯು ಅನೇಕ ಕಾರಣಗಳಿಗೆ ಆಗುತ್ತಿದ್ದು, ಮನೆಕೆಲಸ, ಸುಳ್ಳು ಮದುವೆ, ಗುಪ್ತ ಉದ್ಯೋಗಗಳು ಹಾಗೂ ಸುಳ್ಳು ದತ್ತು, ಲೈಂಗಿಕ ಚಟುವಟಿಕೆಯಂತ ಕಾನೂನುಬಾಹಿರ ಚಟುವಟಿಕೆಗಳಿಗಾಗಿ ಸಾಗಾಣಿಕೆ ನಡೆಯುತ್ತಿದ್ದು, ಇದೊಂದು ವ್ಯವಸ್ಥಿತ ಅಪರಾಧವಾಗಿದೆ.
ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಲು ಸರ್ಕಾರ ಅನೇಕ ಕಾಯ್ದೆ-ಕಾನೂನು ಜಾರಿಗೊಳಿಸಿದ್ದು ಎಲ್ಲ ಭಾಗೀದಾರ ಇಲಾಖೆಗಳ ಸಿಬ್ಬಂದಿ, ಅಧಿಕಾರಿಗಳು ಈ ಬಗ್ಗೆ ತಿಳಿದು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪೆÇಲೀಸ್ ಇಲಾಖೆಯ ರೈಟರ್ ಸೋಮಶೇಖರಪ್ಪ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ಸಂಯೋಜಕ ತಾಜುದ್ದೀನ್ ಖಾನ್ ಇವರು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಹಾಗೂ ಐಟಿಪಿಎ 1956 ಕಾಯ್ದೆಯ ಕುರಿತು ವಿವರವಾಗಿ ಮಾಹಿತಿ ನೀಡಿದರು. ಸಾಗರ ಸಿಡಿಪಿಓ ಸಂತೋಷ್ ಕುಮಾರ್ ಸ್ವಾಗತಿಸಿದರು.
ತರಬೇತಿ ಕಾರ್ಯಾಗಾರದಲ್ಲಿ ಕಂದಾಯ, ಗ್ರಾಮೀಣಾಭಿವೃದ್ದಿ, ಪೊಲೀಸ್, ಸಮಾಜ ಕಲ್ಯಾಣ, ಕಾರ್ಮಿಕ,ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ/ಸಬ್ಬಂದಿಗಳು ಹಾಜರಿದ್ದರು.