*ಫೆ.12ರಂದು ಪರಿಸರಕ್ಕಾಗಿ ನಾವು ಮತ್ತು ರಾಷ್ಟ್ರಭಕ್ತರ ಬಳಗ ಶಿವಮೊಗ್ಗದ ವತಿಯಿಂದ ಶರಾವತಿ ಪಂಪ್ಸ್ ಸ್ಟೋರೇಜ್ ಯೋಜನೆ ವಿರೋಧಿಸಿ ಬೃಹತ್ ಜಾಥಾ*
*ಫೆ.12ರಂದು ಪರಿಸರಕ್ಕಾಗಿ ನಾವು ಮತ್ತು ರಾಷ್ಟ್ರಭಕ್ತರ ಬಳಗ ಶಿವಮೊಗ್ಗದ ವತಿಯಿಂದ ಶರಾವತಿ ಪಂಪ್ಸ್ ಸ್ಟೋರೇಜ್ ಯೋಜನೆ ವಿರೋಧಿಸಿ ಬೃಹತ್ ಜಾಥಾ*
ಪರಿಸರಕ್ಕಾಗಿ ನಾವು ಮತ್ತು ರಾಷ್ಟ್ರಭಕ್ತರ ಬಳಗ ಶಿವಮೊಗ್ಗದ ವತಿಯಿಂದ ಶರಾವತಿ ಪಂಪ್ಸ್ ಸ್ಟೋರೇಜ್ ಯೋಜನೆ ವಿರೋಧಿಸಿ ಬೃಹತ್ ಜಾಥಾವನ್ನು ಫೆ.12ರ ಗುರುವಾರ ಬೆಳಿಗ್ಗೆ 10ಕ್ಕೆ ಹಮ್ಮಿಕೊಂಡಿದ್ದೇವೆ.
ಅಂದು ಬೆಳಗ್ಗೆ 10ಕ್ಕೆ ಶೀನಪ್ಪ ಶೆಟ್ಟಿ ವೃತ್ತದಿಂದ (ಗೋಪಿ ಸರ್ಕಲ್) ಜಿಲ್ಲಾಧಿಕಾರಿ ಕಛೇರಿಯವರೆಗೆ ಈ ಜಾಥಾ ನಡೆಯಲಿದೆ.
ಪರಿಸರ ಕಾಳಜಿ ಇಲ್ಲದೆ ಅವೈಜ್ಞಾನಿಕವಾಗಿ ಕಾರ್ಯಗತಗೊಳಿಸಲು ಹೊರಟಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯು ಪಶ್ಚಿಮ ಘಟ್ಟ ಪ್ರದೇಶಕ್ಕೆ, ಅಳಿವಿನಂಚಿನಲ್ಲಿರುವ ಅಪರೂಪದ ಪ್ರಾಣಿ ಸಂಕುಲಕ್ಕೆ, ಕೃಷಿಯನ್ನೇ ಆಶ್ರಯಿಸಿರುವ ರೈತರಿಗೆ ಮರಣ ಶಾಸನವಾಗುವುದರಲ್ಲಿ ಅನುಮಾನವಿಲ್ಲ. ಈ ಯೋಜನೆಯು ಸಾರ್ವಜನಿಕರಲ್ಲಿ, ಪರಿಸರಾಸಕ್ತರಲ್ಲಿ ಹಲವು ಅನುಮಾನಗಳು ಮತ್ತು ಆತಂಕಗಳನ್ನು ಹುಟ್ಟು ಹಾಕಿದೆ. ಇದಕ್ಕೆಲ್ಲ ಸಂಬಂಧಿಸಿದವರು ಸೂಕ್ತ ಉತ್ತರಗಳನ್ನು ಕೊಡಬೇಕಾಗಿರುವುದು ಅತ್ಯವಶ್ಯವಾಗಿದೆ ಎಂದರು.
ನಾವು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ವಿರೋಧಿಸಲು ಕಾರಣಗಳು ಬಹಳಷ್ಟಿವೆ.ಈ ಯೋಜನೆಯಲ್ಲಿ 16,000 ಮರಗಳನ್ನು ಕಡಿಯುವ ಪ್ರಸ್ತಾವನೆ ಇದೆ, ಇದರಿಂದ ವನ್ಯ ಜೀವಿಗಳ ಆವಾಸ ಸ್ಥಾನಕ್ಕೆ ಧಕ್ಕೆ ಬರುತ್ತದೆ. ಭೂ ಕುಸಿತ, ಜಲ ಮಾಲಿನ್ಯ, ನದಿ ಕಣಿವೆಗಳಲ್ಲಿ ಹೂಳು ತುಂಬಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಯೋಜನೆಯು ಘೋಷಿತ ಸಿಂಹ ಬಾಲದ ಸಿಂಗಳೀಕ ಅಭಯಾರಣ್ಯದ ಹೃದಯ ಭಾಗದಲ್ಲಿ ಜಾರಿಯಾಗುತ್ತದೆ. ಇದು ವನ್ಯ ಜೀವಿ ಕಾಯಿದೆ 1972 ರ ಆಶಯಕ್ಕೆ ವಿರುದ್ಧವಾಗಿದೆ.
ಯೋಜನೆಯ ಅವಶ್ಯಕತೆಯ ಕುರಿತು ಯಾವುದೇ ಸಮರ್ಥ ದಾಖಲೆ ಇರುವುದಿಲ್ಲ ಮತ್ತು ಈ ಯೋಜನೆಯ ಪರ್ಯಾಯ ಮಾರ್ಗಗಳ ಕುರಿತು ತುಲನಾತ್ಮಕ ಅಧ್ಯಯನ ನಡೆಸಿಲ್ಲ.
ಇದು ಜನತೆಯ ಮೇಲೆ ಆರ್ಥಿಕ ಹೊರೆ ಹೊರಿಸುವ ಯೋಜನೆಯಾಗಿದೆ. ಬ್ಯಾಟರಿ ಸ್ಟೋರೇಜ್ ತಂತ್ರಜ್ಞಾನವು ಪಂಪ್ಡ್ ಸ್ಟೋರೇಜ್ ತಂತ್ರಜ್ಞಾನಕ್ಕಿಂತ ಲಾಭದಾಯಕ ಮತ್ತು ಪರಿಸರ ಸ್ನೇಹಿಯಾಗಿದೆ.
ಶರಾವತಿ ಕಣಿವೆ ಯೋಜನೆಗಳಿಂದ ಈಗಾಗಲೇ ಸಂತ್ರಸ್ತರಾಗಿರುವ ಸಾವಿರಾರು ಕುಟುಂಬಗಳನ್ನು ಮತ್ತು ನದಿಯ ಕೆಳಭಾಗದ ಜನರನ್ನು ಇದು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತದೆ.
ಯೋಜನಾ ಪ್ರದೇಶದಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ಮತ್ತು ಸ್ಥಳಗಳನ್ನು ಈ ಯೋಜನೆ ನಾಶ ಮಾಡುತ್ತದೆ.
ಈ ಎಲ್ಲಾ ಕಾರಣಗಳಿಂದ ಈ ಯೋಜನೆಯು ಪರಿಸರ ವಿರೋಧಿ, ಅವೈಜ್ಞಾನಿಕ ಮತ್ತು ಆರ್ಥಿಕವಾಗಿ ಹೊರೆಯಾಗುವಂಥದ್ದಾಗಿದ್ದು ತಕ್ಷಣ ಈ ಯೋಜನೆಯನ್ನು ನಿಲ್ಲಿಸಲು ಪರಿಸರ ಪ್ರೇಮಿಗಳ, ಸಾರ್ವಜನಿಕರ ಹೋರಾಟಕ್ಕೆ ತಾವೆಲ್ಲರೂ ಧ್ವನಿಗೂಡಿಸಬೇಕಾಗಿ ವಿನಂತಿಸಿದರು.
ಈ ಪ್ರತಿಭಟನೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ. ಎಸ್.ಈಶ್ವರಪ್ಪ, ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯಾಧ್ಯಕ್ಷರಾದ ಎ.ಟಿ.ರಾಮಸ್ವಾಮಿ, ಉಪಾಧ್ಯಕ್ಷರಾದ ಕವಿತಾ ಎ.ಎಸ್.ಎಲೀದಹಳ್ಳಿ, ಪ್ರಧಾನ ಕಾರ್ಯದರ್ಶಿ ಪರಕುರಾಮೇಗೌಡ , ರಾಷ್ಟ್ರಭಕ್ತರ ಬಳಗದ ಕೆ.ಈ.ಕಾಂತೇಶ್ ಹಾಗೂ ನಾಡಿನ ಅನೇಕ ಪರಿಸರಾಸಕ್ತರು, ಸಾಧು ಸಂತರು, ಮಠಾಧೀಶರು ಭಾಗವಹಿಸಲಿದ್ದಾರೆ.


