ಶಿವಮೊಗ್ಗದ ಪತ್ರಕರ್ತ ಭರತ್ ರಾಜ್ ಸಿಂಗ್ ರವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಘೋಷಣೆ- ಮಾಧ್ಯಮ ಅಕಾಡೆಮಿ ಪ್ರಶಸ್ತಿ ಯಾರಿಗೆಲ್ಲ ಬಂದಿದೆ?…ಇಲ್ಲಿದೆ ಸಂಪೂರ್ಣ ಮಾಹಿತಿ
ಶಿವಮೊಗ್ಗದ ಪತ್ರಕರ್ತ ಭರತ್ ರಾಜ್ ಸಿಂಗ್ ರವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಘೋಷಣೆ

ಶಿವಮೊಗ್ಗದ ಹಿರಿಯ ಪತ್ರಕರ್ತ, ಶಿವಮೊಗ್ಗ ಟೆಲೆಕ್ಸ್ ಕನ್ನಡ ದಿನಪತ್ರಿಕೆ ಉಪಸಂಪಾದಕರಾದ ಆರ್. ಪಿ ಭರತ್ ರಾಜ್ ಸಿಂಗ್ ೨೦೨೫ ನೇ ಸಾಲಿನ ರಾಜ್ಯ ಸರ್ಕಾರದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನಿವೃತ್ತ ಪ್ರಾಂಶುಪಾಲರಾದ ಪುಟ್ಟುಸಿಂಗ್ ಅವರ ಪುತ್ರರಾದ ಬಿ.ಎ ಪದವೀಧರ ಆರ್. ಪಿ ಭರತ್‌ರಾಜ್‌ಸಿಂಗ್ ಅವರು ಸಾಮಾಜಿಕ ಬದಲಾವಣೆಯ ಚಳವಳಿಯ ಭಾಗವಾಗಿ ೧೯೮೯ರಲ್ಲಿ ’ಶಿವಮೊಗ್ಗ ಎಕ್ಸ್ ಪ್ರೆಸ್’ ಕನ್ನಡ ದಿನಪತ್ರಿಕೆಯನ್ನು ಆರಂಭಿಸುವ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟರು. ಆರ್ಥಿಕ ಮುಗ್ಗಟ್ಟಿನಿಂದ ಪತ್ರಿಕೆ ಮುನ್ನಡೆಸಲಾಗದೆ ೧೯೯೧ ರಿಂದ ಸ್ವಾತಂತ್ರ್ಯ ಹೋರಾಟಗಾರರು, ಜನಪರ ಚಳವಳಿಗಾರರು ಆದ ಶ್ರೀನಿವಾಸ್ ಅಯ್ಯಂಗಾರ್ , ಸಿ, ಎಸ್ ಚಂದ್ರಭೂಪಾಲ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ’ಸಹ್ಯಾದ್ರಿ’ ದಿನಪತ್ರಿಕೆಯ ವರದಿಗಾರರಾಗಿ ಮತ್ತು ಅನೇಕ ರಾಜ್ಯಮಟ್ಟದ ದಿನಪತ್ರಿಕೆಗಳಿಗೆ ವರದಿಗಳನ್ನು ಬರೆಯುತಿದ್ದರು.
೧೯೯೭ ರಿಂದ ಶಿವಮೊಗ್ಗ ಟೆಲೆಕ್ಸ್ ಕನ್ನಡ ದಿನಪತ್ರಿಕೆಯ ಉಪಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ಆರ್. ಪಿ ಭರತ್ ರಾಜ್ ಸಿಂಗ್ ಪ್ರಾಮಾಣಿಕ, ವೃತ್ತಿಪರ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವುದು ಜಿಲ್ಲೆಯ ಪತ್ರಿಕೋದ್ಯಮದ ಹೆಗ್ಗಳಿಕೆಯಾಗಿದೆ.
ಆರ್. ಪಿ ಭರತ್ ರಾಜ್ ಸಿಂಗ್ ಅವರ ಮೂರುವರೆ ದಶಕಗಳಿಗೂ ಹೆಚ್ಚಿನ ಕಾಲ ಪತ್ರಕರ್ತರಾಗಿ ವೃತ್ತಿಪರತೆ, ಬದ್ದತೆಯಿಂದ ಸಲ್ಲಿಸಿದ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರದ ಕರ್ನಾಟಕ ಮಾಧ್ಯಮ ಅಕಾಡೆಮಿ ೨೦೨೫ ನೇ ಸಾಲಿನ ವಾರ್ಷಿಕ ಪ್ರಶಸ್ತಿ ಆಯ್ಕೆ ಮಾಡಿದೆ. ಪ್ರಶಸ್ತಿಯು ೫೦ ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹೊಂದಿರುತ್ತದೆ.


