*ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಟೀಕೆ* *ಶಿವಮೊಗ್ಗದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ಕುಂಠಿತ* *ಗೋವಿಂದಾಪುರ ಆಶ್ರಯದಲ್ಲಿ ನೂರೆಂಟು ಸಮಸ್ಯೆಗಳು* *ಮುಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಎಂದು ಭವಿಷ್ಯ ನುಡಿದ ಕೆಬಿಪಿ*
*ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಟೀಕೆ*
*ಶಿವಮೊಗ್ಗದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ಕುಂಠಿತ*
*ಗೋವಿಂದಾಪುರ ಆಶ್ರಯದಲ್ಲಿ ನೂರೆಂಟು ಸಮಸ್ಯೆಗಳು*
*ಮುಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಎಂದು ಭವಿಷ್ಯ ನುಡಿದ ಕೆಬಿಪಿ*

ಶಿವಮೊಗ್ಗ ನಗರ ಹಾಗೂ ಜಿಲ್ಲೆಗೆ ಅನುದಾನ ತರುವಲ್ಲಿ ಸಚಿವ ಮಧುಬಂಗಾರಪ್ಪ ವಿಫಲರಾಗಿದ್ದಾರೆ. ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಠಿತಗೊಂಡಿವೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 2ವರೆ ವರ್ಷಗಳಾದವು. ಶಿವಮೊಗ್ಗ ಜಿಲ್ಲೆಯಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ. ಅನುದಾನವೂ ಬಂದಿಲ್ಲ. ಹೊಸ ಕಾಮಗಾರಿಗಳು ಇಲ್ಲ. ಸಚಿವರಿಗೆ ಜವಾಬ್ದಾರಿಯೂ ಇಲ್ಲ ಎಂದು ದೂರಿದರು.
ಉದಾಹರಣೆಗೆ ಗೋವಿಂದಾಪುರದಲ್ಲಿ ಆಶ್ರಯ ಮನೆಗಳು ನಾನು ಶಾಸಕನಾಗಿದ್ದಾಗ ಹಾಗೂ ಕೆ.ಎಸ್. ಈಶ್ವರಪ್ಪನವರು ಶಾಸಕರಾಗಿದ್ದಾಗ ಆಶ್ರಯ ಮನೆಗಳ ನಿರ್ಮಾಣವಾಗಿತ್ತು. ಕೆಲವರಿಗೆ ಮಾತ್ರ ಅಲ್ಲಿ ಮನೆ ವಿತರಿಸಲಾಗಿದೆ. ಆದರೆ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳು ಅಲ್ಲಿ ಇಲ್ಲ. ಕಳೆದ ಎರಡು ವರ್ಷಗಳಿಂದ ಕಾಮಗಾರಿಗಳು ಸಂಪೂರ್ಣ ನಿಂತು ಹೋಗಿವೆ. ಕೆಲಸ ಮಾಡಿದ ಗುತ್ತಿಗೆದಾರರಿಗೆ 12 ಕೋಟಿ ರೂ. ಬಾಕಿ ಇದೆ. ಆ ಹಣ ಬಿಡುಗಡೆ ಮಾಡದ ಹೊರತು ಗುತ್ತಿಗೆದಾರರು ಕೆಲಸ ಮಾಡುವುದಿಲ್ಲ. ಬಡಜನರು ಸೂರಿಗಾಗಿ ಹಂಬಲಿಸಿ, ಸಾಲಮಾಡಿ ಹಣ ಕಟ್ಟಿದ್ದಾರೆ. ಈಗ ಅದಕ್ಕೆ ಬಡ್ಡಿ ಕಟ್ಟುತ್ತಿದ್ದಾರೆ. ಈಗ ವಾಸಿಸುತ್ತಿರುವವರಿಗೂ ಇ-ಖಾತೆ ಮಾಡಿಲ್ಲ. ಇ-ಖಾತೆ ಇಲ್ಲದೆ ನಿವಾಸಿಗಳು ಯಾವುದೇ ಸಾಲ ತೆಗೆದುಕೊಳ್ಳಲು ಬರುವುದಿಲ್ಲ. ಹೀಗಾಗಿ ಅಲ್ಲಿ ಜನರು ತುಂಬಾ ಸಂಕಷ್ಟು ಎದುರಿಸುತ್ತಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಇತ್ತಕಡೆ ಗಮನಹರಿಸಬೇಕಾಗಿದೆ. ಸರ್ಕಾರದ ಜೊತೆ ಸಮಾಲೋಚನೆ ನಡೆಸಬೇಕಾಗಿದೆ. ಜೊತೆಗೆ ಕೊಳಚೆ ಪ್ರದೇಶದ ನಿವಾಸಿಗಳಿಗೂ ಹಕ್ಕುಪತ್ರ ಸಿಕ್ಕಲ್ಲ. ಸಿಕ್ಕವರಿಗೆ ಇ-ಖಾತೆ ಆಗಿಲ್ಲ. ಜಿಲ್ಲೆಯಲ್ಲಿ ೧೦೮ ಸಮಸ್ಯೆಗಳಿವೆ. ಈ ಬಾರಿಯ ಬಜೆಟ್‌ನಲ್ಲಿಯೇ ಇದಕ್ಕೆ ಉತ್ತರ ಕಂಡುಕೊಳ್ಳಬಹುದಿತ್ತು. ಆದರೆ ಸಚಿವರು ಬೇಜಾಬ್ದಾರಿಯಿಂದ ವರ್ತಿಸಿದ್ದಾರೆ. ಮುಂದಿನ ಬಜೆಟ್‌ನಲ್ಲಾದರೂ ಜಿಲ್ಲೆಯ ಅಭಿವೃದ್ಧಿಗೆ ತಮ್ಮ ವರ್ಚಸ್ಸನ್ನು ಬಳಸಿಕೊಂಡು ಅನುದಾನವನ್ನು ತರಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಓಸಿ ಮತ್ತು ಗಾಂಜಾ ಹಾವಳಿ ಹೆಚ್ಚಾಗಿದೆ. ಯುವಕರು ಈ ಚಟಕ್ಕೆ ಹೊಸ ಸದಸ್ಯರಾಗುತ್ತಿದ್ದಾರೆ. ಹೊಸದಾಗಿ ಬಂದಿರುವ ಜಿಲ್ಲಾ ರಕ್ಷಣಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಾಗಿದೆ. ಎಲ್ಲಾ ರೀತಿಯ ಜೂಜಾಟಗಳನ್ನು ತಡೆಗಟ್ಟಬೇಕಾಗಿದೆ. ಸೈಬರ್ ಕ್ರೈಂ ಕೂಡ ಹೆಚ್ಚಾಗುತ್ತಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಅಗತ್ಯಕ್ರಮ ತೆಗೆದುಕೊಳ್ಳುವ ಭರವಸೆ ನನಗಿದೆ ಎಂದರು.
ಜೆಡಿಎಸ್ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂಬ ಮಾತುಗಳು ಸತ್ಯಕ್ಕೆ ದೂರವಾದುದು. ನಮ್ಮ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಖಚಿತ. ಇದಕ್ಕೆ ಮುಂದಿನ ವಿಧಾನಸಭೆ ಚುನಾವಣೆಯೇ ಉತ್ತರ ನೀಡುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರಾಧ್ಯಕ್ಷ ದೀಪಕ್‌ಸಿಂಗ್, ಪ್ರಮುಖರಾದ ನರಸಿಂಹ ಗಂಧದಮನೆ, ಹೆಚ್.ಎಂ.ಸಂಗಯ್ಯ, ವೆಂಕಟೇಶ್, ರಾಘವೇಂದ್ರ ಉಡುಪ, ಸಂಜಯ್ ಕಶ್ಯಪ್, ನಿಹಾಲ್, ರಘು ಇದ್ದರು.


