*ಬಜೆಟ್ ಪೂರ್ವ ಸಭೆಯಲ್ಲಿ ಮಾಹಿತಿ ಬಹಿರಂಗ ಪಡಿಸಿದ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ* *ಸರ್ಕಾರಕ್ಕೆ 2025-26* *ರಲ್ಲಿ 165 ಕೋಟಿ ರೂ.,ಗಳ ಕ್ರಿಯಾಯೋಜನೆ ಸಲ್ಲಿಕೆ* *ಆಯ ವ್ಯಯ ಸಭೆಯೋ- ದೂರುಗಳ ಜಾತ್ರೆಯೋ?!*

*ಬಜೆಟ್ ಪೂರ್ವ ಸಭೆಯಲ್ಲಿ ಮಾಹಿತಿ ಬಹಿರಂಗ ಪಡಿಸಿದ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ*

*ಸರ್ಕಾರಕ್ಕೆ 2025-26*
*ರಲ್ಲಿ 165 ಕೋಟಿ ರೂ.,ಗಳ ಕ್ರಿಯಾಯೋಜನೆ ಸಲ್ಲಿಕೆ*

*ಆಯ ವ್ಯಯ ಸಭೆಯೋ- ದೂರುಗಳ ಜಾತ್ರೆಯೋ?!*

ಶಿವಮೊಗ್ಗ : ೨೦೨೫-೨೦೨೬ನೇ ಸಾಲಿಗೆ ಸಂಬಂಧಿಸಿದಂತೆ ಸುಮಾರು ೧೬೫ ಕೋಟಿ ರೂ.ಗಳ ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಇಲ್ಲಿಯತನಕ ಪಾಲಿಕೆಗೆ ಯಾವುದೇ ಅನುದಾನ ಬಂದಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತ ಡಿ.ಸಿ. ಮಾಯಣ್ಣಗೌಡ ತಿಳಿಸಿದರು.
ಅವರು ಇಂದು ೨೦೨೬-೨೭ನೇ ಸಾಲಿನ ಆಯ-ವ್ಯಯ ಒಂದನೇ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು. ಸಭೆಯ ಆರಂಭದಲ್ಲಿ ಕಳೆದ ಸಾಲಿನಲ್ಲಿ ತಯಾರಿಸಿದ ಆಯವ್ಯಯದ ಅನುಷ್ಟಾನ ಕುರಿತ ಮಾಹಿತಿ ಮತ್ತು ಅಂಕಿ-ಅಂಶಗಳನ್ನು ಅಧಿಕಾರಿಗಳು ಪಿಪಿಟಿ ಮೂಲಕ ತೋರಿಸಿ ಮನವರಿಕೆ ಮಡಲು ಯತ್ನಿಸಿದಾಗ ನಾಗರಿಕ ಹಿತರಕ್ಷಣಾ ಸಮಿತಿಗಳ ಒಕ್ಕೂಟ ಪದಾಧಿಕಾರಿಗಳಾದ ಕೆ.ವಿ.ವಸಂತ್‌ಕುಮಾರ್, ಡಾ.ಸತೀಶ್‌ಕುಮಾರ್ ಶೆಟ್ಟಿ, ಪರಿಸರ ರಮೇಶ್ ಅವರು ಮುದ್ರಿತ ಪ್ರತಿಯನ್ನು ಸಭೆಗೆ ಪೂರೈಸಿದ ನಂತರವೇ ಸಭೆಯನ್ನು ಮುಂದುವರಿಸಬೇಕು ಎಂದು ಪಟ್ಟು ಹಿಡಿದರು. ಪ್ರಮುಖ ಸಭೆಯನ್ನು ಆಯೋಜಿಸಿದಾಗ ಅಂಕಿಅಂಶಗಳ ಮುದ್ರಿತ ಪ್ರತಿಯನ್ನು ಸದಸ್ಯರಿಗೆ ನೀಡಬೇಕು ಎಂಬ ವ್ಯವದಾನ ಪಾಲಿಕೆಯ ಅಧಿಕಾರಿಗಳಿಗೆ ಇರಬೇಕು ಎಂದು ತರಾಟೆಗೆ ತೆಗೆದುಕೊಂಡರು.
ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಸೇರಿದಂತೆ ಇಲ್ಲಿಯವರೆಗೂ ಒಂದು ನಯಾಪೈಸೆಯೂ ಸರ್ಕಾರದಿಂದ ಬಂದಿಲ್ಲ. ಎಲ್ಲಾ ಪ್ರಸ್ತಾವನೆಗಳಿಗೆ ಕೇವಲ ಮಂಜೂರಾತಿ ದೊರಕಿದೆ. ಮಹಾತ್ಮಗಾಂಧಿ ನಗರಯೋಜನೆ-೨ಕ್ಕೆ ೧೨೦ ಕೋಟಿ, ಎನ್.ಜಿ.ಟಿ. ಕಾಮಗಾರಿಗಳಿಗೆ ೪೦ ಕೋಟಿ ರೂಪಾಯಿ ಮಂಜೂರಾತಿ ದೊರಕಿದೆ. ಅದರ ಅನುದಾನ ಬಂದಿಲ್ಲ. ಈ ಪ್ರಸ್ತಾವಿತ ಯೋಜನೆಗಳಿಗೆ ಹಣ ಬಂದರೂ ಎನ್.ಜಿ.ಟಿ., ಕೆಯುಐಡಿಎಫ್‌ಸಿ ಮೂಲಕವೇ ಟೆಂಡರ್ ಪ್ರಕ್ರಿಯೆ ಕಾಮಗಾರಿ ಆರಂಭವಾಗಲಿದೆ ಎಂದ ಅವರು, ಪಾಲಿಕೆ ವ್ಯಾಪ್ತಿಯ ನವುಲೆ, ತ್ಯಾವರೆಚಟ್ನಹಳ್ಳಿ, ಗೋಪಿಶೆಟ್ಟಿಕೊಪ್ಪ, ಪುರಲೆ ಮೊದಲಾದ ನಾಲ್ಕು ಕೆರೆಗಳ ಅಭಿವೃದ್ಧಿಗೆ ೨೫ ಕೋಟಿ ರೂ. ಕ್ರಿಯಾಯೋಜನೆ ತಯಾರಿಸಲಾಗಿದ್ದು, ಅದು ಡಿಪಿಆರ್ ಹಂತದಲ್ಲಿದೆ. ಪಾಲಿಕೆ ವ್ಯಾಪ್ತಿಯ ಪಾರ್ಕ್ ಅಭಿವೃದ್ಧಿಗೆ ೫ ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿದೆ. ಇವು ಯಾವುದಕ್ಕೂ ಸರ್ಕಾರದಿಂದ ಪಾಲಿಕೆಗೆ ನೇರವಾಗಿ ಹಣ ಬರುವುದಿಲ್ಲ ಎಂದು ಪುನರುಚ್ಚರಿಸಿದರು.
ಪಾಲಿಕೆಯ ವ್ಯಾಪ್ತಿಯಲ್ಲಿ ೧೯೬ ಪಾರ್ಕುಗಳಿದ್ದು, ೯೮ ಪಾರ್ಕುಗಳಿಗೆ ಬೇಲಿ, ಕಾಂಪೌಂಡ್ ಗೋಡೆ ಮೊದಲಾದ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ೨೦೧೪ರಲ್ಲೇ ನಗರಸಭೆಯು ಪಾಲಿಕೆಯಾಗಿ ಪದನ್ನೋತಿ ಹೊಂದಿದ್ದರೂ ಪಾರ್ಕ್‌ನಿರ್ವಹಣೆಗೆ ಪ್ರತ್ಯೇಕ ತೋಟಗಾರಿಕಾ ಇಲಾಖೆ ಇರಲಿಲ್ಲ. ಸೂಡಾದಿಂದ ೫೩ ಪಾರ್ಕುಗಳ ಅಭಿವೃದ್ಧಿಗೆ ನಿರಾಕ್ಷೇಪಣಾ ಪತ್ರ ಕೇಳಿದ್ದು ಪಾರ್ಕ್ ಅಭಿವೃದ್ಧಿಯಾದ ಬಳಿಕ ಅವು ಪಾಲಿಕೆಗೆ ಹಸ್ತಾಂತರವಾದ ನಂತರ ಅವುಗಳ ನಿರ್ವಹಣೆ ಪಾಲಿಕೆಯದ್ದಾಗಿರುತ್ತದೆ. ಈಗ ಪಾಲಿಕೆಯನ್ನು ಮೂರು ವಲಯಗಳನ್ನಾಗಿ ವಿಂಗಡಿಸಿ, ೭೫ ಪಾರ್ಕುಗಳ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ. ಇವುಗಳನ್ನು ಎಇಇಗಳಾದ ಮಧುನಾಯ್ಕ, ಸಂತೋಷ್, ಪ್ರವೀಣ್ ನೋಡಿಕೊಳ್ಳುವರು ಎಂದು ತಿಳಿಸಿದರು.
ಕ್ರೀಡಾಪಟುಗಳಿಗೆ ಅದರಲ್ಲೂ ವಿಶೇಷವಾಗಿ ಬಾಕ್ಸಿಂಗ್‌ನಲ್ಲಿ ಸಾಧನೆಗೈದವರಿಗೆ ಪಾಲಿಕೆವತಿಯಿಂದ ವಿಶೇಷ ಪುರಸ್ಕಾರ ನೀಡುವ ಯೋಜನೆಯನ್ನು ಅಳವಡಿಸಿಕೊಳ್ಳಬೇಕು. ನೆಹರೂ ಮೈದಾನದಲ್ಲಿ ಈ ಕ್ರೀಡಾಪಟುಗಳಿಗೆ ಅನುಕೂಲವಾಗಲು ಬಾಕ್ಸಿಂಗ್‌ಶೆಡ್‌ವೊಂದನ್ನು ನಿರ್ಮಿಸಬೇಕು ಎಂಬ ಸದಸ್ಯರ ಸಲಹೆಗೆ ಉತ್ತರಿಸಿದ ಆಯುಕ್ತರು ನೆಹರೂ ಮೈದಾನದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಪಾಲಿಕೆಗೆ ಅವಕಾಶವಿಲ್ಲ ಎಂದರು.
ಸ್ಮಾರ್ಟ್‌ಸಿಟಿಯಾದರೂ ಕೂಡ ಖಾಸಗಿ ಬಸ್ ನಿಲ್ದಾಣದ ಶೌಚಾಲಯ ನಿರ್ವಹಣೆ ಇಲ್ಲದೆ ನಗರದ ಮಾನ-ಮರ್ಯಾದೆ ಕಳೆಯುತ್ತಿದೆ. ಕೂಡಲೇ ಶೌಚಾಲಯ ನಿರ್ವಹಣೆಗೆ ವಿಶೇಷ ಅನುದಾನ ನೀಡಿ ನಿರ್ವಹಣೆ ಮಾಡಿ. ಪಾಲಿಕೆಯ ವಾಣಿಜ್ಯ ಸಂಕೀರ್ಣಗಳು ನಿರ್ಮಾಣವಾಗಿ ೩ವರ್ಷವಾದರೂ ಕೂಡ ಬಾಡಿಗೆಗೆ ನೀಡಿಲ್ಲ. ಆದಾಯ ಇಲ್ಲದೆ ತೆರಿಗೆ ಹಣ ವ್ಯರ್ಥವಾಗಿದೆ. ಇನ್ನು ಮುಂದೆ ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ಹಣನೀಡಬೇಡಿ. ಶುದ್ಧ ಕುಡಿಯುವ ನೀರಿನ ಯೋಜನೆ ತಯಾರಾಗಿ ವರ್ಷಗಳೇ ಕಳೆದರೂ ಇನ್ನೂ ಕೂಡ ಸುಸಜ್ಜಿತ ನೀರಿನ ಪ್ರಯೋಗಾಲಯ ಮತ್ತು ಅದಕ್ಕೆ ಬೇಕಾದ ಉಪಕರಣಗಳು ಇನ್ನೂ ಬಂದಿಲ್ಲ. ೧೫ ವರ್ಷಗಳ ಕೂಗು ವ್ಯರ್ಥವಾಗಿದ್ದು, ಬೇರೆ ನಗರಗಳ ನೀರು ಶುದ್ಧಿಕರಣ ಘಟಕದ ಮಾಹಿತಿ ಮತ್ತು ಮಾದರಿ ನೀಡಿದ್ದರೂ ಸಹ ನಮ್ಮ ಶಿವಮೊಗ್ಗದಲ್ಲಿ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಕಾಲದಲ್ಲಿ ನೀರಿನ ಸೆಲೆಯಾಗಿದ್ದ ನಗರದ ನವುಲೆ ಕೆರೆಗೆ ಈಗ ಮೂರು ಅಡಿ ವ್ಯಾಸದ ಪೈಪ್‌ಲೈನ್‌ಗಳಲ್ಲಿ ತ್ಯಾಜ್ಯ ನೀರು ಸೇರುತ್ತಿದೆ. ಮಳೆಗಾಲದಲ್ಲಿ ಕೆರೆಯ ಸುತ್ತಮುತ್ತಲಿನ ಪ್ರದೇಶಗಳಿಂದ ಕೆರೆಗೆ ಬರುವ ನೀರನ್ನು ಹೊರಗಡೆ ಬಿಡಲಾಗುತ್ತಿದೆ. ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಹಸಿರೀಕರಣಕ್ಕಾಗಿ ಸಧ್ಯಕ್ಕೆ ಹೋಸಯೋಜನೆ ಬೇಡ. ಇದೂವರೆಗೆ ಹಸಿರೀಕರಣದ ಹೆಸರಿನಲ್ಲಿ ಖರ್ಚುಮಾಡಿದ ಹಣವನ್ನು ಮತ್ತು ಗಿಡಗಳನ್ನು ಸದುಪಯೋಗಮಾಡಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ|| ಧನಂಜಯ ಸರ್ಜಿ, ಬಲ್ಕೀಶ್‌ಬಾನು, ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.