*ಮಾತೃತ್ವ ಶಿಕ್ಷಕಿಯರಿಗೆ 5 ವರ್ಷ ಇಚ್ಛಿಸಿದ ಶಾಲೆ: ಸಚಿವ ಮಧು ಬಂಗಾರಪ್ಪ* ಮಗುವಿಗೆ 5 ವರ್ಷ ಆಗುವವರೆಗೆ ಈ ಸೌಲಭ್ಯ
*ಮಾತೃತ್ವ ಶಿಕ್ಷಕಿಯರಿಗೆ 5 ವರ್ಷ ಇಚ್ಛಿಸಿದ ಶಾಲೆ: ಸಚಿವ ಮಧು ಬಂಗಾರಪ್ಪ*
ಮಗುವಿಗೆ 5 ವರ್ಷ ಆಗುವವರೆಗೆ ಈ ಸೌಲಭ್ಯ
ಹೆರಿಗೆ ರಜೆ ನಂತರ ಕರ್ತವ್ಯಕ್ಕೆ ಮರಳುವ ಶಿಕ್ಷಕಿಯರಿಗೆ 5 ವರ್ಷಗಳು ಅವರು ಇಚ್ಛಿಸುವ ಶಾಲೆಗಳಿಗೆ ಸ್ಥಳ ನಿಯುಕ್ತಿ ಮಾಡಲಾಗುವುದು ಎಂದು *ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ* ಹೇಳಿದರು.
ವಿಧಾನಪರಿಷತ್‌ನಲ್ಲಿ ಬಿಜೆಪಿಯ ಸದಸ್ಯ ವೈ.ಎಂ ಸತೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮಗುವಿನ ವಯಸ್ಸು 5 ವರ್ಷ ಪೂರ್ಣಗೊಳ್ಳುವವರೆಗೆ ಅವರ ಲಾಲನೆಪಾಲನೆಗೆ ಹೆಚ್ಚಿನ ಸಮಯ ನೀಡಬೇಕಾಗುತ್ತದೆ. ಇಲಾಖೆಯ ಮಹಿಳಾ ನೌಕರರು ಮತ್ತು ಅವರ ಮಕ್ಕಳ ಆರೈಕೆ, ಪೋಷಣೆ, ಆರೋಗ್ಯ, ವಿಶ್ರಾಂತಿಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕದಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ 180 ದಿನಗಳ ವೇತನ ಸಹಿತ ಮಾತೃತ್ವ ರಜೆ ನೀಡಲಾಗಿದೆ. ಈ ಸೌಲಭ್ಯ 2 ಮಕ್ಕಳಿಗೆ ಅನ್ವಯಿಸುತ್ತದೆ. ಜತೆಗೆ 6 ತಿಂಗಳು ಒಳಗೊಂಡ ಶಿಶುಪಾಲನಾ ರಜೆಯನ್ನು ಸರ್ಕಾರಿ ಉದ್ಯೋಗದಲ್ಲಿದ್ದ ಮಹಿಳೆಯರು ತಮ್ಮ ಮಕ್ಕಳಿಗೆ 18 ವರ್ಷ ತುಂಬುವುದರ ಒಳಗೆ ರಜೆಯ ಸೌಲಭ್ಯ ಪಡೆಯಬಹುದಾಗಿದೆ.
ಶಿಕ್ಷಕಿಯರು ಮಾತೃತ್ವದ ರಜೆಯ ಜತೆಗೆ, ಶಿಶುಪಾಲನಾ ರಜೆಯನ್ನೂ ಸಂಯೋಜಿಸಿಕೊಂಡು ಪಡೆಯಬಹುದು. ಎರಡೂ ರಜೆಗಳ ಅವಧಿ ಮುಗಿದ ನಂತರ 4 ವರ್ಷಗಳು ತಮಗೆ ಅನುಕೂಲವಾಗುವ ಶಾಲೆಗೆ ಸ್ಥಳ ನಿಯೋಜನೆ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದರು.


