ಗಾಳಿ-ಮಳೆಯಿಂದಾದ ಹಾನಿ ಕುರಿತು ಸೂಕ್ತ ಕ್ರಮಕ್ಕೆ ಸೂಚನೆ ಎಸ್‌ಎಸ್‌ಎಲ್‌ಸಿ-ಪಿಯುಸಿ ಅತ್ಯುತ್ತಮ ಫಲಿತಾಂಶ : ಮಧು ಬಂಗಾರಪ್ಪ
ಗಾಳಿ-ಮಳೆಯಿಂದಾದ ಹಾನಿ ಕುರಿತು ಸೂಕ್ತ ಕ್ರಮಕ್ಕೆ ಸೂಚನೆ
ಎಸ್‌ಎಸ್‌ಎಲ್‌ಸಿ-ಪಿಯುಸಿ ಅತ್ಯುತ್ತಮ ಫಲಿತಾಂಶ : ಮಧು ಬಂಗಾರಪ್ಪ

ಶಿವಮೊಗ್ಗ : ಶಿಕ್ಷಣ ಇಲಾಖೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಅಳವಡಿಸಿಕೊಂಡಿದ್ದು, ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಸಾಕಷ್ಟು ಸುಧಾರಣೆಯಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ತಿಳಿಸಿದರು.
ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿ ಅವರು ಮಾತನಾಡಿ, ಎಸ್‌ಸಿ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಶೇ 18.5 ಮತ್ತು ಎಸ್‌ಟಿ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಸಹ ಶೇ.17.5 ರಷ್ಟು ಸುಧಾರಣೆ ಕಂಡಿದ್ದು, ಇನ್ನೂ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಈ ಸಾಲಿನಲ್ಲಿ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಐತಿಹಾಸಿಕ ಫಲಿತಾಂಶ ಬಂದಿದ್ದು, ಫಲಿತಾಂಶವನ್ನು ಎಸ್‌ಎಂಎಸ್ ಮತ್ತು ವಾಟ್ಸಾಪ್ ಮೂಲಕ ಕಳುಹಿಸಿಕೊಡಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿ ಎರಡನೇ ಸ್ಥಾನದಲ್ಲಿರುವುದು ಸಂತಸದ ವಿಷಯ. ಶಿಕ್ಷಣ ಇಲಾಖೆ ಮೂಲಕ ಗ್ಯಾರಂಟಿ ಶಿಕ್ಷಣ ಒದಗಿಸಲಾಗುತ್ತಿದ್ದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ದಿ ಮತ್ತು ಉತ್ತಮ ಫಲಿತಾಂಶಕ್ಕಾಗಿ 2023 ರ ನವೆಂಬರ್ ಮಾಹೆಯಲ್ಲಿ ಉಚಿತವಾಗಿ ಎಲ್ಲ ಸರ್ಕಾರಿ ಶಾಲೆಗಳಿಗೆ ವಿದ್ಯುತ್ ಘೋಷಿಸಲಾಯಿತು. ಇದರಿಂದಾಗಿ ಮಕ್ಕಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಂಡು ಉತ್ತಮ ಫಲಿತಾಂಶ ಬರುವುದಕ್ಕೆ ಸಾಧ್ಯವಾಯಿತು ಎಂದರು.
ಹಾಗೂ ನ.14 ರ ಮಕ್ಕಳ ದಿನಾಚರಣೆಯಂದು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮೆಗಾ ಪೇರೆಂಟ್ಸ್ ಟೀಚರ್ ಮೀಟಿಂಗ್ ನ್ನು ಸರ್ಕಾರಿ ಶಾಲೆಗಳಲ್ಲಿ ಮೊದಲ ಬಾರಿಗೆ ಇಲಾಖೆ ನಡೆಸಿದ್ದು, ಈಗ ನಿಯಮಿತವಾಗಿ ಪೋಷಕರ ಮತ್ತು ಶಿಕ್ಷಕರ ಸಭೆಗಳು ಜರುಗುತ್ತಿದ್ದು ಮಕ್ಕಳ ಶೈಕ್ಷಣಿಕ ಅಭಿವೃದ್ದಿ ಸೇರಿದಂತೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.
ದೇಶದಲ್ಲೇ ಮೊದಲ ವೆಬ್ ಕಾಸ್ಟಿಂಗ್ : ಪಾರದರ್ಶಕವಾಗಿ ಮತ್ತು ಶಿಸ್ತಿನಿಂದ ಪರೀಕ್ಷೆಗಳನ್ನು ನಡೆಸಲು ದೇಶದಲ್ಲೇ ಮೊದಲ ಬಾರಿಗೆ ಶಿಕ್ಷಣ ಇಲಾಖೆ ವತಿಯಿಂದ ಎಸ್‌ಎಸ್ ಎಲ್‌ಸಿ ಮತ್ತು ಪಿಯುಸಿ ಮುಖ್ಯ ಪರೀಕ್ಷೆಗಳಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಿ ಯಶಸ್ವಿಯಾಗಿದ್ದು, ಮಾದರಿಯಾಗಿದ್ದೇವೆ.
ಹಾಗೂ ಮೂರು ಪರೀಕ್ಷಾ ನಿಯಮ ಸಹ ಯಶಸ್ವಿಯಾಗಿದ್ದು, ಇತರೆ ರಾಜ್ಯಗಳು ಇದನ್ನು ಅನುಸರಿಸಲು ಮುಂದಾಗಿವೆ. ಈ ಪರೀಕ್ಷಾ ಪದ್ದತಿಯಿಂದ ಮಕ್ಕಳ ಫಲಿತಾಂಶ ಉತ್ತಮಗೊಂಡಿದೆ. ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ವೃದ್ದಿಯಾಗಿದ್ದು ಈ ಸಾಲಿನಿಂದ ಮೂರರಿಂದ ಎರಡು ಪರೀಕ್ಷಾ ಪದ್ದತಿಯನ್ನು ಅಳವಡಿಸಲಾಗಿದೆ ಎಂದರು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಆರಂಭದ ಬಗ್ಗೆ ಮತ್ತು ವಿದ್ಯಾರ್ಥಿಗಳ ಸಾಧನೆ ಬಗ್ಗೆ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಪ್ರಚಾರ ನೀಡಲಾಗುತ್ತಿದ್ದು, ಪ್ರಚಾರ ಫಲಕಗಳನ್ನು ಹಾಕಲಾಗುತ್ತಿದೆ ಎಂದರು.
ನೇಮಕಾತಿಗೆ ಕ್ರಮ : ಒಳಮೀಸಲಾತಿ ಪ್ರಕ್ರಿಯೆಯು ಮುಗಿದಿದ್ದು, ಶೀಘ್ರದಲ್ಲೇ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಶಿಕ್ಷಕರ ನೇಮಕಾತಿ ಕುರಿತು ತಯಾರಿ ನಡೆಸಲು ಈಗಾಗಲೇ ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಹಾಗೂ ಬಹು ವರ್ಷಗಳಿಂದ ಭರ್ತಿಯಾಗದೇ ಖಾಲಿ ಇರುವ ಸುಮಾರು 5800 ಅನುದಾನಿತ ಶಾಲೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದರು.
ಮಳೆ-ಗಾಳಿ ಹಾನಿಗೆ ಕ್ರಮ : ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಜೋರು ಗಾಳಿ ಮತ್ತು ಮಳೆಗೆ ಉಂಟಾಗಿರುವ ಹಾನಿ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ನೀಡಲು ಸೂಚಿಸಿದ್ದೇನೆ. ವರದಿ ಬಂದ ನಂತರ ಸ್ವತಃ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ.
ಹೊಳೆಹೊನ್ನೂರು ಗ್ರಾಮಾಂತರ ಪ್ರದೇಶದಲ್ಲಿ ಗಾಳಿ-ಮಳೆಯಿಂದ ಹಾನಿ ಉಂಟಾಗಿದೆ. ಸೊರಬ ಕ್ಷೇತ್ರದ ಉಳವಿ, ಇತರೆಡೆ ಬಿರುಗಾಳಿ ಮತ್ತು ಮಳೆಗೆ ಹಾನಿಯುಂಟಾಗಿದೆ. ಈ ಪ್ರದೇಶಗಳಲ್ಲೆಲ್ಲಾ ಸರ್ವೇ ಮಾಡಲು ಸೂಚಿಸಿದ್ದೇನೆ.
ಮಲೆನಾಡು ಭಾಗದಲ್ಲಿ ತೆಂಗಿನ ಮರಗಳು ಮಧ್ಯಭಾಗದಲ್ಲಿ ತುಂಡಾಗಿ ಬೀಳುತ್ತಿದ್ದು, ಮಾಲೀಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ವಿಪತ್ತು ನಿರ್ವಹಣಾ ವಿಭಾಗ ಮತ್ತು ಇತರೆ ಇಲಾಖೆಗಳು ತಂಡದAತೆ ಕಾರ್ಯ ನಿರ್ವಹಿಸಬೇಕು. ಮಳೆ ಗಾಳಿ ವೇಳೆ ಮೆಸ್ಕಾಂ ಅಧಿಕಾರಿಗಳು ಅರಿವು ಮೂಡಿಸುವುದು ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಹಕರಿಸಬೇಕು. ಜಿಲ್ಲೆಯ ಎಲ್ಲ ತಾಲ್ಲೂಕುಗಳ ತಹಶೀಲ್ದಾರರು, ಇಓ ಸೇರಿದಂತೆ ಎಲ್ಲ ಅಧಿಕಾರಿಗಳು ಅತಿ ಎಚ್ಚರಿಕೆಯಿಂದ ಕ್ರಮ ವಹಿಸಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಬಿಇಓ ಗೆ ಶ್ಲಾಘನೆ : ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಯೋರ್ವಳ ತಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳೆಯಲ್ಲಿಯೇ ತೀರಿಕೊಂಡಿದ್ದು, ಆ ಸಮಯದಲ್ಲಿ ಶಿವಮೊಗ್ಗ ಬಿಇಓ ರಮೇಶ್ ವಿದ್ಯಾರ್ಥಿನಿಯ ಮನೆಗೆ ತೆರಳಿ ವಿದ್ಯಾರ್ಥಿನಿ ಮತ್ತು ಕುಟಂಬದವರಿಗೆ ಸಾಂತ್ವನ ಹೇಳಿ, ವಿದ್ಯಾರ್ಥಿನಿ ಮನವೊಲಿಸಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ತಮ್ಮ ಸರ್ಕಾರಿ ವಾಹನದಲ್ಲಿಯೇ ಕರೆ ತಂದಿದ್ದಾರೆ. ವಿದ್ಯಾರ್ಥಿನಿಗೆ ಉತ್ತಮ ಫಲಿತಾಂಶ ಸಹ ಲಭಿಸಿದ್ದು ಹೀಗೆ ಮಾನವೀಯತೆ ಮೆರೆದ ಅವರಿಗೆ ಸೆಲ್ಯೂಟ್ ಮಾಡಬಯಸುತ್ತೇನೆ ಎಂದು ತಿಳಿಸಿದರು.
ಓದು ಕರ್ನಾಟಕ : ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಓದುವ ಕೌಶಲ್ಯ ಮತ್ತು ಅಭ್ಯಾಸ ಬೆಳೆಸಲು ಪ್ರತಿ ದಿನ ದಿನಪತ್ರಿಕೆಗಳು ಮತ್ತು ಸರಳ ಕನ್ನಡ ಅಭ್ಯಾಸ ಪುಸ್ತಕಗಳನ್ನು ಓದಿಸುವ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ ಎಂದರು.
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ : ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 11 ವಿದ್ಯಾರ್ಥಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಇದೇ ವೇಳೆ ಸನ್ಮಾನಿಸಿ ಅಭಿನಂದಿಸಿದರು.
ಪತ್ರಿಕಾಗೋಷ್ಟಿಯಲ್ಲಿ ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಮಾಜಿ ವಿಧಾನ ಪರಿಷತ್ ಶಾಸಕರಾದ ಪ್ರಸನ್ನ ಕುಮಾರ್, ಆಯನೂರು ಮಂಜುನಾಥ್, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಚೇತನ್ ಕೆ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ದೇವಿಕುಮಾರ್, ಇತರೆ ಮುಖಂಡರು ಹಾಜರಿದ್ದರು.


