*ಎಸ್.ಪಿ.ನಿಖಿಲ್ ಪತ್ರಿಕಾಗೋಷ್ಠಿಯಲ್ಲಿ ಏನೇನಂದ್ರು?* *ರಾಜ್ಯದಲ್ಲೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆಯಿಂದ ಲಾಕ್ಡ್ ಹೌಸ್ ಬೀಟ್ ಸಿಸ್ಟಂ ಜಾರಿ…*

*ಎಸ್.ಪಿ.ನಿಖಿಲ್ ಪತ್ರಿಕಾಗೋಷ್ಠಿಯಲ್ಲಿ ಏನೇನಂದ್ರು?*

*ರಾಜ್ಯದಲ್ಲೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆಯಿಂದ ಲಾಕ್ಡ್ ಹೌಸ್ ಬೀಟ್ ಸಿಸ್ಟಂ ಜಾರಿ…*

ಶಿವಮೊಗ್ಗ : ಮನೆ ಕಳ್ಳತನ ಪ್ರಕರಣಗಳು ಹೆಚ್ಚಳವಾಗಬಾರದು ಎನ್ನುವ ದೃಷ್ಟಿಯಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ `ಲಾಕ್ಡ್ ಹೌಸ್ ಬೀಟ್ ಸಿಸ್ಟಮ್-ಎಲ್‌ಹೆಚ್‌ಬಿಎಸ್’ ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀಗಹಾಕಿದ ಮನೆಗಳ ಸುರಕ್ಷಣತೆಯ ಸಂಬಂಧ ಪೊಲೀಸ್ ವತಿಯಿಂದ ನೂತನ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದ್ದು, ಮನೆಯವರೆಲ್ಲಾ ಪ್ರಯಾಣಕ್ಕೆ ಹೊರಟಿದ್ದಾಗ ಮೂರು ಪ್ರಮುಖ ಅಂಶಗಳನ್ನು ಪೊಲೀಸ್ ಗಮನಕ್ಕೆ ತರಬೇಕು. ಹೊರಗೆ ಹೋಗುವ ಮತ್ತು ಮರಳಿ ಬರುವ ದಿನಾಂಕ, ಮನೆಯ ವಿಳಾಸ ಮತ್ತು ಲೋಕೇಷನ್ ಮತ್ತು ತಮ್ಮದೇ ಮನೆಯ ಮುಂದೆ ನಿಂತು ಸೆಲ್ಫಿ ತೆಗೆದು ವಾಟ್ಸ್ ಅಪ್ ಮೂಲಕ ಎಲ್‌ಹೆಚ್‌ಬಿಎಸ್‌ನ ಕಂಟ್ರೋಲ್ ರೂಂ/ಸಹಾಯ ವಾಣಿ ಸಂಖ್ಯೆ-೮೨೭೭೯೮೨೯೦೧ಕ್ಕೆ ಅಪ್‌ಲೋಡ್ ಮಾಡಿದರೆ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್‌ಮಾಡಿ ಮಾಹಿತಿ ನೀಡಿದರೆ ನಿಮ್ಮ ಮನೆಯ ಸುರಕ್ಷತೆಯ ಜವಾಬ್ದಾರಿಯನ್ನು ಪೊಲೀಸರು ತೆಗೆದುಕೊಳ್ಳಲಿದ್ದಾರೆ ಎಂದರು.
ಸಾರ್ವಜನಿಕರು ತಾವು ಪ್ರವಾಸಕ್ಕೆ ಹೊರಟಾಗ ತಮ್ಮ ಗೇಟಿಗೆ ಲಾಕ್ ಮಾಡುವುದು ಮತ್ತು ಮನೆಯ ಮುಂದೆ ಪೇಪರ್‌ಗಳ ರಾಶಿ, ಹಾಲಿನ ಪ್ಯಾಕೇಟ್ ಬಿದ್ದಿರುವುದು ಮತ್ತು ತಾವು ಹೋದ ಪ್ರವಾಸ ತಾಣಗಳ ಸ್ಟೇಟಸ್ ಅನ್ನು ಹಾಕುವುದು ಸೇರಿದಂತೆ ಕೆಲವು ಸೂಕ್ಷ್ಮ ವಿಚಾರಗಳ ಬಗ್ಗೆ ಜಾಗ್ರತರಾದರೆ ಅನೇಕ ಪ್ರಕರಣಗಳು ಕಮ್ಮಿಯಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕು. ಮತ್ತು ಪೊಲೀಸರ ಎಲ್‌ಹೆಚ್‌ಬಿಎಸ್‌ಗೆ ಸಹಕಾರ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಮಾದಕದ್ರವ್ಯ ಗಾಂಜಾ ವಿರುದ್ಧ ೧-೧-೨೦೨೬ರಿಂದ ಮಾದಕ ದ್ರವ್ಯ ಸೇವೆನೆ ೨೬೬ ಪ್ರಕರಣ ದಾಖಲಿಸಲಾಗಿದೆ. ೨೯೦ ಆರೋಪಿತರನ್ನು ಬಂಧಿಸಲಾಗಿದೆ. ೧೮ ಪ್ರಕರಣಗಳಲ್ಲಿ ೪೦ ಆರೋಪಿತರನ್ನು ಬಂಧಿಸಿ, ಅವರಿಂದ ಮಾದಕದ್ರವ್ಯ ಅಮಾನತುಪಡಿಸಲಾಗಿದೆ. ಒಟ್ಟು ೨೮೦ ಪ್ರಕರಣಗಳಲ್ಲಿ ೩೩೦ ಜನ ಆರೋಪಿತರನ್ನು ಬಂಧಿಸಿ, ೩೦ ಕೆ.ಜಿ. ಗಾಂಜಾ ಅಮಾನತುಪಡಿಸಿ ೧೨೫ ಗ್ರಾಂ ಎಂಡಿಎಂ ಸೇರಿದಂತೆ ೨೭,೩೭,೦೦೦ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಮಾದಕ ವಸ್ತು ವಿತರಿಸುವ ಮೂರು ಮಾರ್ಗಗಳನ್ನು ಮೂಲದಲ್ಲೇ ಬಂದ್ ಮಾಡಲಾಗಿದೆ. ಇನ್ನೂ ಮೂರು ವಿತರಕರ ಸುಳಿವು ದೊರೆತ್ತಿದ್ದು, ಅವರನ್ನು ಬಂಧಿಸಲಿದ್ದೇವೆ ಎಂದರು.
ಗಾಂಜಾ ಪ್ರಕರಣಗಳಲ್ಲಿ ೫೨ಜನ ಬಂಧಿತ ಆರೋಪಿಗಳಿಗೆ ಪುನರ್ವಸತಿ ಕಲ್ಪಿಸಲಾಗಿದ್ದು, ಅವರು ಈಗ ದುಶ್ಚಟದಿಂದ ಮುಕ್ತರಾಗಿದ್ದಾರೆ ಎಂದರು.
ಅಕ್ಕಪಡೆ
ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯವೆಸಗುವ ಮತ್ತು ಅಸಭ್ಯವಾಗಿ ವರ್ತಿಸುವವರ ವಿರುದ್ಧ ಸೂಕ್ತ ಕಾನೂನು ರೀತ್ಯ ಕ್ರಮ ಜರುಗಿಸುವ ಉದ್ದೇಶದಿಂದ ನಗರದಲ್ಲಿ ಅಕ್ಕಪಡೆಯು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕ ಉಪಟಳ ನೀಡಿದ ಒಟ್ಟು ೧೫೬ಜನ ಅಸಾಮಿಗಳ ವಿರುದ್ಧ ಲಘು ಪ್ರಕರಣವನ್ನು ದಾಖಲಿಸಲಾಗಿದೆ ಎಂದರು.
ಡ್ರೋಣ್ ಕಾರ್ಯಾಚರಣೆ ಮೂಲಕ ಖಾಲಿ ಜಾಗಗಳು ಮತ್ತು ಹೊರ ವಲಯದ ನಿರ್ಜನ ಪ್ರದೇಶಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವವರ ವಿರುದ್ಧ ಜಿಲ್ಲಾ ಪೊಲೀಸ್ ಡ್ರೋಣ್ ಕ್ಯಾಮೇರಾ ಮುಖಾಂತರ ಕಣ್ಗಾವಲು ಇಟ್ಟಿದ್ದು, ಭದ್ರಾವತಿಯ ಕೂಡ್ಲಿಗೆರೆ ಗ್ರಾಮದ ಹೊರವಲಯದಲ್ಲಿ ಜೂಜಾಡುತ್ತಿದ್ದ ೧೯ಜನ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗಿದೆ. ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಗಂಗೂರು ಗ್ರಾಮದ ಹೊರವಲಯದಲ್ಲಿ ಡ್ರೋಣ್ ಹಾರಿಸಿದಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ಸಂದೀಪ್, ಶಿವನೇಶ್‌ಕುಮಾರ್ ಮತ್ತು ಮೇಘರಾಜ್ ವಿರುದ್ಧ ಅಬಕಾರಿ ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗಿದೆ ಎಂದರು.
ವಿಶೇಷವಾಗಿ ಘನ ನ್ಯಾಯಾಲಯದಲ್ಲಿ ಜನವರಿ ೧, ೨೦೨೬ರಿಂದ ಇದೂವರೆಗೆ ಒಟ್ಟು ೨೭ ಘೋರ ಗುನ್ನೆ ಪ್ರಕರಣಗಳಲ್ಲಿ ಕೊಲೆ-೨, ಕೊಲೆಯತ್ನ-೬, ಸುಲಿಗೆ-೧, ಎಸ್‌ಸಿ/ಎಸ್ಟಿ-೫+೩೭೬ ಐಪಿಸಿ-೧, ೩೭೬ ಐಪಿಸಿ ಪೋಕ್ಸ್-೪, ೪೯೮(ಎ)-೩೦೪, (ಬಿ)-೦೨, ಐಟಿಪಿ-೧, ೨೭೯, ೪೨೭, ಐಪಿಸಿ-೧೩೯, ೧೩೫ ಎಲೆಕ್ಟ್ರೀಸಿಟಿ ಕಾಯ್ದೆ-೦೧, ಪ್ರಕರಣಗಳಲ್ಲಿ ಆರೋಪಿತರಿಗೆ ಶಿಕ್ಷೆಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಾದ ಕಾರ್ಯಪ್ಪ, ಉಪಾಧೀಕ್ಷಕರಾದ ಅಂಜನಪ್ಪ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.