ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ

ಎರಡನೇ ಅವಧಿಗೆ ಕರ್ನಾಟಕ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್​​ ನಾಯಕ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಹೈಕಮಾಂಡ್​​ ಸೂಚನೆಯಂತೆ ಅವರು ಹುದ್ದೆ ತೊರೆದಿದ್ದು, ರಾಜ್ಯಪಾಲರ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ.

ಹೈಕಮಾಂಡ್​ ಸೂಚನೆಯಂತೆ ಕರ್ನಾಟಕ ಮುಖ್ಯಮಂತ್ರಿ (Chief Minister) ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ಕೊನೆಗೂ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ರಾಜ್ಯಪಾಲರ ಅನುಪಸ್ಥಿತಿಯ ಹಿನ್ನೆಲೆ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗೆ ಸಿಎಂ ಪದತ್ಯಾಗದ ಪತ್ರ ಸಲ್ಲಿಕೆ ಮಾಡಿದ್ದಾರೆ. ಆ ಮೂಲಕ ರಾಜ್ಯ ಕಾಂಗ್ರೆಸ್​​ ಪಾಳಯದಲ್ಲಿ ವರ್ಷಗಳಿಂದಲೂ ಊಹಾಪೋಹಗಳಿಗೆ ಕಾರಣವಾಗಿದ್ದ ನಾಯಕತ್ವ ಬದಲಾವಣೆ ಅಥವಾ ಅಧಿಕಾರ ಹಂಚಿಕೆ ವಿಚಾರಕ್ಕೆ ಅಂತಿಮ ತೆರೆ ಬಿದ್ದಿದೆ.

*ಮುಖ್ಯಾಂಶಗಳು*

ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಕೆ

‘ಕೈ’ ಪಾಳಯದಲ್ಲಿನ ಊಹಾಪೋಹಗಳಿಗೆ ಅಧಿಕೃತವಾಗಿ ತೆರೆ

2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಿ ಪ್ರಚಂಡ ಬಹುಮತದೊಂದಿಗೆ ಕಾಂಗ್ರೆಸ್​​ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದಿತ್ತು. ಬಳಿಕ ಡಿ.ಕೆ. ಶಿವಕುಮಾರ್​​ ಅವರ ತೀವ್ರ ಪೈಪೋಟಿಯ ಹೊರತಾಗಿಯೂ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದ ಸಿದ್ದರಾಮಯ್ಯ ಅವರು, ಕರ್ನಾಟಕದ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಮೇ 20ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಸಿಎಂ ರೇಸ್​​ನಲ್ಲಿದ್ದ ಡಿಕೆಶಿ ಅವರಿಗೆ ಡಿಸಿಎಂ ಸ್ಥಾನವನ್ನು ನೀಡಲಾಗಿತ್ತು.

*ಸಿದ್ದರಾಮಯ್ಯ ಕಣ್ಣೀರು*

ಇಂದು ಬೆಳಿಗ್ಗೆ ಆಯೋಜಿಸಿದ್ದ ಉಪಹಾರಕೂಟದಲ್ಲಿ ಹೈಕಮಾಂಡ್​​ ಸೂಚನೆಯಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ಬಗ್ಗೆ ಸಚಿವರಿಗೆ ಖುದ್ದಾಗಿ ಸಿದ್ದರಾಮಯ್ಯ ತಿಳಿಸಿದ್ದರು. ಈ ವೇಳೆ ಭಾವುಕರಾದ ಅವರು ಕಣ್ಣೀರು ಹಾಕಿದ ಪ್ರಸಂಗವೂ ನಡೆದಿತ್ತು. ನಾನು ಮಾಡಿರುವ ಕೆಲಸಗಳ ಬಗ್ಗೆ ನನಗೆ ಸಮಾಧಾನ ಇದೆ. ಎಲ್ಲಾ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಮುಂದೆ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಹೋಗಿ. ಜನರಿಗೆ ಒಳ್ಳೆಯ ಯೋಜನೆಗಳನ್ನು ನೀಡಿ ಎಂದು ಸಿದ್ದರಾಮಯ್ಯ ಈ ವೇಳೆ ಸಲಹೆ ಕೂಡ ನೀಡಿದ್ದರು.

ಕಳೆದ ಒಂದು ವರ್ಷಗಳಿಂದಲೂ ರಾಜ್ಯ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ ಪ್ರಹಸನ ನಡೆದುಕೊಂಡೇ ಬಂದಿತ್ತು. ಸಿದ್ದರಾಮಯ್ಯ ಮತ್ತು ಡಿಕೆಶಿ ಬಣಗಳ ನಾಯಕರು ಪರಸ್ಪರ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದರು. ಈ ನಡುವೆ ಪಂಚರಾಜ್ಯ ಚುನಾವಣೆ ಬೆನ್ನಲ್ಲೇ ಉಭಯ ನಾಯಕರನ್ನು ದೆಹಲಿಗೆ ಕರೆದಿದ್ದ ಹೈಕಮಾಂಡ್​​ ನಾಯಕರು ಸುದೀರ್ಘ ಸಭೆ ನಡೆಸಿದ್ದರು. ಅಳೆದು ತೂಗಿ ಅಂತಿಮ ನಿರ್ಧಾರಕ್ಕೆ ಬಂದಿದ್ದ ವರಿಷ್ಠರು ಸಿದ್ದರಾಮಯ್ಯನವರಿಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿದ್ದರು. ಅದರಂತೆ ಸಿದ್ದರಾಮಯ್ಯನವರೀಗ ಪದತ್ಯಾಗ ಮಾಡಿದ್ದಾರೆ.