ಸಿಎಲ್​​ಪಿ ಸಭೆಗೆ ಮುಹೂರ್ತ ಫಿಕ್ಸ್; *ಜೋರಾದ ಸಚಿವಾಕಾಂಕ್ಷಿಗಳ ಲಾಬಿ- ರೇಸ್​​ನಲ್ಲಿ ಇರೋದು ಯಾರ್ಯಾರು?* ಹೊಸ ಮುಖಗಳಿಗೂ ಸಿಗಲಿದೆ ಮಂತ್ರಿಪಟ್ಟ!

ಸಿಎಲ್​​ಪಿ ಸಭೆಗೆ ಮುಹೂರ್ತ ಫಿಕ್ಸ್;

*ಜೋರಾದ ಸಚಿವಾಕಾಂಕ್ಷಿಗಳ ಲಾಬಿ- ರೇಸ್​​ನಲ್ಲಿ ಇರೋದು ಯಾರ್ಯಾರು?*

ಕರ್ನಾಟಕ ಸಚಿವ ಸಂಪುಟ ವಿಸರ್ಜನೆ ಬೆನ್ನಲ್ಲೇ ನೂತನ ಸಚಿವರ ಆಯ್ಕೆಗೆ ದೆಹಲಿಯಲ್ಲಿ ಕಸರತ್ತು ಶುರುವಾಗಿದೆ.

ಶನಿವಾರ ಸಿಎಲ್‌ಪಿ ಸಭೆ ನಿಗದಿಯಾಗಿದ್ದು, ಹೊಸ ಸಂಪುಟದಲ್ಲಿ ಸ್ಥಾನ ಉಳಿಸಿಕೊಳ್ಳಲು ಹಾಲಿ ಇದ್ದ ಸಚಿವರು ಮತ್ತು ಸ್ಥಾನ ಗಿಟ್ಟಿಸಲು ಹಿರಿಯ ಶಾಸಕರು ಪೈಪೋಟಿಗಿಳಿದಿದ್ದಾರೆ. ಈ ನಡುವೆ ಶುಕ್ರವಾರ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ವರಿಷ್ಠರನ್ನು ಡಿ.ಕೆ. ಶಿವಕುಮಾರ್ ಭೇಟಿ ಮಾಡಿದ್ದಾರೆ.

ಈ ವೇಳೆ ಶಾಸಕಾಂಗ ಪಕ್ಷದ (CLP) ಸಭೆ ಹಾಗೂ ಹೊಸ ಸರ್ಕಾರದ ರಚನೆ ಕುರಿತು ಪ್ರಮುಖ ಚರ್ಚೆಗಳು ನಡೆದಿವೆ.

ಹೊಸ ಸರ್ಕಾರ ರಚನೆಯ ಕಸರತ್ತು ಗರಿಗೆದರುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳ ದಂಡೇ ದಿಲ್ಲಿಗೆ ಜಿಗಿದಿದೆ. ಮುಂಜಾನೆ 3 ಗಂಟೆಯ ವಿಮಾನದಲ್ಲೇ ಕೆ.ಎಚ್. ಮುನಿಯಪ್ಪ, ಪ್ರಿಯಾಂಕ್ ಖರ್ಗೆ ಹಾಗೂ ಎನ್.ಎಸ್. ಬೋಸರಾಜು ಸೇರಿದಂತೆ ಹಲವು ಪ್ರಮುಖ ನಾಯಕರು ದೆಹಲಿಗೆ ತಲುಪಿದ್ದಾರೆ. ಸದ್ಯ ಸಚಿವರಾಗಿರುವವರು ಮುಂದಿನ ಸಂಪುಟದಲ್ಲೂ ತಮ್ಮ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ಹಿರಿಯ ಶಾಸಕರಾಗಿದ್ದೂ ಈವರೆಗೆ ಸಚಿವ ಸ್ಥಾನ ಸಿಗದ ನಾಯಕರು ಈ ಬಾರಿ ಸಂಪುಟ ಸೇರಲು ದೆಹಲಿ ಮಟ್ಟದಲ್ಲಿ ಭರ್ಜರಿ ಸರ್ಕಸ್ ಆರಂಭಿಸಿದ್ದಾರೆ .

ಯಾರಿಗೆಲ್ಲ ಸಚಿವ ಸ್ಥಾನ?
ನೂತನ ಸಚಿವ ಸಂಪುಟ ಸೇರ್ಪಡೆ ಸಂಬಂಧ ರಾಜಕೀಯ ಚಟುವಟಿಕೆಗಳು ಗರಿಗೆದರಿರುವ ನಡುವೆ ಮತ್ತೆ ಸಚಿವರಾಗುವ ವಿಶ್ವಾಸದಲ್ಲಿ 11ರಿಂದ 13 ಶಾಸಕರಿದ್ದಾರೆ ಎನ್ನಲಾಗಿದೆ. ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ಕೆ.ಜೆ.ಜಾರ್ಜ್, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್​, ಡಾ.ಪರಮೇಶ್ವರ್, H​.K.ಪಾಟೀಲ್, ಶಿವರಾಜ ತಂಗಡಗಿ, ಮುನಿಯಪ್ಪ, ಮಂಕಾಳು ವೈದ್ಯ, ಸಂತೋಷ್​​ ಲಾಡ್​, ದಿನೇಶ್ ಗುಂಡೂರಾವ್ ಮತ್ತೆ ಸಂಪುಟ ಸೇರ್ಪಡೆ ಸಾಧ್ಯತೆ ಇದೆ. ಇದನ್ನು ಹೊರತುಪಡಿಸಿ ಕೆಲವರ ಹೆಸರನ್ನು ಡಿಕೆಶಿ ಪರಿಗಣಿಸುವ ಸಾಧ್ಯತೆಯೂ ಇದೆ. ಹೈಕಮಾಂಡ್ ಒಪ್ಪಿದರೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಇದ್ದ 29 ಮಂದಿ ಸಚಿವರ ಪೈಕಿ 11ರಿಂದ 13 ಮಂದಿ ಸಂಪುಟಕ್ಕೆ ಪುನಃ ಆಯ್ಕೆ ಸಾಧ್ಯತೆ ಇದೆ.