*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಗಾದಿಗೆ ನಡೆಯುತ್ತಿದೆಯೇ ಲಾಬಿ?* *ಆಯನೂರು-ಸುಂದರೇಶ್-ರವಿ-ವೈ.ಹೆಚ್…ಯಾರಾಗುವರು?* ಸ್ಬೂಡಾಕ್ಕೆ ಆರ್.ಪ್ರಸನ್ನಕುಮಾರ್?
*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಗಾದಿಗೆ ನಡೆಯುತ್ತಿದೆಯೇ ಲಾಬಿ?*
*ಆಯನೂರು-ಸುಂದರೇಶ್-ರವಿ-ವೈ.ಹೆಚ್…ಯಾರಾಗುವರು?*
ಸ್ಬೂಡಾಕ್ಕೆ ಆರ್.ಪ್ರಸನ್ನಕುಮಾರ್?
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಹೊಸ ಅಧ್ಯಕ್ಷರು ಯಾರಾಗಲಿದ್ದಾರೆ? ಎಂಬ ಚರ್ಚೆ ಆರಂಭವಾಗಿದೆ.
ಕೆಪಿಸಿಸಿ ನೂತನ ಅಧ್ಯಕ್ಷರಾಗಿರುವ ಬಿ.ಕೆ.ಹರಿಪ್ರಸಾದ್ ರವರು ಹೊಸ ಕಾಂಗ್ರೆಸ್ ಸಮಿತಿಗಳನ್ನು ರಚಿಸುವ ಬಗ್ಗೆ ಗಂಭೀರವಾಗಿಯೇ ಮಾತಾಡಿರುವುದರಿಂದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನದ ಚರ್ಚೆಗೆ ರಂಗೇರುತ್ತಿದೆ.
ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳಲ್ಲೂ ಮಹತ್ತರ ಬದಲಾವಣೆಗಳಾಗುವ ಸಾಧ್ಯತೆಗಳು ಸರ್ಕಾರದ ಮಟ್ಟದಲ್ಲಿ ಕಂಡುಬರುತ್ತಿರುವುದರಿಂದ ಇಲ್ಲಿ ಅಧ್ಯಕ್ಷರಾದವರು ಅಲ್ಲಿ, ಅಲ್ಲಿ ಅಧ್ಯಕ್ಷರಾಗಿರುವವರು ಇಲ್ಲಿ ಅಧ್ಯಕ್ಷರಾಗುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.
ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್ ಎಂದೆಲ್ಲ ಮಹತ್ತರ ಸ್ಥಾನಗಳಿಗೆ ಏರಿ ಅಧಿಕಾರದ ಅನುಭವ ಹೊಂದಿರುವ ಆಯನೂರು ಮಂಜುನಾಥ್ ರವರ ಹೆಸರು ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕಾಗಿ ಹೈಕಮಾಂಡಿನಲ್ಲಿ ಚರ್ಚೆಯಲ್ಲಿದೆ. ಸ್ವತಃ ಆಯನೂರು ಮಂಜುನಾಥ್ ರವರು ಅಧ್ಯಕ್ಷರಾಗುವ ಪ್ರಯತ್ನ ಮಾಡುತ್ತಿಲ್ಲವಾದರೂ ಅವರನ್ನೇ ಅಧ್ಯಕ್ಷರಾಗಿಸುವ ಕೆಲವರ ಲಾಬಿಗಳು ಅಲ್ಲಲ್ಲಿ ಕಿವಿಗೂ ಕಣ್ಣಿಗೂ ಬೀಳುತ್ತಿವೆ.
ಇದರ ನಡುವೆ ಜಿಲ್ಲಾ ಕಾಂಗ್ರೆಸ್ಸಿನ ನಿಜವಾದ ಸಾರಥ್ಯವನ್ನು ಹೆಚ್.ಎಸ್.ಸುಂದರೇಶ್ ಮಾತ್ರ ಸದ್ಯದ ಪರಿಸ್ಥಿತಿಯಲ್ಲಿ ವಹಿಸಿಕೊಳ್ಳಲು ಸಾಧ್ಯ ಎಂಬ ಮಾತುಗಳು ಕೂಡ ಚಾಲ್ತಿಯಲ್ಲಿವೆ. ಆಗಸ್ಟಲ್ಲಿ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಗಿರಿಯಿಂದ ಕೆಳಗಿಳಿಯುವ ಸಾಧ್ಯತೆಗಳು ಇರುವುದರಿಂದ ಸುಂದರೇಶ್ ರವರಿಗೆ ಮತ್ತೆ ಕಾಂಗ್ರೆಸ್ ಅಧ್ಯಕ್ಷಗಾದಿ ದಕ್ಕಬಹುದೆಂಬ ಚರ್ಚೆಗಳಿವೆ.
ಆರ್.ಪ್ರಸನ್ನ ಕುಮಾರ್ ರವರು ಅಧ್ಯಕ್ಷರಾಗುವ ಮುನ್ನ ಜಿಲ್ಲಾ ಕಾಂಗ್ರೆಸ್ಸನ್ನು ಕ್ರಿಯಾಶೀಲವಾಗಿ ಮುನ್ನಡೆಸಿದ್ದ ಸುಂದರೇಶ್ ಆನಂತರ ಸ್ಬೂಡಾ ಅಧ್ಯಕ್ಷರಾದಾಗ ಜಿಲ್ಲಾ ಕಾಂಗ್ರೆಸ್ಸಿನ ಸಾರಥ್ಯ ಬಿಡಬೇಕಾಗಿ ಬಂದಿತ್ತು.
ಈಗ ಸ್ಬೂಡಾ ಅಧ್ಯಕ್ಷ ಸ್ಥಾನದಿಂದ ಯಾವಾಗಬೇಕಾದರೂ ಇಳಿಯುವ ಸಾಧ್ಯತೆಯಿರುವುದರಿಂದ ಸುಂದರೇಶ್ ರವರು ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗುವ ಸಾಧ್ಯತೆಗಳು ದಟ್ಟವಾಗಿವೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅತ್ಯಾಪ್ತರಾಗಿರುವುದು ಕೂಡ ಅವರಿಗೆ ಅನುಕೂಲವಾಗಲಿದೆ.
ಈ ನಡುವೆ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ, ಮೂಲ ಕಾಂಗ್ರೆಸ್ಸಿಗರಾದ ಭೋವಿ ಸಮಾಜದ ಪ್ರಮುಖ ಮುಖಂಡ ರವಿಕುಮಾರ್ ರವರ ಹೆಸರು ಕೂಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದ ಚರ್ಚೆಯಲ್ಲಿ ಕಾಣುತ್ತಿದೆ. ಭೋವಿ ಸಮಾಜಕ್ಕೆ ಈ ಬಾರಿ ಪಕ್ಷದ ಅಧ್ಯಕ್ಷ ಸ್ಥಾನ ನೀಡುವ ಕೂಗು ಕೂಡ ಸದ್ಯದಲ್ಲೇ ಕೇಳಬಹುದೇನೋ…
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ವೈ.ಹೆಚ್.ನಾಗರಾಜ್ ರವರ ಹೆಸರೂ ಕೂಡ ಕಾಣಿಸುತ್ತಿದೆ. ಕಾಂಗ್ರೆಸ್ಸಿನ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ವೈ.ಹೆಚ್.ನಾಗರಾಜ್ ಸದ್ಯ ಕೆಪಿಸಿಸಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ವೈ.ಹೆಚ್.ಕೂಡ ಅರ್ಹರು ಎಂದು ಅವರ ಪರ ಲಾಬಿ ಮಾಡುತ್ತಿರುವವರ ಬಲವಾದ ವಾದ.
ಸದ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ, ವಿಧಾನಪರಿಷತ್ ಮಾಜಿ ಸದಸ್ಯರಾದ ಆರ್.ಪ್ರಸನ್ನ ಕುಮಾರ್ ರವರನ್ನು ಆ ಸ್ಥಾನದಿಂದ ಅಲುಗಾಡಿಸುವ ಪ್ರಯತ್ನದಲ್ಲಿ ಯಾರೂ ಇಲ್ಲ. ಆದರೆ ಆಗಲಿರುವ ಬದಲಾವಣೆಗಳಲ್ಲಿ ಈ ಸಾಧ್ಯತೆಗಳಿವೆ.
ಅಂದಹಾಗೆ, ಆರ್.ಪ್ರಸನ್ನ ಕುಮಾರ್ ಸ್ಬೂಡಾಕ್ಕೆ ನೂತನ ಅಧ್ಯಕ್ಷರಾದರೂ ಆಶ್ಚರ್ಯಪಡುವಂತಿಲ್ಲ. ಸ್ಬೂಡಾ ಅಧ್ಯಕ್ಷರಾಗುವವರ ಪಟ್ಟಿಯಲ್ಲಿ ಪ್ರಸನ್ನಕುಮಾರ್ ರವರ ಹೆಸರು ಮುಂಚೂಣಿಯಲ್ಲಿದೆ…


