*ಕ್ಷೇತ್ರದ ಅಭಿವೃದ್ಧಿ ಮರೆತ ಶಾಸಕ : ಚನ್ನಬಸಪ್ಪ ವಿರುದ್ಧ ವೈ.ಹೆಚ್. ನಾಗರಾಜ್ ಬೇಸರ*
*ಕ್ಷೇತ್ರದ ಅಭಿವೃದ್ಧಿ ಮರೆತ ಶಾಸಕ : ಚನ್ನಬಸಪ್ಪ ವಿರುದ್ಧ ವೈ.ಹೆಚ್. ನಾಗರಾಜ್ ಬೇಸರ*
ಶಿವಮೊಗ್ಗ : ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಒಂದಿಷ್ಟೂ ತಲೆ ಕೆಡಿಸಿಕೊಳ್ಳದೆ ಜನರ ಗಮನ ಬೇರೆಡೆ ಸೆಳೆಯುವ ಕೆಲಸ ಮಾಡುತ್ತಾ ತಮ್ಮ ಕರ್ತವ್ಯವನ್ನೇ ಮರೆತಿದ್ದಾರೆ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಆರೋಪಿಸಿದ್ದಾರೆ.
ತಮ್ಮ ಕಚೇರಿಗೆ ಕರ್ತವ್ಯ ಕಚೇರಿ ಎಂದು ಹೆಸರಿಟ್ಟುಕೊಂಡಿರುವುದೇ ವಿಪರ್ಯಾಸವಾಗಿದೆ. ಕ್ಷೇತ್ರದಲ್ಲಿ ಬೇಕಾದಷ್ಟು ಸಮಸ್ಯೆಗಳಿವೆ. ಮಳೆ ಕೊರತೆಯಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಆತಂಕವಿದೆ, ನಗರದ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ, ವೈರಲ್ ಜ್ವರ ಹೆಚ್ಚಾಗುತ್ತಿದ್ದರೂ ಮೆಗ್ಗಾನ್ ಆಸ್ಪತ್ರೆ ಸಜ್ಜಾಗಿಲ್ಲ, ನಗರದ ತುಂಬಾ ಇರುವ ಜ್ಯೂಸ್ ಅಂಗಡಿಗಳು ಸೇರಿದಂತೆ ಹೋಟೆಲ್‌ಗಳಲ್ಲಿ ಆಹಾರದ ಗುಣಮಟ್ಟ ಕುಸಿದಿದೆ, ಮಹಾನಗರ ಪಾಲಿಕೆಯಲ್ಲಿ ಜನರ ಕೆಲಸ ಕಾರ್ಯಗಳು ಆಗುತ್ತಿಲ್ಲ. ಹೀಗೆ ನೂರೆಂಟು ಸಮಸ್ಯೆಗಳ ಕಡೆ ಗಮನ ಹರಿಸದೆ ಜನರ ದಿಕ್ಕು ತಪ್ಪಿಸುವ ಕೆಲಸಕ್ಕೆ ತಮ್ಮ ಕರ್ತವ್ಯ ಕಚೇರಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ..
ವಂದೇ ಮಾತರಂ ಗೀತೆಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು ವಂದೇ ಮಾತರಂ ಗೀತೆಗೆ ಮೊದಲು ಗೌರವ ಕೊಟ್ಟಿದ್ದೇ ಕಾಂಗ್ರೆಸ್ ಪಕ್ಷವಾಗಿದೆ. ಬಂಕಿಮಚಂದ್ರ ಚಟರ್ಜಿ ಅವರು 1875ರಲ್ಲಿ ಬರೆದ ಆನಂದಮಠ ಕಾದಂಬರಿಯಲ್ಲಿ ಈ ಗೀತೆ ರಚನೆಯಾಗಿದ್ದು, 1950ರ ಜನವರಿ 24ರಂದು ಸಂವಿಧಾನ ಸಭೆಯು ಇದರ ಮೊದಲ ಎರಡು ಪದ್ಯಗಳನ್ನು ರಾಷ್ಟ್ರಗೀತೆ ಎಂದು ಅಂಗೀಕರಿಸಿದೆ. ಕೇಂದ್ರ ಗೃಹ ಸಚಿವಾಲಯವು 2026ರ ಜನವರಿ 28ರಂದು ಸರ್ಕಾರಿ ಕಾರ್ಯಕ್ರಮಗಳಲ್ಲಿ ಪೂರ್ಣ ವಂದೇ ಮಾತರಂ ಹಾಡುವ ಕುರಿತು ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ 2026ರ ಮಾರ್ಚ್ 25ರಂದು ವಜಾಗೊಳಿಸಿದ್ದು, ಈ ಸುತ್ತೋಲೆ ಕಡ್ಡಾಯವಲ್ಲ, ಕೇವಲ ಸಲಹಾ ಸೂಚನೆ ಮಾತ್ರವಾಗಿದ್ದು, ಹಾಡದಿದ್ದರೆ ಯಾವುದೇ ದಂಡ ಅಥವಾ ಶಿಕ್ಷೆಯಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಸುಪ್ರೀಂ ಕೋರ್ಟ್ ಈಗಾಗಲೇ ತಮ್ಮ ನಿಲುವು ಸ್ಪಷ್ಟಪಡಿಸಿರುವಾಗ ವಿನಾಕಾರಣ ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸುವುದು ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ.ಎಂದು ಶಾಸಕ ರ ವಿರುದ್ದ ಬೇಸರ ವ್ಯಕ್ತ ಪಡಿಸಿದ್ದಾರೆ.
ಮುಂದೆ ಶಿವಮೊಗ್ಗದಲ್ಲಿ ಗಣೇಶ ಹಬ್ಬವಿದೆ. ಹಬ್ಬವು ಶಾಂತಿಯುತವಾಗಿ ನಡೆಯಲು ಎಲ್ಲರೂ ಸಹಕರಿಸಬೇಕಾಗಿದೆ. ಸರ್ಕಾರದ ತೀರ್ಮಾನಗಳನ್ನು ಎಲ್ಲರೂ ಗೌರವಿಸಬೇಕಾಗಿದೆ. ಭಾವನಾತ್ಮಕವಾಗಿ ಮಾತನಾಡಿ ಧರ್ಮಗಳ ನಡುವೆ ಮನಸ್ಸುಗಳನ್ನು ಕದಡುವ ಕೆಲಸವನ್ನು ನಿಲ್ಲಿಸಬೇಕು. ಹೊಡಿ, ಬಡಿ, ಕಡಿ ಸಂಸ್ಕೃತಿ ಬೇಡ. ಬಿಜೆಪಿ ಶಾಸಕರಾಗಿದ್ದರೂ ಅವರು ಸರ್ಕಾರದ ಭಾಗವೇ ಆಗಿದ್ದಾರೆ, ಆದ್ದರಿಂದ ಸರ್ಕಾರದ ಜೊತೆ ಸಹಕರಿಸಿ ಕ್ಷೇತ್ರದ ಅಭಿವೃದ್ಧಿ ಮತ್ತು ಶಾಂತಿ ಕಾಪಾಡುವ ಕೆಲಸ ಮಾಡಬೇಕು, ಸಭೆಗೆ ಅಗೌರವ ತೋರುವ ಕೆಲಸ ಬಿಡಬೇಕು ಎಂದು ವೈ.ಹೆಚ್. ನಾಗರಾಜ್ ಹೇಳಿದ್ದಾರೆ.


