*ತಂದೆ-ತಾಯಿಗೆ ಅವರು ಬದುಕಿರುವಾಗಲೇ ನಾವು ಉತ್ತಮ ಮಕ್ಕಳಾಗಬೇಕು: ಸಚಿವ ಮಧು ಬಂಗಾರಪ್ಪ* – *ಮಾಜಿ ಶಾಸಕ ದಿವಂಗತ ಹೆಚ್.ಎಂ. ಚಂದ್ರಶೇಖರಪ್ಪ ಅವರ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಭಾವುಕರಾದ ಸಚಿವರು*
*ತಂದೆ-ತಾಯಿಗೆ ಅವರು ಬದುಕಿರುವಾಗಲೇ ನಾವು ಉತ್ತಮ ಮಕ್ಕಳಾಗಬೇಕು: ಸಚಿವ ಮಧು ಬಂಗಾರಪ್ಪ*
– *ಮಾಜಿ ಶಾಸಕ ದಿವಂಗತ ಹೆಚ್.ಎಂ. ಚಂದ್ರಶೇಖರಪ್ಪ ಅವರ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಭಾವುಕರಾದ ಸಚಿವರು*
ಶಿವಮೊಗ್ಗ, ಅ.2:
ತಂದೆ-ತಾಯಿಗಳು ಬದುಕಿರುವಾಗಲೇ ಮಕ್ಕಳಾದ ನಾವು ಅವರನ್ನು ಸದಾ ಗೌರವದಿಂದ ಕಾಣಬೇಕು. ತಂದೆ-ತಾಯಿಗೆ ಮಕ್ಕಳು ನೋವು ನೀಡಿ, ಅವರ ಕಣ್ಣೀರಿಗೆ ಕಾರಣರಾದರೆ, ಬದುಕಿನುದ್ದಕ್ಕೂ ಆ ಕೊರಗಿನಲ್ಲಿ ನಾವು ಸಾಯುತ್ತಿರಬೇಕಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭಾವುಕರಾಗಿ ಹೇಳಿದರು.
ಶಿವಮೊಗ್ಗ ನಗರದ ಲಗಾನ್ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ಮಾಜಿ ಶಾಸಕ ದಿವಂಗತ ಹೆಚ್.ಎಂ. ಚಂದ್ರಶೇಖರಪ್ಪ ಅವರ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ತಂದೆ-ತಾಯಿಗಳು ಬದುಕಿರುವಾಗ ನಾವು ಅವರೊಂದಿಗೇ ಇರಬೇಕು. ಅವರಿಗಿಂತ ಮೊದಲು ನಾನು ಸಾಯಬೇಕು ಎಂದು ಎಷ್ಟೋ ಸಲ ಯೋಚಿಸಿದ್ದೆ. ಅದರ ಅರ್ಥ ಅವರು ಜೀವನ ಪರ್ಯಂತ ನಮ್ಮ ಜೊತೆಗೆ ಇರಲಿ ಎಂದು. ಆದರೆ ವಿಧಿ ಲಿಖಿತವೇ ಬೇರೆಯಾಗಿರುತ್ತದೆ. ವಾಸ್ತವವನ್ನು ನಾವು ಒಪ್ಪಿಕೊಳ್ಳಲೇಬೇಕು. ಆದ್ದರಿಂದ ತಂದೆ-ತಾಯಿಗಳು ಬದುಕಿರುವಾಗಲೇ ನಾವು ಅವರಿಗೆ ಉತ್ತಮ ಮಕ್ಕಳಾಗಬೇಕು ಎಂದು ಹೇಳಿದರು.
ತಮ್ಮ ಹಾಗೂ ಸಹೋದರನ ನಡುವಿನ ಸಂಬಂಧದ ಕುರಿತು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳ ಬಗ್ಗೆಯೂ ಅವರು ಸ್ಪಷ್ಟನೆ ನೀಡಿ, ನಾವು ಯಾವುದೇ ತಪ್ಪು ಮಾಡದಿದ್ದರೂ ಕೆಲವೊಮ್ಮೆ ತಪ್ಪು ಮಾಡಿದ್ದೇವೆ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಾಧ್ಯಮಗಳಲ್ಲಿ ನಾನು ಮತ್ತು ನನ್ನ ಸಹೋದರನ ನಡುವೆ ಜಗಳವಿದೆ ಎಂದು ಬರೆಯಲಾಗುತ್ತದೆ. ಆದರೆ ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ. ನಮ್ಮ ತಂದೆ ಮತ್ತು ಸಹೋದರನ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ನನಗೆ ಬೇಸರವಿದೆ. ಇದನ್ನು ಹೊರತುಪಡಿಸಿ ನನ್ನ ಮನಸ್ಸಿನಲ್ಲಿ ಯಾವುದೇ ವಿಚಾರವಿಲ್ಲ ಎಂದರು.
‘ಸತ್ಯ ಹೇಳಿದರೆ ಸಿಟ್ಟು ಬಂದಿದೆ ಎನ್ನುತ್ತಾರೆ
ನಾನು ಸಿಟ್ಟಿನ ವ್ಯಕ್ತಿ ಎಂದು ಕೆಲವರು ಹೇಳುತ್ತಾರೆ. ನಾನು ನೇರ ನೇರವಾಗಿ ಸತ್ಯ ಹೇಳುತ್ತೇನೆ. ಆಗ ನಾನು ಸಿಟ್ಟು ಮಾಡಿಕೊಂಡಿದ್ದೇನೆ ಎಂದೇ ಎಲ್ಲರೂ ಭಾವಿಸುತ್ತಾರೆ. ನನ್ನ ವ್ಯಕ್ತಿತ್ವವೇ ಹಾಗೆ. ಸತ್ಯವನ್ನು ಹೇಳಬೇಕಾದ ಸಂದರ್ಭದಲ್ಲಿ ನೇರವಾಗಿಯೇ ಹೇಳುತ್ತೇನೆ. ಅದು ಕೆಲವರಿಗೆ ಇಷ್ಟವಾಗುವುದಿಲ್ಲ ಎಂದು ಸಚಿವರು ಹೇಳಿದರು.
ಚಂದ್ರಶೇಖರಪ್ಪ ಅವರೊಂದಿಗೆ ಹಳೆಯ ನಂಟು ಸ್ಮರಣೆ
ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ಅವರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದ ಸಚಿವರು, 1983ರಲ್ಲಿ ತಮ್ಮ ತಂದೆ ಎಸ್. ಬಂಗಾರಪ್ಪ ಅವರು ಕ್ರಾಂತಿ ರಂಗದಲ್ಲಿದ್ದ ಸಂದರ್ಭದಲ್ಲಿ ನಡೆದ ಚುನಾವಣೆಯ ನೆನಪುಗಳನ್ನು ಹಂಚಿಕೊಂಡರು.
ನಮ್ಮ ತಂದೆಯವರು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಕ್ಷೇತ್ರಕ್ಕೆ ತೆರಳಿ ಭರ್ಜರಿ ಪ್ರಚಾರ ಮಾಡುತ್ತಿರಲಿಲ್ಲ. ಕ್ಷೇತ್ರಕ್ಕೆ ಹೋಗದೆಯೇ ಗೆಲ್ಲುತ್ತಿದ್ದ ನಾಯಕರು. ಆದರೆ ಅಭಿಮಾನಿಗಳು ಮತ್ತು ಕಾರ್ಯಕರ್ತರು, ‘ಮಗನಾಗಿ ನೀವು ಬಂದು ಮತ ಕೇಳಬೇಕು’ ಎಂದು ಒತ್ತಾಯಿಸುತ್ತಿದ್ದರು. ಆಗಲೂ ನಮ್ಮ ತಂದೆಯವರು ನನ್ನನ್ನು ಕಳುಹಿಸುತ್ತಿರಲಿಲ್ಲ. ಆದರೆ ನನ್ನ ಜೀವನದಲ್ಲಿ ಮೊದಲ ಬಾರಿಗೆ ಮತಯಾಚನೆ ಮಾಡಿದ್ದು ಹೆಚ್.ಎಂ. ಚಂದ್ರಶೇಖರಪ್ಪ ಅವರ ಪರವಾಗಿ. ಅವರು ಗೆದ್ದು ವಿಧಾನಸೌಧಕ್ಕೆ ಬಂದಾಗ, ಅವರ ಪರವಾಗಿ ಪ್ರಚಾರ ಮಾಡಿ ಮತಯಾಚನೆ ಮಾಡಿದ್ದು ಸಾರ್ಥಕವೆನಿಸಿತ್ತು ಎಂದು ಮಧು ಬಂಗಾರಪ್ಪ ನೆನಪಿಸಿಕೊಂಡರು.
‘ಚಂದ್ರಶೇಖರಪ್ಪ ಅವರ ಒಳ್ಳೆಯ ಕೆಲಸಗಳು ಅವರನ್ನು ಜೀವಂತವಾಗಿರಿಸುತ್ತವೆ’
ಹೆಚ್.ಎಂ. ಚಂದ್ರಶೇಖರಪ್ಪ ಅವರು ಉತ್ತಮ ಕಾರ್ಯಗಳ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಇಂದು ಲಕ್ಷಾಂತರ ಬಂಗಾರಪ್ಪ ಅವರು ಇದ್ದಾರೆ. ಅದೇ ರೀತಿ ಲಕ್ಷಾಂತರ ಚಂದ್ರಶೇಖರಪ್ಪ ಅವರೂ ಇದ್ದಾರೆ. ಅವರು ಮಾಡಿದ ಒಳ್ಳೆಯ ಕೆಲಸಗಳು ಜನರ ಮನಸ್ಸಿನಲ್ಲಿ ಅವರನ್ನು ಸದಾ ಜೀವಂತವಾಗಿರಿಸುತ್ತವೆ ಎಂದು ಸಚಿವರು ಹೇಳಿದರು.
ಚಂದ್ರಶೇಖರಪ್ಪ ಅವರ ಮಕ್ಕಳು ಉತ್ತಮ ಮಕ್ಕಳಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಸಿ. ಯೋಗೇಶ್ ಅವರು ಸೇರಿದಂತೆ ಕುಟುಂಬದ ಎಲ್ಲರಿಗೂ ತಾನು ಸಹೋದರನಂತೆ, ಸದಾ ಬೆಂಬಲವಾಗಿ ನಿಲ್ಲುವುದಾಗಿ ಸಚಿವ ಮಧು ಬಂಗಾರಪ್ಪ ಆತ್ಮೀಯವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಶಿವಮೊಗ್ಗದ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶಿವಮೊಗ್ಗದ ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಶಾಸಕರಾದ ಬಿ ಕೆ ಸಂಗಮೇಶ್ವರ, ಎಸ್ ಎನ್ ಚನ್ನಬಸಪ್ಪ, ಶ್ರೀ ಡಿ ಎಸ್ ಅರುಣ್, ಮಾಜಿ ಸಂಸದ ಆಯನೂರು ಮಂಜುನಾಥ್ ಹಾಗೂ ಜಿಲ್ ಕಾಂಗ್ರೆಸ್ ಅಧ್ಯಕ್ಷ ಎಚ್ ಸಿ ಯೋಗೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


