ಬ್ಯಾಂಕ್ ರಾಷ್ಟ್ರೀಕರಣದ ಮೂಲಕ ಬಡವರು, ರೈತರ ಆರ್ಥಿಕ ಸಬಲೀಕರಣಕ್ಕೆ ಮುನ್ನುಡಿ ಬರೆದ ಇಂದಿರಾ ಗಾಂಧಿ: ಆರ್ ಪ್ರಸನ್ನ ಕುಮಾರ್ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಇಂದಿರಾ ಗಾಂಧಿಯವರ ಪುಣ್ಯಸ್ಮರಣೆ…
ಬ್ಯಾಂಕ್ ರಾಷ್ಟ್ರೀಕರಣದ ಮೂಲಕ ಬಡವರು, ರೈತರ ಆರ್ಥಿಕ ಸಬಲೀಕರಣಕ್ಕೆ ಮುನ್ನುಡಿ ಬರೆದ ಇಂದಿರಾ ಗಾಂಧಿ: ಆರ್ ಪ್ರಸನ್ನ ಕುಮಾರ್
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಇಂದಿರಾ ಗಾಂಧಿಯವರ ಪುಣ್ಯಸ್ಮರಣೆ…
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಇಂದು ಭಾರತದ ಮಾಜಿ ಪ್ರಧಾನಿ ಹಾಗೂ ದೇಶದ ಮೊದಲ ಮಹಿಳಾ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ ಪುಣ್ಯಸ್ಮರಣೆಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್ ಪ್ರಸನ್ನ ಕುಮಾರ್ ಅವರು ಭಾಗವಹಿಸಿ ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ದೇಶಸೇವೆ ಹಾಗೂ ಐತಿಹಾಸಿಕ ಕೊಡುಗೆಗಳನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿರಾ ಗಾಂಧಿಯವರು ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣರಾದ ನಾಯಕಿಯಾಗಿದ್ದರು. ವಿಶೇಷವಾಗಿ 1969ರಲ್ಲಿ 14 ಪ್ರಮುಖ ವಾಣಿಜ್ಯ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ ನಿರ್ಧಾರವು ದೇಶದ ಆರ್ಥಿಕ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ಹೇಳಿದರು.
ಬ್ಯಾಂಕಿಂಗ್ ವ್ಯವಸ್ಥೆಯ ಸೌಲಭ್ಯಗಳು ಶ್ರೀಮಂತರು ಮತ್ತು ದೊಡ್ಡ ಉದ್ಯಮಿಗಳಿಗೆ ಮಾತ್ರ ಸೀಮಿತವಾಗದೆ ರೈತರು, ಬಡವರು, ಸಣ್ಣ ವ್ಯಾಪಾರಿಗಳು, ಕಾರ್ಮಿಕರು ಹಾಗೂ ಗ್ರಾಮೀಣ ಜನರಿಗೂ ತಲುಪಬೇಕು ಎಂಬ ಉದ್ದೇಶದಿಂದ ಬ್ಯಾಂಕ್ ರಾಷ್ಟ್ರೀಕರಣ ಮಾಡಲಾಯಿತು. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ಶಾಖೆಗಳ ವಿಸ್ತರಣೆ, ಕೃಷಿ ಸಾಲ ಮತ್ತು ಸಣ್ಣ ಉದ್ಯಮಗಳಿಗೆ ಆರ್ಥಿಕ ನೆರವು ದೊರೆಯುವ ಅವಕಾಶಗಳು ಹೆಚ್ಚಾದವು ಎಂದು ತಿಳಿಸಿದರು.
ಇಂದಿರಾ ಗಾಂಧಿಯವರು ಬಡತನ ನಿರ್ಮೂಲನೆಗಾಗಿ ‘ಗರೀಬಿ ಹಠಾವೋ’ ಘೋಷಣೆಯೊಂದಿಗೆ ಹಲವು ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿದ್ದರು. ಇಪ್ಪತ್ತು ಅಂಶಗಳ ಕಾರ್ಯಕ್ರಮದ ಮೂಲಕ ಬಡವರ ಕಲ್ಯಾಣ, ಗ್ರಾಮೀಣ ಅಭಿವೃದ್ಧಿ, ಭೂಸುಧಾರಣೆ ಮತ್ತು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿತ್ತು ಎಂದರು.
ಹಸಿರು ಕ್ರಾಂತಿಗೆ ದೊರೆತ ಪ್ರೋತ್ಸಾಹದಿಂದ ದೇಶದ ಕೃಷಿ ಉತ್ಪಾದನೆ ಹೆಚ್ಚಲು ನೆರವಾಯಿತು. 1971ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಬಾಂಗ್ಲಾದೇಶದ ಉದಯ, 1974ರ ಪೋಖ್ರಾನ್ ಅಣುಪರೀಕ್ಷೆ ಹಾಗೂ 1975ರಲ್ಲಿ ಆರ್ಯಭಟ ಉಪಗ್ರಹ ಉಡಾವಣೆಯಂತಹ ಘಟನೆಗಳು ಭಾರತದ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿವೆ ಎಂದು ಸ್ಮರಿಸಿದರು.
ದೇಶದ ಮೊದಲ ಮಹಿಳಾ ಪ್ರಧಾನಮಂತ್ರಿಯಾಗಿ ಇಂದಿರಾ ಗಾಂಧಿಯವರು ಮಹಿಳಾ ನಾಯಕತ್ವಕ್ಕೆ ಹೊಸ ಆಯಾಮ ನೀಡಿದರು. ಮಹಿಳೆಯರು ರಾಜಕೀಯ, ಆಡಳಿತ ಮತ್ತು ಸಾರ್ವಜನಿಕ ಜೀವನದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಬಹುದು ಎಂಬುದಕ್ಕೆ ಅವರ ಜೀವನ ಐತಿಹಾಸಿಕ ಉದಾಹರಣೆಯಾಗಿದೆ ಎಂದು ಹೇಳಿದರು.
ಇಂದಿನ ಸಂದರ್ಭದಲ್ಲಿ ರೈತರ ಸಮಸ್ಯೆಗಳು, ನಿರುದ್ಯೋಗ, ಬೆಲೆ ಏರಿಕೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿನ ಅಸಮಾನತೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ದೇಶದ ಅಭಿವೃದ್ಧಿಯ ಫಲ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಆರ್ಥಿಕ ಸಮಾನತೆ, ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ ಮತ್ತು ದೇಶದ ಏಕತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ್ರಸನ್ನ ಕುಮಾರ್ ಕರೆ ನೀಡಿದರು.
ಇಂದಿರಾ ಗಾಂಧಿಯವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಅವರ ದೇಶಸೇವೆ, ಆರ್ಥಿಕ ನೀತಿಗಳು ಮತ್ತು ಐತಿಹಾಸಿಕ ಕೊಡುಗೆಗಳನ್ನು ಸ್ಮರಿಸುವುದರ ಜೊತೆಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಸಂಕಲ್ಪ ಮಾಡಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ನ ಮುಖಂಡರುಗಳಾದ, ಎನ್ ರಮೇಶ್, ರಮೇಶ್ ಶಂಕರಘಟ್ಟ, ಶ್ವೇತ ಬಂಡಿ,ಎಸ್. ಟಿ. ಹಾಲಪ್ಪ, ಆರ್ ಶಿವಣ್ಣ, ಡಾ. ಪ್ರದೀಪ್, ಯು ಶಿವಾನಂದ,ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದು ಇಂದಿರಾ ಗಾಂಧಿಯವರಿಗೆ ಗೌರವ ನಮನ ಸಲ್ಲಿಸಿದರು.


