*ಹಾಸನ ತಾಲ್ಲೂಕು ಎರಡನೇ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಹರಿಹರಪುರ ಶ್ರೀಧರ್ ಆಯ್ಕೆ.*

*ಹಾಸನ ತಾಲ್ಲೂಕು ಎರಡನೇ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಹರಿಹರಪುರ ಶ್ರೀಧರ್ ಆಯ್ಕೆ.*

ಹಾಸನ : ಹಾಸನ ತಾಲ್ಲೂಕು ಎರಡನೇ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ, ಚಿಂತಕ, ವಾಗ್ಮಿ ಹರಿಹರಪುರ ಶ್ರೀಧರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷರಾದ ಕೆ.ಸಿ. ಗೀತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್ ಮಾರ್ಗದರ್ಶನದಲ್ಲಿ ಜಿಲ್ಲಾಧ್ಯಕ್ಷರಾದ ವಾಸು ಸಮುದ್ರವಳ್ಳಿ ಅವರ ಸಲಹೆ ಮೇರೆಗೆ ವೇದಿಕೆಯ ಗೌರವ ಸಲಹೆಗಾರ ನಾಗರಾಜ ಹೆತ್ತೂರು, ಜಿಲ್ಲಾ ಉಪಾಧ್ಯಕ್ಷೆ ಎಚ್.ಎಸ್. ಭಾನುಮತಿ, ತಾಲ್ಲೂಕು ಅಧ್ಯಕ್ಷೆ ಕೆ.ಸಿ.ಗೀತಾ, ತಾಲ್ಲೂಕು ಉಪಾಧ್ಯಕ್ಷ ವಿ.ಮೋಹನ್, ತಾಲ್ಲೂಕು ಕಾರ್ಯದರ್ಶಿ ಸಿ.ಎನ್. ನೀಲಾವತಿ ಮುಂತಾದವರನ್ನೊಳಗೊಂಡ ಸಮಿತಿ ಹರಿಹರಪುರ ಶ್ರೀಧರ್ ಅವರ ಸಾಹಿತ್ಯಿಕ ಹಾಗೂ ಸಾಮಾಜಿಕ ಹಾಗೂ ಧಾರ್ಮಿಕ ಸಾಧನೆಯನ್ನು ಪರಿಗಣಿಸಿ ಹಾಸನ ತಾಲ್ಲೂಕು ಎರಡನೇ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಹಿರಿಯ ಸಾಹಿತಿ ಲಕ್ಷ್ಮೀದೇವಿದಾಸಪ್ಪ, ಜೆ.ಆರ್. ರವಿಕುಮಾರ್, ರಾಜೇಶ್ವರಿ ಹುಲ್ಲೇನಹಳ್ಳಿ,, ಕೆ.ಟಿ.ಜಯಶ್ರೀ, ಎಚ್.ಬಿ.ಚೂಡಾಮಣಿ, ಹರಿಹರಪುರ ಶ್ರೀಧರ್ ಹೆಸರುಗಳು ಪ್ರಸ್ತಾಪವಾದರೂ ಹಿರಿತನ ಹಾಗೂ ಸಾಹಿತ್ಯ, ಸಂಘಟನೆ ಮುಂತಾದ ಕ್ಷೇತ್ರಗಳಲ್ಲಿನ ಸಾಧನೆಯನ್ನು ಪರಿಗಣಿಸಿ ಅಂತಿಮವಾಗಿ ಹರಿಹರಪುರ ಶ್ರೀಧರ್ ಅವರನ್ನು ಆಯ್ಕೆ ಮಾಡಲಾಯಿತು. ೨೦೨೬ ನವೆಂಬರ್ ೨೨, ಭಾನುವಾರ ನಗರದ ಗಾಂಧಿ ಭವನದಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

*ಸಮ್ಮೇಳನಾಧ್ಯಕ್ಷರ ಪರಿಚಯ*

ಹರಿಹರಪುರ ಶ್ರೀಧರ್ ಅವರು ೧೯೫೩ ಫೆಬ್ರುವರಿ ೨೦ ರಂದು ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರಿಹರಪುರದಲ್ಲಿ ಜನಿಸಿದರು. ತಂದೆ ನಾಗರಾಜಯ್ಯ, ತಾಯಿ ನರಸಮ್ಮ. ವೃತ್ತಿಯಲ್ಲಿ ವಿದ್ಯುತ್ ಇಲಾಖೆಯ ನಿವೃತ್ತ ಇಂಜೀನಿಯರ್ ಆದ ಶ್ರೀಧರ್ ಅವರು ಪ್ರವೃತ್ತಿಯಲ್ಲಿ ಸಮಾಜಿಕ ಸೇವೆ, ಸಾಹಿತ್ಯ ರಚನೆ, ಆಕಾಶವಾಣಿಯಲ್ಲಿ ಚಿಂತನ ವಾಚನ, ದಿನಪತ್ರಿಕೆಗಳಲ್ಲಿ ಅಂಕಣ ಬರಹ, ಕಾವ್ಯ ರಚನೆ ಮಾಡುತ್ತಾ ನೂರಾರು ಕವಿಗೋಷ್ಠಿ ಹಾಗೂ ಸಾಹಿತ್ಯ ಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ.

ಪ್ರಸಿದ್ಧ ಭಾಷಣಕಾರ ಹಾಗೂ ಚಿಂತಕರಾದ ಇವರು “ಜೀವನ ವೇದ” ಎಂಬ ಗ್ರಂಥದ ಮೂಲಕ ಜನಸಾಮಾನ್ಯರಿಗಾಗಿ ವೇದಗಳ ಮಹತ್ವದ ಬಗ್ಗೆ ತಿಳಿಸಿದ್ದಾರೆ. “ತಿರುಳು” ಭಾವಗೀತೆಗಳ ಸಂಕಲನ; “ಕುಸುಮಗಳು” ಆಯ್ದ ವೇದ ಮಂತ್ರಗಳ ಸಾರ; “ಅಗ್ನಿಹೋತ್ರ” ಕೈಪಿಡಿ; ನೂರಾರು ಕವಿತೆ ರಚಿಸಿರುವ ಇವರು ಅನೇಕ ಸಂಪಾದಿತ ಕವನ ಸಂಕಲನಗಳಲ್ಲಿ, ವಿಶೇಷ ಸಂಚಿಕೆಗಳಲ್ಲಿ, ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣ ಸಂಚಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಕಳೆದ ೫೫ ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಾ ಸಂಘ, ವಿಶ್ವ ಹಿಂದೂ ಪರಿಷತ್ತು, ಸಂಸ್ಕಾರ ಭಾರತೀ, ಸೇವಾ ಭಾರತೀ, ಪತಂಜಲಿ ಯೋಗ, ವೇದಭಾರತೀ ಮುಂತಾದ ಸಂಘಟನೆಗಳ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ೧೫ ವರ್ಷಗಳಿಂದ ಪತಂಜಲಿ ಯೋಗ ಸಮಿತಿಯ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾಗಿ “ಎಲ್ಲರಿಗಾಗಿ ವೇದ” ಎಂಬ ಉದ್ಧೇಶದಡಿಯಲ್ಲಿ “ವೇದಭಾರತೀ” ಸ್ಥಾಪನೆ ಮಾಡಿ ಸಾಮಾಜಿಕ ಸಾಮರಸ್ಯಕ್ಕಾಗಿ ಕೆಲಸ ಮಾಡುತ್ತಾ ಹಾಗೂ ವೇದ ಸಂಸ್ಕೃತಿಯ ರಕ್ಷಣೆಗಾಗಿ ಮನೆಮನೆಗೆ ಅಗ್ನಿಹೋತ್ರ ಅಭಿಯಾನಕ್ಕಾಗಿ ಸ್ವಂತ ಕಟ್ಟಡ “ಈಶಾವಾಸ್ಯಮ್” ಮೀಸಲಿಟ್ಟಿದ್ದಾರೆ.

ಇವರ ಸಾಹಿತ್ಯ, ಸಂಘಟನೆ, ಸಾಮಾಜಿಕ ಹಾಗೂ ಧಾರ್ಮಿಕ ಸಾಧನೆಗಾಗಿ ಬೆಂಗಳೂರಿನ ಸಾಕ್ಷಿ ಟ್ರಸ್ಟ್ “ಶ್ರೀ ಟಿ.ವಿ.ಕಪಾಲಿಶಾಸ್ತ್ರೀ ಅವಾರ್ಡ್ ೨೦೨೫; ಬಬ್ಬೂರುಕಮ್ಮೆ ಸೇವಾ ಸಮಿತಿ, ಕರ್ನಾಟಕ ಇವರು ೨೦೨೨ ರಲ್ಲಿ “ಸಾಧಕ ರತ್ನ ಪ್ರಶಸ್ತಿ”; ಆತ್ರೇಯ ಟ್ರಸ್ಟ್ ಕರ್ನಾಟಕ ಇವರು ೨೦೨೫ ರಲ್ಲಿ “ದಾಸ ಸಂಕೀರ್ತನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ”; ಹಾಸನದ ಗುರು ರಾಘವೇಂದ್ರ ಟ್ರಸ್ಟ್ ೨೦೨೫ ರಲ್ಲಿ ಅಗ್ನಿಹೋತ್ರಕ್ಕಾಗಿ ಗೌರವ ಸನ್ಮಾನ, ಶಿವಮೊಗ್ಗದ ಪತಂಜಲಿ ಯೋಗ ಸಂಸ್ಥೆ ೨೦೨೬ ರಲ್ಲಿ “ಕನಕಶ್ರೀ ಚೇತನ ಪತಂಜಲಿ ರತ್ನ ಪ್ರಶಸ್ತಿ” ನೀಡಿ ಗೌರವಿಸಿದೆ.