ಬೆಂಗಳೂರಿನಲ್ಲಿ ‘ದೃಶ್ಯಂ’ ಮೀರಿಸಿದ ನರಮೇಧ: ಒಂದೇ ರುಬ್ಬುಗುಂಡು, 7 ಕೊಲೆಗಳು, ಬೆಟ್ಟ-ಘಾಟಿಗಳಲ್ಲಿ ಹೆಣಗಳ ಸಾಗಾಟ!
ಬೆಂಗಳೂರಿನಲ್ಲಿ ‘ದೃಶ್ಯಂ’ ಮೀರಿಸಿದ ನರಮೇಧ: ಒಂದೇ ರುಬ್ಬುಗುಂಡು, 7 ಕೊಲೆಗಳು, ಬೆಟ್ಟ-ಘಾಟಿಗಳಲ್ಲಿ ಹೆಣಗಳ ಸಾಗಾಟ!
ಬೆಂಗಳೂರಿನ ಇತಿಹಾಸದಲ್ಲೇ ಇಂಥದ್ದೊಂದು ಭೀಕರ, ಅಮಾನವೀಯ, ರಕ್ತಸಿಕ್ತ ಕಥೆಯನ್ನು ಯಾರೂ ಕೇಳಿರಲಿಕ್ಕಿಲ್ಲ. ಇದು ಕೇವಲ ಕೊಲೆಯಲ್ಲ; ಪಕ್ಕಾ ಸ್ಕೆಚ್ ಹಾಕಿ, ಸಿನಿಮಾ ಕ್ರೈಂ ಥ್ರಿಲ್ಲರ್ಗಳನ್ನೂ ಮೀರಿಸುವಂತೆ ಹಂತ ಹಂತವಾಗಿ ಇಡೀ ಸಂಸಾರವನ್ನೇ ಮುಗಿಸಿಹಾಕಿದ ರಾಕ್ಷಸನೊಬ್ಬನ ಹತ್ಯಾಕಾಂಡ.
ಬರೋಬ್ಬರಿ 20 ದಿನಗಳು… ಒಂದೇ ಒಂದು ಪುಟ್ಟ 1RK ರೂಮ್… ಒಂದೇ ಒಂದು ರುಬ್ಬುಗುಂಡು… ಬರೋಬ್ಬರಿ 7 ಹೆಣಗಳು!
ಪತ್ನಿ, ಅತ್ತೆ, ಇಬ್ಬರು ಭಾವ-ಮೈದುನರು, ಇಬ್ಬರು ಸೊಸೆಯಂದಿರು ಹಾಗೂ ಕೇವಲ 7 ವರ್ಷದ ಮುಗ್ಧ ಕಂದಮ್ಮ! ನೆತ್ತರು ಕುಡಿದು, ಹೆಣಗಳನ್ನು ಚೀಲದಲ್ಲಿ ತುಂಬಿ, ಕಾರಿನಲ್ಲಿಟ್ಟುಕೊಂಡು ಕರ್ನಾಟಕದಿಂದ ತಮಿಳುನಾಡಿನ ಗಡಿಯವರೆಗೂ ಬೆಟ್ಟ-ಗುಡ್ಡಗಳಲ್ಲಿ ಕಸದಂತೆ ಎಸೆದು ಬಂದಿದ್ದಾನೆ ಈ ನರಹಂತಕ ಕ್ಯಾಬ್ ಡ್ರೈವರ್ ಇಂದು ಶೇಖರ್!
ಸಂಸಾರದ ದ್ವೇಷಕ್ಕೆ ಹಂತಕನ 2 ತಿಂಗಳ ರಕ್ತಸಿಕ್ತ ಸ್ಕೆಚ್!
ಶ್ರೀರಾಮಪುರದ ನಿವಾಸಿ ಸುನೀತಾ (ವಿಕಾಸಸೌಧದಲ್ಲಿ ಹೊರಗುತ್ತಿಗೆ ಟೈಪಿಸ್ಟ್) ಜೊತೆ ಇಂದು ಶೇಖರ್ ಮದುವೆಯಾಗಿ 20 ವರ್ಷಗಳಾಗಿದ್ದವು. ಆದರೆ ಇಂದು ಶೇಖರ್ನಲ್ಲಿ ಒಂದು ವಿಚಿತ್ರ ಕೀಳರಿಮೆ ಕಾಡುತ್ತಿತ್ತು. ಪತ್ನಿಗಿಂತ ತಾನು ವಯಸ್ಸಾದವನಂತೆ ಕಾಣುತ್ತೇನೆ ಎಂಬ ಕೊರಗು ಒಂದೆಡೆಯಾದರೆ, ಪತ್ನಿ ಸದಾ ತವರು ಮನೆಯವರ ಸಂಪರ್ಕದಲ್ಲಿದ್ದಾಳೆ, ಅವರೇ ನಮ್ಮ ಸಂಸಾರಕ್ಕೆ ಅಡ್ಡಿ ಎಂಬ ಆಕ್ರೋಶ ಹೊಗೆಯಾಡುತ್ತಿತ್ತು. ಈ ಕೌಟುಂಬಿಕ ಕಲಹ, ದ್ವೇಷದ ಜ್ವಾಲೆಯಾಗಿ ಬದಲಾಗಿತ್ತು. ಇಡೀ ಕುಟುಂಬವನ್ನೇ ಸರ್ವನಾಶ ಮಾಡಲು ಈತ ಬರೋಬ್ಬರಿ ಎರಡು ತಿಂಗಳಿನಿಂದ ‘ಪರ್ಫೆಕ್ಟ್ ಮರ್ಡರ್’ ಪ್ಲಾನ್ ಮಾಡಿದ್ದ.
ರಾಜಾಜಿನಗರದ ಟೆರೇಸ್ ಮೇಲಿನ ಡೆತ್ ಚೇಂಬರ್!
ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿಯ ಕಟ್ಟಡವೊಂದರ ಟೆರೇಸ್ ಮೇಲಿದ್ದ 1RK ರೂಮ್ಗೆ ಅಕ್ಟೋಬರ್ 16ರಿಂದಲೇ ಸಾವು ಕಾಯುತ್ತಿತ್ತು. ಸುತ್ತಮುತ್ತ ಯಾರೂ ಇಲ್ಲದ, ಕೆಳಗಿನ ಮನೆಯವರಿಗೆ ಕಿಂಚಿತ್ತೂ ಸದ್ದು ಕೇಳಿಸದ ಜಾಗವನ್ನೇ ಹತ್ಯಾಕಾಂಡಕ್ಕೆ ಆಯ್ದುಕೊಂಡಿದ್ದ.
ಅಕ್ಟೋಬರ್ 16ರಂದು ಮೊದಲು ಪತ್ನಿ ಸುನೀತಾಳನ್ನು ಹತ್ಯೆ ಮಾಡಿದ. ಆಕೆಯ ಮುಖಕ್ಕೆ ರುಬ್ಬುಗುಂಡಿನಿಂದ ಜಜ್ಜಿ ಪ್ರಾಣ ತೆಗೆದ. ಬಳಿಕ ಹೆಣವನ್ನು ಕಾರಿನಲ್ಲಿ ತುಂಬಿಕೊಂಡು ಹೋಗಿ ನಂದಿಬೆಟ್ಟದ ಬಳಿ ಎಸೆದು ಬಂದ. ಅಕ್ಕಪಕ್ಕದವರಿಗೆ “ಪತ್ನಿ ಫ್ರೆಂಡ್ಸ್ ಜೊತೆ ಟ್ರಿಪ್ ಹೋಗಿದ್ದಾಳೆ” ಎಂದು ನಂಬಿಸಿದ.
ಇಲ್ಲಿಂದ ಶುರುವಾಯ್ತು ನೋಡಿ ಆತನ ಅಸಲಿ ಸೈಕೋ ಆಟ!
‘ಆಲ್ ಇಂಡಿಯಾ ಟ್ರಿಪ್’ ಮತ್ತು ‘ಎಣ್ಣೆ ಪಾರ್ಟಿ’ಯ ಮಾಯಾಜಾಲ
ಕುಟುಂಬದ ಪ್ರತಿಯೊಬ್ಬರಿಗೂ ಒಂದೊಂದು ಕಾರಣ ನೀಡಿ ಕರೆಸಿಕೊಂಡ:
* ಬಾಮೈದ ಶಿವಕುಮಾರ್: “ಬಾ ಮಚ್ಚಾ ಎಣ್ಣೆ ಪಾರ್ಟಿ ಮಾಡೋಣ” ಎಂದು ಕರೆಸಿ, ಮದ್ಯದಲ್ಲಿ ಅಮಲು ಬರುವ ಮಾತ್ರೆಗಳನ್ನು ಬೆರೆಸಿ ಪ್ರಜ್ಞೆ ತಪ್ಪಿಸಿದ. ನಂತರ ರುಬ್ಬುಗುಂಡೆತ್ತಿ ಮುಖ ಜಜ್ಜಿ ಕೊಲೆ ಮಾಡಿದ.
* ಅತ್ತೆ ರೂಪವತಿ, ಬಾಮೈದ ಶಂಕರ್, ಸೊಸೆಯಂದಿರಾದ ದಿವ್ಯಾ ಮತ್ತು ನಳಿನಿ: “ಎಲ್ಲರೂ ಕನ್ಯಾಕುಮಾರಿ, ಆಲ್ ಇಂಡಿಯಾ ಟ್ರಿಪ್ ಹೋಗೋಣ, 15 ದಿನ ನೆಮ್ಮದಿಯಾಗಿ ಯಾತ್ರೆ ಮುಗಿಸಿಕೊಂಡು ಬರೋಣ” ಎಂದು ಪುಸಲಾಯಿಸಿದ. ಮನೆಗೆ ಬಂದ ಹೆಣ್ಣುಮಕ್ಕಳಿಗೆ ಟೀ, ಜ್ಯೂಸ್ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಟ್ಟು, ಅವರು ಪ್ರಜ್ಞೆ ತಪ್ಪುತ್ತಿದ್ದಂತೆ ಕಲ್ಲು ಎತ್ತಿ ಹಾಕಿ ಕೊಂದು ಹಾಕಿದ.
* ಮುಗ್ಧ ಕಂದಮ್ಮ: ಕೇವಲ 7 ವರ್ಷದ ಪುನೀತ್ (ಶಂಕರ್ ಮಗ) ಎಂಬ ಕಂದಮ್ಮನನ್ನೂ ಬಿಡದೆ ನಿರ್ದಯವಾಗಿ ಮುಗಿಸಿದ.
ಪ್ರತಿಯೊಂದು ಕೊಲೆಯ ನಂತರವೂ ಕೆಮಿಕಲ್ ಹಾಕಿ ನೆಲದ ರಕ್ತ ತೊಳೆಯುತ್ತಿದ್ದ, ಆ ರಕ್ತಸಿಕ್ತ ರುಬ್ಬುಗುಂಡನ್ನು ಸ್ವಚ್ಛವಾಗಿ ತೊಳೆದಿಟ್ಟು, ಮುಂದಿನ ಹೆಣ ಬೀಳುವುದಕ್ಕಾಗಿ ಕಾಯುತ್ತಿದ್ದ!
ಹೆಣಗಳ ಸಾಗಾಟಕ್ಕೆ 11 ವರ್ಷದ ಬಾಲಕನ ಬಳಕೆ!
ಈ ಇಡೀ ಕೃತ್ಯದ ಅತ್ಯಂತ ಬೆಚ್ಚಿಬೀಳಿಸುವ ಅಂಶವೆಂದರೆ— ನಳಿನಿಯ 11 ವರ್ಷದ ಮಗ ಯತೀನ್ನನ್ನು ಈತ ಜೊತೆಯಲ್ಲೇ ಇಟ್ಟುಕೊಂಡಿದ್ದ!
ಪ್ರತಿ ಬಾರಿ ರಕ್ತಸಿಕ್ತ ಚೀಲವನ್ನು ಕಾರಿನ ಡಿಕ್ಕಿಗೆ ಹಾಕುವಾಗ, ಮುಗ್ಧ ಬಾಲಕ “ಮಾವಾ, ಇದೇನು?” ಎಂದು ಕೇಳಿದರೆ, “ಇದು ಮನೆಯ ಕಸದ ಚೀಲ ಕಣೋ” ಎನ್ನುತ್ತಿದ್ದ.
“ಉಳಿದವರೆಲ್ಲಾ ಎಲ್ಲಿ ಮಾವಾ?” ಎಂದರೆ, “ಅವರೆಲ್ಲಾ ಆಲ್ ಇಂಡಿಯಾ ಟೂರ್ ಹೋಗಿದ್ದಾರೆ, ಮೂರು ತಿಂಗಳು ಬರಲ್ಲ. ಕಸ ಎಸೆದು ನಿನ್ನನ್ನೂ ಕರ್ಕೊಂಡು ಹೋಗ್ತೀನಿ” ಎಂದು ನಂಬಿಸಿದ್ದ.
ನಂದಿಬೆಟ್ಟ, ಸ್ಕಂದಗಿರಿಯ ದಟ್ಟ ಪೊದೆಗಳು, ಹಾಸನದ ಕಡಿದಾದ ಕಣಿವೆ-ಬಂಡೆಗಳು, ಚಾರ್ಮಾಡಿ ಘಾಟ್ ಹಾಗೂ ತಮಿಳುನಾಡಿನ ಸೇಲಂ ಗಡಿಯವರೆಗೂ ಕಾರು ಚಲಾಯಿಸಿ ಹೆಣಗಳನ್ನು ಒಂದೊಂದಾಗಿ ಎಸೆದು ಬಂದಿದ್ದ. ಕೊನೆಗೆ ಆ 11 ವರ್ಷದ ಬಾಲಕನನ್ನು ಬೆಂಗಳೂರಿನ ಹಲಸೂರು ಗೇಟ್ ಬಳಿ ನಡುರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದ!
ದೃಶ್ಯಂ ಸ್ಟೈಲ್ ಮೆಸೇಜ್: ತನಿಖೆ ಹಳ್ಳಹಿಡಿಸಲು ಹೈಟೆಕ್ ಪ್ಲಾನ್
ಕೊಲೆಯಾದ ಎಲ್ಲ ಏಳು ಜನರ ಮೊಬೈಲ್ಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಈ ಹಂತಕ, ಬಂಧುಗಳಿಗೆ ಯಾರ ಮೇಲೂ ಅನುಮಾನ ಬಾರದಿರಲು ಕೊಲೆಯಾದ ದಿವ್ಯಾಳ ಮೊಬೈಲ್ನಿಂದ ಆಕೆಯ ಅಕ್ಕ ಉಷಾಗೆ ಸುದೀರ್ಘ ಸಂದೇಶ ಕಳುಹಿಸಿದ್ದ:
> “ಅಮ್ಮ, ಅಣ್ಣ, ನಾನು ದಿವ್ಯ… ನಾವೆಲ್ಲಾ ಅತ್ತೆ ರೂಪಾವತಿ ಜೊತೆ ಆಲ್ ಇಂಡಿಯಾ ಟ್ರಿಪ್ ಬಂದಿದ್ದೇವೆ. ಇಲ್ಲಿ ಫೋನ್, ವಿಡಿಯೋ ಕಾಲ್ ಮಾಡಲು ಬಿಡಲ್ಲ. ಎಲ್ಲರೂ ದೇವರ ನಾಮ, ಧ್ಯಾನ ಮಾಡ್ತಾ ಇದ್ದೀವಿ. ಸುಮ್ಮನೆ ಕಂಪ್ಲೇಂಟ್ ಗಿಂಪ್ಲೇಂಟ್ ಅಂತ ಗಲಾಟೆ ಮಾಡಬೇಡಿ…”
>
ಸೈಕೋ ಕಿಲ್ಲರ್ ಲಾಕ್ ಆಗಿದ್ದು ಹೇಗೆ?
ನಳಿನಿ ಮತ್ತು ದಿವ್ಯಾ ನಾಪತ್ತೆಯಾಗಿದ್ದಾರೆ ಎಂದು ತಾಯಂದಿರು ಶ್ರೀರಾಮಪುರ ಠಾಣೆಗೆ ಮಿಸ್ಸಿಂಗ್ ದೂರು ನೀಡಿದಾಗ ಪೊಲೀಸರು ಅಲರ್ಟ್ ಆದರು. ಎಲ್ಲರ ಮೊಬೈಲ್ ಟ್ರೇಸ್ ಮಾಡಿದಾಗ, ವಿಚಿತ್ರವೆಂದರೆ ಕನ್ಯಾಕುಮಾರಿ ಯಾತ್ರೆಯಲ್ಲಿದ್ದಾರೆ ಎನ್ನಲಾದ ಎಲ್ಲಾ ಮೊಬೈಲ್ಗಳೂ ಬೆಂಗಳೂರಿನ ಸುತ್ತಮುತ್ತಲಿನ ಒಂದೇ ಲೊಕೇಶನ್ನಲ್ಲಿ ಆಕ್ಟಿವ್ ಆಗಿರುವುದು ಪತ್ತೆಯಾಯಿತು!
ಅನುಮಾನಗೊಂಡ ಪೊಲೀಸರು ಇಂದು ಶೇಖರ್ನನ್ನು ವಶಕ್ಕೆ ಪಡೆದು ಬೆಂಡೆತ್ತಿದಾಗ, ರಾಜಧಾನಿಯನ್ನೇ ಬೆಚ್ಚಿಬೀಳಿಸಿದ ಏಳು ಜನರ ಸರಣಿ ನರಮೇಧದ ಕರಾಳ ರಹಸ್ಯ ಹೊರಬಿದ್ದಿದೆ! ಕೃತ್ಯ ನಡೆದ ಸ್ಥಳ ರಾಜಾಜಿನಗರ ಠಾಣಾ ವ್ಯಾಪ್ತಿಯಲ್ಲಿದ್ದ ಕಾರಣ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಲಾಗಿದೆ.
ಯಾರು ಈ ಇಂದು ಶೇಖರ್? ಕ್ರೈಂ ಹಿನ್ನೆಲೆ ಏನು?
* ಈತ ಕೇವಲ ಕ್ಯಾಬ್ ಚಾಲಕನಲ್ಲ; 2018ರಲ್ಲೇ ಮಾದನಾಯಕನಹಳ್ಳಿ ಠಾಣೆಯಲ್ಲಿ ದರೋಡೆ (ರಾಬರಿ) ಕೇಸ್ನಲ್ಲಿ ಜೈಲು ಸೇರಿದ್ದ.
* ‘ಪೊಲೀಸ್ ವಾಯ್ಸ್’ ಎಂಬ ಪತ್ರಿಕೆಯ ಗಾಡಿ ಓಡಿಸುತ್ತಾ, ಪೊಲೀಸರ ಜೊತೆ ಸಂಪರ್ಕ ಬೆಳೆಸಿಕೊಂಡಿದ್ದ.
* ಪೊಲೀಸರು ಕೇಸ್ ಹೇಗೆ ಭೇದಿಸುತ್ತಾರೆ, ಸಾಕ್ಷ್ಯ ನಾಶ ಹೇಗೆ ಮಾಡುತ್ತಾರೆ ಎಂಬುದನ್ನು ಮೊದಲೇ ಕಲಿತಿದ್ದ. ಈತನ ಡೈರಿಯಲ್ಲಿ ಐಪಿಎಸ್, ಎಸ್ಪಿ, ಎಸಿಪಿ, ಇನ್ಸ್ಪೆಕ್ಟರ್ಗಳ ನಂಬರ್ಗಳೇ ತುಂಬಿವೆ!
* ತಾನು ಬಾಡಿಗೆಗಿದ್ದ ಮನೆಯನ್ನೇ ಲಪಟಾಯಿಸಲು ವೃದ್ಧ ಮಾಲೀಕನಿಂದ ಸಹಿ ಪಡೆದು ವಂಚಿಸಿದ್ದ, ಆ ನೋವಿನಲ್ಲೇ ಆ ಮಾಲೀಕ ಮೃತಪಟ್ಟಿದ್ದ.
ಬೆಟ್ಟ-ಘಾಟಿಗಳಲ್ಲಿ ಹೆಣಗಳಿಗಾಗಿ ತೀವ್ರ ಶೋಧ!
ಸದ್ಯಕ್ಕೆ 7 ವರ್ಷದ ಬಾಲಕ ಪುನೀತ್ ಮೃತದೇಹ ಮಾತ್ರ ಪತ್ತೆಯಾಗಿದ್ದು, ಉಳಿದ 6 ಮೃತದೇಹಗಳಿಗಾಗಿ ಮೂವರು ಎಸಿಪಿಗಳ ನೇತೃತ್ವದ ವಿಶೇಷ ತಂಡಗಳು ಸ್ಕಂದಗಿರಿ, ಹಾಸನ, ಚಾರ್ಮಾಡಿ ಘಾಟ್ ಹಾಗೂ ತಮಿಳುನಾಡಿನ ಕಣಿವೆಗಳಲ್ಲಿ ಹಗಲಿರುಳು ಕಾರ್ಯಾಚರಣೆ ನಡೆಸುತ್ತಿವೆ. ಹಂತಕ ಪೊಲೀಸರನ್ನೂ ದಿಕ್ಕುತಪ್ಪಿಸಲು ಒಂದೊಂದು ಬಾರಿ ಒಂದೊಂದು ಜಾಗದ ಹೆಸರು ಹೇಳುತ್ತಿದ್ದಾನೆ.
ಸಂಬಂಧಗಳನ್ನೇ ನಂಬಿ ಬಂದ ಇಡೀ ಕುಟುಂಬವನ್ನೇ ರುಬ್ಬುಗುಂಡಿನಲ್ಲಿ ಜಜ್ಜಿ ಕೊಂದ ಈ ರಕ್ಕಸನಿಗೆ ಕಾನೂನಿನ ಅಡಿಯಲ್ಲಿ ಗಲ್ಲು ಶಿಕ್ಷೆಯೇ ಆಗಬೇಕು ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಭುಗಿಲೆದ್ದಿದೆ.


