*ಟೋಯಿಂಗ್ ವಾಹನ ಮಾರ್ಪಾಡಿನಲ್ಲಿ ಸೇವಾ ನ್ಯೂನ್ಯತೆ: ಪ್ರತಿವಾದಿಗೆ ದಂಡ ಹಾಗೂ ಹಣ ಮರುಪಾವತಿಗೆ ಆದೇಶ* ವಿದ್ಯಾನಗರದ ರಘು ದೂರು
*ಟೋಯಿಂಗ್ ವಾಹನ ಮಾರ್ಪಾಡಿನಲ್ಲಿ ಸೇವಾ ನ್ಯೂನ್ಯತೆ: ಪ್ರತಿವಾದಿಗೆ ದಂಡ ಹಾಗೂ ಹಣ ಮರುಪಾವತಿಗೆ ಆದೇಶ*
ವಿದ್ಯಾನಗರದ ರಘು ದೂರು
ಶಿವಮೊಗ್ಗ
ಟೋಯಿಂಗ್ ವಾಹನವಾಗಿ ಸರಿಯಾಗಿ ಮಾರ್ಪಾಡು ಮಾಡಿಕೊಡದೆ ಸೇವಾ ನ್ಯೂನ್ಯತೆ ಎಸಗಿರುವ ಹಿನ್ನೆಲೆಯಲ್ಲಿ, ಪ್ರತಿವಾದಿಗೆ ಹಣ ಮರುಪಾವತಿಸುವಂತೆ ಹಾಗೂ ಪರಿಹಾರ ನೀಡುವಂತೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.
ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ. ಯೋಗಾನಂದ ಭಾಂಡ್ರವರನ್ನು ಒಳಗೊಂಡ ಪೀಠವು ಈ ತೀರ್ಪು ನೀಡಿದೆ.
ಶಿವಮೊಗ್ಗದ ವಿದ್ಯಾನಗರದ ವಾಸಿ ಸಿ. ರಘು ಎಂಬುವವರು, ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ವಾಯುಪುತ್ರ ಟೋಯಿಂಗ್ ಸರ್ವೀಸ್ನ ಪ್ರದೀಪ್ ಕೆ.ಆರ್. ಅವರ ವಿರುದ್ಧ ದೂರು ದಾಖಲಿಸಿದ್ದರು. ದೂರುದಾರರು ತಮ್ಮ ವಾಹನವನ್ನು ರೂ. 2,45,000/-ಗಳಿಗೆ ಟೋಯಿಂಗ್ ವಾಹನವಾಗಿ ಬದಲಾಯಿಸಿಕೊಳ್ಳಲು ಒಪ್ಪಂದ ಮಾಡಿಕೊಂಡು, 2024 ರ ಡಿಸೆಂಬರ್ ನಲ್ಲಿ ವಾಹನವನ್ನು ಎದುರುದಾರರಿಗೆ ನೀಡಿದ್ದರು. 2025 ರ ಮಾರ್ಚ್ ಲ್ಲಿ ಎದುರುದಾರರು ವಾಹನವನ್ನು ಮರಳಿಸಿದ್ದು, ತದನಂತರ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಹೈಡ್ರಾಲಿಕ್ ಮಿಷನ್ ನಿಂತುಹೋಗಿ ವಾಹನ ಸಾಗಿಸಲು ಕಷ್ಟಕರವಾಗಿತ್ತು.
ಹಳೆಯ ಬಿಡಿಭಾಗಗಳನ್ನು ಹಾಕಿ ವಾಹನವನ್ನು ಮಾರ್ಪಾಡು ಮಾಡಿರುವುದು ಮತ್ತು ಹೊಸ ಬಿಡಿಭಾಗಗಳನ್ನು ಹಾಕಿ ಸರಿಪಡಿಸಿಕೊಡಲು ಕೇಳಿದರೂ ಹಾಗೂ ಮಾರ್ಪಡಿಸಿದ ಬಗ್ಗೆ ದಾಖಲಾತಿ ನೀಡಲು ಕೇಳಿದರೂ ಎದುರುದಾರರು ಸ್ಪಂದಿಸಿರಲಿಲ್ಲ. ಇದರಿಂದ ದೂರುದಾರರು ತಮ್ಮ ಸ್ವಂತ ಹಣದಿಂದ ಶಿವಮೊಗ್ಗದಲ್ಲಿಯೇ ರಿಪೇರಿ ಮಾಡಿಸಿದ್ದು, ರೂ. 3,00,000/-ಗಳು ಖರ್ಚಾಗಿರುತ್ತದೆ. ಈ ಕುರಿತು 225 ರ ಸೆಪ್ಟೆಂಬರ್ 27 ರಂದು ನೋಟಿಸ್ ನೀಡಿದರೂ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ದೂರುದಾರರು ಗ್ರಾಹಕ ಆಯೋಗದ ಮೊರೆ ಹೋಗಿದ್ದರು.
ದೂರುದಾರರ ದಾಖಲೆಗಳನ್ನು ಪರಿಶೀಲಿಸಿ, ಎದುರುದಾರರು ವಿಚಾರಣೆಗೆ ಹಾಜರಾಗದ ಕಾರಣ ಅವರನ್ನು ಏಕಪಕ್ಷೀಯವಾಗಿ ಪರಿಗಣಿಸಿ ಆಯೋಗವು ತೀರ್ಪು ಪ್ರಕಟಿಸಿದೆ.
ಎದುರುದಾರರು ದೂರುದಾರರಿಗೆ ರೂ. 2,45,000/-ಗಳನ್ನು ದಿನಾಂಕ 27/09/2025ರಿಂದ ವಾರ್ಷಿಕ ಶೇ. 8ರ ಬಡ್ಡಿಯೊಂದಿಗೆ ಈ ಆದೇಶದ 45 ದಿನಗಳ ಒಳಗೆ ಪಾವತಿಸಬೇಕು. ತಪ್ಪಿದಲ್ಲಿ ವಾರ್ಷಿಕ ಶೇ. 10ರಂತೆ ಬಡ್ಡಿ ಪಾವತಿಸಬೇಕಾಗುತ್ತದೆ.
ಎದುರುದಾರರು ದೂರುದಾರರಿಗೆ ಅಳವಡಿಸಿದ್ದ ಟೋಯಿಂಗ್ ಮಿಷನ್ ಅನ್ನು ತಮ್ಮ ಸ್ವಂತ ಖರ್ಚಿನಲ್ಲಿ ವಾಪಸ್ ಪಡೆದುಕೊಳ್ಳಬೇಕು.
ಪರಿಹಾರವಾಗಿ ರೂ. 50,000/- ಹಾಗೂ ದೂರಿನ ಖರ್ಚು ವೆಚ್ಚಕ್ಕಾಗಿ ರೂ. 5,000/-ಗಳನ್ನು ವಾರ್ಷಿಕ ಶೇ. 8ರ ಬಡ್ಡಿಯೊಂದಿಗೆ ಪಾವತಿಸುವಂತೆ ಆಯೋಗ ಆದೇಶಿಸಿದೆ.


