ಸಂಪುಟ ಪುನರ್ರಚನೆಗೆ ಸಿದ್ಧು ಪಟ್ಟು?…ಬಿಕೆ ಮಂತ್ರಿ-ಜಾರ್ಕಿ ಅಧ್ಯಕ್ಷ?
ಸಂಪುಟ ಪುನರ್ರಚನೆಗೆ
ಸಿದ್ಧು ಪಟ್ಟು?
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇದ್ದಕ್ಕಿದ್ದಂತೆ ಯೂ ಟರ್ನ್ ಹೊಡೆದಿದ್ದಾರೆ.
ಅವರ ಆಪ್ತ ಮೂಲಗಳ ಪ್ರಕಾರ,ಮೊನ್ನೆ ಮೊನ್ನೆಯವರೆಗೆ ಡಿಕೆಶಿ ಸಂಪುಟದಲ್ಲಿರುವ ಎರಡು ಸ್ಥಾನಗಳಿಗೆ ಬಸವರಾಜ ನೀಲಣ್ಣನವರ್ ಮತ್ತು ಅನ್ನಪೂರ್ಣ ತುಕಾರಾಂ ಅವರನ್ನು ತೆಗೆದುಕೊಳ್ಳಬೇಕು ಅಂತ ಸಿದ್ದರಾಮಯ್ಯ ಹೇಳುತ್ತಿದ್ದರು.
ಅದರೆ ಈಗ ಡಿಕೆಶಿ ಸಂಪುಟ ವಿಸ್ತರಣೆಯಾದರೆ ಸಾಲದು,ಪುನರ್ರಚನೆಯೇ ಆಗಬೇಕು ಅಂತ ಸಿದ್ದರಾಮಯ್ಯ ವರಿಷ್ಟರಿಗೆ ಹೇಳಿದ್ದಾರೆ.
ಕಾರಣ?ತಾವು ಇಬ್ಬರ ಹೆಸರು ಹೇಳಿದರೆ ಇದಕ್ಕೆ ಕೌಂಟರ್ ಆಗಿ ಡಿ.ಕೆ.ಶಿವಕುಮಾರ್ ಅವರು ಬಿ.ನಾಗೇಂದ್ರ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸೇರ್ಪಡೆಗೆ ಪಟ್ಟು ಹಿಡಿದಿದ್ದಾರೆ.
ಹೀಗೆ ಪಟ್ಟು-ಪ್ರತಿಪಟ್ಟು ಹಾಕುತ್ತಳಳಕಮ ಹೋದರೆ ಅದು ಮುಗಿಯುವುದು ಯಾವಾಗ ಎಂಬುದು ಸಿದ್ದು ಲೆಕ್ಕಾಚಾರ.
ಎಲ್ಲಕ್ಕಿಂತ ಮುಖ್ಯವಾಗಿ ಸಂಪುಟ ವಿಸ್ತರಣೆ ಅಂದರೆ ತಾನೇ ಸಮಸ್ಯೆ?ಅದರ ಬದಲು ಪುನರ್ರಚನೆ ಮಾಡಿದರೆ ಇನ್ನೂ ಒಂದಿಬ್ಬರನ್ನು ಸಂಪುಟದಿಂದ ತೆಗೆದರೆ ನಾಲ್ಕು ಮಂದಿಯನ್ನು ಸೇರಿಸಬಹುದು ಎಂಬುದು ಈ ಲೆಕ್ಕಾಚಾರದ ಭಾಗ.
ಅದರೆ ಹೀಗೆ ಸಂಪುಟದಿಂದ ತೆಗೆಯುವುದಾದರೆ ಯಾರನ್ನು ತೆಗೆಯುವುದು ಎಂಬ ಪ್ರಶ್ನೆ ಬಂದಾಗ ಸಿದ್ದರಾಮಯ್ಯ ಅವರು ವಸತಿ ಸಚಿವ ಜಮೀರ್ ಅಹ್ಮದ್ ಅವರ ಹೆಸರು ಹೇಳಿದ್ದಾರಂತೆ.
ಕುತೂಹಲದ ಸಂಗತಿ ಎಂದರೆ ಸಿದ್ದು ಜತೆ ಹಳಸಿಕೊಂಡ ಸಂಬಂಧವನ್ನು ಜಮೀರ್ ಸರಿಪಡಿಸಿಕೊಂಡಿದ್ದಾರೆ ಎಂಬ ಮಾತುಗಳು ದಟ್ಟವಾಗಿದ್ದವು.
ಸಾಲದೆಮಬಂತೆ ಸಿದ್ದು ಪುತ್ರ ಯತೀಂದ್ರ ಕೂಡಾ ಜಮೀರ್ ಅಹ್ಮದ್ ಜತೆಗೂಡಿ ದಿಲ್ಲಿಗೆ ಹೋಗಿದ್ದಲ್ಲದೆ,ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ:’ಜಮೀರ್ ಅವರ ಬಗ್ಗೆ ಈಗ ತಂದೆಯವರ ತಕರಾರಿಲ್ಲ ಅಂತ ಹೇಳಿ ಬಂದಿದ್ದರು.
ಆದರೆ ಮೂಲಗಳ ಪ್ರಕಾರ,ಜಮೀರ್ ವಿರುದ್ದದ ಸಿದ್ದು ಸಿಟ್ಟು ಇನ್ನೂ ತಣಿದಿಲ್ಲ.ಹೀಗಾಗಿ ಸಂಪುಟದಿಂದ ಜಮೀರ್ ಅಹ್ಮದ್ ಅವರನ್ನು ತೆಗೆಯಲೇಬೇಕು ಅಂತ ವರಿಷ್ಟರಿಗೆ ಸಿಗ್ನಲ್ ರವಾನಿಸಿದ್ದಾರೆ.
ಇದೇ ಮೂಲಗಳ ಪ್ರಕಾರ,ಸಿದ್ದು ಒತ್ತಡಕ್ಕೆ ಮಣಿದಿರುವ ವರಿಷ್ಟರು:’ನೀವು ಮಂತ್ರಿಗಿರಿ ಬಿಟ್ಟು ಪಕ್ಷದ ಕೆಲಸಕ್ಕೆ ಅಣಿಯಾಗಿ.ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ.ಮುಂದಿನ ಚುನಾವಣೆಯಲ್ಲಿ ಗೆದ್ದರೆ ಡಿಸಿಎಂ ಆಗ್ತೀರಂತೆ’ಅಂತ ಜಮೀರ್ ಅಹ್ಮದ್ ಅವರಿಗೆ ಹೇಳಲಿದ್ದಾರೆ.
ಅಂದ ಹಾಗೆ ಜಮೀರ್ ಅಹ್ಮದ್ ಇದನ್ನು ಊಹಿಸದಷ್ಡು ಮುಗ್ದರೇನಲ್ಲ.ಹೀಗಾಗಿ ತಮ್ಮ ಬುಡಕ್ಕೆ ಗಡಪಾರೆ ಬಿದ್ದರೆ ತಿರುಗೇಟು ಹೊಡೆಯಲು ಸಜ್ಜಾಗಿದ್ದಾರೆ.
ಈಗಿರುವ ಮಾಹಿತಿಯ ಪ್ರಕಾರ,ಸಂಪುಟದಿಂದ ಜಮೀರ್ ಅಹ್ಮದ್ ಹೊರಬಿದ್ಮರೆ ರಾಜ್ಯಾದ್ಯಂತ ಮುಸ್ಲಿಂ ಧರ್ಮಗುರುಗಳು ಮತ್ತು ಪ್ರಮುಖರು:’ಅಲ್ಪ ಸಂಖ್ಯಾತರಿಗೆ ಕಾಂಗ್ರೆಸ್ ಕೊಟ್ಟ ಭರವಸೆ ಏನು?ಅದರಲ್ಲಿ ಈಡೇರಿಸಿದ್ದೇನು?ಅಂತ ಲೆಕ್ಕ ಕೇಳುವ ಹೋರಾಟಕ್ಕೆ ಇಳಿಯಲಿದ್ದಾರೆ.
ಇನ್ನು ಈ ಮಧ್ಯೆ ಹಿರಿಯ ನಾಯಕ ಎಂ.ಕೃಷ್ಷಪ್ಪ ಅವರು ಮಂತ್ರಿಗಿರಿಗೆ ಪಟ್ಟು ಹಿಡಿದಿದ್ದು,ಮಂತ್ರಿಗಿರಿ ಕೊಡದಿದ್ದರೆ ನನ್ನ ದಾರಿ ನನಗೆ ಎಂದು ಟಫ್ ಆಗಿ ಹೇಳಿದ್ದಾರೆ,
ಇದರ ಪರಿಣಾಮವಾಗಿ ಮಂತ್ರಿ ಮಂಡಲದಲ್ಲಿರುವ ಮೂವರು ಒಕ್ಕಲಿಗ ಸಚಿವರ ಪೈಕಿ ಒಬ್ಬರು ತ್ಯಾಗಕ್ಕೆ ಅಣಿಯಾಗುವುದು ಅನಿವಾರ್ಯ ಎಂಬುದು ಕಾಂಗ್ರೆಸ್ ಮೂಲಗಳ ಹೇಳಿಕೆ.
ಮುಂದೇನು ಕತೆಯೋ?
ಬಿಕೆ ಮಂತ್ರಿ-ಜಾರ್ಕಿ
ಅಧ್ಯಕ್ಷ?
——————–
ಅಂದ ಹಾಗೆ ಎಐಸಿಸಿಯ ಕಂಪೋಂಡಿನಿಂದ ಹೊಸ ಸುದ್ದಿ ತೇಲಿ ಬರುತ್ತಿದ್ದು,ಅದರ ಪ್ರಕಾರ ಮುಂದಿನ ಮಾರ್ಚ್ ಹೊತ್ತಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅವರನ್ನು ತರಲು ಲಾಬಿ ನಡೆಯುತ್ತಿದೆ.
ಕುತೂಹಲದ ಸಂಗತಿ ಎಂದರೆ ಸತೀಶ್ ಜಸರಕಿಹೊಳಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತರಲು ಕಸರತ್ತು ನಡೆಸುತ್ತಿರುವರು ಸ್ವತ: ಸಿಎಂ ಡಿ.ಕೆ.ಶಿವಕುಮಾರ್.
ಕಾರಣ?ಇವತ್ತು ಕೆಪಿಸಿಸಿ ಅಧ್ಯಕ್ಷರಾಗಿರುವ ಬಿ.ಕೆ.ಹರಿಪ್ರಸಾದ್ ತುಂಬಾ ಟಫ್ ನಾಯಕ.ಪಕ್ಷದ ಅಧ್ಯಕ್ಷರಾಗುತ್ತಿದ್ದಂತೆಯೇ:’ಪಕ್ಷ ಬೇಕಿದ್ರೆ ನನ್ನ ಜತೆ ಬನ್ನಿ.ಅಧಿಕಾರ ಬೇಕು ಅಂದ್ರೆ ಡಿಕೆ ಜತೆ ಹೋಗಿ ಅಂತ ಕಾರ್ಯಕರ್ತರಿಗೆ ಸ್ಟ್ರೈಟ್ ಮೆಸೇಜು ಕೊಟ್ಟವರು ಬಿ.ಕೆ.ಹರಿಪ್ರಸಾದ್.
ಇದೇ ರೀತಿ ಪಕ್ಚದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಮಾರಂಭಕ್ಕೆ ಫಂಡು ಕೊಡಿಸ್ತೀವಿ ಅಂತ ಡಿಕೆಶಿ ಹೇಳಿದ್ರೂ ನೋ,ನೋ ಅದೆಲ್ಲ ಬೇಡ ಅಂದಿದ್ದರು ಹರಿಪ್ರಸಾದ್.
ಹೀಗೆ ಹೆಜ್ಜೆ ಹೆಜ್ಜೆಗೂ ಪಾರ್ಟಿ ಫಸ್ಟ್,ಉಳಿದಿದ್ದು ನೆಕ್ಸ್ಟ್ ಅನ್ನುವಂತೆ ನಡೆದುಕೊಳ್ಳುತ್ತಿರುವ ಬಿ.ಕೆ.ಹರಿಪ್ರಸಾದ್ ತುಂಬಕಾಲ ಈ ಜಾಗದಲ್ಲಿ ಮುಂದುವರಿಯುವುದು ಡಿಕೆ ಗ್ಯಾಂಗಿಗೆ ಬೇಕಾಗಿಲ್ಲ.
ಹೀಗಾಗಿ ಮುಂದಿನ ಮಾರ್ಚ್ ಹೊತ್ತಿಗೆ ಸಂಪುಟವನ್ನು ಪುನರ್ರಚಿಸಬೇಕು,ಐದಾರು ಮಂದಿಯನ್ನು ಮಂತ್ರಿ ಮಂಡಲದಿಂದ ತೆಗೆದು ಬಿಮಕೆ.ಹರಿಪ್ರಸಾದ್ ಸೇರಿದಂತೆ ಹಲವರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದು ಡಿಕೆ ಲೆಕ್ಕಾಚಾರ.
ಈ ರೀತಿ ಬಿ.ಕೆ.ಹರಿಪ್ರಸಾದ್ ಸಂಪುಟದೊಳಕ್ಕೆ ಬಂದರೆ ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಲೋಕೋಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ತಂದು ಕೂರಿಸಬೇಕು ಎಂಬುದು ಅವರ ಲೆಕ್ಕಾಚಾರದ ಭಾಗ.
ಅಂದ ಹಾಗೆ ಇವತ್ತು ಎಂತಹ ಪರಿಸ್ಥಿತಿ ಇದೆ ಎಂದರೆ ತಾವು ಸಿಎಂ ಅಗಲು ಸಪೋರ್ಟು ಮಾಡಿದ ಜಾರಕಿಹೊಳಿ ಅವರ ಕೈಯ್ಯನ್ನು ಡಿಕೆಶಿ ಹಿಡಿಯಲಿಲ್ಲ.ಅತ್ತ ಸಿದ್ದು ಕೂಡಾ ಜಾರಕಿಹೊಳಿ ಅವರನ್ನು ನಂಬುತ್ತಿಲ್ಲ.ಹೀಗಾಗಿ ಜಾರಕಿಹೊಳಿಅವರು ಅತಂತ್ರ ಸ್ತಿತಿಯಲ್ಲಿದ್ದಾರೆ ಎಂಬ ಮಾತುಗಳು ಚಾಲ್ತಿಯಲ್ಲಿವೆ.
ಹೀಗಾಗಿ ಇಂತಹಮಾತುಗಳಿಗೆ ಇತಿಶ್ರೀ ಹಾಡುವುದು,ಜಾರಕಿಹೊಳಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ತಂದು ಅಪವಾದ ಕಳೆದುಕೊಳ್ಳುವುದು ಡಿಕೆ ಬಯಕೆ.
ಹೀಗಾಗಿಯೇ ರಾವು ದಿಲ್ಲಿಗೆ ಹೋದಾಗಲೆಲ್ಲ ಖರ್ಗೆ,ವೇಣುಗೋಪಾಲ್,ಸುರ್ಜೇವಾಲಾ ಅವರ ಬಳಿ ಜಾರಕಿಹೊಳಿ ಪರವಾಗಿ ಮಾತು ಹಾಕುತ್ತಾರೆ ಎಂಬುದು ಮೂಲಗಳ ಹೇಳಿಕೆ.
ಅಂದ ಹಾಗೆ ಹರಿಪ್ರಸಾದ್ ಅವರನ್ನು ಮಂತ್ರಿ ಮಾಡಿ,ಜಾರಕಿಹೊಳಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ತರುವ ಅವರ ಕನಸು ಏನಾಗುತ್ತದೋ ಗೊತ್ತಿಲ್ಲ.ಆದರೆ ದಿಲ್ಲಿ ಲೆವೆಲ್ಲಿನಲ್ಲಿ ಈ ಸುದ್ದಿ ಚೆನ್ನಾಗಿಯೇ ಹರಡಿದೆ.
ಭಿನ್ನರ ಪಡೆ
ರೆಡಿ ಆಗ್ತಿದೆ
————–
ಇಷ್ಟೆಲ್ಲದರ ನಡುವೆ ಕೈ ಪಾಳಯದಿಂದ ಹೊರಬರುತ್ತಿರುವ ಮತ್ತೊಂದು ಸುದ್ದಿ ಎಂದರೆ ಜನವರಿಯ ಹೊತ್ತಿಗೆ ಭಿನ್ನಮತೀಯರ ಪಡೆ ಎದ್ದು ನಿಲ್ಲಲಿದೆ.
ವಾಸ್ತವವಾಗಿ ಕೆ.ಎನ್.ರಾಜಣ್ಣ ಸೇರಿದಂತೆ ಕಾಂಗ್ರೆಸ್ ನ ಕೆಲ ಶಾಸಕರು ಡಿಸೆಂಬರ್ ಹೊತ್ತಿಗೆ ಮೇಲೆದ್ದು ನಿಲ್ಲಲು ಬಯಸಿದ್ದರು.ಕಾರಣ?ಪಕ್ಷದ ನಾಯಕತ್ವದ ಬಗ್ಗೆ ಇರುವ ಅತೃಪ್ತಿ.
ಅಂದ ಹಾಗೆ ಡಿಸೆಂಬರ್ ಎರಡನೇ ತಾರೀಕಿನಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಶುರುವಾಗಲಿದ್ದು,ಈ ಸಂದರ್ಭದಲ್ಲೇ ಸಭೆ ಸೇರಿ ಡಿಸಿಡೆನ್ಸಿ ಆರಂಗೇಟ್ರಂಗೆ ಈ ಶಾಸಕರು ಸಜ್ಜಾಗಿದ್ದರು.
ಆದರೆ ಇತ್ತೀಚೆಗೆ ಬಂದ ಒಂದು ಸಂದೇಶ ಅವರನ್ನು ಮೆತ್ತಗೆ ಮಾಡಿದೆ.ಜನವರಿಯ ಹೊತ್ತಿಗೆ ನೀವು ಬಯಸಿದ ಬೆಳವಣಿಗೆ ನಡೆಯಲಿದೆ.ಅಲ್ಲಿಯವರೆಗೆ ಮೌನವಾಗಿರಿ ಎಂಬುದು ಈ ಸಂದೇಶ.
ಯಾವಾಗ ಈ ಸಂದೇಶ ಬಂತೋ?ಆನಂತರ ಸಡನ್ನು ಬಂಡಾಯದ ಕನಸನ್ನು ಮುಂದಕ್ಕೆ ದೂಡಿರುವ ಈ ಶಾಸಕರು ಈಗ ಪರ್ಯಾಯ ದಾರಿಗಳ ಕಡೆ ನೋಡತೊಡಗಿದ್ದಾರೆ.
ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ಪುತ್ರ ಮೊನ್ನೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದರ ಹಿಂದಿರುವುದು ಇದೇ ಲೆಕ್ಕಾಚಾರ.
ಮೂಲಗಳ ಪ್ರಕಾರ,ತಮ್ಮನ್ನು ಭೇಟಿಯಾದ ಕೆ.ಎನ್.ರಾಜಣ್ಣ ಅವರ ಪುತ್ರನಿಗೆ ಕುಮಾರಸ್ವಾಮಿ ಕೆಲ ಸೂಕ್ಷ್ಮಗಳನ್ನು ಹೇಳಿದ್ದಾರೆ.ಅಷ್ಟೇ ಅಲ್ಲ,ಬ್ರದರ್ ಮುಂದಿನ ಬೆಳವಣಿಗೆಗಳು ಹೇಗೇ ಇರಲಿ.ಅಗತ್ಯ ಬಿದ್ದರೆ ನಾವು ನಿಮ್ಮ ಪರವಾಗಿರುತ್ತೇವೆ ಎಂದಿದ್ದಾರೆ.
ಅರ್ಥಾತ್,ಮುಂದಿನ ದಿನಗಳಲ್ಲಿ ಪಕ್ಷ ತೊರೆದು ಬಂದರೂ ನಿಮಗೆ ಜೆಡಿಎಸ್ ನಲ್ಲಿ ಜಾಗವಿದೆ ಎಂಬುದು ಕುಮಾರಸ್ವಾಮಿ ಅವರ ಸಂದೇಶ.
ಅಂದ ಹಾಗೆ ಹೀಗೆ ಕೆ.ಎನ್.ರಾಜಣ್ಣ ಅವರ ಪುತ್ರನಂತೆ ಕೆಲ ಶಾಸಕರು ಬಿಜೆಪಿ ಜತೆಗೂ ಸಂಪರ್ಕದಲ್ಲಿದ್ದಾರೆ.ಜೆಡಿಎಸ್
ಜತೆಗೂ ಸಂಪರ್ಕದಲ್ಲಿದ್ದಾರೆ.
ಇದೆಲ್ಲದರ ನಡುವೆಯೂ ಅವರ ವಿಶ್ವಾಸವೆಂದರೆ ರಾಜ್ಯ ಕಾಂಗ್ರೆಸ್ ನಲ್ಲಿ ಜನವರಿ ಕ್ರಾಂತಿ ನಡೆಯಲಿದೆ ಎಂಬುದು.
ಅದು ನಿಜ ಆಗುತ್ತದಾ? ಗೊತ್ತಿಲ್ಲ.
ಕುಮಾರಣ್ಣ ಒಬ್ರೇ
ಮಾತಾಡ್ಬೇಡಿ
————
ಇನ್ನು ಕಳೆದ ವಾರ ಬೆಂಗಳೂರಿನಲ್ಲಿ ಸಭೆ ಸೇರಿದ್ದ ಜೆಡಿಎಸ್ ಕೋರ್ ಕಮಿಟಿಯ ಪ್ರಮುಖರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಒಂದು ಸಲಹೆ ನೀಡಿದ್ದಾರಂತೆ.
ಅಂದ ಹಾಗೆ ರಾಜ್ಯ ಸರ್ಕಾರದ ವಿರುದ್ದ ಅದರಲ್ಲೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ದ ನೀವು ಧಾಳಿ ನಡೆಸುಥ್ತಿರುವುದು ಸರಿ.
ಇದೇ ರೀತಿ ಕೆಪಿಎಸ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಹೋರಾಟ ಮಾಡುತ್ತಿರುವುದೂ ಸರಿ.
ಯಾಕೆಂದರೆ ಇಂತಹ ಹೋರಾಟಗಳು ಆಡಳಿತ ಪಕ್ಷದ ಇಮೇಜನ್ನು ಕುಗ್ಗಿಸಿ,ಜೆಡಿಎಸ್ ಶಕ್ತಿಯನ್ನು ಹೆಚ್ಚಿಸುತ್ತವೆ.
ಆದರೆ ಇಂತದ್ದೇ ಹೋರಾಟದ ಮಾದರಿಯಲ್ಲಿ ಹಾಸನ ಜಿಲ್ಲಾದಿಕಾರಿಯ ವಿರುದ್ದ,ಮಂತ್ರಿ ವಿಜಯಾನಂದ ಕಾಶಪ್ಪನವರ್ ಅವರಂತವರ ವಿರುದ್ಧ ಧಾಳಿ ಮಾಡಬಾರದು.
ಇದರ ಬದಲು ನಿಮ್ಮ ಹೋರಾಟ ಮುಖ್ಯಮಂತ್ರಿಗಳ ಲೆವೆಲ್ಲಿನಂತಹ ನಾಯಕರ ವಿರುದ್ದ ಇರಲಿ,ಉಳಿದವಿಷಯಗಳ ಬಗ್ಗೆ ಪಕ್ಷದ ಬೇರೆ ನಾಯಕರು ಮಾತನಾಡಲಿ.ಇಲ್ಲದಿದ್ದರೆ ಎಲ್ಲ ಹೋರಾಟಕ್ಕೂ ಕುಮಾರಸ್ವಾಮಿ ಒಬ್ಬರೇ ಅನಿವಾರ್ಯವಾ?ಎಂಬ ಭಾವನೆ ಬರುತ್ತದೆ ಅಂತ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಬಹುತೇಕ ನಾಯಕರು ಮಾತನಾಡಿದ್ದಾರೆ.ಅಷ್ಟೇ ಅಲ್ಲ,ಕುಮಾರಸ್ವಾಮಿ ಅವರನ್ನು ನೇರವಾಗಿ ಭೇಟಿ ಮಾಡಿ,ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹೇಳಿದ್ದಾರೆ.
ಲಾಸ್ಟ್ ಸಿಪ್
————
ಅಂದ ಹಾಗೆ ಕಾಂಗ್ರೆಸ್ ಪಕ್ಷದಲ್ಲಿ ಅತಂತ್ರ ಭಾವಕ್ಕೆ ಗುರಿಯಾಗಿರುವ ವಸತಿ ಸಚಿವ ಜಮೀರ್ ಅಹ್ಮದ್ ಈಗ ಮಾಜಿ ಪ್ರದಾನಿ ದೇವೇಗೌಡರಿಗೆ ಹತ್ತಿರವಾಗಿದ್ದಾರಂತೆ.
ಈ ಮಧ್ಯೆ ಕುಮಾರಸ್ವಾಮಿಯವರ ಬಗ್ಗೆ ಅವರೇನೇ ಮಾತನಾಡಿರಲಿ,ಅದವರ ರಾಜಕೀಯ ಉಳಿವಿಗಾಗಿ ಎಂಬ ತೀರ್ಮಾನಕ್ಕೆ ಬಂದಿರುವ ದೇವೇಗೌಡರೂ ಜಮೀರ್ ಮಾತುಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಮೂಲಗಳ ಪ್ರಕಾರ,ಜಮೀರ್ ಕಾಂಗ್ರೆಸ್ ಫೀಲ್ಡಿನಲ್ಲಿ ಕೊನೇ ಹಂತದ ಸರ್ಕಸ್ಸು ನಡೆಸುತ್ತಿದ್ದಾರೆ.ಅದು ಯಶಸ್ವಿಯಾದರೆ ಒಕೆ.ಇಲ್ಲದಿದ್ದರೆ ಅವರ ದೃಷ್ಟಿ ಪದ್ಮನಾಭನಗರದ ಕಡೆ ಹೊರಳಲಿದೆ.
ಆರ್.ಟಿ.ವಿಠ್ಠಲಮೂರ್ತಿ


