ಭಾಷಣ ಮಾಡೋಲ್ಲ, ಜನರ ಅಹವಾಲು ಆಲಿಸೋಣ ಎಂದ ಸಚಿವ ಮಧು ಬಂಗಾರಪ್ಪ * ಹೊಸ ನಗರದಲ್ಲಿ ಪ್ರಜಾಸೇವೆ ಆಂದೋಲನ ಸಭೆ * ಸುಮಾರು 180 ಅರ್ಜಿಗಳ ಪರಿಶೀಲನೆ, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚನೆ

ಭಾಷಣ ಮಾಡೋಲ್ಲ, ಜನರ ಅಹವಾಲು ಆಲಿಸೋಣ ಎಂದ ಸಚಿವ ಮಧು ಬಂಗಾರಪ್ಪ

* ಹೊಸ ನಗರದಲ್ಲಿ ಪ್ರಜಾಸೇವೆ ಆಂದೋಲನ ಸಭೆ
* ಸುಮಾರು 180 ಅರ್ಜಿಗಳ ಪರಿಶೀಲನೆ, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚನೆ

ಸಾಗರ – ಹೊಸನಗರ, ನ.21

ಶಿವಮೊಗ್ಗ ಜಿಲ್ಲಾ ಆಡಳಿತ ಮತ್ತು ಹೊಸನಗರ ತಾಲೂಕು ಆಡಳಿತ, ʻಬಾಗಿಲಿಗೆ ಬಂತು ಸರ್ಕಾರ – ಸೇವೆಗೆ ಇರಲಿ ಸಹಕಾರ’ ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಿದ್ದ ಪ್ರಜಾಸೇವೆ ಆಂದೋಲನ ಸಭೆ ಹೊಸನಗರದ ಈಡಿಗರ ಭವನದಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಶ್ರೀ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮ ಆರಂಭಕ್ಕೂ 30 ನಿಮಿಷ ಮುಂಚಿತವಾಗಿಯೇ ಸಭಾ ಸ್ಥಳಕ್ಕೆ ಆಗಮಿಸಿದ ಸಚಿವರು, ಸಾಗರ-ಹೊಸನಗರ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಬೇಳೂರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, “ಇಲ್ಲಿ ನಾವು ಭಾಷಣ ಮಾಡುವ ಬದಲು ಜನರ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳಿಗೆ ಪರಿಹಾರ ಒದಗಿಸೋಣ. ಕಾರ್ಯಕ್ರಮವನ್ನು ಕೂಡಲೇ ಆರಂಭಿಸಿ ಜನರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡೋಣ. ಪ್ರಜಾಸೇವೆ ಉದ್ದೇಶವನ್ನು ನೀವು ಹೇಳಿ” ಎಂದು ವೇದಿಕೆ ಭಾಷಣವನ್ನು ಶಾಸಕರಿಗೆ ಬಿಟ್ಟುಕೊಟ್ಟರು.

ವಯೋವೃದ್ಧರು, ವಿಕಲಚೇತನರು ಹಾಗೂ ಮಕ್ಕಳಿಗೆ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ನೇರವಾಗಿ ನಮ್ಮ ಬಳಿ ಬಂದು ತಮ್ಮ ಮನವಿಗಳನ್ನು ಸಲ್ಲಿಸಬಹುದು ಎಂದು ತಿಳಿಸುವ ಮೂಲಕ ಜನಸೇವೆಯ ಕಾಳಜಿ ಪ್ರದರ್ಶಿಸಿದರು.

ಜನರ ಅಹವಾಲುಗಳನ್ನು ಆಲಿಸಲು ವಿಶೇಷ ಆಸಕ್ತಿ ವಹಿಸಿದ ಸಚಿವರು, 2 ಗಂಟೆ 30 ನಿಮಿಷಗಳ ಕಾಲ ಸಭೆಯಲ್ಲಿ ಕುಳಿತು ಒಟ್ಟು 180 ಅರ್ಜಿಗಳನ್ನು ಪರಿಶೀಲಿಸಿದರು. ಕೆಲವು ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರೆ, ಇನ್ನು ಕೆಲವು ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸಚಿವ ಮಧು ಬಂಗಾರಪ್ಪ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ಜಿಲ್ಲೆಗೆ ಅವರ ಸಹಕಾರ ದೊಡ್ಡದಾಗಿದೆ. ಪ್ರಜಾಸೇವೆ ಕಾರ್ಯಕ್ರಮವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ಒಂದೇ ವೇದಿಕೆಯಲ್ಲಿ ಲಭ್ಯವಿದ್ದು, ಜನರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ತಿಳಿಸಬೇಕು. ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ಆರ್.ಎಂ. ಮಂಜುನಾಥಗೌಡ, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ, ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಅಪರ ಜಿಲ್ಲಾಧಿಕಾರಿ ಅಭಿಷೇಕ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ-1 ಶ್ರೀಮತಿ ಸುಜಾತ ಕೆ.ಆರ್., ಉಪ ಕಾರ್ಯದರ್ಶಿ-2 ಅನ್ನಪೂರ್ಣ ಎಂ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.