ಗಮನ ಸೆಳೆದ ನವೋದಯ ಶಾಲೆ ಉಚಿತ ತರಬೇತಿ ಶಿಬಿರದ ಮಕ್ಕಳ ಶೈಕ್ಷಣಿಕ ಪ್ರವಾಸ ಮತ್ತು ಸಂವಾದ”
“ನವೋದಯ ಶಾಲೆ ಉಚಿತ ತರಬೇತಿ ಶಿಬಿರದ ಮಕ್ಕಳ ಶೈಕ್ಷಣಿಕ ಪ್ರವಾಸ ಮತ್ತು ಸಂವಾದ”
ಶಿವಮೊಗ್ಗ ಜಿಲ್ಲೆಮಟ್ಟದ ವಿವಿಧ ಬ್ಲಾಕ್‍ಗಳ ಗ್ರಾಮೀಣ ಭಾಗದ 5ನೇ ತರಗತಿಯ 130 ವಿದ್ಯಾರ್ಥಿಗಳು ಪಿಎಂ ಶ್ರೀ ನವೋದಯ ವಿದ್ಯಾಲಯಕ್ಕೆ ಪ್ರವಾಸ ಕೈಗೊಂಡರು.
ಪಿಎಂ ಶ್ರೀ ನವೋದಯ ಶಿವಮೊಗ್ಗ ಹಾಗೂ ಹಳೆ ವಿದ್ಯಾರ್ಥಿಗಳ – ಮಿಲನ ಅಲ್ಯೂಮ್ನಿ ಅಸೋಸಿಯೇಷನ್‍ನ ಮಾರ್ಗದರ್ಶನದಲ್ಲಿ ಈ ಪ್ರವಾಸ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಕ್ಯಾಂಪಸ್‍ನ ನೋಟ, ಶಾಲೆಯ ವ್ಯವಸ್ಥೆಗಳು ಮತ್ತು ಸೌಲಭ್ಯಗಳನ್ನು ಪರಿಶೀಲಿಸಿದರು. ಅತ್ಯುತ್ತಮ ಶಿಕ್ಷಣದ ಕೇಂದ್ರ ಬಿಂದುವಾದ ಶಾಲೆಯ ಅನುಭವ ಪಡೆದು, ಅಲ್ಲಿನ ಮಕ್ಕಳ ಜೊತೆ ಪರೀಕ್ಷೆಯ ತೆಯ್ಯಾರಿ ಬಗ್ಗೆ ಸಂವಾದ ನಡೆಸಿದರು.
ಈ ಪ್ರವಾಸ ಮತ್ತು ಸಂವಾದದ ಕಾರ್ಯಕ್ರಮದಲ್ಲಿ ಪ್ರಸ್ತುತ ಪ್ರಭಾರಿ ಪ್ರಾಚಾರ್ಯರಾದ ಜಾನ್ಸನ್ ಪಿ ಜೇಮ್ಸ್ ಮಾತನಾಡಿ “ಪಿ ಎಂ ಶ್ರೀ ನವೋದಯ ಶಾಲೆ, ಶಿವಮೊಗ್ಗ ಜಿಲ್ಲೆಯ ಅತ್ಯಂತ ಉತ್ತಮ ಮತ್ತು ಶ್ರೇಷ್ಠ ಶಾಲೆ. ಇಲ್ಲಿನ ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕು ರೂಪಿಸಿಕೊಂಡಿದ್ದಾರೆ. ನೀವೆಲ್ಲರು ಪರೀಕ್ಷೆಗೆ ಉತ್ತಮ ತೆಯ್ಯಾರಿ ನಡೆಸಿ ಮತ್ತು ನಮ್ಮ ನವೋದಯ ಶಾಲೆಗೆ ತೇರ್ಗಡೆ ಆಗಬೇಕು” ಎಂದರು.
ನವೋದಯ ಮತ್ತು ಮೊರಾರ್ಜಿ ಉಚಿತ ತರಬೇತಿ ಶಿಬಿರದ ಸಂಸ್ಥಾಪಕರಾದ – ಪ್ರಕಾಶ್ ಜೋಯ್ಸ್ ಮಕ್ಕಳನ್ನು ಕುರಿತು “ಉಚಿತ ನವೋದಯ ತರಬೇತಿ ಶಿಬಿರದ ಕಲ್ಪನೆ – ಗ್ರಾಮೀಣ ಭಾಗದ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು, ಮಕ್ಕಳ ಪ್ರೇರಣೆಗೆ ಇಂತಹ ಒಂದು ಪ್ರವಾಸ ಆಯೋಜಿಸಿದ್ದೇವೆ, ಇದರ ಸಂಪೂರ್ಣ ಉಪಯೋಗ ಮಕ್ಕಳು ಪಡೆದು, ನವೋದಯ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಬೇಕು” ಎಂದು ಆಶಿಸಿದರು.
ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ, ನವೋದಯ ಪರೀಕ್ಷೆ ಬಗ್ಗೆ ತೆಯ್ಯಾರಿ, ಸಮಯ ನಿರ್ವಹಣೆ, ಮಾನಸಿಕ ಸಾಮರ್ಥ್ಯ, ಗಣಿತ, ಕನ್ನಡ ವಿಷಯಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಿ ನವೋದಯಶಾಲೆಯ 6ನೇ ತರಗತಿ ಮಕ್ಕಳಿಂದ ಪ್ರತ್ಯುತ್ತರ ಪಡೆಯಲಾಯಿತು.
ಈ ಕಾರ್ಯಕ್ರಮದಲ್ಲಿ ಹಳೆ ನವೋದಯ ವಿದ್ಯಾರ್ಥಿ ಬಳಗ ಹಾಗೂ ಶಿಬಿರದ ಸಹ ಸಂಸ್ಥಾಪರಾದ ಪುನೀತ್, ಡಾ. ಕೆ ಎಂ ಸುನಿಲ್ ಕುಮಾರ್, ಎಂ ಪಿ ನವೀನ್ ಕುಮಾರ್, ಡಾ. ಕೆ ಪಿ ಸುನಿಲ್ ಕುಮಾರ್, ಶಿವಮೂರ್ತಿ ಮತ್ತು ಶಿಬಿರದ ಶಿಕ್ಷಕರಾದ ರಂಗನಾಥ್, ಶಿವಕುಮಾರ್, ಇಮ್ರಾನ್, ಪ್ರದೀಪ್, ಪೂರ್ಣೇಶ್, ಲಕ್ಷ್ಮೀ, ಆಶಾ, ಶ್ರೀಧರ್ ಕವಿತಾ ಜೋಯ್ಸ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪಿ ಎಂ ಶ್ರೀ ನವೋದಯ ಶಿವಮೊಗ್ಗ ಶಾಲೆಯ ಸಾಧನೆಯನ್ನು ಶ್ಲಾಘಿಸಿ, ಪ್ರಾಚಾರ್ಯರಾದ ಜಾನ್ಸನ್ ಅವರನ್ನು ಸನ್ಮಾನಿಸಲಾಯಿತು.
ಈ ಶೈಕ್ಷಣಿಕ ಪ್ರವಾಸವನ್ನು ಹಳೆ ವಿದ್ಯಾರ್ಥಿಗಳ ಬಳಗ ಮಿಲನ ಮತ್ತು ನವೋದಯ ಮತ್ತು ಮೊರಾರ್ಜಿ – ಉಚಿತ ತರಬೇತಿ ಶಿಬಿರ ಸಂಸ್ಥೆ ಕಡೆಯಿಂದ ಹಮ್ಮಿಕೊಳ್ಳಲಾಗಿತ್ತು.
ಈ ಸಂಸ್ಥೆಯಿಂದ ಕಳೆದ ಮೂರು ವರ್ಷಗಳಿಂದ 209 ಮಕ್ಕಳು ಉಚಿತ ತರಬೇತಿ ಪಡೆದು, ಒಟ್ಟು 6 ಮಕ್ಕಳು ನವೋದಯ ಶಾಲೆಗೆ ಮತ್ತು 54 ಮಕ್ಕಳು ಮೊರಾರ್ಜಿ ವಸತಿ ಶಾಲೆಗಳಿಗೆ ತೇರ್ಗಡೆ ಆಗಿರುತ್ತಾರೆ. ಖುಷಿಯಾದ ವಿಚಾರ ಏನಂದರೆ… ಈ ಸಂಸ್ಥೆಯಿಂದ ಗ್ರಾಮೀಣ ಭಾಗದ ಮಕ್ಕಳು 1.68 ಕೋಟಿ ರೂಪಾಯಿ ಮೌಲ್ಯದ, ಶೈಕ್ಷಣಿಕ ಉಪಯೋಗ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಪಡೆದುಕೊಂಡಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಈ ಸಂಸ್ಥೆ ಹುಂಚ, ಕೋಣಂದೂರು ಮತ್ತು ಶಿಕಾರಿಪುರದ ನೆಲವಾಗಿಲು ಗ್ರಾಮಗಳಲ್ಲೂ ಕಾರ್ಯ ನಡೆಸುತ್ತಿದೆ.
ಈ ಕಾರ್ಯಕ್ರಮವು ಮಕ್ಕಳಲ್ಲಿ ತಮ್ಮ ಗುರಿಯನ್ನು ಸಾಧಿಸಲು ಮತ್ತಷ್ಟು ಪ್ರೇರಣೆ ನೀಡಿ, ನವೋದಯ ಶಾಲೆಗಳ ವೈಶಿಷ್ಟ್ಯಗಳನ್ನು ಕಂಡು ಕಲಿಯುವ ಒಂದು ಅವಕಾಶ ಮತ್ತು ವೇದಿಕೆ ಮಾದರಿಯಾಯಿತು.