ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀಜಿ ಪುಣ್ಯಸ್ಮರಣೆ; ಗಾಂಧಿ ಪ್ರಭಾವಕ್ಕೆ ಒಳಗಾಗೋಣ; ಆರ್.ಪ್ರಸನ್ನಕುಮಾರ್

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀಜಿ ಪುಣ್ಯಸ್ಮರಣೆ;
ಗಾಂಧಿ ಪ್ರಭಾವಕ್ಕೆ ಒಳಗಾಗೋಣ; ಆರ್.ಪ್ರಸನ್ನಕುಮಾರ್

ಶಿವಮೊಗ್ಗ; ಅಹಿಂಸೆಯ ಮೂಲಕ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾತ್ಮ ಗಾಂಧಿಯವರು ಅಸಂಖ್ಯಾತ ಜೀವಗಳನ್ನು ಉಳಿಸುವ ಮೂಲಕ ಜಗತ್ತೇ ಕೊಂಡಾಡುವಂತೆ ನಡೆದುಕೊಂಡರು. ಆದರೆ, ಬಿಜೆಪಿಯವರು ಇಂಥ ಮಹಾತ್ಮ ಗಾಂಧಿಯನ್ನು ಕೊಂದ ಘೋಡ್ಸೆಯ ದೇವಸ್ಥಾನವನ್ನು ಕಟ್ಟಿ ಸಂಭ್ರಮಿಸುತ್ತಾರೆ. ಸಾವರ್ಕರ್ ಎಂದು ಕುಣಿಯುತ್ತಾರೆ. ಆದರೆ, ನಾವು ಗಾಂಧಿ ಮಾರ್ಗದಲ್ಲಿ ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಸಾಗಬೇಕಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಆರ್.ಪ್ರಸನ್ನಕುಮಾರ್ ಹೇಳಿದರು.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಇಂದು ಬೆಳಿಗ್ಗೆ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಇವತ್ತು ಗಾಂಧೀಜಿ ಹತ್ಯೆಯಾದ ದಿನ. ಭಾರತದ ಸ್ವಾತಂತ್ರ್ಯದಲ್ಲಿ ಅವರ ಪಾತ್ರ ಮಹತ್ತರವಾದುದು. ಅವರು ಅಹಿಂಸೆಯ ಮಾರ್ಗ ತುಳಿಯದಿದ್ದಿದ್ದರೆ ಲಕ್ಷಾಂತರ ಭಾರತೀಯರ ಮಾರಣ ಹೋಮ ನಡೆದುಹೋಗುತ್ತಿತ್ತು. ಗಾಂಧೀಜಿಯವರ ಜೀವನವೇ ಒಂದು ಮಹಾಪಾಠ. ಆ ಪಾಠದ ಪ್ರಭಾವಕ್ಕೆ ನಾವು ಒಳಗಾದರೆ ಸಾಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇಂಥ ಮಹಾತ್ಮ ಗಾಂಧೀಜಿಯನ್ನು ಜಗತ್ತೇ ಕೊಂಡಾಡುವ ಸಂದರ್ಭದಲ್ಲಿ ಬಿಜೆಪಿ ಮನೋಸ್ಥಿತಿಯ ನಾಥೂರಾಮ್ ಘೋಡ್ಸೆ ಗಾಂಧೀಜಿಯನ್ನು ಕೊಂದು ಸಾವರ್ಕರ್ ಮಾರ್ಗದರ್ಶನದಲ್ಲಿ ಮೆರೆದಾಡುತ್ತಾನೆ. ಇಂಥ ಘೋಡ್ಸೆಯ ದೇವಸ್ಥಾನವನ್ನು ಕಟ್ಟಿ ಬಿಜೆಪಿಯವರು ಸಂಭ್ರಮಿಸುತ್ತಿರುವುದು ದುರಂತ. ನಾವು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಹೆಸರಿನಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದೆವು. ೧೯೨೪ರ ಡಿಸೆಂಬರ್ ೨೬ ಮತ್ತು ೨೭ರಂದು ಬೆಳಗಾವಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧಿವೇಶನದ ಅಧ್ಯಕ್ಷರಾಗಿ ಮೊದಲ ಬಾರಿಗೆ ಹಾಗೂ ಅದೇ ಕೊನೆ ಬಾರಿಗೆ ಮಹಾತ್ಮ ಗಾಂಧೀಯವರೇ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಕರ್ನಾಟಕದ ಮಟ್ಟಿಗೆ ಅದೊಂದು ಅಪರೂಪದ ಕಾರ್ಯಕ್ರಮ. ಆ ಸಂದರ್ಭ ಈಗ ನೂರು ವರ್ಷದ ಸಂಭ್ರಮದಲ್ಲಿದೆ. ಖುಷಿಯ ವಿಚಾರವೆಂದರೆ, ನಮ್ಮ ಕರ್ನಾಟಕದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಇದ್ದಾರೆ. ಅವರ ನೇತೃತ್ವದಲ್ಲಿ ನೆನಪಿನ ನೂರು ವರ್ಷ ಸಂಭ್ರಮಿಸಿದ್ದೇವೆ. ಗಾಂಧಿಯ ಮಾರ್ಗದಲ್ಲಿಯೇ ನಡೆಯಲು ಮತ್ತೆ ಮತ್ತೆ ಪ್ರಭಾವಿತರಾಗಿದ್ದೇವೆ ಎಂದರು.

ಜಿಲ್ಲಾ ಪಂಚಾಯತ್ ಮಾಜಿಅಧ್ಯಕ್ಷ ಕಲಗೋಡು ರತ್ನಾಕರ್, ಜಿಲ್ಲಾಪ್ರಧಾನ ಕಾರ್ಯದರ್ಶಿ ಎಸ್.ಟಿ.ಹಾಲಪ್ಪ, ಎಸ್ಸಿ ವಿಭಾಗದ ಅಧ್ಯಕ್ಷ ಶಿವಣ್ಣ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಶ, ಜಿಲ್ಲಾ ಪ್ರಧಾನ ಕಾರ್‍ಯದರ್ಶಿ ಯು.ಶಿವಾನಂದ್, ಶ್ರೀಮತಿ ವಿಜಯಲಕ್ಷ್ಮೀ ಪಾಟೀಲ್, ಶಿ.ಜು.ಪಾಶ, ಅಫ್ರೀದಿ, ಯು.ಕೆ.ಪ್ರಕಾಶ, ಸ್ಟೆಲ್ಲಾ ಮಾರ್ಟಿನ್, ಮಾಜಿ ಕೌನ್ಸಿಲರ್ ಶಮೀಮ್ ಬಾನು ಸೇರಿದಂತೆ ಇನ್ನಿತರರಿದ್ದರು.