ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಇಂದು ಬೆಳಗಿನ ಜಾವ ನಿಧನ*ಅನಾರೋಗ್ಯದಿಂದ ಜಾನಪದ ಕೋಗಿಲೆ ವಿಧಿವಶ

*ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಇಂದು ಬೆಳಗಿನ ಜಾವ ನಿಧನ*

ಅನಾರೋಗ್ಯದಿಂದ ಜಾನಪದ ಕೋಗಿಲೆ ವಿಧಿವಶ

ಹಾಡುಹಕ್ಕಿ, ಪದ್ಮಶ್ರೀ‌ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ (Sukri Bommagowda) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ 88 ವರ್ಷದ ಸುಕ್ರಜ್ಜಿ ಇಂದು (ಫೆಬ್ರವರಿ 13) ಮುಂಜಾನೆ 3.30ಕ್ಕೆ ಕೊನೆಯುಸಿರೆಳೆದಿದ್ದಾರೆ. ಸುಕ್ರಜ್ಜಿ ಎಂದೇ ಖ್ಯಾತಿ ಪಡೆದಿದ್ದ ಅವರು, ಕೆಲವು ತಿಂಗಳುಗಳಿಂದ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ‌ ತಾಲೂಕಿನ ಬಡಿಗೇರಿ ಗ್ರಾಮದ ನಿವಾಸಿ ಆಗಿದ್ದರು. ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಜನಾಂಗದಲ್ಲಿ ಜನಿಸಿದ್ದ ಸುಕ್ರಿ ಬೊಮ್ಮ ಗೌಡ ಅವರನ್ನು ಜಾನಪದ ಕೋಗಿಲೆ ಅಂತಲೂ ಕರೆಯಲಾಗುತ್ತಿತ್ತು. ಆದ್ರೆ, ಜಾನಪದ ಕೋಗಿಲೆ ತನ್ನ ಹಾಡು ನಿಲ್ಲಿಸಿದೆ.

ಸುಕ್ರಿ ಬೊಮ್ಮಗೌಡ ಬಾಲ್ಯದಲ್ಲಿದ್ದಾಗ ತಮ್ಮ ತಾಯಿ ಮೂಲಕ ಜಾನಪದ ಹಾಡುಗಳನ್ನು ಕಲಿತಿದ್ದರು. ಜಾನಪದ ಹಾಡು, ಹಾಲಕ್ಕಿ ಒಕ್ಕಲಿಗ ಬುಡಕಟ್ಟಿನ ಸಾಂಪ್ರದಾಯಿಕ ಸಂಗೀತ ಹಾಡುಗಳನ್ನು ಸಂರಕ್ಷಿಸಿಕೊಂಡು ಹೋಗುವಲ್ಲಿ ಶ್ರಮಿಸಿದ್ದರು. ಹಾಡುಗಳು ಮಾತ್ರವಲ್ಲದೇ ವಿವಿಧ ಸಾಮಾಜಿಕ ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿದ್ದರು. ಇತ್ತೀಚೆಗೆ ಶಿರೂರಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತಕ್ಕೆ ಮರುಗಿದ್ದರು.

ಬುಡಕಟ್ಟು ಜನಾಂಗವಾದ ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ತಮಗೆ ನೀಡಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡಲು ಜನಪದ ಕೋಗಿಲೆ ಸುಕ್ರಿ ಬೊಮ್ಮಗೌಡ ನಿರ್ಧರಿಸಿದ್ದರು. ಹಾಗೂ ತಮ್ಮ ಜನಾಂಗದ ಹಕ್ಕಿಗಾಗಿ ವಿಧಾನಸೌಧದಲ್ಲಿ ಪ್ರತಿಭಟನೆ ಕೂರುವ ಎಚ್ಚರಿಕೆಯನ್ನು ಕೂಡ ನೀಡಿದ್ದರು. ಇದೀಗ ಹಾಲಕ್ಕಿ ಸಮುದಾಯ ತುಳಸಿ ಗೌಡ ಬೆನ್ನಲ್ಲೇ ಇದೀಗ ಸುಕ್ರಿ ಬೊಮ್ಮಗೌಡ ಅವರನ್ನೂ ಸಹ ಕಳೆದುಕೊಂಡಿದೆ.