ಮತ್ತೊಂದು ಹೊಸ ವೈರಸ್! 48 ಗಂಟೆಗಳಲ್ಲಿ 50 ಕ್ಕೂ ಹೆಚ್ಚು ಮರಣ* *ಏನಿದು ಕಾಂಗೋ ವೈರಸ್?!*

*ಮತ್ತೊಂದು ಹೊಸ ವೈರಸ್! 48 ಗಂಟೆಗಳಲ್ಲಿ 50 ಕ್ಕೂ ಹೆಚ್ಚು ಮರಣ*

*ಏನಿದು ಕಾಂಗೋ ವೈರಸ್?!*

ಕರೋನಾದಂತಹ ಭಯಾನಕ ರೋಗ ಪೂರ್ತಿ ಜಗತ್ತನ್ನೇ ಭಯಭೀತರನ್ನಾಗಿ ಮಾಡಿದ್ದು ಸುಳ್ಳಲ್ಲ. ಆದರೆ ಅವುಗಳ ನಂತರ ಹಲವಾರು ರೀತಿಯ ಸೋಂಕುಗಳು ಬಂದರೂ ಅದರಷ್ಟು ಭಯಾನಕವಾಗಿರಲಿಲ್ಲ. ಆದರೆ ಇದೀಗ ಮತ್ತೊಂದು ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳುತ್ತಿದ್ದು ಜನರ ನಿದ್ದೆ ಗೆಡಿಸಲು ಸಜ್ಜಾದಂತಿದೆ. ಕಳೆದ 48 ಗಂಟೆಗಳಲ್ಲಿ 50ಕ್ಕೂ ಹೆಚ್ಚು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ವೈದ್ಯರು ಈ ರೋಗದ ಕುರಿತು ಯಾವುದೇ ರೀತಿಯ ಮಾಹಿತಿಯನ್ನು ನೀಡದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಸದ್ಯ ಈ ಅಪರೂಪದ, ಭಯಾನಕ ವೈರಸ್ ಪಶ್ಚಿಮ ಕಾಂಗೋದಲ್ಲಿ (Congo Virus) ಪತ್ತೆಯಾಗಿದ್ದು ಐದು ವಾರಗಳ ಹಿಂದೆ ಬಾವಲಿ ತಿಂದ ಮೂವರು ಮಕ್ಕಳಲ್ಲಿ ಈ ಸೋಂಕು ಮೊದಲು ಕಂಡು ಬಂದಿದೆ. ಅದರ ನಂತರ, ಇದು ಬಹಳ ಬೇಗ ಹಲವಾರು ಮಂದಿಗೆ ಹರಡಿದ್ದು ಅವರಲ್ಲಿ 50 ಕ್ಕೂ ಹೆಚ್ಚು ಜನರು ಈಗಾಗಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಹಾಗಾದರೆ ಈ ರೋಗದ ಲಕ್ಷಣಗಳೇನು? ಯಾರಲ್ಲಿ ಕಂಡು ಬರುತ್ತದೆ?

*ರೋಗದ ಲಕ್ಷಣಗಳೇನು?*
ಜ್ವರ
ವಾಂತಿ
ಆಂತರಿಕ ರಕ್ತಸ್ರಾವ

ಈ ರೋಗಲಕ್ಷಣಗಳು ಪ್ರಾರಂಭವಾದ 48 ಗಂಟೆಗಳ ಒಳಗೆ ಸಾವು ಸಂಭವಿಸಿದೆ ಎಂದು ಬಿಕೊರೊ ಆಸ್ಪತ್ರೆಯ ನಿರ್ದೇಶಕ ಸೆರ್ಜ್ ಎನ್ಗ್ಲೆಬಾಟೊ ಹೇಳಿದ್ದಾರೆ. ಸಾಮಾನ್ಯವಾಗಿ ಈ “ರಕ್ತಸ್ರಾವ ಜ್ವರ”ದ ರೋಗಲಕ್ಷಣಗಳು ಎಬೋಲಾ, ಡೆಂಗ್ಯೂ, ಮಾರ್ಬರ್ಗ್ ಮತ್ತು ಹಳದಿ ಜ್ವರದಂತಹ ಮಾರಣಾಂತಿಕ ವೈರಸ್ಗಳೊಂದಿಗೆ ಸಂಬಂಧ ಹೊಂದಿವೆ. ಆದರೆ ಇಲ್ಲಿಯವರೆಗೆ ಸಂಗ್ರಹಿಸಿದ ಒಂದು ಡಜನ್ಗೂ ಹೆಚ್ಚು ಮಾದರಿಗಳ ಪರೀಕ್ಷೆಗಳಲ್ಲಿ ಯಾವುದೂ ದೃಢಪಟ್ಟಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ರೋಗದ ಹರಡುವಿಕೆ ಜನವರಿ 21 ರಂದು ಪ್ರಾರಂಭವಾಗಿದ್ದು ಇಲ್ಲಿಯವರೆಗೆ, 419 ಪ್ರಕರಣಗಳು ಬೆಳಕಿಗೆ ಬಂದಿದ್ದು 53 ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೊಲೊಕೊ ಗ್ರಾಮದಲ್ಲಿ ಬಾವಲಿ ತಿಂದ 48 ಗಂಟೆಗಳಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ ನಂತರ ಈ ರೋಗ ಕಾಣಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕಾ ಕಚೇರಿ ತಿಳಿಸಿದೆ. ಬಳಿಕ ಬೊಮೇಟ್ ಗ್ರಾಮದಲ್ಲಿ ಈ ನಿಗೂಢ ಕಾಯಿಲೆ ಮತ್ತಷ್ಟು ಹರಡಿದ ಬೆನ್ನಲ್ಲೇ 13 ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಕಾಂಗೋ ರಾಜಧಾನಿ ಕಿನ್ಶಾಸಾದಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಬಯೋಮೆಡಿಕಲ್ ರಿಸರ್ಚ್ಗೆ ಕಳುಹಿಸಲಾಗಿದೆ ಎಂದು ಡಬ್ಲ್ಯುಎಚ್ಒ ತಿಳಿಸಿದೆ. ಸಾಮಾನ್ಯ ರಕ್ತಸ್ರಾವ ಜ್ವರ ಕಾಯಿಲೆಗಳಿಗೆ ಎಲ್ಲಾ ಮಾದರಿಗಳು ನಕಾರಾತ್ಮಕವೆಂದು ದೃಢಪಡಿಸಲಾಗಿದ್ದರೂ ಕೂಡ ಕೆಲವರದ್ದು ಮಲೇರಿಯಾ ಪಾಸಿಟಿವ್ ಎಂದು ವರದಿಯಾಗಿದೆ. ಆದರೆ ವಿಜ್ಞಾನಿಗಳು ರೋಗದ ಹೆಸರು ಅಥವಾ ವೈರಸ್ನ ಹೆಸರನ್ನು ಇನ್ನೂ ಕಂಡುಹಿಡಿದಿಲ್ಲ. ಆದರೆ ಇದನ್ನು ತಡೆಯದಿದ್ದರೆ ಬಹುಶಃ ಈ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಆರೋಗ್ಯ ತಜ್ಞರು ಹೇಳಿದ್ದಾರೆ.