ಫೆ. 27ರಂದು ಪೋದಾರ್ ಶಾಲೆ ಮಕ್ಕಳ *ಬುಗುರಿ* ಪುಸ್ತಕ  ಬಿಡುಗಡೆ 39 ವಿದ್ಯಾರ್ಥಿಗಳ ಅನುಭವ ಕಥನ ಕನ್ನಡದಲ್ಲಿ… ಭಿನ್ನ ಭಿನ್ನ ಅನುಭವಗಳ ವಿದ್ಯಾರ್ಥಿಗಳ ರಜೆಯ ರಸಾಯನ ಈ ಪುಸ್ತಕದಲ್ಲಿದೆ…

ಫೆ. 27ರಂದು ಪೋದಾರ್ ಶಾಲೆ ಮಕ್ಕಳ *ಬುಗುರಿ* ಪುಸ್ತಕ  ಬಿಡುಗಡೆ

39 ವಿದ್ಯಾರ್ಥಿಗಳ ಅನುಭವ ಕಥನ ಕನ್ನಡದಲ್ಲಿ…

ಭಿನ್ನ ಭಿನ್ನ ಅನುಭವಗಳ ವಿದ್ಯಾರ್ಥಿಗಳ ರಜೆಯ ರಸಾಯನ ಈ ಪುಸ್ತಕದಲ್ಲಿದೆ…

ಶಿವಮೊಗ್ಗದ ಪೋದಾರ್ ಶಾಲೆಯ ಪ್ರೌಢಶಾಲಾ ಮಕ್ಕಳು ಬರೆದ ಅನುಭವ ಕಥನದ ಪುಸ್ತಕವಾದ *ಬುಗುರಿ* -ರಜೆಯ ರಾಸಾಯನ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವನ್ನು ಫೆ. ೨೭ರಂದು ಸಂಜೆ ೪ ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲ ಸುಖೇಶ್ ಶೇರಿಗಾರ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದಕ್ಕಾಗಿ ಶಾಲೆಯಲ್ಲಿ ಹತ್ತು ಹಲವು ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ರೀತಿಯ ಹತ್ತು ಹಲವು ಕಾರ್ಯಗಳ ಮಧ್ಯೆ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವುದಕ್ಕಾಗಿ ರಜಾ ದಿನದ ಅನುಭವದ ಲೇಖನ ಬರೆಯಲು ಶಾಲೆಯ ಕನ್ನಡ ಶಿಕ್ಷಕರಾದ ಶ್ರೀಧರ್ ಭಟ್ ಪ್ರೋತ್ಸಾಹಿಸಿದ್ದ ಪರಿಣಾಮವೇ ಬುಗುರಿ ಎಂಬ ಹೊತ್ತಿಗೆ ರೂಪ ತಾಳಿದೆ ಎಂದರು.

ಸಿಕ್ಕ ಅವಕಾಶಕ್ಕೆ ತಕ್ಕ ಪ್ರೋತ್ಸಾಹ ದೊರೆತರೆ ಏನನ್ನಾದರೂ ಮಾಡಬಲ್ಲೆವು ಎಂಬುದನ್ನು ಸಾಹಿತ್ಯಾತ್ಮಕವಾಗಿ ಮಕ್ಕಳು ಮಾಡಿ ತೋರಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ರಜಾದಿನದಲ್ಲಿ ತಾವು ಪಡೆದ ಅನುಭವ, ನೋಡಿದ ಸನ್ನಿವೇಶ, ಕಲಿತ ಸಂಗತಿ ಇವುಗಳನ್ನೆಲ್ಲಾ ಅಕ್ಷರ ರೂಪಕ್ಕೆ ಇಳಿಸಿ ಬಿಡಿ ಲೇಖನಗಳನ್ನು ಬರೆದಿದ್ದಾರೆ. ಈ ಪುಸ್ತಕ ಈಗ ಬಿಡುಗಡೆಗೆ ಸಿದ್ಧವಾಗಿದೆ ಎಂದರು.

ಶಿಕ್ಷಕ ಶ್ರೀಧರ್ ನಿರೂಪಣೆ ಮಾಡಿದ್ದು, ೩೯ ಲೇಖನಗಳನ್ನು ಒಳಗೊಂಡ ಈ ಪುಸ್ತಕ ಸುಮಾರು ೩೭೫ ಪುಟಗಳನ್ನು ಹೊಂದಿದೆ. ಈ ಪುಸ್ತಕದ ಬೆಲೆ ೪೦೦ ರೂ. ಇದ್ದು, ಈ ಪುಸ್ತಕವನ್ನು ಹೊಸಪೇಟೆ ಯಾಜಿ ಪ್ರಕಾಶನದವರು ಪ್ರಕಟಿಸಿದ್ದು, ಪೋಷಕರು, ದಾನಿಗಳ ಸಹಾಯ ಸಹಕಾರದೊಂದಿಗೆ ಈ ಗ್ರಂಥವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಈ ಕಾರ್ಯಕ್ರಮದ ಅಂಗವಾಗಿ ಶಾಲೆಯ ಮಕ್ಕಳಿಂದ ಕಾಳಿಂಗ ಗರ್ವಹರಣ ಹಾಗೂ ಶಿಕ್ಷಕಿಯರಿಂದ ಪ್ರಕೃತಿ ಪೂಜೆ ಎಂಬ ಯಕ್ಷಗಾನ ನಡೆಯಲಿದೆ ಎಂದರು.

ಈ ಗ್ರಂಥಕ್ಕೆ ಡಾ. ಗುರುರಾಜ ಕರಜಗಿ ಮುನ್ನುಡಿ ಬರೆದಿದ್ದಾರೆ. ಅಂದು ಕಾರ್ಯಕ್ರಮದಲ್ಲಿ ಈ ಪುಸ್ತಕಕ್ಕೆ ರಿಯಾಯಿತಿ ದರ ಇದೆ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ಖ್ಯಾತ ವಾಗ್ಮಿ, ಚಿಂತಕ ಹಾಗೂ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ, ಚಂದನವಾಹಿನಿಯ ಕ್ವಿಜ್ ಮಾಸ್ಟರ್ ಹಾಗೂ ಖ್ಯಾತ ನಿರೂಪಕ ಡಾ.ನಾ. ಸೋಮೇಶ್ವರ ಭಾಗವಹಿಸಲಿದ್ದು, ಪೋದಾರ್ ಇಂಟರ್ ನ್ಯಾಷನಲ್ ಶಾಲೆಯ ಹಬ್-೩ ಜನರಲ್ ಮ್ಯಾನೇಜರ್ ರವೀಂದ್ರ ವಂಕೆಲಾ, ಉಪ ಪ್ರಾಂಶುಪಾಲರಾದ ನೇತ್ರಾ ಹೆಚ್., ಯಾಜಿ ಪ್ರಕಾಶನದ ಸವಿತಾ ಯಾಜಿ, ನಿಟ್ಟೂರಿನ ವಿದ್ವಾನ್ ಶ್ರೀಧರ್ ಭಟ್ ಉಪಸ್ಥಿತರಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್. ನೇತ್ರಾ, ರವಿ, ತಿಪ್ಪೇಸ್ವಾಮಿ, ಲೇಖನ ಬರೆದ ವಿದ್ಯಾರ್ಥಿಗಳಾದ ಯಶಸ್ವಿನಿಗೌಡ, ಜ್ಞಾನವಿಕ, ಖುಷಿ ಎಂ,. ಸಭಾವತ್, ಉನ್ನತಿ, ಮಾನ್ಯ, ಚಿರಂತನ್, ಧೀಮಂತ್, ಸೃಷ್ಟಿ, ನಯನ ಇನ್ನಿತರರು ಇದ್ದರು.