ಅಂಜುಂ ಬಿ ಎಸ್ ವಿಮರ್ಶೆ- ಮನಸಿಗೊಂದು ಸಸ್ಪೆನ್ಸ್ ಥ್ರಿಲ್ಲರ್ ಟಾನಿಕ್; ಶಾಖಾಹಾರಿ ಸಿನಿಮಾ
special article film review
ಮನಸೂರೆಗೊಳಿಸಿದ ಸಸ್ಪೆನ್ಸ್ ಥ್ರಿಲ್ಲರ್ ಶಾಖಾಹಾರಿ ಸಿನಿಮಾ
ಶಿವಮೊಗ್ಗದ ರಾಜೇಶ್ ಕೀಳಂಬಿ, ರಂಜಿನಿ ಪ್ರಸನ್ನ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ಕೀಳಂಬಿ ಮೀಡಿಯಾ ಲ್ಯಾಬ್ ನಿರ್ಮಾಣ ಮಾಡಿರುವ ಹಾಗೂ ಲಾಸ್ಟ್ ಪೇಜ್ ಕ್ರಿಯೇಶನ್ ಸಹಯೋಗದಲ್ಲಿ ಮಲೆನಾಡಿನಲ್ಲಿ ಚಿತ್ರೀಕರಿಸಿದ ಶಾಖಾಹಾರಿ ಸಿನಿಮಾ ಫೆ.16ಕ್ಕೆ ಬಿಡುಗಡೆಯಾಗಿದೆ.
ಸಿನಿಮಾದ ಸೌಗಂಧಿಕಾ ಹಾಡು ಮತ್ತು ಸೋಲ್ ಆಫ್ ಶಾಖಾ ಹಾರಿ ಎಂದೇ ಪ್ರಸಿದ್ಧಿ ಪಡೆದ “ಈ ಸುಡೋ ಶಾಖಾ” ಹಾಡು ಸಾಮಾಜಿಕ ಜಾಲತಾಣದಲ್ಲಿ ಅಬ್ಬರ ಎಬ್ಬಿಸಿ, ಸಿನಿಪ್ರಿಯರ ಮೆಚ್ಚುಗೆ ಗಳಿಸಿವೆ. ಸಿದ್ದಾರ್ಥ್ ಬೆಳ್ಮಣ್ಣು ಹಾಗೂ ಐಶ್ವರ್ಯಾ ರಂಗರಾಜನ್ ಅವರು ಸೌಗಂಧಿಕಾ ಹಾಡಿಗೆ ಧ್ವನಿಯಾಗಿದ್ದಾರೆ.
ಈಗ ಸಿನಿಮಾ ಕೂಡ ಮನೆ ಮಾತಾಗಿ ಸಿನಿ ಪ್ರಿಯರಿಗೆ ರಸದೌತಣ ನೀಡಿದೆ. ಸಂದೀಪ್ ಸುಂಕದ್ ಅವರು ಶಾಖಾಹಾರಿಗೆ ಆಕ್ಷನ್ ಕಟ್ ಹೇಳಿದ್ದು, ಸೌಗಂಧಿಕಾ ಎಂಬ ಮಧುರ ಹಾಡಿಗೆ ಸಾಹಿತ್ಯವನ್ನೂ ಬರೆದಿರುವುದು ವಿಶೇಷ.. ಮಯೂರ್ ಅಂಬೆಕಲ್ಲು ಅವರ ಸಂಗೀತ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವುದರಲ್ಲಿ ಎರಡು ಮಾತಿಲ್ಲ. ರಂಗಾಯಣ ರಘು ಅವರ ಇಲ್ಲಿಯವರೆಗಿನ ಸಿನಿಮಾಕಿಂತಲೂ ತದ್ವಿರುದ್ಧ ಪಾತ್ರದಲ್ಲಿ ಮಿಂಚಿದ್ದು, ಇಡೀ ಸಿನಿಮಾದಲ್ಲಿ ಪ್ರೇಕ್ಷಕರ ಕುತೂಹಲವನ್ನು ಕೆರಳಿಸುವಂತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಅಲ್ಲಿಲ್ಲಿ ಕಾಣಿಸಿಕೊಳ್ಳುವ ಸುಜಯ್ ಶಾಸ್ತ್ರಿ ಅವರು ಸಂಭಾಷಣೆ ಮೂಲಕವೇ ಪ್ರೇಕ್ಷಕರ ಮುಖದಲ್ಲಿ ನಗು ಮೂಡಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಅವರು ಪೊಲೀಸ್ ಅಧಿಕಾರಿಯಾಗಿ ಬಣ್ಣ ಹಚ್ಚಿ, ಅದ್ಬುತವಾಗಿ ನಟಿಸಿದ್ದಾರೆ. ಸೌಗಂಧಿಕಾ ಆ ಗಿನಿಧಿ ಹೆಗಡೆ ಮತ್ತು ವಿಜಯ್ ಆಗಿ ವಿನಯ್ ಯು.ಜೆ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅವರ ವೃತ್ತಿ ಬದುಕಿಗೆ ಈ ಚಿತ್ರ ತಿರುವು ನೀಡುವಂತಿದೆ. ಶಿವಮೊಗ್ಗದ ಪ್ರತಿಭಾನ್ವಿತ ನಟ ಶ್ರೀ ಹರ್ಷ ಗೋಭಟ್ ಅವರು ತಮ್ಮ ನಟನೆ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದು, ಸ್ಯಾಂಡಲ್ ವುಡ್ ನ ಭರವಸೆಯ ನಟನಾಗಿ ಹೊರ ಹೊಮ್ಮುವುದರಲ್ಲಿ ಸಂಶಯವಿಲ್ಲ. ಇನ್ನೂ ಶಶಾಂಕ್ ನಾರಾಯಣ ಅವರು ಚಿತ್ರದ ಸಂಕಲನದಲ್ಲಿ ತಮ್ಮ ಕೈ ಚಳಕ ತೋರಿಸುವುದರೊಂದಿಗೆ ಒಬ್ಬ ಪೋಲಿಸ್ ಅಧಿಕಾರಿ ಹಾಲೇಶಪ್ಪನ ಪಾತ್ರ ನಿರ್ವಹಿಸಿದ್ದಾರೆ.
ಶಾಖಾಹಾರಿ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರಕ್ಕೂ ಮಹತ್ವ ನೀಡಿದ್ದು, ಮಲೆನಾಡಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ.. ಬಹುತೇಕ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಶಿವಮೊಗ್ಗದವರೇ ಎನ್ನುವುದನ್ನ ಇಲ್ಲಿ ಗಮನಿಸಬೇಕಾದ ಸಂಗತಿ.
ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಹಲವಾರು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ಬಂದಿದ್ದರೂ ಶಾಖಾಹಾರಿ ಸಿನಿಮಾ ಎಲ್ಲಾ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಿಗಿಂತ ವಿಭಿನ್ನವಾಗಿ ನಿಲ್ಲುತ್ತದೆ. ಪ್ರೇಮಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ ಎನ್ನುವುದನ್ನು ಈ ಚಿತ್ರದಲ್ಲಿ ವಿಭಿನ್ನವಾಗಿ ತೋರಿಸಿದ್ದಾರೆ. ಸುಬ್ಬಣ್ಣ ಮತ್ತು ಸುಭದ್ರಾ ಪ್ರೇಮ ಕಥೆ, ವಿಜಯ್ ಮತ್ತು ಸೌಗಂಧಿಕಾ ಬದುಕು , ಮಲ್ಲಿಕಾರ್ಜುನನ ಕೆಲಸ , ಒಟ್ಟು ಸಿನಿಮಾದಲ್ಲಿನ ಮೂರು ಸನ್ನಿವೇಶಗಳು ಅತ್ಯಂತ ಅಚ್ಚುಕಟ್ಟಾಗಿ ಮುಕ್ತಾಯಗೊಳ್ಳುತ್ತವೆ. ಕೆಲಸದ ಒತ್ತಡ ಮತ್ತು ವೈಯಕ್ತಿಕ ಜೀವನ ನಡುವೆ ಒದ್ದಾಡುವ ಮನುಷ್ಯನಾಗಿ ಮಲ್ಲಿಕಾರ್ಜುನ ( ಗೋಪಾಲಕೃಷ್ಣ ದೇಶಪಾಂಡೆ) ಅವರು ಅತ್ಯಂತ ಮನೋಜ್ಞವಾಗಿ ನಟಿಸಿದ್ದಾರೆ. ಒಂದೆಡೆ ಬಗೆಹರಿಯದ ಕೊಲೆ ಕೇಸ್ ಇನ್ನೊಂದೆಡೆ ಪತ್ನಿಯ ಅನಾರೋಗ್ಯದ ನಡುವೆ ಅಸಹಾಯಕ ಸ್ಥಿತಿಯಲ್ಲಿ ನಿಲ್ಲುವ ಮಲ್ಲಿಕಾರ್ಜುನನ ಪಾತ್ರದಲ್ಲಿ ದೇಶಪಾಂಡೆಯವರು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.
ತೀರ್ಥಹಳ್ಳಿಯ ಮೇಳಿಗೆಯಲ್ಲಿ ಸುಬ್ಬಣ್ಣ (ರಂಗಾಯಣ ರಘು) ದುರ್ಗಾ ಪ್ರಸಾದ್ ಶುದ್ಧ ಶಾಖಾಹಾರಿ ಹೋಟೆಲ್ ನಲ್ಲಿ ಬಾಣಸಿಗನಾಗಿ ಕಾಣಿಸಿಕೊಂಡಿದ್ದಾರೆ.. ಸಾಧಾರಣ ಬದುಕಿನಲ್ಲಿ ಅನಿರೀಕ್ಷಿತ ತಿರುವುಗಳು ಬಂದಾಗ ಮನುಷ್ಯ ಹೇಗೆ ಬದಲಾಗುತ್ತಾನೆ ಎನ್ನುವುದನ್ನು ಈ ಚಿತ್ರದಲ್ಲಿ ಕಾಣಬಹುದು.
ಬದುಕಿನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಸುಬ್ಬಣ್ಣ ಬದುಕಿನ ಪ್ರೀತಿಗಾಗಿ ಅನಿರೀಕ್ಷಿತ ಹಂತವನ್ನು ತಲುಪುವ ಅಸಹಾಯಕನಾಗಿ ಬದಲಾಗುತ್ತಾನೆ.
ಯಾವುದೇ ಆಡಂಬರ, ಅನಗತ್ಯ ಸಂಭಾಷಣೆ, ದೃಶ್ಯಗಳಿಲ್ಲದೇ ಪ್ರೇಕ್ಷಕರ ಕುತೂಹಲವನ್ನು ಕೆರಳಿಸುವಂತೆ ಕಥೆ ಸಾಗುತ್ತದೆ. ಯಾವ ಪಾತ್ರವೂ ಅತಿಯಾಗಿ ಕಾಣಿಸಿಕೊಳ್ಳದೇ ತಮ್ಮ ಮೌಲ್ಯವನ್ನು ಕಾಪಾಡಿಕೊಂಡಿವೆ. ಇದು ಕ್ರೈಂ ಥ್ರಿಲ್ಲರ್ ಸಿನಿಮಾ ಆದರೂ ಮಲೆನಾಡಿನ ಸೊಗಡನ್ನು ಈ ಸಿನಿಮಾದಲ್ಲಿ ಕಾಣಬಹುದಾಗಿದೆ..
ಸಿನಿಮಾದ ಮ್ಯೂಸಿಕ್ ಮ್ಯಾಜಿಕ್ ನಂತೆ ಕೆಲಸ ಮಾಡಿದೆ.
ಸಸ್ಪೆನ್ಸ್ ಥ್ರಿಲ್ಲರ್ ಕ್ರೈಂ ಸಿನಿಮಾ ಎಂದರೆ ಅಲ್ಲಿ ಹೊಡೆದಾಟ, ಬಡಿದಾಟ, ಇರುತ್ತದೆ , ಆದರೆ ಶಾಖಾಹಾರಿ ಸಿನಿಮಾ ಇದಕ್ಕೂ ವಿಭಿನ್ನವಾಗಿ ಅನಾವರಣಗೊಳ್ಳುತ್ತದೆ.. ಚಿತ್ರದಲ್ಲಿ ಬರುವ ದೃಶ್ಯಗಳು, ಸಂಭಾಷಣೆ, ಪ್ರತಿ ಪಾತ್ರಕ್ಕೂ ನೀಡಿರುವ ಮಹತ್ವ ಮೆಚ್ಚುವಂತದ್ದು. ಅಂತಹ ಗಂಭೀರ ಸನ್ನಿವೇಶಯಲ್ಲೂ ಸಂಭಾಷಣೆಯಲ್ಲೇ ಪ್ರೇಕ್ಷಕರು ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟುವಂತೆ ನಗಿಸುವ ಪರಿ ಅದ್ಭುತವಾಗಿದೆ.
ಅಲ್ಲಿಲ್ಲಿ ಚಿಕ್ಕ ಪುಟ್ಟ ತಪ್ಪುಗಳು ಇವೆಯಾದರೂ ,ಸಿನಿಮಾದ ಕೊನೆಯ ಇಪ್ಪತ್ತು ನಿಮಿಷ ಕ್ಲೈಮ್ಯಾಕ್ಸ್ ನ ಸಂದರ್ಭ ಪ್ರೇಕ್ಷಕರು ಸೀಟಿನ ಕೊನೆಗೆ ಬಂದು ಕೂರುವಂತೆ ಮಾಡುತ್ತದೆ.
ಸಿನಿಮಾ ಮಲೆನಾಡಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸುವುದರಿಂದ ಮಲೆನಾಡಿಗರಿಗೆ ತಮ್ಮ ಸುತ್ತ ಮುತ್ತಲೇ ನಡೆಯುತ್ತಿರುವ ಕಥೆಯಾಗಿ ಶಾಖಾಹಾರಿ ರೂಪುಗೊಂಡಿದೆ.
ವಿಭಿನ್ನ ಟೈಟಲ್ ಮೂಲಕ ಸಿನಿಪ್ರಿಯರಿಗೆ ನಿರ್ದೇಶಕ ಸಂದೀಪ್ ಸುಂಕದ್ ಸೆಳೆದಿದ್ದಾರೆ. ಚಿತ್ರದ ಎರಡನೇ ಭಾಗದಲ್ಲಿ ಶಾಖಾ ತಟ್ಪಲಾರಂಭಿಸುತ್ತದೆ.. ಒಂದು ನಿಮಿಷವೂ ಪ್ರೇಕ್ಷಕರು ಆಚೀಚೆ ಹೋಗದಂತೆ ನೋಡಿಕೊಳ್ಳಲಾಗಿದೆ. ಇಲ್ಲಿ ನಿರ್ದೇಶಕರ ಚಾಣಾಕ್ಷತನ ಎದ್ದು ಕಾಣುತ್ತದೆ.
ಶಾಖಾಹಾರಿ ಸಿನಿಮಾದ ತಾರಾ ಬಳಗದಲ್ಲಿ ಸುಜಯ್ ಶಾಸ್ತ್ರಿ, ಹರಿಣಿ, ಪ್ರತಿಮಾ ನಾಯಕ್, ವಿನಯ್ ಯು.ಜೆ., ನಿಧಿ ಹೆಗ್ಡೆ, ಮತ್ತಿತರರು ನಟಿಸಿದ್ದಾರೆ.
ಕಮರ್ಶಿಯಲ್ ಸಿನಿಮಾ, ಸ್ಟಾರ್ ನಟರ ಸಿನಿಮಾಗಳ ಕಾಲದಲ್ಲಿ ಥಿಯೇಟರ್ ಅನುಭವ ನೀಡುವ ಸಾಹಿತ್ಯ, ಸಾಧಾರಣ ಬದುಕು, ಹಳ್ಳಿಯೊಂದರಲ್ಲಿ ನಡೆಯುವ ಅನಿರೀಕ್ಷಿತ ಕಾಲ್ಪನಿಕ ಘಟನೆಯಾಧಾರಿತ ಸಿನಿಮಾ ಶಾಖಾಹಾರಿ ಸ್ಯಾಂಡಲ್ ವುಡ್ ನಲ್ಲಿ ಹೊಸ ಪ್ರಯೋಗದೊಂದಿಗೆ ದಾಖಲೆ ನಿರ್ಮಿಸಿದೆ.
ಒಟ್ಟಾರೆ ಥ್ರಿಲ್ಲರ್ ಸಿನಿಮಾ ಇಷ್ಟಪಡುವವರಿಗೆ ಶಾಖಾಹಾರಿ ಸಿನಿಮಾ ನಿರಾಸೆ ಮಾಡುವುದಿಲ್ಲ…
ಬರಹ : ಅಂಜುಮ್ ಬಿ.ಎಸ್. ಮುಖ್ಯಸ್ಥರು. ಪತ್ರಿಕೋದ್ಯಮ ವಿಭಾಗ. ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು. ಶಿವಮೊಗ್ಗ