ಶೋಭಾ ಮಳವಳ್ಳಿ ಟೀಕೆ- ಟಿಪ್ಪಣಿ; ನಟ್ಟು-ಬೋಲ್ಟ್‌ ಪದದ ಬಗ್ಗೆಯೋ? ಪದ ಬಳಸಿದವರ ಬಗ್ಗೆ ಭಯವೋ?

ನಟ್ಟು-ಬೋಲ್ಟ್‌ ಪದದ ಬಗ್ಗೆಯೋ? ಪದ ಬಳಸಿದವರ ಬಗ್ಗೆ ಭಯವೋ?

ಅದು 1996 ತಮಿಳುನಾಡು ವಿಧಾನಸಭೆ ಎಲೆಕ್ಷನ್‌. ಇಡೀ ತಮಿಳು ಚಿತ್ರರಂಗ ಜಯಲಲಿತಾ ಬೆನ್ನಿಗೆ ನಿಂತಿತ್ತು. ಆದ್ರೆ, ಆ ಸೂಪರ್‌ ಸ್ಟಾರ್‌ ಮಾತ್ರ ಅಮ್ಮನ ವಿರುದ್ಧ ತೊಡೆತಟ್ಟಿದ್ದರು. ಅವರ ಒಂದೇ ಒಂದು ಹೇಳೀಕೆ, ಮಾತು, ಜಯಲಲಿತಾ ಮತ್ತು ಆಕೆಯ ಎಐಎಡಿಎಂಕೆ ಪಕ್ಷವನ್ನು ಧೂಳೀಪಟ ಮಾಡಿತು. ಅದು ಮತ್ಯಾರು ಅಲ್ಲ ಸೂಪರ್‌ ಸ್ಟಾರ್‌ ರಜನಿಕಾಂತ್.‌ ಸನ್‌ ಟಿವಿಯಲ್ಲಿ ಕಾಣಿಸಿಕೊಂಡ ರಜನಿಕಾಂತ್‌ ನನ್ನ ವೋಟ್‌ ಉದಯಿಸುವ ಸೂರ್ಯ ನಿಗೆ ಎಂದು ಹೇಳಿದ್ದಷ್ಟೇ, ಕರುಣಾನಿಧಿ ನೇತೃತ್ವದ ಡಿಎಂಕೆಗೆ ಆನೆಬಲ, ಎಲೆಕ್ಷನ್‌ನಲ್ಲಿ ಅಭೂತಪೂರ್ವ ಗೆಲುವಿನಿಂದ ಕರುಣಾನಿಧಿ ಅಧಿಕಾರ ಹಿಡಿದರೆ, ಅಮ್ಮ ಸೋತು ಮನೆ ಸೇರಿದರು. ಅದು ರಜನಿಕಾಂತ್‌ ತಾಕತ್ತು.
ಜಯಲಲಿತಾಗೂ, ರಜನಿಕಾಂತ್‌ಗೆ ಅಷ್ಟಕ್ಕಷ್ಟೇ. ಎಂಜಿಆರ್‌ ನಿಧನದ ಬಳಿಕ ನಟಿಸಲು ಆಫರ್‌ ಇಲ್ಲದೇ, ರಾಜಕೀಯದಲ್ಲೂ ಕಾಲೂರಲು ಹೆಣಗಾಡುತ್ತಿದ್ದ ಜಯಲಲಿತಾಗೆ, ರಜನಿಕಾಂತ್‌ಗೆ ಜತೆ ನಟಿಸುವ ಅವಕಾಶ ಬಂದಿತ್ತು. ಆದ್ರೆ, ಜಯಲಲಿತಾ, ರಜನಿ ಜತೆ ನಟಿಸುವ ಆಫರ್‌ ಸಾರಾಸಗಟಾಗಿ ತಳ್ಳಿಹಾಕಿಬಿಟ್ರು. ಇದನ್ನು ಆ ನಂತರ ಜಯಲಲಿತಾ ಅವರೇ ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟಪಡಿಸಿದ್ದರು. ಇದಾದ ಬಳಿಕ, ರಜನಿಕಾಂತ್-ಜಯಲಲಿತಾ ಮತ್ತೆ ಒಟ್ಟಿಗೆ ನಟಿಸುವ ಮಾತು ಟಾಲಿವುಡ್‌ನಲ್ಲಿ ಕೇಳಿಸಲೇ ಇಲ್ಲ. ಆದರೂ ಇಬ್ಬರು ನಡುವೆಯೂ ಮುಸುಕಿನ ಸಮರದ ಕಲರ್ ಕಲರ್ ಕಥೆಗಳು ಹತ್ತಾರಿವೆ.
ಅದರಲ್ಲಿ ಪ್ರಮುಖವಾಗಿದ್ದು ತಮಿಳುನಾಡು ಸರಕಾರ ನೀಡುವ ರಾಜ್ಯ ಪ್ರಶಸ್ತಿ. ಸಿಎಂ
ತಮಿಳು ಚಿತ್ರರಂಗದ ಇಬ್ಬರು ಮೇರು ನಟರಾದ ಎಂಜಿಆರ್-‌ ಜಯಲಲಿತಾ, ರಾಜಕೀಯಕ್ಕೆ ಎಂಟ್ರಿ ಕೊಟ್ಟ ನಂತರವೂ, ಚಿತ್ರರಂಗದಿಂದ ದೂರಾಗಲಿಲ್ಲ. ಅಷ್ಟೇ ಅಲ್ಲ, ಇಡೀ ಚಿತ್ರರಂಗದ ಮೇಲೆ ಹಿಡಿತ ಸಾಧಿಸಿದ್ದರು.
ಇದೇ ಕಾರಣಕ್ಕೆ ರಾಜ್ಯ ಪ್ರಶಸ್ತಿ ಸಮಾರಂಭದಲ್ಲಿ ಇಡೀ ಚಿತ್ರರಂಗ ಪಾಲ್ಗೊಳ್ಳಬೇಕಿತ್ತು. ಸ್ಟಾರ್‌ ಗಿರಿ, ಸೂಪರ್‌ ಸ್ಟಾರ್‌ ಯಾವ ಕೋಡೂ ಸಹ ಜಯಲಲಿತಾ ಎದುರು ನಡೆಯುತ್ತಿರಲಿಲ್ಲ. ರಜನಿಕಾಂತ್ ಗೂ ಸಹ ಇದರ ಬಿಸಿ ತಟ್ಟಿತ್ತು. ಅದಲ್ಲದೇ, ಕಾವೇರಿ ವಿಷಯದಲ್ಲಿ ತಮಿಳುನಾಡು ಪರ ಮಾತನಾಡದ ರಜನಿಕಾಂತ್‌ ಜಾಣ ಮೌನದ ನಡವಳಿಕೆಯನ್ನು ಜಯಲಲಿತಾ ಆಗಾಗ ಟೀಕಿಸುತ್ತಲೇ ಇದ್ದರು. ಇದೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡಿದ್ದ ರಜನಿಕಾಂತ್‌, ತನ್ನ ಬಗ್ಗೆ ಸಿಂಪತಿ ಹೊಂದಿದ್ದ ಕರುಣಾನಿಧಿ ಮತ್ತವರ ಮೇಲಿನ ಗೌರವಕ್ಕೆ ಮತ್ತು ಜಯಲಲಿತಾ ಮೇಲಿನ ಸಿಟ್ಟಿಗೆ ಅಂದು ಡಿಎಂಕೆ ಗೆಲುವಿಗೆ ರಣಕಹಳೆ ಊದಿದ್ದರು.
ಅತ್ಯಂತ ಪ್ರಭಾವಿ ಮಹಿಳೆ ಜಯಲಲಿತಾರನ್ನೇ ಸೋಲುವಂತೆ ಮಾಡಿದ್ದು ರಜನಿಕಾಂತ್‌ಗಿದ್ದ ಜನಪ್ರಿಯತೆ ಮತ್ತು ಅವರ ಬಗ್ಗೆ ತಮಿಳು ಜನರಿಗಿದ್ದ ಅಪಾರ ಅಭಿಮಾನ. ಆದರೆ, ಇಂಥ ರಜನಿಕಾಂತ್‌ರನ್ನೂ ಬಗ್ಗಿಸಿದ್ದು ಬೇರಾರೂ ಅಲ್ಲ ಕರುಣಾನಿಧಿ ಮತ್ತು ಡಿಎಂಕೆ ಪಕ್ಷ.
ತಮ್ಮ ಗೆಲುವಿಗೆ ಕಾರಣರಾಗಿದ್ದ ರಜನಿಕಾಂತರನ್ನೇ ಡಿಎಂಕೆ ನಡುಬಗ್ಗಿಸಿ ನಿಲ್ಲಿಸಿತ್ತು.
ಕಾವೇರಿ ವಿಷಯದಲ್ಲಿ ಕರ್ನಾಟಕ- ತಮಿಳುನಾಡು ರಾಜ್ಯಗಳ ಪರ- ವಿರುದ್ಧ ದನಿ ಎತ್ತದೇ ಜಾಣ ನಡೆ ಅನುಸರಿಸುತ್ತಿದ್ದ ರಜನಿಕಾಂತ್‌ ವಿರುದ್ಧ ಡಿಎಂಕೆ ಸರಕಾರ, ಹೋರಾಟಗಾರರು ಮತ್ತು ಸಂಘಟನೆಗಳನ್ನು ಎತ್ತಿ ಕಟ್ಟಿತ್ತು. ಕರ್ನಾಟಕದ ವಿರುದ್ಧ ತಮಿಳು ಕಲಾವಿದರ ಸಂಘ ಆಯೋಜಿಸಿದ್ದ ಪ್ರತಿಭಟನೆಗೆ ರಜನಿಕಾಂತ್‌ ಬರಲೇಬೇಕೆಂಬ ಕೂಗು ಎದ್ದಿತು. ರಜನಿ ಮೂಲತಃ ಕನ್ನಡಿಗ, ಕರ್ನಾಟಕದ ಪರ ಸಾಫ್ಟ್‌ ಕಾರ್ನರ್‌ ಹೊಂದಿದ್ದಾರೆ, ಈ ಕಾರಣಕ್ಕೆ ಕಾವೇರಿ ಹೋರಾಟಕ್ಕೆ ತಮಿಳುನಾಡು ಪರ ಕೈಜೋಡಿಸುತ್ತಿಲ್ಲ ಎಂಬ ಆರೋಪ, ಆಕ್ರೋಶ ರೂಪ ತಾಳಿತ್ತು. ಇದೆಲ್ಲವನ್ನೂ ಎದುರಿಸಲಾರದ ರಜನಿಕಾಂತ್‌, ಕೊನೆಗೂ ಪ್ರತಿಭಟನೆಗೆ ಬಂದರು, ಕರ್ನಾಟಕದ ವಿರುದ್ಧ ಮಾತನಾಡಿದರು, ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂದು ಆಗ್ರಹಿಸಿ ತಮಿಳರ ಕೆಂಗಣ್ಣಿನಿಂದ, ಸರಕಾರದ ಚಾಟಿ ಏಟಿನಿಂದ ತಪ್ಪಿಸಿಕೊಂಡರು. ಹೀಗೆ ನಟ್ಟು-ಬೋಲ್ಟ್‌ ಟೈಟ್‌ ಮಾಡಿತ್ತು ಡಿಎಂಕೆ ಸರಕಾರ.
ಈಗಲೂ ಕಾವೇರಿ ವಿಚಾರದಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಇರಲಿ, ಎಐಎಡಿಕೆ ಪಕ್ಷವೇ ಅಧಿಕಾರದಲ್ಲಿರಲಿ, ತಮಿಳು ನಟ-ನಟಿಯರು ಪ್ರತಿಭಟನೆಗೆ ಬರಲೇ ಬೇಕು. ಕರೆದರೂ, ಕರೆಯದಿದ್ದರೂ ಕಾವೇರಿಗಾಗಿ ಬೀದಿಗಿಳಿಯಲೇ ಬೇಕು ಹಾಗೂ ಬೀದಿಗಿಳಿಯುತ್ತಾರೆ. ಯಾಕಂದರೆ, ಭಾಷೆ, ನೆಲ-ಜಲ ವಿಷಯದಲ್ಲಿ ಯಾವತ್ತಿಗೂ ರಾಜೀ ಮಾಡಿಕೊಳ್ಳದವರು. ಹಿಂದಿ ಭಾಷಾ ಹೇರಿಕೆ ವಿಚಾರದಲ್ಲೂ ಅವಕಾಶ ಸಿಕ್ಕಾಗಲೆಲ್ಲ, ಬರೀ ವೇದಿಕೆ ಮೇಲಷ್ಟೇ ಅಲ್ಲ ತಮ್ಮ ಚಿತ್ರಗಳಲ್ಲೂ ತಮಿಳು ಭಾಷೆಗೆ ಹಿಂದಿಯಿಂದ ಅಪಾಯವಿದೆ ಎಂಬ ಡೈಲಾಗ್‌ ಮೂಲಕ ಕೇಂದ್ರಕ್ಕೂ ಬಿಸಿ ಮುಟ್ಟಿಸುತ್ತಾರೆ.
ಇದು, ತಮಿಳುನಾಡಿನ ಕಥೆ ಅಷ್ಟೇ ಅಲ್ಲ, ಅತ್ತ ತೆಲಂಗಾಣದಲ್ಲೂ ಇತ್ತೀಚಿಗೆ ಅಲ್ಲು ಅರ್ಜುನ್‌ ವಿಷಯದಲ್ಲಿ ಸಿಎಂ ರೇವಂತ್‌ ರೆಡ್ಡಿ ಅಕ್ಷರಶಃ ನಟ್ಟು, ಬೋಲ್ಟ್‌ ಟೈಟ್‌ ಮಾಡಿಯೇ ಬಿಟ್ಟರು. ಮೆಗಾಸ್ಟಾರ್‌, ಎನ್‌ಟಿಆರ್‌, ನಾಗಾರ್ಜುನ ಗಾರು.. ಯಾವ ಘಟಾನುಘಟಿ ಫ್ಯಾಮಿಲಿಗಳಿಗೂ ಕ್ಯಾರೆ ಎನ್ನಲಿಲ್ಲ. ಅಲ್ಲು ಅರ್ಜುನ್‌ ಘಟನೆ ಮುಂದಿಟ್ಟುಕೊಂಡು ಇಡೀ ತೆಲುಗು ಚಿತ್ರೋದ್ಯಮಕ್ಕೆ ಬಿಸಿ ಮುಟ್ಟಿಸಿದ್ರರು. ತೆಲಂಗಾಣ ಸರಕಾರದ ಸಾಮಾಜಿಕ ಕಳಕಳಿಯ ಅಭಿಯಾನಗಳೀಗೆ ಸಹಕರಿಸಬೇಕು, ಮತ್ತು ಸಂದೇಶ ನೀಡಬೇಕೆಂದು ಖಡಕ್‌ ಸೂಚನೆ ಕೊಟ್ಟರು. ಅತ್ತ ಕೇರಳದಲ್ಲೂ ಕಲಾವಿದರ ಸಂಘ ಅಮ್ಮದ ಮೇಲೂ ಸರಕಾರದ ಹದ್ದಿನ ಕಣ್ಣಿದೆ.
ಕನ್ನಡ ಚಿತ್ರರಂಗದಲ್ಲಿ ಹೀಗೆ ಸರಕಾರಕ್ಕೆ ಚಾಟಿ ಬೀಸಿದವರು ಡಾ.ರಾಜ್‌ಕುಮಾರ್‌ ಒಬ್ಬರೇ. ಅದೂ ಗೋಕಾಕ್‌ ಹೋರಾಟದಲ್ಲಿ. ರಾಜ್‌ ನಂತರ, ಸ್ಯಾಂಡಲ್‌ವುಡ್‌ ಚುಕ್ಕಾಣಿ ಹಿಡಿದು ನಡೆಸುವಂಥ ಪ್ರಭಾವಿ ಹೀರೋ ಸೃಷ್ಟಿಯಾಗಲೇ ಇಲ್ಲ. ನಟಿಸುವುದು, ಹಣ ಮಾಡುವುದೇ ಬ್ಯುಸಿನೆಸ್‌ ಮಾಡಿಕೊಂಡವರಿಗೆ, ಭಾಷೆ, ನೆಲ-ಜಲ ಎಂಬ ಅಭಿಮಾನವೂ, ಅಸ್ಮಿತೆಯೂ
ಕಾಣುವುದಾದರ ಹೇಗೆ?

ಎಂಟತ್ತು ವರ್ಷದ ಹಿಂದೆ ಕಾವೇರಿ ಹೋರಾಟಕ್ಕೆ ಬಲವಂತಕ್ಕೆ ಪ್ರತಿಭಟನೆಗೆ ಬಂದ ನಟನೊಬ್ಬ, ಜನರನ್ನು ನೋಡಿ ಇಷ್ಟೆನಾ ಕನ್ನಡ ಹೋರಾಟಗಾರರು? ಎಂದು ಬಿಗ್ ಬಾಸ್ ನಂತೆ ಲೇವಡಿ ಮಾಡಿದ್ದನ್ನು ಸಹಿಸಿಕೊಂಡಿತ್ತು ಅಂದಿನ ಸರಕಾರ ಮತ್ತು ಚಿತ್ರರಂಗ. ಕ್ಯಾಮರಾಗೆ ಮುಖ ತೋರಿಸುವುದೇ ಕಾವೇರಿ ಪರ ಹೋರಾಟ ಎಂಬ ಅಹಂನ ಕಿಚ್ಚು.

ತಮಿಳಿನಲ್ಲಿ ಹೀರೋಗಳು ಸಂಭಾವನೆ ಕಡಿಮೆ ಮಾಡಿ ನಿರ್ಮಾಪಕರಿಗೆ ನೆರವಾಗುತ್ತಿದ್ದಾರೆ ಎಂದರೆ, ಯಾಕೆ ಸಿನಿಮಾ ಮಾಡ್ಬೇಕು ಎಂಬ ದಾರ್ಷ್ಟ್ಯದ ಮಾತು.. ಒಂದಾ, ಎರಡ ಇವರ ಬಾಸಿಸಮ್?
ದುಡ್ಡಿನ ಮುಂದೆ, ಒಂದು ಪಾರ್ಟಿ, ಒಂದು ಸಿದ್ಧಾಂತ ಯಾವುದೂ ಇಲ್ಲ. ಕಾಂಗ್ರೆಸ್‌ ಸಿಎಂ ಮನೆಗೂ ಹೋಗುವ, ಬಿಜೆಪಿ ಸಿಎಂ ಜತೆಗೂ ನಿಲ್ಲುವವರು. ದುಡ್ಡು ಕೊಟ್ಟರೆ ಯಾವ ಪಕ್ಷವಾದರೂ ಸರಿ, ಯಾವ ರಾಜಕಾರಣಿಯಾದರೂ ಚುನಾವಣಾ ಪ್ರಚಾರ ನಡೆಸಿ, ಮತ ಯಾಚಿಸುವ ರಾಕಿಂಗ್, ಚಾಲೆಂಜಿಂಗ್, ರೈಸಿಂಗ್ ಗಳಿಗೆ
ಹೊಣೆಗಾರಿಕೆ, ನಿಷ್ಪಕ್ಷಪಾತ ನಡೆ ಯಾವುದಕ್ಕೂ ಕವಡೆಕಾಸಿನ ಕಿಮ್ಮತ್ತಿಲ್ಲ. ಅಷ್ಟೇ ಏಕೆ, ಇಡೀ ಚಿತ್ರರಂಗ ದಿನೇ ದಿನೇ ಸೊರಗುತ್ತಿದ್ದರು, ವರ್ಷಕ್ಕೊಂದು ಸಿನಿಮಾ ಮಾಡಿ, ಚಿತ್ರರಂಗಕ್ಕೆ ಹೆಗಲಾಗ ಬೇಕಾದ ಬದ್ಧತೆ ಇಲ್ಲ, ನ್ಯಾಷನಲ್‌ ಲೆವೆಲ್‌ನಲ್ಲಿ ಮಿಂಚಿದರೆ ಸಾಕು ಅನ್ನೋ ಮನೋಭಾವದ ನಟರಿಗೆ, ಮನೆ, ಮಡದಿ ಮಕ್ಕಳ ಜತೆ ಸೆಟ್ಲ್‌ ಆಗಿ, ಬಡ ಸಿನಿಮಾ ಕಾರ್ಮಿಕರ ಹಿತಾಸಕ್ತಿ ಮರೆತವರು‌ ಸೆಟ್ಲ್ ಆದವರಿಗೆ
ಬಿಸಿ ಮುಟ್ಟಬೇಕಿತ್ತು. ಅದು ಮುಟ್ಟಿದೆ.
ಸ್ಯಾಂಡಲ್ ವುಡ್ ಪರ ಬರುವವರು ಅಂದ್ರೆ ಸಾರಾ ಗೋವಿಂದು ಅನ್ನುವಂತಾಗಿದೆ‌.
ಒಡೆದ ಮನೆ ಕಟ್ಟುವುದು ಸಿನಿಮಾದಲ್ಲಿ ಸುಲಭ. ಚಿತ್ರರಂಗ ಕಟ್ಟುವುದು ನಿಯತ್ತಿನ ಕೆಲಸ. ಅದನ್ನು ಅರಿಯುವ ಮಿದುಳಿನ ನಟ ಬೇಕಿದೆ.
ಕೊನೆಯದಾಗಿ :
ಮಚ್ಚಾ, ಮಾಮ, ಪುಡಾಂಗು, ತಗಡು.. ಇತ್ಯಾದಿ ಪದಪುಂಜಗಳನ್ನು ಕಣ್ಣಿಗೊತ್ತಿಕೊಂಡು ಬಳಸ್ತಿರೋರೆಲ್ಲ ನಟ್ಟು-ಬೋಲ್ಟ್‌ ಟೈಟ್‌ ಪದ ಕೇಳಿ ಕೂಗಾಡ್ತಿರೋದು ನೋಡಿದ್ರೆ, ನಟ್ಟು-ಬೋಲ್ಟ್‌ ಪದದ ಬಗ್ಗೆಯೋ? ಪದ ಬಳಸಿದವರ ಬಗ್ಗೆ ಭಯವೋ?

#ಶೋಭಾಮಳವಳ್ಳಿ