ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ;* *ಎಂಎಲ್‌ಸಿ ಎನ್ ರವಿಕುಮಾರ್ಗೆ ಮಧ್ಯಂತರ ರಿಲೀಫ್*
*ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ;*
*ಎಂಎಲ್‌ಸಿ ಎನ್ ರವಿಕುಮಾರ್ಗೆ ಮಧ್ಯಂತರ ರಿಲೀಫ್*
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ (Shalini Rajneesh) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪ ಹೊತ್ತಿದ್ದ ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್ (BJP MLC N Ravikumar) ವಿರುದ್ಧದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ. ಆ ಮೂಲಕ ಎನ್. ರವಿಕುಮಾರ್ಗೆ ಮಧ್ಯಂತರ ರಿಲೀಫ್ ಸಿಕ್ಕಿದೆ.
ಶಾಲಿನಿ ರಜನೀಶ್ ದೂರು ನೀಡಿಲ್ಲ, 3ನೇ ವ್ಯಕ್ತಿ ದೂರು ಆಧರಿಸಿ ಕೇಸ್ ದಾಖಲಿಸಲಾಗಿದೆ. ಹೇಳಿಕೆಯಲ್ಲಿ ಅಪರಾಧದ ಅಂಶಗಳಿಲ್ಲವೆಂದು ಎಂಎಲ್‌ಸಿ ರವಿಕುಮಾರ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. ವಾದ-ಪ್ರತಿವಾದ ಬಳಿಕ ಮಧ್ಯಂತರ ತಡೆ ನೀಡಿ ನ್ಯಾ.ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠ ಆದೇಶ ಹೊರಡಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ವಿಚಾರಣೆ ವೇಳೆ ‘ರಾಜಕಾರಣಿಗಳು ಹೊಸ ಬಗೆಯ ಕೆಳಮಟ್ಟಕ್ಕೆ ಇಳಿಯುತ್ತಿದ್ದಾರೆ’ ಎಂದು ಮೌಖಿಕವಾಗಿ ನ್ಯಾಯಾಲಯವು ಅಭಿಪ್ರಾಯಪಟ್ಟಿತ್ತು. ಇಂದಿನ ವಿಚಾರಣೆಯಲ್ಲಿ ಎಂಎಲ್‌ಸಿ ರವಿಕುಮಾರ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಾಡಿದ್ದು, 3ನೇ ವ್ಯಕ್ತಿ ದೂರು ಆಧರಿಸಿ ಕೇಸ್ ದಾಖಲಿಸಲಾಗಿದೆ ಎಂದಿದ್ದಾರೆ.
ರಾಜಕೀಯ ಪಕ್ಷದ ಮೂಲಕ ಎಫ್‌ಐಆರ್ ದಾಖಲಾಗದಿದ್ದಾಗ ಸಾಮಾಜಿಕ ಕಾರ್ಯಕರ್ತರ ಮೂಲಕ ಅವರು ಎಫ್‌ಐಆರ್ ದಾಖಲಿಸಲು ಮುಂದಾದರು. ಹೀಗಾಗಿ ಪ್ರಸ್ತುತ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ ಮತ್ತು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ವಾದಿಸಿದರು. ಅದರಂತೆ, ನ್ಯಾಯಾಲಯವು ಪ್ರಕರಣದಲ್ಲಿ ಎಫ್‌ಐಆರ್ ಮತ್ತು ಹೆಚ್ಚಿನ ತನಿಖೆಗೆ ತಡೆ ನೀಡಿದೆ.
ಜೂನ್ 30ರಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಮಹದೇವಪುರ ವಲಯದಲ್ಲಿ ದಲಿತರ ಭೂಮಿಯನ್ನ ಅರಣ್ಯ ಇಲಾಖೆ ಕಸಿದುಕೊಳ್ಳುತ್ತಿದೆ ಅಂತಾ ಆರೋಪಿಸಿತ್ತು. ಇದರ ವಿರುದ್ಧ ದೂರು ಕೊಡಲು ಹಲವು ಬಾರಿ ಹೋದಾಗ್ಲೂ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಿಕ್ಕಿರಲಿಲ್ವಂತೆ. ವಿಧಾನಸೌಧ ಭದ್ರತೆ ಉಪ ಪೊಲೀಸ್ ಆಯುಕ್ತ ಎಂ.ಎನ್ ಕರಿಬಸವನಗೌಡ ಅವರೊಂದಿಗೆ ಛಲವಾದಿ ಮಾತನಾಡ್ತಿದ್ರು. ಆಗ ಬಿಜೆಪಿ ಲೀಡರ್ ಮುನಿಸ್ವಾಮಿ, ಚೀಫ್ ಸೆಕ್ರೆಟರಿ ಬರೀ ಕರ್ನಾಟಕಕ್ಕಾ ಇಲ್ಲ ಮುಖ್ಯಮಂತ್ರಿಗಳಿಗಾ ಅಂತಾ ಪ್ರಶ್ನಿಸಿದ್ರು. ಈ ಮಾತಿಗೆ ಮಾತು ಜೋಡಿಸಿದ ಎನ್. ರವಿಕುಮಾರ್, ಅಸಭ್ಯ ಪದ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಎನ್.ರವಿಕುಮಾರ್ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು.