ವಸುಧೇಂದ್ರ ಬರೆದ ಕಥೆ…ಗುಲ್ಝಾರ್

ಗುಲ್ಜಾರರಿಗೆ ಜ್ಞಾನಪೀಠ ಸಿಕ್ಕ ನೆಪದಲ್ಲಿ ಅವರ ಕತೆಯೊಂದನ್ನು ಓದೋಣ. 25 ವರ್ಷ ಹಿಂದೆ ಅನುವಾದಿಸಿದ್ದು.

ಹತ್ತು ಪೈಸೆ ಮತ್ತು ಅಜ್ಜಿ
====≠===========

ಬರೀ ಹತ್ತು ಪೈಸೆಗಾಗಿ ಅಜ್ಜಿಯೊಡನೆ ಜಗಳವಾಡಿದ್ದೇ ನೆಪವಾಗಿ ಚಕ್ಕು ಮನೆ ಬಿಟ್ಟು ಹೊರ ಬಂದಿದ್ದ. ಹಾಗೆ ನೋಡಿದರೆ ಹತ್ತು ಪೈಸೆಯೇನೂ ದೊಡ್ಡದಲ್ಲ. ಗೆಳೆಯ ರಾಮುವಿನ ಕಿಸೆ ಯಾವಾಗಲೂ ಹಣದಿಂದ ಝಣಗುಡುತ್ತದೆ. ಯಾವಾಗ ಬೇಕೆಂದರೆ ಆವಾಗ ರಾಮು ಗಾಳಿಪಟ ಕೊಂಡುಕೊಳ್ಳಬಹುದು. ಒಂದು ಗಾಳಿಪಟ ಕಳೆದುಹೋದ ತಕ್ಷಣ ಅವನು ಮತ್ತೊಂದಕ್ಕೆ ಬಾಲಂಗೋಸಿ ಕಟ್ಟುತ್ತಾನೆ. ಅವನ ದಾರದ ಉಂಡಿಯಲ್ಲಿ ರಾಶಿ ರಾಶಿ ಗಂಜಿ ಸವರಿದ ದಾರವಿರುತ್ತೆ. ಅವನ ಮನೆಯಲ್ಲಿ ಬೇಕಾದ ಎಲ್ಲಾ ವಸ್ತುಗಳ ಉಗ್ರಾಣವೇ ಇದೆ. ಇದೆಲ್ಲಾ ಙಪಿಸಿಕೊಂಡು ಚಕ್ಕುವಿಗೆ ಕೋಪ ಬಂತು. ಅಜ್ಜಿ ಎಂತಹ ಜುಗ್ಗಿ, ಜೊತೆಗೆ ಘಟವಾಣಿ! ಆಕಿ ಮುಖವೆಲ್ಲಾ ಆ ರೀತಿ ಸುಕ್ಕಾಗಿರೋದು ಏನೂ ಆಶ್ಚರ್ಯವಲ್ಲ. ಅದೇ ರಾಮುವಿನ ಅಜ್ಜಿಯ ಮುಖ ನೋಡು, ಒಂದು ಚೂರೂ ಸುಕ್ಕಿಲ್ಲ. ಅವನಿಗೆ ತನ್ನಜ್ಜಿಯ ಎಲ್ಲಾ ದೋಷಗಳು ನೆನಪಾಗಲಾರಂಭಿಸಿದವು. ಅವಳ ಕಿವಿಗಳು ಎಷ್ಟೊಂದು ಜೋತು ಬಿದ್ದಿವೆ! ತನ್ನ ಕೆನ್ನೆಗೆ ಮುತ್ತು ಕೊಟ್ಟರೆ ಅವಳ ಕಿವಿಗಳು ಕಣ್ಣ ಮುಂದೆ ನೇತಾಡುತ್ತವೆ. ಜೊತೆಗೆ ಅವಳಿಗೆ ಕಣ್ಣು ರೆಪ್ಪೆಯೇ ಇಲ್ಲ. ನಿದ್ದೆ ಮಾಡುವಾಗ ಬಾಯಿಯಂತೆ ಕಣ್ಣೂ ಆರ್ಧ ತೆರೆದಿರುತ್ತವೆ.

ಮನಸ್ಸಿನಲ್ಲಿ ಅಜ್ಜಿಯ ವ್ಯಂಗ್ಯ ಚಿತ್ರವನ್ನು ರಚಿಸುತ್ತಾ ಚಕ್ಕು ಬರಿಗಾಲಿನಲ್ಲಿಯೇ ರೈಲ್ವೇ ನಿಲ್ದಾಣವನ್ನು ತಲುಪಿದ. ಯಾವುದೇ ಉದ್ದೇಶವಿಲ್ಲದೆ ಕಟ್ಟಡವನ್ನು ತಲುಪಿದನಾದರೂ ಗಾರ್ಡ್ ಶಿಳ್ಳೆ ಊದುತ್ತಲೇ ಓಡೋಡಿ ಪ್ಲಾಟ್‌ಫಾರ್ಮಿನಲ್ಲಿದ್ದ ರೈಲೊಂದರಲ್ಲಿ ಹತ್ತಿಬಿಟ್ಟ.

ರೈಲು ಚಲಿಸಲು ಪ್ರಾರಂಭವಾದ ನಂತರವೇ ಅವನು ಮನೆ ಬಿಟ್ಟು ಓಡಿಹೋಗಬೇಕೆಂದು ನಿರ್ಧರಿಸಿದ. ಅದೇ ಗಳಿಗೆಯಲ್ಲಿ, ಆ ಓಡುತ್ತಿರುವ ರೈಲಿನಲ್ಲಿ ಅವನಿಗೆ ಜೀವನದಲ್ಲಿ ತನ್ನ ಕಾಲ ಮೇಲೆ ತಾನು ನಿಂತು ಸಂತೃಪ್ತನಾಗಿರಬೇಕೆಂದು ಅನ್ನಿಸಿಬಿಟ್ಟಿತು. ಒಂದು ಚಿಕ್ಕ ಗಾಳಿಪಟಕ್ಕೂ ಮುಪ್ಪಿನ ಮುದುಕರ ಮುಂದೆ ಕೈಯೊಡ್ಡಿ ನಿಲ್ಲುವುದು ಅದೆಂತಹ ಜೀವನ! ಅದಕ್ಕೇ ಇರಬೇಕು, ಅವನಣ್ಣ ಅಜ್ಜಿಯನ್ನು ಬಿಟ್ಟು ಬೊಂಬಾಯಿಗೆ ಓಡಿಹೋಗಿದ್ದು. ಇಷ್ಟೊಂದು ವರ್ಷಗಳಾದರೂ ಇನ್ನೂ ತಿರುಗಿ ಬಂದಿಲ್ಲ.

ಬಾಗಿಲ ಬಳಿ ಕುಳಿತ ಚಕ್ಕು ನಿದ್ದೆ ಮಾಡಲಾರಂಭಿಸಿದ. ಬಹಳ ಹೊತ್ತಿನ ನಂತರ ಎಚ್ಚರವಾದಾಗ ಹೊರಗಡೆ ಕತ್ತಲು ಗಾಢವಾಗಿತ್ತು. ಆಗವನಿಗೆ ಪ್ರಥಮ ಬಾರಿ ತಾನು ನಿಜಕ್ಕೂ ಮನೆ ಬಿಟ್ಟು ಓಡಿ ಬಂದಿದ್ದೇನೆನ್ನಿಸಿ ಬಿಟ್ಟಿತು. ಈಗವನಿಗೆ ಅಜ್ಜಿಯ ಮೇಲೆ ಕೋಪ ಕಡಿಮೆಯಾಗಿದ್ದರೂ ಅವಳ ಮೇಲೆ ಸಾಕಷ್ಟು ದೂರುಗಳು ನಾಲಿಗೆಯ ತುದಿಯಲ್ಲಿದ್ದವು.

ಹತ್ತು ಪೈಸೆ ಅಂತಹ ದೊಡ್ಡ ವಿಷಯವಲ್ಲ. ಅಷ್ಟಕ್ಕೂ ಅವನು ಅದನ್ನು ಕದ್ದಿರಲಿಲ್ಲ. ದೇವರ ಪೂಜೆಯ ಬಟ್ಟಲಿನಿಂದ ಹತ್ತು ಪೈಸೆ ತೆಗೆದುಕೊಂಡಿದ್ದು ಹೇಗೆ ತಾನೆ ಕಳ್ಳತನವಾದೀತು? ದೇವರ ಕಣ್ಣ ಮುಂದೆಯೇ ತೆಗೆದುಕೊಂಡಿದ್ದಲ್ಲವೆ? ದೇವರು ಯಾವಾಗಲೂ ಕಣ್ಣು ತೆರೆದು ನೋಡುತ್ತಾ ಇರುತ್ತಾನೆ ಅಂತ ಅಜ್ಜಿಯೇ ಹೇಳಿಲ್ಲವೆ?

“ದೇವರು ರಾತ್ರಿ-ಹಗಲು ಎಲ್ಲಾ ಎಚ್ಚರವಾಗೇ ಇರ್ತಾನಾ? ಒಂಚೂರೂ ನಿದ್ದೆ ಮಾಡಲ್ವ?”
“ಹೂಂ. ಅವನು ಕಣ್ಣು ಮುಚ್ಚಿದ್ದರೂ ಅವನಿಗೆಲ್ಲಾ ಕಾಣಿಸ್ತದೆ” ಅಂತ ಅಜ್ಜಿ ಹೇಳಿದ್ದಳು.

ಹುಂ… ಹಾಗಿದ್ದರೆ ಆ ಹತ್ತು ಪೈಸೆ ದೇವರಿಗ್ಯಾಕೆ ಕಾಣಲಿಲ್ಲ? ಒಂದು ವೇಳೆ ಕಂಡಿದ್ದರೆ ಅಜ್ಜಿಗ್ಯಾಕೆ ಹೇಳ್ಲಿಲ್ಲ? ಅಜ್ಜಿ ನೋಡಿದರೆ ನಾನು ಹತ್ತು ಪೈಸೆ ಕಳ್ಳತನ ಮಾಡಿದ್ದು ಅಂತ ಹೇಳುತ್ತಾಳೆ. ದೇವರು ಕೂಡಾ ಅಜ್ಜಿಯಂತೇ ಇದ್ದಾನೆ, ಮಹಾ ಅಸಾಧ್ಯ! ಅವನಿಗೆ ಕಿವೀನೂ ಕೇಳಂಗಿಲ್ಲ, ಕಣ್ಣೂ ಕಾಣಂಗಿಲ್ಲ.

ಯಾರೋ ಒಬ್ಬರು ಅವನಿಗೆ ಬಾಗಿಲಿನಿಂದೆದ್ದು ಒಳಗಡೆ ಕುಳಿತುಕೊಳ್ಳುವಂತೆ ಹೇಳಿದರು. ಬಹುಶಃ ಯಾವುದೋ ಊರು ಹತ್ತಿರದಲ್ಲಿರಬೇಕು. ರೈಲಿನ ವೇಗ ತಗ್ಗುತ್ತಿತ್ತು. ರೈಲು ನಿಲ್ಲುವ ವೇಳೆಗೆ ಅವನಿಗೆ ಮನೆಗೆ ಹೋಗಿ ಬಿಡಲೆ ಎಂಬ ಆಲೋಚನೆ ಬಂತು. ಆದರೆ ಹೊರಗಡೆ ಪ್ಲಾಟ್‌ಫಾರಂ ಮೇಲೆ ತಿರುಗಾಡುತ್ತಿದ್ದ ಪೇದೆಯೊಬ್ಬನನ್ನು ನೋಡಿ ಧೈರ್ಯ ಉಡುಗಿ ಸುಮ್ಮನಾದ. ಜೊತೆಗೆ ತನ್ನ ಬಳಿ ಟಿಕೆಟ್ ಕೂಡಾ ಇಲ್ಲವೆನ್ನುವುದು ಪ್ರಥಮ ಬಾರಿ ಅವನ ಗಮನಕ್ಕೆ ಬಂತು. ಟಿಕೇಟ್ ಇಲ್ಲದೆ ಪ್ರಯಾಣ ಮಾಡುವವರನ್ನು ಬಂಧಿಸಿ, ಜೈಲಿಗೆ ಹಾಕಿ ಕಠಿಣ ಶಿಕ್ಷೆಯನ್ನು ಕೊಡುತ್ತಾರೆಂಬುದನ್ನು ಅವನು ಅವರಿವರಿಂದ ಕೇಳಿದ್ದ.

ಬಾಗಿಲಿನ ಬಳಿ ಥಂಡಿಯಾಗುತ್ತಿತ್ತು. ಚಕ್ಕು ಒಳ ಬಂದು ಎರಡು ಬರ್ತ್‌ಗಳ ಮಧ್ಯದಲ್ಲಿ ಕುಳಿತುಕೊಂಡ. ಮತ್ತೆ ರೈಲು ಚಲಿಸಲು ಪ್ರಾರಂಭಿಸಿದ ನಂತರ ಪ್ರಯಾಣಿಕರು ತಮ್ಮ ತಮ್ಮ ಬರ್ತ್‌ಗಳಲ್ಲಿ ಬಂದು ಮಲಗಿಕೊಂಡರು. ಟ್ರಂಕ್, ಹಾಸಿಗೆ ಮತ್ತು ಬುಟ್ಟಿಗಳ ರಾಶಿಗಳ ಮಧ್ಯೆ ಹೊರಳಾಡಿ ಕಡೆಗೆ ಕಿಟಕಿಯ ಕೆಳಗೆ ಸರಿಯಾಗಿ ಜಾಗ ಮಾಡಿಕೊಂಡ.

ಈಗವನಿಗೆ ಹೊಟ್ಟೆ ಹಸಿಯಲಾರಂಭಿಸಿತು. ಜೊತೆಗೆ ದಾಹ. ಮೇಲಿನ ಬರ್ತಿನಲ್ಲಿರುವವನ ವಾಟರ್ ಬ್ಯಾಗೊಂದು ರೈಲಿನ ಕುಲುಕಾಟಕ್ಕೆ ಅಲ್ಲಾಡುತ್ತಿತ್ತು. ಅದರ ಮೇಲೆ ತಿರುಗಿಸಿಟ್ಟ ಲೋಟವೊಂದು ಏಕಪ್ರಕಾರವಾಗಿ ಕರ್ಕಶ ಸದ್ದು ಮಾಡುತ್ತಿತ್ತು.

ಅದೇ ಸಮಯಕ್ಕೆ ಟಿಕೇಟ್ ಪರೀಕ್ಷಕನೊಬ್ಬ ನೀಲಿ ಸಮವಸ್ತ್ರವನ್ನು ಧರಿಸಿ, ಹೊಳೆಯುವ ಹಿತ್ತಾಳೆ ಪದಕವನ್ನು ಹಾಕಿಕೊಂಡು ಭೋಗಿಯನ್ನು ಪ್ರವೇಶಿಸಿದ್ದನ್ನು ಅವನು ನೋಡಿ ಬಿಟ್ಟ. ಅವನ ಹಿಂದೆ ಅವನ ಸಹಾಯಕನೊಬ್ಬ ಯಾರೋ ಟಿಕೇಟ್‌ರಹಿತ ಪ್ರಯಾಣಿಕನೊಬ್ಬನ ಕತ್ತಿನ ಪಟ್ಟಿಯನ್ನು ಹಿಡಿದಿದ್ದ. ಚಕ್ಕುಗೆ ದಿಗ್ಭ್ರಮೆಯಾಯ್ತು. ಈ ಮನುಷ್ಯ ಓಡುವ ರೈಲನ್ನು ಅದು ಹೇಗೆ ತೂರಿಕೊಂಡ? ಸ್ಟೇಷನ್‌ನಲ್ಲಿ ರೈಲನ್ನು ಹತ್ತಿದ್ದೂ ಕಂಡಿರಲಿಲ್ಲ. ನಿಸ್ಸಂಶಯವಾಗಿ ಇವರೆಲ್ಲಾ ಎಲ್ಲೋ ಅಡಗಿ ಕುಳಿತಿದ್ದಿರಬೇಕು.

ಬರ್ತ್‌ನ ಕೆಳಗೆ ಅಂಬೆಗಾಲಿಕ್ಕುತ್ತಾ ಹೇಗೋ ಮಾಡಿ ಆ ನೀಲಿ ಸಮವಸ್ತ್ರಧಾರಿಯ ಹಿಂಬಾಗಕ್ಕೆ ಬಂದು ಬಿಟ್ಟ. ಭೋಗಿಯ ಆ ಬದಿ ಮೆಲ್ಲನೆ ನುಸುಳಿ ಟಾಯ್ಲಟ್ ಬಳಿ ಬಂದು, ಮಿಂಚಿನ ವೇಗದಲ್ಲಿ ಅದರಲ್ಲಿ ನುಗ್ಗಿ, ಬಾಗಿಲನ್ನು ಹಾಕಿಕೊಂಡು, ಚಡ್ಡಿಯನ್ನು ಬಿಚ್ಚಿ ಕಾಮೋಡಿನ ಮೇಲೆ ಕುಳಿತುಬಿಟ್ಟ. ಈಗವನಿಗೆ ಸ್ವಲ್ಪ ಸಮಾಧಾನವಾಯ್ತು. ಯಾರಾದರೂ ಟಾಯ್ಲೆಟ್ ಒಳಗೆ ಟಿಕೇಟ್ ಕೇಳ್ಕೊಂಡು ಬರ್ತಾರಾ? ಸಾಧ್ಯವಿಲ್ಲ ಅಂತನ್ನಿಸಿತು. ಹಾಗಿದ್ದರೆ ಉಳಿದವರೂ ಯಾಕೆ ಈ ಉಪಾಯವನ್ನು ಮಾಡುವದಿಲ್ಲ? ಕಡೆಯ ಪಕ್ಷ ಕತ್ತಿನ ಪಟ್ಟಿಯಿಂದ ಹಿಡಿಸಿಕೊಂಡಿದ್ದ ಆ ಸಿಡುಬಿನ ಕಲೆಯವನಾದರೂ ಈ ರೀತಿ ಮಾಡಬಹುದಿತ್ತು. ಚಕ್ಕು ಕಾಮೋಡಿನ ಮೇಲೆ ತುಂಬಾ ಹೊತ್ತು ಕುಳಿತುಕೊಂಡಿದ್ದ. ಅವನ ಬರಿ ಗಾಲಿಗೆ ತಣ್ಣನೆಯ ಗಾಳಿ ಸೋಕುತ್ತಿತ್ತು. ಸ್ವಲ್ಪ ಸಮಯದ ನಂತರ ಅವನು ಅಲ್ಲಿಯೇ ನಿದ್ದೆ ಹೋದ.

ಇದ್ದಕ್ಕಿದ್ದಂತೆ ರೈಲು ಹಳಿಗಳನ್ನು ಬದಲಾಯಿಸಿದ್ದರಿಂದ ಅಲ್ಲಾಡಿತು. ಚಕ್ಕುವಿಗೆ ಮುಗ್ಗರಿಸಿ ಬಿದ್ದಂತಾಯ್ತು. ರೈಲಿನ ವೇಗ ತಗ್ಗಲಾರಂಭಿಸಿತು. ಅವನು ಟಾಯ್ಲಟ್‌ನ ಬಾಗಿಲನ್ನು ಸ್ವಲ್ಪ ತೆಗೆದು ಹೊರಗೆ ಇಣುಕಿ ನೋಡಿದ. ರೈಲು ಯಾವುದೋ ಊರನ್ನು ತಲುಪುತ್ತಿತ್ತು. ಭೋಗಿಯಲ್ಲೆಲ್ಲಾ ಕಣ್ಣಾಡಿಸಿದರೂ ನೀಲಿ ಸಮವಸ್ತ್ರಧಾರಿ ಎಲ್ಲೂ ಕಾಣಲಿಲ್ಲ. ಚಕ್ಕುವಿಗಂತೂ ಆ ವ್ಯಕ್ತಿ ಎಲ್ಲೋ ಅಡಗಿ ಕುಳಿತಿದ್ದಾನೆಂದು ಖಚಿತವಾಯ್ತು. ಓಡುವ ರೈಲಿನಿಂದ ಅವನು ಇಳಿದು ಹೋಗಲಿಕ್ಕಾದರೂ ಹೇಗೆ ಸಾಧ್ಯ? ರೈಲು ನಿಂತ ತಕ್ಷಣ ಚಕ್ಕು ಆ ಸ್ಟೇಷನ್ನಿನಲ್ಲಿ ಕೆಳಗಿಳಿದು ಬಿಟ್ಟ.

ಮಧ್ಯರಾತ್ರಿಯಾಗಿತ್ತು. ಸ್ಟೇಷನ್ ಬಿಕೋ ಎನ್ನುತ್ತಿತ್ತು. ಚಕ್ಕುವಿನ ಹೊರತಾಗಿ ಅಲ್ಲಿ ಯಾರೂ ಇಳಿಯಲಿಲ್ಲ. ಹೊಗೆಯುಗುಳುತ್ತಾ ಸ್ವಲ್ಪ ಹೊತ್ತು ನಿಂತಿದ್ದ ರೈಲು ಅನಂತರ ಶಿಳ್ಳೆ ಹಾಕುತ್ತಾ ತನ್ನ ಪ್ರಯಾಣವನ್ನು ಮುಂದುವರೆಸಿತು.

ಚಕ್ಕು ಬೆಂಚೊಂದರ ಮೇಲೆ ತಲೆಯನ್ನು ಮೊಣಕಾಲ ಮಧ್ಯದಲ್ಲಿಟ್ಟುಕೊಂಡು ಮುದುರಿ ಕುಳಿತ. ಸ್ವಲ್ಪ ಸಮಯದಲ್ಲಿ ಮೂಟೆಯಂತೆ ಬದಿಗುರುಳಿಕೊಂಡ. ಕೈಯಲ್ಲಿ ಕಂದೀಲನ್ನು ಹಿಡಿದುಕೊಂಡಿದ್ದ ವಾಚ್‌ಮನ್‌ನೊಬ್ಬ ನೆಲವನ್ನು ತನ್ನ ಬೆತ್ತದಿಂದ ಬಡಿಯುತ್ತಾ ಬಂದವನೇ, ಚಕ್ಕುವಿನ ಕಿವಿ ಹಿಂಡಿ ಎಬ್ಬಿಸಿದ.

“ಮನೆ ಬಿಟ್ಟು ಓಡಿ ಬಂದೀಯೇನೋ? ವಾಪಸ್ ಹೋಗು. ಇಲ್ಲಿ ಕೂಡಬೇಡ. ಇಲ್ಲಾ ಅಂದರೆ ಪೋಲೀಸರು ನಿನ್ನ ಹಿಡಕೊಂಡು ಹೋಗಿ ಜೈಲಿನಲ್ಲಿ ಮೈ ಮುರಿಯೋ ಹಂಗೆ ದುಡಿಸ್ತಾರೆ”

ಅಷ್ಟೇ ಬೈಗಳು ಅವನನ್ನು ಗಡಗಡನೆ ನಡುಗುವಂತೆ ಮಾಡಲು ಸಾಕಾಗಿತ್ತು. ವಾಚ್‌ಮನ್ ಮತ್ತೆ ನೆಲವನ್ನು ತನ್ನ ಬೆತ್ತದಿಂದ ಬಡಿಯುತ್ತಾ ಮಾಯವಾದ. ಚಕ್ಕು ಪ್ಲಾಟ್‌ಫಾರಂನ ಮತ್ತೊಂದು ಕಡೆ ನಡೆದ. ಅಲ್ಲಿ ಮಂದ ಬೆಳಕಿನಲ್ಲಿ ಸಾಕಷ್ಟು ಗೋಣೀಚೀಲಗಳ ರಾಶಿಯನ್ನು ಹಾಕಿದ್ದು ಕಂಡು ಬಂತು. ಆ ರಾಶಿಯ ಹಿಂದೆ ಮುದುಕಿಯೊಬ್ಬಳು ಥೇಟ್ ಅವನಜ್ಜಿಯಂತೆ ಬಾಯಿ ತೆರೆದುಕೊಂಡು ನಿದ್ದೆ ಮಾಡುತ್ತಿದ್ದಳು. ಚಿಂದಿಯಾದ ಹೊದಿಕೆಯನ್ನು ಹೊದೆದುಕೊಂಡಿದ್ದಳು. ಚಕ್ಕುವಿಗೆ ಅವಳು ಭಿಕ್ಷಕಿಯಿರಬೇಕೆನ್ನಿಸಿತು. ಆ ವೇಳೆಗಾಗಲೇ ಚಕ್ಕುವಿಗೆ ಕಣ್ಣು ತುಂಬಿ ಬಂದಿತ್ತು. ಆ ಮುದುಕಿಯ ಹೊದಿಕೆಯಲ್ಲಿ ತೂರಿ ಅವಳ ಪಕ್ಕವೇ ಮಲಗಿಕೊಂಡು ಬಿಟ್ಟ – ಅವನಜ್ಜಿಯ ಪಕ್ಕ ಪ್ರತಿನಿತ್ಯ ಮಲಗುವಂತೆ! ಹಳ್ಳಿಯ ಮನೆಯಲ್ಲಿ ಎಷ್ಟೋ ಬಾರಿ ಕೆಲಸದವಳು ಅವನನ್ನು ತನ್ನ ಮಂಚದಲ್ಲಿ ಮಲಗಿಸಿಕೊಂಡರೂ, ರಾತ್ರಿ ಯಾವಾಗಲೋ ಎಚ್ಚರವಾದಾಗ ಅಜ್ಜಿಯ ಹೊದಿಕೆಯೊಳಗೆ ನುಸುಳಿಬಿಡುತ್ತಿದ್ದ. ಈಗಂತೂ ನೆಲಕ್ಕೆ ತಲೆಯಿಟ್ಟಾಕ್ಷಣ ಅವನು ನಿದ್ದೆ ಮಾಡಲಾರಂಭಿಸಿದ.

ಬೆಳಿಗ್ಗೆ ಅವನಿಗೆ ಎಚ್ಚರವಾದಾಗ ಆ ಮುದುಕಿಯನ್ನು ಅಪ್ಪಿಕೊಂಡು ಮಲಗಿದ್ದ. ಮುದುಕಿಯ ತಲೆಯ ಹತ್ತಿರದಲ್ಲಿದ್ದ ಭಿಕ್ಷಾ ಪಾತ್ರೆಯಲ್ಲಿ ಸಾಕಷ್ಟು ನಾಣ್ಯಗಳಿದ್ದವು. ಅವನಿಗೆ ತಾನು ಪೂಜಾ ಪಾತ್ರೆಯಿಂದ ಹತ್ತು ಪೈಸೆ ತೆಗೆದುಕೊಂಡಿದ್ದು ಙಪಕವಾಯ್ತು. ಜೊತೆಗೆ ಹೊಟ್ಟೆಯಲ್ಲಿ ಭಯಂಕರ ಹಸಿವಾಗಲಾರಂಭಿಸಿತು. ನಿನ್ನೆ ಮಧ್ಯಾಹ್ನದಿಂದ ಏನೂ ತಿಂದಿರಲಿಲ್ಲ. ಈ ಮುದುಕಿ ಇಷ್ಟೊಂದು ನಾಣ್ಯಗಳನ್ನು ತೆಗೆದುಕೊಂಡು ಏನು ಮಾಡುತ್ತಾಳೆ ಎಂದು ಆಶ್ಚರ್ಯವಾಯ್ತು. ಹಿಂದೊಮ್ಮೆ ಅವನು ಅಜ್ಜಿಯನ್ನು ಮುದುಕರಿಗೆ ಹಣ ಯಾಕೆ ಬೇಕು ಅಂತ ಕೇಳಿದ್ದ. ಅದಕ್ಕವಳು “ಸತ್ತ ಮೇಲೂ ಹಣ ಬೇಕಾಗ್ತದೆ. ಇಲ್ಲಾ ಅಂದರೆ ಈ ದೇಹವನ್ನ ದಹನ ಯಾರು ಮಾಡ್ತಾರೆ” ಅಂತ ಅಂದಿದ್ದಳು. ಚಕ್ಕುವಿಗೆ ಅದು ಸುಳ್ಳೆಂದೆನಿಸಿತ್ತು. ಮನೆಯಲ್ಲಿ ಕಡಿದು ಹಾಕಿದ ಕಟ್ಟಿಗೆಗಳ ರಾಶಿಯಿತ್ತು!

ಮತ್ತೊಮ್ಮೆ ಆ ಭಿಕ್ಷಾಪಾತ್ರೆಯನ್ನು ನೋಡಿದ. ಅದರಿಂದ ನಾನು ಹತ್ತು ಪೈಸೆ ತೆಗೆದುಕೊಂಡರೆ ಏನಾದರೂ ವ್ಯತ್ಯಾಸವಾಗುತ್ತಾ? ಇಲ್ಲಿ ದೇವರೂ ಇಲ್ಲ, ಅಜ್ಜಿಯೂ ಇಲ್ಲ. “ಬಹುಶಃ ನಾನೇ ಆ ಮುದುಕಿಯನ್ನು ಕೇಳಬೇಕು. ಕೇಳಿದರೆ ಅವಳಾಗಿಯೇ ಕೊಟ್ಟರೂ ಕೊಡಬಹುದು” ಅಂತ ತನ್ನಿಷ್ಟಕ್ಕೆ ತಾನೇ ಹೇಳಿಕೊಂಡ. ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದ. ಹತ್ತಿರದಲ್ಲಿದ್ದ ಹೋಟಲಿನ ಮುಂದಿಟ್ಟ ಅಗ್ಗಿಷ್ಟಿಕೆಯಿಂದ ಹೊಗೆ ಸುರುಳಿ ಸುರುಳಿಯಾಗಿ ಮೇಲಕ್ಕೆದ್ದು ಮಂಜಿನೊಡನೆ ಬೆರೆಯುವುದು ಅವನಿಗೆ ಕಂಡುಬಂತು. ಹತ್ತು ಪೈಸೆ ನಾಣ್ಯವನ್ನವನು ತೆಗೆದುಕೊಂಡು, ಅಜ್ಜಿಯ ಹೊದಿಕೆಯನ್ನು ಸರಿಪಡಿಸಿ, ಉಚ್ಚೆ ಹೊಯ್ಯಲು ಶೌಚಾಲಯದ ಕಡೆಗೆ ನಡೆದ. ಅದರಿಂದ ಹೊರ ಬಂದ ಮೇಲೆ ಕೈಗಳನ್ನು ಮಣ್ಣು ಹಚ್ಚಿ ತಿಕ್ಕಿ ತೊಳೆದುಕೊಂಡ. ಸೋಪಿಲ್ಲದಿದ್ದರೂ ಕಡೆಯ ಪಕ್ಷ ಬೂದಿಯಿಂದಾದರೂ ಕೈಗಳನ್ನುಜ್ಜಿ ತೊಳೆದುಕೊಳ್ಳಬೇಕೆಂದು ಅವನಜ್ಜಿ ಅವನಿಗೆ ಹೇಳಿದ್ದಳು.

“ಬೂದೀನೂ ಇಲ್ಲಾಂದ್ರೆ ನಾನೇನು ಮಾಡಬೇಕು?” ಅಂತ ಮರುಪ್ರಶ್ನೆ ಹಾಕಿದ್ದ.
“ಆಗ ಹೂವಿನ ಕುಂಡದಿಂದ ಸ್ವಲ್ಪ ಮಣ್ಣಾದರೂ ತೊಗೋಬೇಕು. ಏನೇ ಆದರೂ ಉಚ್ಚೆ ಹೊಯ್ದು ಬಂದ ಮೇಲೆ ಯಾವಾಗ್ಲೂ ಕೈ ತೊಳೆದುಕೊಳ್ಳಬೇಕು”

ತಣ್ಣನೆಯ ನೀರಿನಲ್ಲವನು ಕೈ ತೊಳೆದುಕೊಂಡ. ಯಾರೋ ಒಬ್ಬರು ಹಲ್ಲು ತಿಕ್ಕಿ ಹೆಚ್ಚಾದ ಇದ್ದಲಿನ ಪುಡಿಯನ್ನು ಕೊಳಾಯಿಯ ಕಟ್ಟೆಯ ಮೇಲೆ ಬಿಟ್ಟು ಹೋಗಿದ್ದರು. ಚಕ್ಕು ಆ ಇದ್ದಲಿನ ಪುಡಿಯನ್ನೇ ತೆಗೆದುಕೊಂಡು ಹಲ್ಲುಜ್ಜಿಕೊಂಡ. ಕೈ-ಮುಖಗಳನ್ನು ತೊಳೆದುಕೊಂಡು, ಕೈ ಜಾಡಿಸಿ, ನಂತರ ತನ್ನ ನಿಕ್ಕರಿನ ಜೇಬಿನಲ್ಲಿ ಎರಡೂ ಕೈಗಳನ್ನಿಟ್ಟಾಗ ಹತ್ತು ಪೈಸೆ ನಾಣ್ಯದ ತಣ್ಣನೆಯ ಸ್ವರ್ಶವಾಯ್ತು.

ಮತ್ತೆ ಪ್ಲಾಟ್‌ಫಾರಂ ಬಳಿ ಹಿಂತಿರುಗಿ ಬಂದಾಗ ಮೂರು-ನಾಲ್ಕು ಜನ ಮುದುಕಿಯ ಹತ್ತಿರ ನಿಂತದ್ದರು. ಆ ಮುದುಕಿಯ ತಲೆಯ ಹತ್ತಿರ ಕುಳಿತಿದ್ದವನೊಬ್ಬ “ದೇಹ ಸೆಟಗೊಂಡು ಹೋಗ್ಯದೆ. ಮುದುಕಿ ಎಂಟು ಹತ್ತು ಗಂಟೆ ಮುಂಚೇನೇ ಸತ್ತಿರಬೇಕು” ಅಂತ ಹೇಳಿದ.
“ರಾತ್ರಿ ನಿದ್ದೆ ಮಾಡ್ತಿರಬೇಕಾದ್ರೆ ಪ್ರಾಣ ಹೋಗಿರಬೇಕು”

ಚಕ್ಕು ಮುಂದೆ ಹೆಜ್ಜೆ ಇಡಲಾಗದಂತೆ ಅಲ್ಲಿ ನಿಂತುಬಿಟ್ಟ. ವೇಟಿಂಗ್ ರೂಂನಿಂದ ತುಂಬಾ ಜನ ಆ ದಿಕ್ಕಿನಲ್ಲಿ ಬರುತ್ತಿದ್ದರು.

“ಹಾಗಿದ್ರೆ ಈಗ ಈ ಮುದುಕಿಯನ್ನ ಏನು ಮಾಡ್ತಾರೆ?”
“ಸ್ಟೇಷನ್ ಮಾಸ್ತರ್ ಬಂದ ಮೇಲೆ ಸುದ್ದಿನ್ನ ಹೇಳಿ ಕಳಿಸ್ತಾರೆ”
“ಯಾರಿಗೆ?”
“ಮತ್ತಿನ್ಯಾರಿಗೆ? ಮುನಿಸಿಪಾಲಿಟಿಯವರಿಗೆ. ಆಮೇಲಕ್ಕೆ ಮುನಿಸಿಪಾಲಿಟಿ ಜನ ಬಂದು ಈಕಿ ದೇಹನ್ನ ತೊಗೊಂಡು ಹೋಗಿ ದಹನ ಮಾಡ್ತಾರೆ”

ಆ ಮುದುಕಿಯ ಹತ್ತಿರ ಕುಳಿತವನೊಬ್ಬ ಹೊದಕಿಯನ್ನು ಸರಿಸಿ ಅವಳ ಮುಖವನ್ನು ಮುಚ್ಚಿದ. ಚಕ್ಕು ತನ್ನ ಕಿಸೆಯಿಂದ ಹತ್ತು ಪೈಸೆ ನಾಣ್ಯವನ್ನು ತೆಗೆದು ಆ ಭಿಕ್ಷಾಪಾತ್ರೆಯ ಕಡೆ ಒಗೆದುಬಿಟ್ಟ.

ಎಲ್ಲರೂ ಅವನೆಡೆ ನೋಡಲಾರಂಭಿಸಿದಾಗ, ಅವನು ಆ ಜಾಗದಿಂದ ಓಡಲಾರಂಭಿಸಿದ. ತುಂಬಾ ವೇಗವಾಗಿ ಓಡಿದ. ಅವನಿಗೀಗ ಅವನಜ್ಜಿಯನ್ನು ಸೇರಬೇಕಿತ್ತು.