ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಪತ್ರಿಕಾಗೋಷ್ಠಿ;ಕೆಲ ವ್ಯಕ್ತಿಗಳಿಂದ ಪತ್ರಿಕಾ ಭವನ ಮತ್ತು ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಬಗ್ಗೆ ಅಪಪ್ರಚಾರ

ಕೆಲ ವ್ಯಕ್ತಿಗಳಿಂದ ಪತ್ರಿಕಾ ಭವನ ಮತ್ತು ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಬಗ್ಗೆ ಅಪಪ್ರಚಾರ

ಶಿವಮೊಗ್ಗ ನಗರದಲ್ಲಿ ಪ್ರತಿಷ್ಠಿತ ಪತ್ರಿಕಾ ಭವನವು ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ನಿರ್ವಹಣೆಯಲ್ಲಿ ಸಾಗುತಿದ್ದು, ನಿಯಮಾಸಾರ ಕಾರ್ಯಚಟುವಟಿಕೆ ನಡೆಸುತ್ತಿದೆ. ಇದರ ಆಡಳಿತದಲ್ಲಿ ಜಿಲ್ಲಾಡಳಿತ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆದಾಗ್ಯೂ ಕೆಲ ವ್ಯಕ್ತಿಗಳು ಪತ್ರಿಕಾ ಭವನ ಮತ್ತು ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಪ್ರೆಸ್‌ ಟ್ರಸ್ಟ್‌ ಈ ವ್ಯಕ್ತಿಗಳ ವಿರುದ್ಧ ಈಗಾಗಲೇ ಕಾನೂನು ಹೋರಾಟ ಮಾಡುತ್ತಿದೆ ಎಂದು ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಅಧ್ಯಕ್ಷ ಎನ್.ಮಂಜುನಾಥ್‌ ಹೇಳಿದರು.

ಬುಧವಾರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 2009 ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರೆಸ್‌ ಟ್ರಸ್ಟ್‌ಗೆ ನಿವೇಶನ ನೀಡಿದ್ದು, ಲೀಸ್‌ ಆಧಾರದ ಮೇಲೆ ಕೊಟ್ಟ ನಿವೇಶನದಲ್ಲಿ ಸರಕಾರಿ ಅನುದಾನದಿಂದ ಪತ್ರಿಕಾ ಭವನ ನಿರ್ಮಾಣವಾಗಿದೆ. ಅದಾದ ಬಳಿಕ ಬಂದ ಸಿದ್ಧರಾಮಯ್ಯ ಅವರ ಸರಕಾರ ನೀಡಿದ್ದ ಅನುದಾನದಲ್ಲಿ ಮೊದಲ ಮಹಡಿ ನಿರ್ಮಾಣವಾಗಿತ್ತು. ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ನಿರ್ವಹಣೆಯಲ್ಲಿ ನಡೆಯುತ್ತಿರುವ ಪತ್ರಿಕಾ ಭವನ ರಾಜ್ಯದಲ್ಲಿಯೇ ಮಾದರಿಯಾಗಿದೆ. ಇತ್ತೀಚೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಎಂಬ ಸಂಘಟನೆಯು ಪತ್ರಿಕಾ ಭವನಕ್ಕೆ ಆಡಳಿತಾಧಿಕಾರಿ ನೇಮಕ ಮಾಡಬೇಕು ಮತ್ತು ಅಕ್ರಮ ತನಿಖೆ ಮಾಡಬೇಕೆಂದು ದೂರು ನೀಡಿತ್ತು. ಈ ದೂರಿನ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ನಿವೃತ್ತ ನ್ಯಾಯಮೂರ್ತಿ ರವೀಂದ್ರನಾಥ್‌ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ ವರದಿ ನೀಡಲು ಸೂಚನೆ ನೀಡಿದ್ದರು. ಅದರಂತೆ ತನಿಖೆ ಮಾಡಿದ್ದ ನ್ಯಾಯಮೂರ್ತಿಗಳು ವಾದಿ ಮತ್ತು ಪ್ರತಿವಾದಿಗಳು ನೀಡಿದ್ದ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡಿದ್ದಾರೆ ಎಂದು ಮಂಜುನಾಥ್‌ ವಿವರಿಸಿದರು.
ನ್ಯಾ.ರವೀಂದ್ರನಾಥ್‌ ಅವರು, ಪತ್ರಿಕಾ ಭವನ ನಿರ್ವಹಣೆ ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ದೇ ಆಗಿದೆ. ಈ ಸಂಬಂಧ ರಾಜ್ಯ ಉಚ್ಚ ನ್ಯಾಯಾಲಯವು ನೀಡಿದ್ದ ಆದೇಶದಲ್ಲಿ ಜಿಲ್ಲಾಧಿಕಾರಿಗಳಿಗೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ಇಲ್ಲ ಎಂದು ಹೇಳಿದೆ. ಮಾತ್ರವಲ್ಲದೆ, ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಕಾಲಕಾಲಕ್ಕೆ ಸಭೆ, ಆಡಿಟ್‌ ಎಲ್ಲವನ್ನೂ ಕ್ರಮಬದ್ಧವಾಗಿ ನಡೆಸುತ್ತಿದೆ. ಅಲ್ಲಿ ಪಡೆಯುವ ಸೇವಾ ಶುಲ್ಕವನ್ನು ಬ್ಯಾಂಕ್‌ ಖಾತೆಗೆ ಜಮಾ ಮಾಡಿ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿದೆ. ಇಲ್ಲಿ ಯಾವುದೇ ಹಣಕಾಸು ಲೋಪವಿಲ್ಲ ಎಂದು ವರದಿ ನೀಡಿದ್ದಾರೆ. ನ್ಯಾಯಮೂರ್ತಿಗಳ ವರದಿಯನ್ನು ಆಧರಿಸಿ ಜಿಲ್ಲಾಧಿಕಾರಿಗಳು ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಬೈಲಾದಂತೆ ಪತ್ರಿಕಾ ಭವನ ನಿರ್ವಹಣೆ ಮಾಡುತ್ತಿದೆ. ಇದರ ಆಡಳಿತದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಆದೆಶ ನೀಡಿದ್ದಾರೆ. ಮಾನ್ಯತೆ ಪಡೆದ ಪತ್ರಕರ್ತರು ಮತ್ತು ವೃತ್ತಿಗೆ ಸಂಬಂಧಿಸಿದ ಚಟುವಟಿಕೆ ನಡೆಸಲು ಅವರದ್ದೇ ಆದ ಸಂವಿಧಾನ ರಚಿಸಿಕೊಂಡು ಹೋಗಲು ಯಾವುದೇ ಅಡ್ಡಿಯಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ ಎಂದರು.
ವಾಸ್ತವ ಸ್ಥಿತಿ ಹೀಗಿರುವಾಗ ಡಿ.ಜಿ.ನಾಗರಾಜ್‌ ಮತ್ತಿತರ ಕೆಲವರು ಪತ್ರಿಕೆಗಳನ್ನೇ ನಡೆಸದೆ ಮತ್ತು ಪತ್ರಿಕಾಭವನದ ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಪ್ರವೇಶ ಮಾಡಲು ಯತ್ನಿಸುತ್ತಿದ್ದಾರೆ. ಮಾತ್ರವಲ್ಲದೆ ಸರ್ಕಾರಿ ಪತ್ರಿಕಾ ಭವನ ಎಂಬ ವ್ಯಾಖ್ಯಾನ ನೀಡಿ ಸುಳ್ಳು ಹಬ್ಬಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ನೂರಾರು ಸಮುದಾಯ ಭವನ, ಸಂಘಟನೆಗಳಿಗೆ ಸರಕಾರ ನಿವೇಶನ ಮತ್ತು ಅನುದಾನ ನೀಡಿದೆ. ಅವೆಲ್ಲವೂ ಸರಕಾರಿ ಭವನಗಳೆಂದು ಹೇಳಲಾಗದು. ಸರಕಾರಿ ನಿಯಮಗಳಿಗೆ ಒಳಪಟ್ಟು ಆಯಾ ಸಂಸ್ಥೆಗಳ ಆಡಳಿತ ಮಂಡಳಿಗಳು ಎಲ್ಲವನ್ನೂ ನಿರ್ವಹಿಸುತ್ತಿವೆ ಇದು ಎಲ್ಲಾ ಕಡೆಯೂ ನಡೆಯುತ್ತಿರುವ ಒಂದು ವ್ಯವಸ್ಥೆಯಾಗಿದೆ ಎಂದರು.
ಪತ್ರಿಕೆಯನ್ನೇ ಮಾಡದೆ, ಪತ್ರಿಕಾ ಭವನಕ್ಕೆ ಅಕ್ರಮ ಪ್ರವೇಶ ಮಾಡಿ ನೈಜ ಪತ್ರಕರ್ತರಿಗೆ ತೊಂದರೆ ನೀಡುವವರ ವಿರುದ್ಧ ಪ್ರೆಸ್‌ ಟ್ರಸ್ಟ್‌ ಕಾನೂನು ಕ್ರಮ ಕೈಗೊಳ್ಳಲಿದೆ. ಟ್ರಸ್ಟ್‌ ನಿಯಮ ಹಾಗೂ ವಾರ್ತಾ ಇಲಾಖೆಯ ನಿಯಮಗಳ ಅನುಸಾರ ನಿತ್ಯದ ಪತ್ರಿಕಾಗೋಷ್ಠಿಗಳಿಗೆ ಯಾರಿಗೆ ಪ್ರವೇಶ ಇದೆ ಎಂಬ ನಿಯಮ ರೂಪಿಸಲಾಗಿದೆ. ಅದರಂತೆ ಗುರುತಿನ ಚೀಟಿ ನೀಡಲಾಗುವುದು. ನಿಯಮಿತವಾಗಿ ಪ್ರಕಟವಾಗುವ ಪತ್ರಿಕೆಗಳ ಪ್ರತಿನಿಧಿಗಳು, ರಾಜ್ಯ ಮಟ್ಟದ ಪತ್ರಿಕೆಗಳು, ದೃಶ್ಯ ಮಾದ್ಯಮಗಳ ಪ್ರತಿನಿಧಿಗಳು ಸೇರಿದಂತೆ ಸಕ್ರಿಯ ಪತ್ರಕರ್ತರಿಗೆ ಭವದಲ್ಲಿ ಪ್ರವೇಶವಿದೆ. ಪತ್ರಕರ್ತರು ಎಂದು ಹೇಳಿಕೊಂಡು ಅನ್ಯಕೃತ್ಯ ಮಾಡುವ ಯಾರಿಗೂ ಪ್ರವೇಶವಿಲ್ಲ ಎಂದು ಮಂಜುನಾಥ್‌ ಹೇಳಿದರು.
ಪತ್ರಿಕಾಗೋಷ್ಠಿ, ಪತ್ರಿಕಾ ಸಂವಾದಗಳಿಗೆ ವರದಿ ಮಾಡಲು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಸದಸ್ಯತ್ವ ಇದ್ದವರಿಗೆ ಮಾತ್ರ ಪ್ರವೇಶ ಅವಕಾಶ ನೀಡಲಾಗುವುದು ಎಂದು ತಿಳಿಸಿದ ಅವರು, ಮಾಧ್ಯಮ ಪಟ್ಟಿಯಲ್ಲಿದ್ದು, ದಿನಪತ್ರಿಕೆಯಾದರೂ ಪ್ರತಿದಿನ ಪತ್ರಿಕೆ ಅಚ್ಚು ಹಾಕುವವರಿಗೆ ಮಾತ್ರ ಪ್ರೆಸ್ ಟ್ರಸ್ಟ್ ಐಡಿ ಕಾರ್ಡ್‌ ನೀಡುವುದು. ಆದ್ದರಿಂದ ಸಂಬಂಧಿಸಿದ ಪತ್ರಿಕಾ ಸಂಪಾದಕರು ಪ್ರೆಸ್ ಟ್ರಸ್ಟ್ ಕಾರ್ಯಾಲಯದಿಂದ ಅರ್ಜಿ ನಮೂನೆಗಳನ್ನು ಪಡೆದು ಅರ್ಜಿ ಸಲ್ಲಿಸಬಹುದು ಎಂದ ಅವರು, ಇನ್ನುಮುಂದೆ ಯಾವುದೇ ಕಾರಣಕ್ಕೂ ಪ್ರೆಸ್ ಟ್ರಸ್ಟ್ ನ ಐಡಿ ಕಾರ್ಡ್‌ ಹೊಂದಿರದ ಪತ್ರಕರ್ತರಿಗೆ ಪತ್ರಿಕಾಗೋಷ್ಠಿಗಳಿಗೆ ಪ್ರವೇಶ ನೀಡುವುದಿಲ್ಲ ಎಂದು ಪುನರುಚ್ಛರಿಸಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ನಿಂದ ಪತ್ರಕರ್ತರಿಗೆ ನಿವೇಶನ ನೀಡಲಾಗಿದೆ. ಭವ್ಯ ಭವನ ನಿರ್ಮಾಣಕ್ಕೆ ಸ್ಥಳೀಯ ಜನಪ್ರತಿನಿಧಿಗಳು, ಹಿಂದಿನ ಶಾಸಕರುಗಳು, ಪರಿಷತ್‌ ಸದಸ್ಯರು, ಸಂಸದ ಬಿ.ವೈ.ರಾಘವೇಂದ್ರ, ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ, ಕೆ.ಬಿ.ಪ್ರಸನ್ನಕುಮಾರ್‌, ರುದ್ರೇಗೌಡ, ಎಂ.ಶ್ರೀಕಾಂತ್‌ ಸೇರಿದಂತೆ ಅನೇಕರು ಸಹಕಾರ ನೀಡಿದ್ದಾರೆ ಈ ಎಲ್ಲರನ್ನೂ ಈ ಸಂದರ್ಭ ಸ್ಮರಿಸುತ್ತೇವೆ. ಉತ್ತಮ ಉದ್ದೇಶಕ್ಕೆ ನಿರ್ಮಾಣಗೊಂಡಿರುವ ಪತ್ರಿಕಾ ಭವನದಲ್ಲಿ ನೈಜ ಪತ್ರಿಕೋದ್ಯಮದಲ್ಲಿ ತೊಡಗಿರುವ ಕಾರ್ಯನಿರತ ಪತ್ರಕರ್ತರ ಚಟುವಟಿಕೆಗೆ ಯಾವುದೇ ಅಡ್ಡಿಯಿಲ್ಲ. ಆದರೆ ಪತ್ರಕರ್ತರೆಂದು ಹೇಳಿಕೊಂಡು ಕಾಲ ಹಾಕುವ ಯಾರಿಗೂ ಪ್ರವೇಶವಿಲ್ಲ. ನಿರಂತರವಾಗಿ ಪತ್ರಿಕೆ ಮಾಡಿಕೊಂಡು ಬರುವ ಯಾರಿಗೂ ಪ್ರವೇಶ ನಿರಾಕರಿಸುವುದಿಲ್ಲ ಎಂದು ಮಂಜುನಾಥ್‌ ಹೇಳಿದರು.

ಪತ್ರಿಕಾಭವನ ನೈಜ ಪತ್ರಕರ್ತರ ಚಟುವಟಿಕೆಯ ಕೇಂದ್ರವಾಗಿದೆ. ಉದ್ಯಮದ ಹೆಸರಲ್ಲಿ ಅಕ್ರಮ ಕೆಲಸ ಮಾಡುವ ಯಾರಿಗೂ ಪ್ರವೇಶವಿಲ್ಲ. ಪತ್ರಿಕಾ ಭವನ ಯಾರ ಸ್ವಂತ ಆಸ್ತಿಯಲ್ಲ. ಆದರೆ ಪತ್ರಕರ್ತರಲ್ಲದವರ ದುಂಡಾವರ್ತಿಗೆ ಇಲ್ಲಿ ಅವಕಾಶ ನೀಡುವುದಿಲ್ಲ. ಕಾನೂನು ಬದ್ಧವಾಗಿ ಆಡಳಿತ ಮಂಡಳಿ ಇದ್ದು. ಪತ್ರಕರ್ತರ ಕ್ಷೇಮಾಭಿವೃದ್ಧಿ ಮತ್ತು ವೃತ್ತಿಪರತೆಗೆ ಮಾತ್ರ ಇಲ್ಲಿ ಆದ್ಯತೆ ನೀಡಲಾಗುವುದು.
-ಎನ್.ಮಂಜುನಾಥ್‌, ಅಧ್ಯಕ್ಷರು ಶಿವಮೊಗ್ಗ ಪ್ರೆಸ್‌ ಟ್ರಸ್ಟ್.

ಪತ್ರಿಕಾಗೋಷ್ಠಿಯಲ್ಲಿ ಪ್ರೆಸ್ ಟ್ರಸ್ಟ್ ಪದಾಧಿಕಾರಿಗಳಾದ ಮಲೆನಾಡು ಮಿತ್ರ ಸಂಪಾದಕ ನಾಗರಾಜ್ ನೇರಿಗೆ, ಕನ್ನಡ ಪ್ರಭದ ಹಿರಿಯ ವರದಿಗಾರ ಗೋಪಾಲ್ ಎಸ್. ಯಡಗೆರೆ, ಮಲೆನಾಡು ಟುಡೇ ಸಂಪಾದಕ ಹಾಗೂ ಜೀ ನ್ಯಸ್‌ ವರದಿಗಾರ ಜೇಸುದಾಸ್, ವಿಜಯ ಕರ್ನಾಟಕ ಪ್ರಧಾನ ವರದಿಗಾರ ಸಂತೋಷ್ ಕಾಚನಕಟ್ಟೆ, ಇಂಡಿಯನ್‌ ಎಕ್ಸ್‌ ಪ್ರೆಸ್‌ ಹಿರಿಯ ವರದಿಗಾರ ರಾಮಚಂದ್ರ ಗುಣಾರಿ, ಹಿರಿಯ ಪತ್ರಕರ್ತ ಹುಲಿಮನೆ ತಿಮ್ಮಪ್ಪ, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಆರಗ ರವಿ, ನ್ಯೂಸ್‌ ಫಸ್ಟ್‌ ವರದಿಗಾರ ವಿ.ಸಿ.ಪ್ರಸನ್ನ, ತುಂಗಾತರಂಗ ಸಂಪಾದಕ ಗಜೇಂದ್ರಸ್ವಾಮಿ, ಛಲದಂಕಮಲ್ಲ ಸಂಪಾದಕ ಪದ್ಮನಾಭ್, ಪಿ.ಸಿ.ನಾಗರಾಜ್, ಕನ್ನಡ ಮೀಡಿಯಂ ಸಂಪಾದಕ ಹೊನ್ನಾಳಿ ಚಂದ್ರಶೇಖರ್, ಪ್ರಜಾವಾಣಿಯ ಶಿವಮೊಗ್ಗ ನಾಗರಾಜ್, ಈ ಟಿವಿ ಭಾರತ್‌ ಪ್ರತಿನಿಧಿ ಕಿರಣ್ ಕಂಕಾರಿ, ಸ್ಪಂದನಾ ಚಂದ್ರು ಇತರರು ಇದ್ದರು.