*7 ಕೋಟಿ ದರೋಡೆ ಕೇಸ್​​ನ ಮಾಸ್ಟರ್​ಮೈಂಡ್​​ ಪೊಲೀಸಪ್ಪನ ಜೊತೆ ಸಿಎಂಎಸ್​​ ಮಾಜಿ ಉದ್ಯೋಗಿಯೂ ಲಾಕ್!*

*7 ಕೋಟಿ ದರೋಡೆ ಕೇಸ್​​ನ ಮಾಸ್ಟರ್​ಮೈಂಡ್​​ ಪೊಲೀಸಪ್ಪನ ಜೊತೆ ಸಿಎಂಎಸ್​​ ಮಾಜಿ ಉದ್ಯೋಗಿಯೂ ಲಾಕ್!*

ಎಟಿಎಂಗೆ ಹಣ ಪೂರೈಸುತ್ತಿದ್ದ ವಾಹನ ಅಡ್ಡಗಟ್ಟಿ ಬರೋಬ್ಬರಿ 7 ಕೋಟಿ 11 ಲಕ್ಷ ರೂಪಾಯಿಗಳನ್ನ ಗ್ಯಾಂಗ್​​ ದರೋಡೆ ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್​​ ಸಿಗುತ್ತಿದೆ.

ಪೊಲೀಸ್​​ ಕಾನ್ಸ್‌ಟೇಬಲ್ ಓರ್ವನೇ ಪ್ರಕರಣದ ಮಾಸ್ಟರ್​ಮೈಂಡ್​​ ಎಂದು ಹೇಳಲಾಗಿದ್ದು, ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಎಂಬವರನ್ನು ದಕ್ಷಿಣ ವಿಭಾಗದ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಆದರೆ ಈ ನಡುವೆ ಕೇಸ್​​ಗೆ ಮತ್ತೊಂದು ರೋಚಕ ತಿರುವು ಸಿಕ್ಕಿದೆ.

ದರೋಡೆ ಗ್ಯಾಂಗ್​​ ಹಿಂದೆ ಇದ್ದಿದ್ದು ಪೊಲೀಸ್​​ ಕಾನ್ಸ್‌ಟೇಬಲ್ ಮಾತ್ರವಲ್ಲ ಬದಲಾಗಿ ಸಿಎಂಎಸ್ ಮಾಜಿ ಉದ್ಯೋಗಿಯೂ ಕೃತ್ಯಕ್ಕೆ ಸಾಥ್​​ ನೀಡಿದ್ದ ಎಂಬ ವಿಚಾರ ಪೊಲೀಸರ ತನಿಖೆವೇಳೆ ಬಯಲಾಗಿದೆ. ಹೀಗಾಗಿ ಸಿಎಂಎಸ್​​ನಲ್ಲಿ ಈ ಹಿಂದೆ ಕೆಲಸಮಾಡಿದ್ದ ಝೇವಿಯರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಒಂದು ವರ್ಷದ ಹಿಂದೆ ಸಿಎಂಎಸ್​​ನಿಂದ ಕೆಲಸ ಬಿಟ್ಟಿದ್ದ ಎಂಬುದು ಗೊತ್ತಾಗಿದೆ. ಇತ್ತ ಬಾಣಸವಾಡಿಯಲ್ಲಿ ಕ್ರೈಂ ಬೀಟ್ ಮಾಡುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪನನ್ನು ​​ ಹೊಯ್ಸಳಕ್ಕೆ ವರ್ಗಾಯಿಸಲಾಗಿತ್ತು. ಮಾಡಲು ಕೆಲಸವಿಲ್ಲದೆ ಅಣ್ಣಪ್ಪ ಮತ್ತು ಝೇವಿಯರ್​ ಇಬ್ಬರೂ ಪ್ರತಿದಿನ ಮೀಟಿಂಗ್ ಮಾಡುತ್ತಿದ್ದರು. ಈ ವೇಳೆ ಸಿಎಂಎಎಸ್​ನ ಹಣ ರವಾನೆಯ ಎಲ್ಲಾ ವಿಚಾರವನ್ನ ಅಣ್ಣಪ್ಪ ಬಳಿ ಝೇವಿಯರ್​ ಹೇಳಿಕೊಂಡಿದ್ದ. ಹಣ ದರೋಡೆಗೆ ಆರೋಪಿಗಳು ಯೋಚಿಸಿದ್ದು, ಸಿಎಂಎಸ್​​ ಪ್ಲ್ಯಾನ್​​ ನಂದು, ಎಸ್ಕೇಪ್​ ಪ್ಲ್ಯಾನ್​ ನಿಂದು ಎಂದು ಝೇವಿಯರ್​​ ಅಣ್ಣಪ್ಪಗೆ ತಿಳಿಸಿದ್ದ ಎನ್ನಲಾಗಿದೆ.

ಅವರ ಪ್ಲ್ಯಾನ್​​ನಂತೆ ಹಣ ಸಾಗಿಸುತ್ತಿದ್ದ ವಾಹನ ತಡೆದು 7 ಕೋಟಿ 11 ಲಕ್ಷ ಹಣವನ್ನು ಗ್ಯಾಂಗ್​​ ದೋಚಿ ಪರಾರಿಯಾಗಿದೆ. ಆದರೆ ದರೋಡೆ ಸಂದರ್ಭ ಪ್ರಕರಣದ ಮಾಸ್ಟರ್​​ ಮೈಂಡ್​ಗಳಾದ ಝೇವಿಯರ್ ಮತ್ತು ಅಣ್ಣಪ್ಪ ಇಬ್ಬರೂ ಸ್ಪಾಟ್​​ ಹೋಗಿರಲಿಲ್ಲ. ಬದಲಾಗಿ ದರೋಡೆ ಹೇಗೆ ಮಾಡಬೇಕು, ಹೇಗೆ ಎಸ್ಕೇಪ್​ ಆಗಬೇಕು ಎಂಬ ಪಕ್ಕಾ ರೂಟ್​​ ಪ್ಲ್ಯಾನ್​​ ಮಾಡಿಕೊಟ್ಟು ಕಾದು ಕುಳಿತಿದ್ದರು ಎಂಬುದು ಪೊಲೀಸರ ತನಿಖೆವೇಳೆ ಗೊತ್ತಾಗಿದೆ. ಪ್ರಕರಣ ಸಂಬಂಧ ಸದ್ಯ ಝೇವಿಯರ್ ಮತ್ತು ಕಾನ್ಸ್‌ಟೇಬಲ್ ಅಣ್ಣಪ್ಪನನ್ನ ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿದಿದೆ. ಉಳಿದ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ. ಹಣ ದೋಚಿದವರು ಎಲ್ಲಿಗೆ ಹೋಗಿದ್ದಾರೆ? ಹಣ ಎಲ್ಲಿದೆ ಎಂಬುದರ ಬಗ್ಗೆಯೂ ನಾಲ್ವರು ಜಂಟಿ ಪೊಲೀಸ್ ಆಯುಕ್ತರು, 18 ಡಿಸಿಪಿಗಳ ನೇತೃತ್ವದಲ್ಲಿ ಹುಟುಕಾಟ ನಡೆಸಲಾಗುತ್ತಿದೆ.