ಅರಣ್ಯ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ವಿ.ಪ ಶಾಸಕ ಡಾ. ಧನಂಜಯ ಸರ್ಜಿ ಆಗ್ರಹ

ಅರಣ್ಯ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ವಿ.ಪ ಶಾಸಕ ಡಾ. ಧನಂಜಯ ಸರ್ಜಿ ಆಗ್ರಹ

ಬೆಂಗಳೂರು : ರಾಜ್ಯದಲ್ಲಿ ಬೇಸಿಗೆಯ ಬಿಸಿ ಹೆಚ್ಚಾಗುತ್ತಿದ್ದಂತೆ ಕಾಡ್ಗಿಚ್ಚಿನ ಆತಂಕವೂ ತೀವ್ರಗೊಂಡಿದ್ದು, ಚಾರ್ಮುಡಿ ಮತ್ತು ಕುದುರೆಮುಖ ಸೇರಿದಂತೆ ರಾಜ್ಯದ ಪ್ರಮುಖ ಅರಣ್ಯ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬೆಂಕಿಯ ಅವಘಡಗಳು ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಕಾಡ್ಗಿಚ್ಚನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕಾದ ಅರಣ್ಯ ಇಲಾಖೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ ಎಂದು ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಮಂಗಳವಾರ ವಿಧಾನ ಪರಿಷತ್ ನಲ್ಲಿ ಕಳವಳ ವ್ಯಕ್ತಪಡಿಸಿದರು.

ಕಾಡ್ಗಿಚ್ಚಿನಿಂದಾಗಿ ಅಮೂಲ್ಯ ಔಷಧೀಯ ಸಸ್ಯಗಳು ಮತ್ತು ಅಳಿವಿನಂಚಿನಲ್ಲಿರುವ ಜೀವವೈವಿಧ್ಯಗಳು ನಾಶವಾಗುತ್ತಿರುವುದು ಅರಣ್ಯ ಸಮತೋಲನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಇಂದಿನ ಆಧುನಿಕ ಯುಗದಲ್ಲೂ ಇಂತಹ ವಿಪತ್ತುಗಳನ್ನು ತಡೆಗಟ್ಟಲು ಸಾಧ್ಯವಾಗದಿರುವುದು ನಾಗರಿಕ ಸಮಾಜಕ್ಕೆ ದೊಡ್ಡ ಸವಾಲಾಗಿದೆ, ಪ್ರಸ್ತುತ ರಾಜ್ಯದಲ್ಲಿ 591 ಡಿ.ಆರ್.ಎಫ್.ಒ, 2621 ಫಾರೆಸ್ಟ್ ಗಾರ್ಡ್ ಹಾಗೂ 1707 ಫಾರೆಸ್ಟ್ ವಾಚರ್ಸ್‌ ಸೇರಿದಂತೆ ಒಟ್ಟು ಸಾವಿರಾರು ಹುದ್ದೆಗಳು ಭರ್ತಿಯಾಗದೆ ಉಳಿದಿವೆ. ಸಿಬ್ಬಂದಿಗಳ ಕೊರತೆಯಿಂದಾಗಿ ಅರಣ್ಯ ರಕ್ಷಣೆಯ ಕಾರ್ಯಕ್ಕೆ ಹಿನ್ನಡೆಯಾಗುತ್ತಿದ್ದು, ಸರ್ಕಾರವು ತಕ್ಷಣವೇ ಎಚ್ಚೆತ್ತುಕೊಂಡು ಈ ಖಾಲಿ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಬೇಕು ಹಾಗೂ ಆಧುನಿಕ ತಂತ್ರಜ್ಞಾನದ ಉಪಕ್ರಮಗಳೊಂದಿಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಡಾ. ಧನಂಜಯ ಸರ್ಜಿ ಶೂನ್ಯವೇಳೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.