ಸರ್ಕಾರದ ನಿರ್ಲಕ್ಷ್ಯದಿಂದ ಮಲೆನಾಡಿನ ಪರಿಸರ ನಾಶ – ಡಿ.ಎಸ್. ಅರುಣ್ ಆಕ್ರೋಶ*

 ಸರ್ಕಾರದ ನಿರ್ಲಕ್ಷ್ಯದಿಂದ ಮಲೆನಾಡಿನ ಪರಿಸರ ನಾಶ – ಡಿ.ಎಸ್. ಅರುಣ್ ಆಕ್ರೋಶ*

ಶಿವಮೊಗ್ಗ/ಬೆಂಗಳೂರು:
ರಾಜ್ಯದ ಪವಿತ್ರ ನದಿಗಳು ಮತ್ತು ಪಶ್ಚಿಮ ಘಟ್ಟದ ಪ್ರವಾಸಿ ತಾಣಗಳು ಇಂದು ಕಸದ ತೊಟ್ಟಿಗಳಾಗಿ ಮಾರ್ಪಾಡುತ್ತಿದ್ದರು ರಾಜ್ಯ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ ಎಂದು ವಿಧಾನ ಪರಿಷತ್ ಶಾಸಕರಾದ ಶ್ರೀ ಡಿ.ಎಸ್. ಅರುಣ್ ಅವರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್‌ನ *ಶೂನ್ಯ ವೇಳೆಯಲ್ಲಿ* ಈ ವಿಷಯ ಪ್ರಸ್ತಾಪಿಸಿದ ಅವರು, ಸ್ವಚ್ಛ ಭಾರತ ಅಭಿಯಾನಕ್ಕೆ ದಶಕ ಪೂರ್ಣಗೊಂಡಿದ್ದರೂ ಪರಿಸರ ಸ್ಥಿತಿ ಶೋಚನೀಯವಾಗಿರುವುದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದರು. ಶಿವಮೊಗ್ಗ ಜಿಲ್ಲೆಯ ತುಂಗಾ, ಭದ್ರಾ ಮತ್ತು ಶರಾವತಿ ನದಿಗಳಿಗೆ ಕಸಾಯಿಖಾನೆಗಳ ತ್ಯಾಜ್ಯ ಹಾಗೂ ಆಸ್ಪತ್ರೆಗಳ ಅಪಾಯಕಾರಿ ವಸ್ತುಗಳನ್ನು ನೇರವಾಗಿ ಹರಿಸಲಾಗುತ್ತಿದ್ದು, ಇದು ಸಾರ್ವಜನಿಕ ಆರೋಗ್ಯಕ್ಕೆ ಭಾರಿ ಅಪಾಯ ಉಂಟುಮಾಡುತ್ತಿದೆ ಎಂದು ಎಚ್ಚರಿಸಿದರು.

ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳಾದ ಜೋಗ ಮತ್ತು ಆಗುಂಬೆ ಪ್ಲಾಸ್ಟಿಕ್ ಹಾಗೂ ಮದ್ಯದ ಬಾಟಲಿಗಳ ತಾಣವಾಗುತ್ತಿರುವುದು ಕಳವಳಕಾರಿಯಾಗಿದೆ ಎಂದು ಹೇಳಿದರು. ಸರ್ಕಾರ ಕೇವಲ ಪ್ರಚಾರಕ್ಕೆ ಸೀಮಿತವಾಗದೆ, ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಜಾರಿಗೆ ತಂದು, ನದಿಗಳಿಗೆ ಕಸ ಸುರಿಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಸಿಸಿಟಿವಿ ಕಣ್ಗಾವಲು ಹೆಚ್ಚಿಸಬೇಕು ಹಾಗೂ *ಗ್ರಾಮೀಣ ತ್ಯಾಜ್ಯ ನಿರ್ವಹಣೆಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು*.

ಮಲೆನಾಡು ರಾಜ್ಯದ ಜೀವಾಳವಾಗಿದ್ದು, ಅದರ ಪರಿಸರ ನಾಶವಾದರೆ ಇಡೀ ರಾಜ್ಯಕ್ಕೆ ದುಷ್ಪರಿಣಾಮ ಬೀರುತ್ತದೆ. ಇದು ಪಕ್ಷಾತೀತ ವಿಷಯವಾಗಿದ್ದು, ಮುಂದಿನ ಪೀಳಿಗೆಯ ಬದುಕಿನ ಪ್ರಶ್ನೆ ಎಂದು ಅವರು ಸರ್ಕಾರಕ್ಕೆ ಗಂಭೀರ ಸಂದೇಶ ನೀಡಿದರು.