ಗಾಂಧಿ ಪಾರ್ಕ್‌ನಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಸೌಲಭ್ಯ: ವಾರದೊಳಗೆ ವಿಜ್ಞಾನ ಉದ್ಯಾನವನ ಲೋಕಾರ್ಪಣೆ

ಗಾಂಧಿ ಪಾರ್ಕ್‌ನಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಸೌಲಭ್ಯ: ವಾರದೊಳಗೆ ವಿಜ್ಞಾನ ಉದ್ಯಾನವನ ಲೋಕಾರ್ಪಣೆ

​ಶಿವಮೊಗ್ಗ: ನಗರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಗಾಂಧಿ ಪಾರ್ಕ್‌ನಲ್ಲಿ ಸ್ಥಗಿತಗೊಂಡಿದ್ದ ಸೌಲಭ್ಯಗಳನ್ನು ಪುನಾರಂಭಿಸಿ, ಹೊಸ ಆಕರ್ಷಣೆಗಳನ್ನು ಸಾರ್ವಜನಿಕರಿಗೆ ನೀಡುವ ನಿಟ್ಟಿನಲ್ಲಿ ಶಾಸಕರಾದ ಶ ಎಸ್.ಎನ್. ಚನ್ನಬಸಪ್ಪ ಅವರು ಇಂದು ಮಹಾನಗರ ಪಾಲಿಕೆ ಆಯುಕ್ತರಾದ  ಮಾಯಣ್ಣ ಗೌಡ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

​ಬಳಿಕ ಮಾತನಾಡಿದ ಶಾಸಕರು, “ಪಾರ್ಕ್‌ನ ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎರಡು ಶಿಫ್ಟ್‌ಗಳಲ್ಲಿ ಹೋಮ್ ಗಾರ್ಡ್ಸ್‌ಗಳನ್ನು ನೇಮಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಹಾಳಾಗಿದ್ದ ಮಕ್ಕಳ ಟ್ರೈನ್ ಅನ್ನು ದುರಸ್ತಿಗೊಳಿಸಿ ಇಂದು ಸಂಜೆ ವೇಳೆಗೆ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗಿದೆ. ಹಾಗೆಯೇ ಬಹುನಿರೀಕ್ಷಿತ ಸ್ವಿಮ್ಮಿಂಗ್ ಪೂಲ್ ಕಾರಂಜಿ ಕೆಲಸ ಮುಕ್ತಾಯವಾಗಿದ್ದು, 15 ದಿನಗಳೊಳಗೆ ನಿರ್ವಹಣಾ ಸಮಿತಿ ರಚಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು” ಎಂದರು.

​ಉದ್ಯಾನವನಕ್ಕೆ ಹೊಸ ಮೆರುಗು ನೀಡಲು 5 ಕೃತಕ ಕೊಳಗಳನ್ನು ನಿರ್ಮಿಸಲಾಗುತ್ತಿದೆ. ಪರಿಸರ ಮತ್ತು ವಿಜ್ಞಾನದ ಕುರಿತು ಮಕ್ಕಳಿಗೆ ಅರಿವು ಮೂಡಿಸಲು ಈಗಾಗಲೇ ಸಿದ್ಧವಾಗಿರುವ ವನ್ಯಜೀವಿ ವ್ಯಾಖ್ಯಾನ ಕೇಂದ್ರ ಹಾಗೂ ವಿಜ್ಞಾನ ಉದ್ಯಾನವನವನ್ನು ಒಂದು ವಾರದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಾರ್ಕ್‌ನ ಸ್ವಚ್ಛತೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಯಾವುದೇ ಲೋಪವಾಗದಂತೆ ನಿರ್ವಹಣೆ ಮಾಡಲು ಪಾಲಿಕೆಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ಅವರು ತಿಳಿಸಿದರು.

​ಈ ಸಂದರ್ಭದಲ್ಲಿ ಪಾಲಿಕೆಯ ಇಂಜಿನಿಯರ್‌ಗಳು ಹಾಗೂ ಉದ್ಯಾನವನದ ಸಿಬ್ಬಂದಿಗಳು ಉಪಸ್ಥಿತರಿದ್ದರು.