*ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ- ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ವಿವರಣೆ* *ಫೆ.24ರಿಂದ 28ರ ವರೆಗೆ ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ಜಾತ್ರೆ* *1.6 ಕೆ.ಜಿ. ಬಂಗಾರದ ಮುಖ- 16 ಕೆ.ಜಿ.ಬೆಳ್ಳಿ ಗೌರಿ ವಿಗ್ರಹ- ಗಾಂಧಿ ಬಜಾರಲ್ಲಿ ಜರ್ಮನ್ ಟೆಂಟ್- ಬಿ.ಹೆಚ್.ರಸ್ತೆಯಲ್ಲೂ ಶಾಮಿಯಾನ…*
*ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ- ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ವಿವರಣೆ*
*ಫೆ.24ರಿಂದ 28ರ ವರೆಗೆ ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ಜಾತ್ರೆ*
*1.6 ಕೆ.ಜಿ. ಬಂಗಾರದ ಮುಖ- 16 ಕೆ.ಜಿ.ಬೆಳ್ಳಿ ಗೌರಿ ವಿಗ್ರಹ- ಗಾಂಧಿ ಬಜಾರಲ್ಲಿ ಜರ್ಮನ್ ಟೆಂಟ್- ಬಿ.ಹೆಚ್.ರಸ್ತೆಯಲ್ಲೂ ಶಾಮಿಯಾನ…*

ಶಿವಮೊಗ್ಗ ; ನಗರದ ಹೆಸರಾಂತ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವ ಫೆಬ್ರವರಿ 24 ರಿಂದ 28 ರವರೆಗೆ ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ ಎಂದು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಎಸ್.ಕೆ.ಮರಿಯಪ್ಪ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತ ನಾಡಿದ ಅವರು,ಫೆಬ್ರವರಿ 24ರಂದು ಬೆಳಗಿನ ಜಾವ 5.30ಕ್ಕೆ ನಗರದ ಗಾಂಧಿಬಜಾರ್‌ನ ದೇವಿಯ ತವರು ಮನೆಯಲ್ಲಿ ಮಂಗಳವಾದ್ಯದೊಂದಿಗೆ ಬಿ.ಬಿ.ರಸ್ತೆಯ ಬ್ರಾಹ್ಮಣ ಸಮಾಜದ ನಾಡಿಗ ಕುಟುಂಬದವರು ಪೂಜೆಗೆ ಬರುತ್ತಾರೆ. ಆ ಕುಟುಂಬದ ಮುತ್ತೈದೆಯರು ಮಂಗಳ ದ್ರವ್ಯಾದಿಗಳೊಂದಿಗೆ ದೇವಿಗೆ ಉಡಿತುಂಬುವ ಮೂಲಕ ಪೂಜೆ ಸಲ್ಲಿಸುತ್ತಾರೆ. ನಂತರ ವಿಶ್ವ ಕರ್ಮ ಸಮಾಜದವರು ಸಾರ್ವಜನಿಕ ವಾಗಿ ಪೂಜೆಯನ್ನು ಆರಂಭಿಸುತ್ತಾರೆ ಎಂದರು.
ಅದೇ ದಿನ ರಾತ್ರಿ 10 ಗಂಟೆಯ ವರೆಗೂ ಗಾಂಧಿ ಬಜಾರ್‌ನಲ್ಲಿ ಪೂಜೆಗೆ ಅವಕಾಶವಿರುತ್ತದೆ. ನಂತರ ರಾತ್ರಿ ಉಪ್ಪಾರ ಸಮಾಜದವರು ದೇವಿ ಯನ್ನು ರಥದಲ್ಲಿ ಕೂರಿಸಿಕೊಂಡು ಮೆರವಣಿಗೆ ಮುಖಾಂತರ ಮಾರಿಗದ್ದುಗೆಗೆ ತಂದು ಪ್ರತಿಷ್ಠಾಪಿಸುತ್ತಾರೆ. ಈ ನಡುವೆ ಗಂಗಾ ಪರಮೇಶ್ವರಿ ದೇವ ಸ್ಥಾನದಿಂದ ಗಂಗಾ ಪೂಜೆಯೊಂದಿಗೆ ಅಮ್ಮನವರನ್ನು ಮಂಗಳವಾದ್ಯದೊಂದಿಗೆ ಎದುರುಗೊಂಡು ಗಂಗಾಮತಸ್ಥ ಸಮಾಜದವರು ಪೂಜೆ ಸಲ್ಲಿಸುತ್ತಾರೆ.
ಫೆಬ್ರವರಿ ,24ರ ಬೆಳಗಿನ ಜಾವ 4 ಗಂಟೆಗೆ ವಿದ್ಯಾನಗರ ಕರಲಹಟ್ಟಿಯ ಹರಿಜನ ಸಮಾಜ ಬಾಂಧವರು ಬೇವಿನ ಉಡುಗೆಯೊಂದಿಗೆ ಆಗಮಿಸಿ ಶ್ರೀ ಮಾರಿಕಾಂಬೆಗೆ ಪೂಜೆ ಸಲ್ಲಿಸಿದ ನಂತರ ಅಮ್ಮನವರನ್ನು ಗದ್ದುಗೆಗೆ ಪ್ರತಿಷ್ಠಾಪಿಸಲಾಗುತ್ತದೆ. ಇದಾದ ನಂತರ ಕುರುಬ ಜನಾಂಗದ ಗುತ್ಯಮ್ಮ ದೇವಾಲಯದ ಅರ್ಚಕರಾದ ಚೌಡಿಕೆ ಕುಟುಂಬದವರು ನೈವೇದ್ಯಮಾಡಿ ಪೂಜೆ ಸಲ್ಲಿಸುತ್ತಾರೆ. ಬುಧವಾರ ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ವಾಲ್ಮೀಕಿ ಸಮಾಜದವರು, ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆಉಪ್ಪಾರ ಸಮಾಜದವರು, ತದ ನಂತರ ರಾತ್ರಿ 11 ಗಂಟೆಯವರೆಗೆ ಮಡಿವಾಳ ಸಮಾಜದವರು ಸರದಿಯಂತೆ ನಾಲ್ಕು ದಿನಗಳ ಕಾಲ ಅಮ್ಮನವರಿಗೆ ಪೂಜೆ ಸಲ್ಲಿಸುತ್ತಾರೆ ಎಂದು ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ವಿವರಿಸಿದರು.
ಫೆಬ್ರವರಿ 28ರ ಶನಿವಾರ ರಾತ್ರಿ 7 ಗಂಟೆಗೆ ದೇವಿಗೆ ಮಹಾ ಮಂಗಳಾರತಿ ಸಲ್ಲಿಸಿದ ನಂತರ ಶ್ರೀ ಮಾರಿಕಾಂಬೆಯ ಉತ್ಸವ ವಿವಿಧ ಜಾನಪದ ತಂಡಗಳ ಮೆರಗಿನೊಂದಿಗೆ ಲಕ್ಷಾಂತರ ಮಂದಿ ಭಕ್ತಾದಿಗಳ ಸಮ್ಮುಖ ದಲ್ಲಿ ಅಮ್ಮನವರನ್ನು ವನ ಪ್ರವೇಶಕ್ಕೆ ಕಳುಹಿಸಿಕೊಡುವ ಮೂಲಕ ಜಾತ್ರೆಗೆ ತೆರೆ ಬೀಳುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷ ಎನ್.ಉಮಾಪತಿ, ಕಾರ್ಯದರ್ಶಿ ಗಳಾದ ಎಸ್.ಹನುಮಂತಪ್ಪ, ಬಿ.ಎಂ. ರಾಮಯ್ಯ, ಎಸ್.ಸಿ. ಲೋಕೇಶ್, ಸಹ ಕಾರ್ಯದರ್ಶಿಗಳಾದ ಎ.ಹೆಚ್. ಸುನೀಲ್, ಟಿ.ಎಸ್.ಚಂದ್ರಶೇಖರ್, ಸತ್ಯನಾರಾಯಣ ಇನ್ನೂ ಮುಂತಾದವರು ಉಪಸ್ಥಿತರಿದ್ದರು.


