*ಹಂಪುಗಳ ಬೆನ್ನುಬಿದ್ದ ಪೊಲೀಸರು-ಪಾಲಿಕೆ;* *ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್ ಜೊತೆ ಬೀದಿಗಿಳಿದ ಎಸ್ ಪಿ ನಿಖಿಲ್* *ಇತ್ತ ಪಾಲಿಕೆ ಆಯುಕ್ತ ಮಾಯಣ್ಣ ಗೌಡರ ಟೂ ವ್ಹೀಲರ್ ರೌಂಡ್ಸ್!*
*ಹಂಪುಗಳ ಬೆನ್ನುಬಿದ್ದ ಪೊಲೀಸರು-ಪಾಲಿಕೆ;*
*ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್ ಜೊತೆ ಬೀದಿಗಿಳಿದ ಎಸ್ ಪಿ ನಿಖಿಲ್*
*ಇತ್ತ ಪಾಲಿಕೆ ಆಯುಕ್ತ ಮಾಯಣ್ಣ ಗೌಡರ ಟೂ ವ್ಹೀಲರ್ ರೌಂಡ್ಸ್!*

ಶಿವಮೊಗ್ಗದಲ್ಲೀಗ ರಸ್ತೆ ಹಂಪ್ ಗಳದ್ದೇ ಬಿಸಿಬಿಸಿ ಸುದ್ದಿ…ರಾತ್ರಿ ಹಗಲೆನ್ನದೇ ಅಪಘಾತಗಳಿಗೆ ಕಾರಣವಾಗಿ ರಕ್ತ ಹೀರಿ ಜೀವ ತೆಗೆಯುತ್ತಿರುವ ಈ ಹಂಪ್ ಗಳ ಹಿಂದೆ ಇದೀಗ ಪೊಲೀಸ್ ಇಲಾಖೆ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಪ್ರತ್ಯೇಕ ಪ್ರತ್ಯೇಕವಾಗಿಯೇ ಬೆನ್ನು ಬಿದ್ದು ಹಂಪ್ ಗಳ ನಿರ್ಮಾಣಗಳಲ್ಲಿ ಆಗಿರುವ ತಪ್ಪು ಹುಡುಕಿ ಸರಿ ಮಾಡುತ್ತಿವೆ.
ಒಂದು ಕಡೆ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಾದ ಮಾಯಣ್ಣ ಗೌಡರು ಶಿವಮೊಗ್ಗದ ಹಂಪ್ ಗಳನ್ನು ಹುಡು ಹುಡುಕಿ ಪರಿಶೀಲಿಸುತ್ತಿದ್ದಾರೆ. ಮತ್ತೊಂದು ಕಡೆ ಪೊಲೀಸ್ ಇಲಾಖೆಯ ಎಸ್ ಪಿ ನಿಖಿಲ್ ಬಿ. ಮತ್ತು ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್ ಸಿಬ್ಬಂದಿಗಳೊಂದಿಗೆ ಅವೈಜ್ಞಾನಿಕ ಹಂಪ್ ಗಳ ಹುಡುಕಾಟ ಆರಂಭಿಸಿ ಸ್ಥಳ ಪರಿಶೀಲಿಸಿ, ಸರಿ ಪಡಿಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿಸುವ ಉದ್ದೇಶದಿಂದ ಹಾಕಲಾದ ಹಂಪ್ ಗಳೇ ಜನರ ಜೀವಗಳ ಜೊತೆ ಆಟವಾಡಲಾರಂಭಿಸಿದ್ದು ಜನಾಕ್ರೋಶಕ್ಕೆ ಕಾರಣವಾಗುತ್ತಿದೆ.
ಒಂದೆರಡು ಕಡೆ ಪ್ರಮುಖ ಜಾಗಗಳಲ್ಲಿ ಹಂಪ್ ಗಳನ್ನು ಹಾಕಲು ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಜಂಟಿ ಕಾರ್ಯಾಚರಣೆ ಆರಂಭಿಸಿದಾಗ ಕೆಲವು ಕಡೆ ಜನರೇ ಒತ್ತಡ ಮಾಡಿ ಹಲವು ಕಡೆ ಹಂಪ್ ಗಳನ್ನು ಹಾಕಿಸಿಕೊಂಡಿದ್ದರು. ಇಲ್ಲಿ ರಾಜಕೀಯ ಪ್ರಭಾವವೂ ಕೆಲಸ ಮಾಡಿತ್ತು. ಏನೇನೋ ಕಾರಣ ನೀಡಿ, ಒತ್ತಡ ಹೇರಿ ಹಂಪ್ ಗಳನ್ನು ಹಾಕಿಸಿಕೊಂಡವರೇ ಈಗ ಇಲಾಖೆಯ ಅಧಿಕಾರಿಗಳ ವಿರುದ್ಧ ತಿರುಗಿ ಬೀಳುತ್ತಿರುವುದನ್ನು ವಿಶೇಷವಾಗಿಯೇ ಗಮನಿಸಬಹುದು!
ಅಪಘಾತ ಸಂಭವಿಸಿದ ರಸ್ತೆಗಳಲ್ಲಿರುವ ಹಂಪ್ ಗಳ ಬಳಿ ಎರಡೂ ಇಲಾಖೆಯ ಅಧಿಕಾರಿಗಳು ತೆರಳಿ ಪರಿಶೀಲಿಸಿ ಅವುಗಳನ್ನು ತೆಗೆಸುವ ಅಥವಾ ಸರಿ ಮಾಡುವ ಕೆಲಸ ತತ್ ಕ್ಷಣದಿಂದ ಮಾಡುತ್ತಿರುವುದರಿಂದ ಬಹಳಷ್ಟು ಜೀವಗಳು ಉಳಿಯುವುದರಲ್ಲಿ ಸಂದೇಹವಿಲ್ಲ…


