*ಸಮಿತಿಯ ಗೌರವಾಧ್ಯಕ್ಷರೂ ಹಿರಿಯ ವಕೀಲರೂ ಆದ ಕೆ.ಬಸಪ್ಪ ಗೌಡ, ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ ಸ್ವಾಮಿ ಜಂಟಿ ಪತ್ರಿಕಾಗೋಷ್ಠಿ* *ಶಿವಮೊಗ್ಗದಲ್ಲೇ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಸ್ಥಾಪನೆಗೆ ವಕೀಲರ ಒತ್ತಾಯ*
*ಸಮಿತಿಯ ಗೌರವಾಧ್ಯಕ್ಷರೂ ಹಿರಿಯ ವಕೀಲರೂ ಆದ ಕೆ.ಬಸಪ್ಪ ಗೌಡ, ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ ಸ್ವಾಮಿ ಜಂಟಿ ಪತ್ರಿಕಾಗೋಷ್ಠಿ*
*ಶಿವಮೊಗ್ಗದಲ್ಲೇ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಸ್ಥಾಪನೆಗೆ ವಕೀಲರ ಒತ್ತಾಯ*
ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಸ್ಥಾಪನಾ ಹೋರಾಟ ಸಮಿತಿಯನ್ನು ಶಿವಮೊಗ್ಗ ವಕೀಲರ ಸಂಘ, ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಸ್ಥಾಪನೆ ಮಾಡಲು ಒತ್ತಾಯಿಸಲು ರಚಿಸಿದ್ದು, ಈಗಾಗಲೇ ಕಾರ್ಯೋನ್ಮುಖವಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷರೂ ಹಿರಿಯ ವಕೀಲರೂ ಆದ ಕೆ.ಬಸಪ್ಪ ಗೌಡ, ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ ಸ್ವಾಮಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಧ್ಯ ಕರ್ನಾಟಕದ ಜಿಲ್ಲೆಗಳಾದ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ಉಡುಪಿ ಭೌಗೋಳಿಕವಾಗಿ ಒಂದಕ್ಕೊಂದು ಹೊಂದಿಕೊಂಡ ಜಿಲ್ಲೆಗಳಾಗಿದ್ದು, ಮಧ್ಯ ಕರ್ನಾಟಕದ ಜಿಲ್ಲೆಗಳಾಗಿದ್ದು, ಪಶ್ಚಿಮದಿಂದ ಪೂರ್ವಕ್ಕೆ ಒಟ್ಟಾಗಿ ಹರಡಿಕೊಂಡಿವೆ ಎಂದು ವಿವರಿಸಿದರು.
1956ರಲ್ಲಿ ಭಾರತದ ರಾಜ್ಯ ಅಥವಾ ಪ್ರಾಂತ್ಯಗಳ ಪುನರ್ ವಿಂಗಡಣೆಯಾದ ಸಮಯದಲ್ಲಿ, ಮಧ್ಯ ಕರ್ನಾಟಕದ ಮಧ್ಯ ಭಾಗವಾದ ಶಿವಮೊಗ್ಗ ಅಥವಾ ದಾವಣಗೆರೆಗೆ ಕರ್ನಾಟಕದ ಆಡಳಿತ ವರ್ಗಾವಣೆಯಾಗಬೇಕಾದದ್ದು, ಈ ಭಾಗದ ಜನರ ಭೌಗೋಳಿಕ ಹಕ್ಕು, ಈ ವಿಷಯವನ್ನು ಇಲ್ಲಿ ಮತ್ತೆ ನಾವು ಪ್ರಸ್ತಾಪಿಸುತ್ತಿಲ್ಲ.
ಈಗಾಗಲೇ ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯ, ಹೈದರಾಬಾದ್-ಕರ್ನಾಟ ಭಾಗದಲ್ಲಿ ಎಂದರೆ, ಗುಲ್ಬರ್ಗದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಒಂದು ಶಾಶ್ವತ ಪೀಠ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಕರ್ನಾಟಕದ ಉಚ್ಚ ನ್ಯಾಯಾಲಯದ ಸಂಚಾರಿ ಪೀಠ ಇವುಗಳನ್ನು ಸ್ಥಾಪಿಸಿವೆ.
ಈಗ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕರಾವಳಿ ಸಂಚಾರಿ ಪೀಠವನ್ನು ಆ ಸ್ಥಾಪಿಸಬೇಕೆಂದು ಒತ್ತಾಯ ಪ್ರಾರಂಭವಾಗಿದ್ದು, ಅಂತಹ ಸಂಚಾರಿ ಪೀಠದ ವ್ಯಾಪ್ತಿ ಈಗಾಗಲೇ ತೀರ್ಮಾನಿಸಿದಂತೆ ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಇವುಗಳನ್ನು ಸೇರಿಸಲಾಗಿದೆ ಎಂಬುದು ನಮಗೆ ತಿಳಿದ ಮಾಹಿತಿ.
ಈ ಮೇಲೆ ಹೇಳಿದಂತೆ, ಮಧ್ಯ ಕರ್ನಾಟಕದ ಭಾಗವು 1956ರಿಂದಲೇ ವಂಚಿತಗೊಂಡಿದೆ. ಆ ಕಾರಣ ಮಧ್ಯ ಕರ್ನಾಟಕ ಭಾಗಕ್ಕೆ ಈ ಮೇಲೆ ಹೆಸರಿಸಿದ ಜಿಲ್ಲೆಗಳನ್ನು ಒಂದು ಗುಂಪಾಗಿಸಿ. ಉಚ್ಚ ನ್ಯಾಯಾಲಯದ ಒಂದು ಸಂಚಾರಿ ಪೀಠವನ್ನು ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕೆಂದು ನಮ್ಮ ಹೋರಾಟ ಸಮಿತಿಯ ಹಕ್ಕೊತ್ತಾಯ. ಈ ರೀತಿಯ ನಮ್ಮ ಹಕ್ಕೊತ್ತಾಯವನ್ನು ಒತ್ತಾಯಿಸಿ, ಬೇಡಿಕೆ ಸಲ್ಲಿಸಲು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳನ್ನು ನಾವು ದಿನಾಂಕ:29.04.2026ರಂದು ಭೇಟಿಯಾಗಿ, ಬೇಡಿಕೆಯನ್ನು ಸಲ್ಲಿಸಿದ್ದೇವೆ ಎಂದರು.
ನಮ್ಮ ನಿಲುವಿನಲ್ಲಿ ಎರಡು ಅಂಶಗಳಿವೆ.
(1) ಮಧ್ಯ ಕರ್ನಾಟಕದ ಗುಂಪು ಜಿಲ್ಲೆಗಳಿಗೆ ಶಿವಮೊಗ್ಗದಲ್ಲಿ ಒಂದು ಸಂಚಾರಿ ಪೀಠವನ್ನು ಸ್ಥಾಪನೆ ಮಾಡಬೇಕೆಂಬುದು ನಮ್ಮ ಒತ್ತಾಯ. ಈ ಒತ್ತಾಯವನ್ನು ಈಗಾಗಲೇ ನಾವು ನ್ಯಾಯಮೂರ್ತಿಗಳಿಗೆ ಸಲ್ಲಿಸಿದ್ದು, ಮುಖ್ಯಮಂತ್ರಿಗಳಿಗೂ ಕೂಡ ನಮ್ಮ ಕರ್ನಾಟಕದ ಮುಖ್ಯ ನ್ಯಾಯಮೂರ್ತಿಗಳಿಗೂ ಸಲ್ಲಿಸಿದ್ದು, ಕರ್ನಾಟಕ ರಾಜ್ಯದ ಬೇಡಿಕೆಯನ್ನು ಸಲ್ಲಿಸಿ, ಒತ್ತಾಯಿಸಲಿದ್ದೇವೆ. ಈ ದಿಸೆಯಲ್ಲಿ ನಮ್ಮ ಬೇಡಿಕೆಯಲ್ಲಿ ಈ ಹಿಂದೆ ಕೇಂದ್ರ ಸರ್ಕಾರ ಯಾವುದೇ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯಗಳ ಸಂಚಾರಿ ಪೀಠ ಸ್ಥಾಪನೆಗೆ ಒತ್ತಾಯ ಅಥವಾ ಬೇಡಿಕೆ ಬಂದಾಗ ಪರಿಶೀಲಿಸಬೇಕಾದ ಅಂಶಗಳ ಪರಿಶೀಲನೆಗಾಗಿ ಜಸ್ವಂತ್ ಸಿಂಗ್ ಕಮಿಷನ್ 1990ರ ದಶಕದಲ್ಲಿ ನೇಮಿಸಿದ್ದು, ಜಸ್ವಂತ್ ಸಿಂಗ್ ಕಮಿಷನ್ ಶಿಫಾರಸ್ಸುಗಳ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆ ಹೇಗೆ ಅರ್ಹತೆ ಹೊಂದಿದೆ ಎಂಬುದನ್ನು ಸಾದರಿಸಿ, ನಮ್ಮ ಬೇಡಿಕೆಯನ್ನು ಸಲ್ಲಿಸಿದ್ದೇವೆ. ನಮ್ಮ ಬೇಡಿಕೆಯಲ್ಲಿ ಈ ಅಂಶಗಳನ್ನು ಗಮನಿಸಬಹುದಾಗಿದೆ.
(2) ಈಗಾಗಲೇ ನಾವು ಪ್ರಸ್ತಾಪಿಸಿದಂತೆ, ಕರಾವಳಿ ಕರ್ನಾಟಕದ ಸಂಚಾರಿ ಪೀಠದ ವ್ಯಾಪ್ತಿಗೆ ಶಿವಮೊಗ್ಗ ಜಿಲ್ಲೆಯನ್ನೂ ಸೇರಿಸಲಾಗಿದೆ ಎಂಬುದು ನಮಗೆ ಸಿಕ್ಕಿದ ಮಾಹಿತಿ. ಈ ಬಗ್ಗೆ ಶಿವಮೊಗ್ಗ ಜಿಲ್ಲೆ ವಕೀಲರೊಡನೆಯಾಗಲೀ ಅಥವಾ ಶಿವಮೊಗ್ಗ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳೊಡನೆಯಾಗಲೀ ಯಾವುದೇ ಚರ್ಚೆ ಮತ್ತು ಅಭಿಪ್ರಾಯ ಪಡೆದಿರುವುದಿಲ್ಲ. ನಮ್ಮ ನಿಲುವು, ನ್ಯಾಯಾಲಗಳನ್ನು ಅಥವಾ ಸಂಚಾರಿ ಪೀಠಗಳನ್ನು ಸ್ಥಾಪಿಸುವುದು, ಅಂತಹ ಸಂಚಾರಿ ಪೀಠಕ್ಕೆ ಕೇಸುಗಳನ್ನು ಒದಗಿಸುವುದಕ್ಕಾಗಿ ಅಥವಾ e ಭಾಗದಲ್ಲಿ ವೃತ್ತಿ ಮಾಡುತ್ತಿರುವ ವಕೀಲರುಗಳಿಗೆ ಕೆಲಸ ನೀಡಲಿಕ್ಕಾಗಿ ಅಲ್ಲ. ಸಂಚಾರಿ ಪೀಠಗಳನ್ನು ರಚಿಸುವುದು ಜನರಿಗಾಗಿ, ಜನರ ಹತ್ತಿರದಲ್ಲಿ ನ್ಯಾಯ ವಿತರಣೆ ವ್ಯವಸ್ಥೆಯನ್ನು ನೀಡುವ ಉದ್ದೇಶಕ್ಕಾಗಿ ಈ ಎರಡು ಅಂಶಗಳನ್ನು ಜಸ್ವಂತ್ ಸಿಂಗ್ ಕಮಿಷನ್ ವರದಿಯಲ್ಲಿ ಪ್ರಾಮುಖ್ಯವಾಗಿ ಚರ್ಚಿಸಲಾಗಿದೆ. ಶಿವಮೊಗ್ಗ ಜಿಲ್ಲೆಯನ್ನು ಕರಾವಳಿ ಕರ್ನಾಟಕ ಸಂಚಾರಿ ಪೀಠಕ್ಕೆ ಸೇರಿಸುವ ಹಿಂದಿರುವ ಉದ್ದೇಶ, ಕರಾವಳಿ ಕರ್ನಾಟಕ ಸಂಚಾರಿ ಪೀಠಕ್ಕೆ ಶಿವಮೊಗ್ಗ ಜಿಲ್ಲೆಯನ್ನು ಹೊರತುಪಡಿಸಿದ್ದಲ್ಲಿ, ಅಂತಹ ಪೀಠಕ್ಕೆ ಬೇಕಾಗುವ ಕೆಲಸ ಸಿಕ್ಕಲಾರದು ಎಂಬ ಶಂಕೆಯಿಂದಾಗಿ. ಆ ಕಾರಣದಿಂದಲೇ ಶಿವಮೊಗ್ಗ ಜಿಲ್ಲೆಯ ಜನತೆ ಮತ್ತು ಜಿಲ್ಲೆಯ ಚುನಾಯಿತ ಪ್ರತಿನಿಧಿಗಳ ಅಭಿಪ್ರಾಯವನ್ನು ಪಡೆಯದೇ ನಡೆಸಿದ ಹುನ್ನಾರ. ಈ ಅಂಶವನ್ನೇ ನಾವು ವಿರೋಧಿಸುತ್ತಿರುವುದು ಎಂದರು.
ಶಿವಮೊಗ್ಗ ಜಿಲ್ಲೆ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಯಾವುದೇ ರೀತಿಯಾದಂತಹ ಭೌಗೋಳಿಕ ಹೊಂದಾಣಿಕೆ ಇರುವುದಿಲ್ಲ. ಅಲ್ಲದೇ ವ್ಯವಸ್ಥಿತ ಸಂಚಾರ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಶಿವಮೊಗ್ಗ ಜಿಲ್ಲೆ ಮತ್ತು ಬೆಂಗಳೂರಿನ ಮಧ್ಯೆ ಇರುವ ಸಂಚಾರ ವ್ಯವಸ್ಥೆ ಮತ್ತು ಭೌಗೋಳಿಕ ಹೊಂದಾಣಿಕೆ, ಶಿವಮೊಗ್ಗ ಮತ್ತು ಮಂಗಳೂರಿನ ಮಧ್ಯ ಇರುವುದಿಲ್ಲ. ಆದ್ದರಿಂದ ನಮ್ಮ ಮೊದಲ ಒತ್ತಾಯ. ಶಿವಮೊಗ್ಗ ಜಿಲ್ಲೆಯಲ್ಲಿ ಕರಾವಳಿ ಕರ್ನಾಟಕ ಸಂಚಾರಿ ಪೀಠದ ವ್ಯಾಪ್ತಿಯಿಂದ ಕೈಬಿಡುವುದು.
ಈಗಾಗಲೇ ನಾವು ಹೇಳಿದಂತೆ, ಕರಾವಳಿ ಕರ್ನಾಟಕ ಸಂಚಾರಿ ಪೀಠ ಮಂಗಳೂರಿನಲ್ಲಿ ಸ್ಥಾಪನೆ ಮಾಡಬೇಕೆಂಬುದು ಆ ಭಾಗದ ಜನರ ಮತ್ತು ಆ ಜಿಲ್ಲೆಯ ವಕೀಲರ ಒತ್ತಾಯ.
ನಮ್ಮ ಬೇಡಿಕೆ. ಈಗಾಗಲೇ ಹೇಳಿದಂತೆ ಮಧ್ಯ ಕರ್ನಾಟದ ಜಿಲ್ಲೆಗಳಿಗೆ ಈಗಾಗಲೇ ಹೇಳಿದಂತೆ ಒಂದು ಸಂಚಾರಿ ಪೀಠ ಈ ಭಾಗದ ಜನರಿಗೆ ಅನುಕೂಲವಾಗುವಂತೆ ಸ್ಥಾಪಿಸಬೇಕೆಂಬುದು ನಮ್ಮ ಒತ್ತಾಯ.
ಈ ಎಲ್ಲಾ ಅಂಶಗಳ ಬಗ್ಗೆ ಒಂದು ನಿಲುವನ್ನು ಮತ್ತು ಒಂದು ಒತ್ತಾಯವನ್ನು ಅಂತಿಮಗೊಳಿಸಲು ಸದ್ಯದಲ್ಲೇ ನಾವು ಶಿವಮೊಗ್ಗ ಜಿಲ್ಲೆಯ, ಜಿಲ್ಲಾ ಮಂತ್ರಿಗಳು ಮತ್ತು ಶಿವಮೊಗ್ಗ ಜಿಲ್ಲೆಯ ಸಂಸದರು ಮತ್ತೆಲ್ಲ ಶಾಸಕರು ಇವರುಗಳ ಸಭೆಯನ್ನು ಶಿವಮೊಗ್ಗದ ವಕೀಲರ ಸಂಘದಲ್ಲಿ ಹಮ್ಮಿಕೊಳ್ಳಲಿದ್ದೇವೆ.
ಈ ಸಂದರ್ಭದಲ್ಲಿ ನಾವು ಶಿವಮೊಗ್ಗ ಜಿಲ್ಲೆಯಿಂದ ಬೆಂಗಳೂರಿಗೆ ವಲಸೆ ಹೋಗಿ, ಬೆಂಗಳೂರಿನಲ್ಲಿ ವೃತ್ತಿ ಮಾಡುತ್ತಿರುವ ಕರ್ನಾಟಕ ហ ನ್ಯಾಯಾಲಯ ಮಾನ್ಯ ಮಾಡಿ ಗುರುತಿಸಿದ ಎಂಟು ಜನ ಹಿರಿಯ ವಕೀಲರು ಮತ್ತು ಶಿವಮೊಗ್ಗ ಜಿಲ್ಲೆಯಿಂದ ಬೆಂಗಳೂರಿಗೆ ವಲಸೆ ಹೋಗಿ, ಶಿವಮೊಗ್ಗ ಜಿಲ್ಲೆಯ ಜನತೆಯ ಪರವಾಗಿ ವಿವಿಧ ಪ್ರಕರಣಗಳಲ್ಲಿ ನಮ್ಮ ಜಿಲ್ಲೆಯ ಜನತೆಯನ್ನು ಪ್ರತಿನಿಧಿಸುತ್ತಿರುವ ಎಲ್ಲಾ ವಕೀಲರನ್ನು ಆಹ್ವಾನಿಸಲಿದ್ದೇವೆ.
ಈ ಸಂದರ್ಭದಲ್ಲಿ ನಾವು ಸಮುದಾಯ ಹಕ್ಕುಗಳನ್ನು ರಕ್ಷಣೆ ಮಾಡಲಿಕ್ಕಾಗಿ ಸ್ಥಾಪಿಸಲ್ಪಟ್ಟ ಸಂಘ ಸಂಸ್ಥೆಗಳಾದ ರೈತ ಸಂಘ, ದಲಿತ ಸಂಘರ್ಷ ಸಮಿತಿ ಮತ್ತು ಜಿಲ್ಲಾ ಕಾರ್ಮಿಕರ ಸಂಘ, ವಿದ್ಯಾರ್ಥಿಗಳು, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಈ ದಿಸೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಸಂಘ ಸಂಸ್ಥೆಗಳು ಇವುಗಳನ್ನು ನಾವು ಆಹ್ವಾನಿಸುತ್ತಿದ್ದೇವೆ.
ಇಷ್ಟು ಮಾತ್ರವಲ್ಲದೇ ವೃತ್ತಿಪರ ಸಂಘ ಸಂಸ್ಥೆಗಳಾದ ಚೇಂಬರ್ ಆಫ್ ಕಾಮರ್ಸ್, ಚಾರ್ಟೆಡ್ ಅಕೌಂಟೆಂಡ್ ಅಸೋಸಿಯೇಷನ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಮಂಡಿ ಮರ್ಚೆಂಟ್ಸ್ ಅಸೋಸಿಯೇಷನ್,
ಜನರಲ್ ಮರ್ಚೆಂಟ್ಸ್ ಅಸೋಸಿಯೇಷನ್, ಕಾಂಟ್ರಾಕ್ಟ್ ವರ್ಕಸ್್ರ ಅಸೋಸಿಯೇಷನ್ ಮತ್ತು ಅಸಂಘಟಿತ ಕಾರ್ಮಿಕರ ಸಂಘ, ಅಟೋ ಚಾಲಕರ ಸಂಘ ಮತ್ತು ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ಇವರುಗಳನ್ನು ಆಹ್ವಾನಿಸಲಿದ್ದೇವೆ.
ಈ ಸಂದರ್ಭದಲ್ಲಿ ಕ್ರೋಢೀಕೃತವಾಗಲಿರುವ ಅಭಿಪ್ರಾಯವನ್ನು ನಿರ್ಣಯ ರೂಪದಲ್ಲಿ ರೂಪಿಸಿ, ಹೊರಬಂದ ನಿರ್ಣಯವನ್ನು ಜೊತೆಯಾಗಿಸಿಕೊಂಡು, ಜನಪ್ರತಿನಿಧಿಗಳನ್ನು ಜೊತೆಯಾಗಿಸಿಕೊಂಡು, ಕರ್ನಾಟಕ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ನಮ್ಮ ಹಕ್ಕೊತ್ತಾಯವನ್ನು ಮಂಡಿಸಲಿದ್ದೇವೆ.
ನಮ್ಮ ಬೇಡಿಕೆಗೆ ಮಾನ್ಯತೆ ಸಿಗದಿದ್ದಲ್ಲಿ, ಹೋರಾಟದ ದಾರಿಯನ್ನೂ ಕೂಡ ಹಿಡಿಯಲು ಶಿವಮೊಗ್ಗ ಜಿಲ್ಲೆಯ ಜನತೆ ಹಿಂಜರಿಯುವುದಿಲ್ಲ ಎಂಬುದನ್ನು ಈ ಸಂದರ್ಭದಲ್ಲಿ ಪ್ರಾಮುಖ್ಯವಾಗಿ ನಾವು ಜ್ಞಾಪಿಸಿಕೊಳ್ಳುತ್ತಿದ್ದೇವೆ.
ಕೊನೆಯದಾಗಿ, ಸಂಚಾರಿ ಪೀಠಗಳು ಮತ್ತು ನ್ಯಾಯಾಲಯಗಳನ್ನು ಜನರಿಗಾಗಿ ಮಾತ್ರ ಸ್ಥಾಪಿಸಲಾಗುವುದು ಎಂಬ ಅಂಶವನ್ನು ನಾವು ಮರೆಯಲಾಗುವುದಿಲ್ಲ. ಇದಕ್ಕೆ ಹೊರತಾದ ಯಾವ ಕಾರಣಗಳೂ ಸಂಚಾರಿ ಪೀಠದ ಸ್ಥಾಪನೆಗೆ ಸಲ್ಲುವ ಕಾರಣಗಳಾಗುವುದಿಲ್ಲ ಎಂದರು.


